ಜಿಲ್ಲಾ ಉಸ್ತುವಾರಿ ಸಚಿವರ ಬದಿಗಿರಿಸಿ ನೆರೆಯ ಜಿಲ್ಲೆಗೆ ಆಮ್ಲಜನಕ ಪೂರೈಕೆ; ಪರದಾಡಿದರು ರೋಗಿಗಳು!

ಬೆಂಗಳೂರು; ಚಾಮರಾಜನಗರ, ಕಲ್ಬುರ್ಗಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 30ಕ್ಕೂ ಹೆಚ್ಚು ಕೋವಿಡ್‌ ರೋಗಿಗಳು ಸಾವನ್ನಪಿದ್ದರೂ ಉಳಿದ ಜಿಲ್ಲಾಧಿಕಾರಿಗಳು ಇನ್ನೂ ಪಾಠ ಕಲಿತಂತಿಲ್ಲ. ಜಿಲ್ಲೆಗೆ ಅಗತ್ಯವಿರುವವಷ್ಟು ಆಮ್ಲಜನಕ ಶೇಖರಣೆ ಮತ್ತು ಕಾಯ್ದಿರಿಸುವ ಮೂಲಕ ಮುಂಜಾಗ್ರತೆ ವಹಿಸುತ್ತಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ.

ಈ ಮಧ್ಯೆ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಮತ್ತು ಐಪಿಎಸ್‌ ಅಧಿಕಾರಿ ಪ್ರತಾಪ್‌ ರೆಡ್ಡಿ ಅವರು ಕೆಲ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ನೆರೆಯ ಜಿಲ್ಲೆಗಳಿಗೆ ಆಮ್ಲಜನಕ ಪೂರೈಸಬೇಕು ಎಂಬ ನಿರ್ದೇಶನಗಳನ್ನೂ ನೀಡುತ್ತಿರುವುದು ಬಹಿರಂಗವಾಗಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರನ್ನೂ ಬದಿಗಿರಿಸಿ ಈ ನಿರ್ದೇಶನಗಳನ್ನು ನೀಡಲಾಗುತ್ತಿದೆ.

ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳ ನಿರ್ದೇಶನವನ್ನು ತಕ್ಷಣಕ್ಕೇ ಪಾಲಿಸುವ ಭರದಲ್ಲಿ ತಮ್ಮ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆ ಇದ್ದರೂ ನೆರೆಯ ಜಿಲ್ಲೆಗಳಿಗೆ ಕಳಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ. ಅಲ್ಲದೆ ನೆರೆಯ ಜಿಲ್ಲೆಗಳಿಗೆ ಆಮ್ಲಜನಕ ಪೂರೈಕೆ ಮಾಡಿದ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಪೇಚಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಈ ನಡೆಯಿಂದ ಕೆಲ ಉಸ್ತುವಾರಿ ಸಚಿವರು ಆಕ್ರೋಶಗೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯರ ಆಕ್ರೋಶವನ್ನು ಎದುರಿಸಲಾಗದೆ ಪುನಃ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದು ಆಮ್ಲಜನಕ ಸರಬರಾಜು ಮಾಡಲು ಸಂಬಂಧಿಸಿದವರಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

ದಾವಣಗೆರೆ ಜಿಲ್ಲೆಗೆ ಬೇಕಾಗಿದ್ದ 8,500 ಲೀಟರ್‌ ಆಮ್ಲಜನಕವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಜಿಲ್ಲಾಧಿಕಾರಿ ಬೀಳಗಿ ಅವರು ಕಳಿಸಿರುವ ಕಾರಣ 8,500 ಲೀಟರ್‌ ಆಮ್ಲಜನಕವನ್ನು ಸರಬರಾಜು ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ 2021ರ ಮೇ 4ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಅಲ್ಲಿನ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರು ನೆರೆಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಆಮ್ಲಜನಕ ಪೂರೈಕೆ ಮಾಡಲು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಮತ್ತು ಐಪಿಎಸ್‌ ಅಧಿಕಾರಿ ಪ್ರತಾಪ್‌ ರೆಡ್ಡಿ ಅವರು ಸೂಚಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಆಮ್ಲಜನಕದ ಕೊರತೆ ಇದ್ದರೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಆಮ್ಲಜನಕ ಸರಬರಾಜು ಮಾಡುವ ಔಚಿತ್ಯವೇನಿತ್ತು ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಸದರನ್‌ ಗ್ಯಾಸ್‌ ಸಂಸ್ಥೆ ಮೂಲಕ ದಾವಣಗೆರೆ ನಗರದಲ್ಲಿರುವ ಚಿಗಟೇರಿ ಜಿಲ್ಲಾಸ್ಪತ್ರೆಗೆ 6 ಕೆ ಎಲ್‌ ಮತ್ತು ಚಿತ್ರದುರ್ಗ ಜಿಲ್ಲೆಗೆ 4 ಕೆಎಲ್‌ ಪ್ರಮಾಣದಲ್ಲಿ ವೈದ್ಯಕೀಯ ಆಮ್ಲಜನಕ ಸರಬರಾಜಾಗುತ್ತಿದೆ. ಇದರ ಜತೆಗೆ ದಾವಣಗೆರೆ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ ತಾಲೂಕುಗಳಿಗೆ ಒಟ್ಟು 8,500 ಲೀಟರ್‌ ಆಮ್ಲಜನಕ ಸರಬರಾಜು ಮಾಡುತ್ತಿದೆ ಎಂದು ಬೈರತಿ ಬಸವರಾಜು ಅವರ ಪತ್ರದಿಂದ ತಿಳಿದು ಬಂದಿದೆ.

ಆದರೆ ದಾವಣಗೆರೆ ಜಿಲ್ಲೆಯೊಂದಕ್ಕೆ ಪ್ರತಿ ದಿನ 150 ಮೆಟ್ರಿಕ್‌ ಸ್ಕ್ಯೆಯರ್‌ ಆಮ್ಲಜನಕದ ಅಗತ್ಯತೆ ಇದೆ. ಸದ್ಯ 6 ಕೆ ಎಲ್‌ ಸರಬರಾಜಾಗುತ್ತಿದೆ. ಜಿಲ್ಲೆಯಲ್ಲೀಗ ಕೋವಿಡ್‌ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ದಾವಣಗೆರೆ ನಗರದಲ್ಲಿರುವ ಚಿಗಟೇರಿ ಆಸ್ಪತ್ರೆಯೊಂದರಲ್ಲೇ 200 ಸೇರಿದಂತೆ ಒಟ್ಟು 392 ರೋಗಿಗಳು ಆಮ್ಲಜನಕ ಅವಲಂಬಿಸಿದ್ದಾರೆ. ಅಲ್ಲದೆ ಎಚ್‌ಎಫ್‌ಎನ್‌ನಲ್ಲಿ 2, ಐಸಿಯು, ವೆಂಟಿಲೇಟರ್‌ ಸೇರಿ ಇನ್ನಿತರೆ ತುರ್ತುನಿಗಾ ಘಟಕದಲ್ಲಿ ಒಟ್ಟು 85 ರೋಗಿಗಳೂ ಸೇರಿದಂತೆ ದಾವಣಗೆರೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 669 ರೋಗಿಗಳಿದ್ದಾರೆ.

ಮೇ 3ರಂದೇ 8,500 ಲೀಟರ್‌ ಆಮ್ಲಜನಕವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಕಳಿಸಿದ್ದರಿಂದಾಗಿ ಮೇ 6ರಂದು ಬೆಳಗ್ಗೆ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್‌ ರೋಗಿಗಳು ಪರದಾಡಿದ್ದರು. ಮಧ್ಯಾಹ್ನದ ಹೊತ್ತಿಗೆ ಆಮ್ಲಜನಕ ಬಂದ ಕಾರಣ ಸ್ವಲ್ಪ ಮಟ್ಟಿಗೆ ನಿಟ್ಟುಸಿರುಬಿಡುವಂತಾಗಿತ್ತು. ಇಲ್ಲದೇ ಇದ್ದರೆ ಪರಿಸ್ಥಿತಿ ಗಂಭೀರವಾಗಿರುತ್ತಿತ್ತು. ನೆರೆಯ ಜಿಲ್ಲೆಗೆ ಆಮ್ಲಜನಕವನ್ನು ಕಳಿಸುವ ಮುನ್ನ ಸ್ಥಳೀಯ ಮಟ್ಟದಲ್ಲಿನ ಅಗತ್ಯತೆಯನ್ನೂ ಪರಿಗಣಿಸಬೇಕು. ಆದರೆ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರು ಈ ವಿಚಾರದಲ್ಲಿ ಎಡವಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.

the fil favicon

SUPPORT THE FILE

Latest News

Related Posts