ಅವೈಜ್ಞಾನಿಕ; 500 ರೋಗಿಗಳಿಗೆ ಆಂಪೋಟೆರಿಸಿಯನ್‌ ಬೇಕಿರುವುದು 3,500, ನೀಡಿದ್ದು 1,270 ವಯಲ್‌

ಬೆಂಗಳೂರು; ಕಪ್ಪು ಶಿಲೀಂಧ್ರ (ಬ್ಲಾಕ್‌ ಫಂಗಸ್‌) ರೋಗ ಚಿಕಿತ್ಸೆಗೆ ಕೇಂದ್ರ ಸರ್ಕಾರವು 23,680 ಆಂಪೋಟೆರಿಸಿಯನ್‌ ಚುಚ್ಚುಮದ್ದುಗಳನ್ನು ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಿದೆಯಾದರೂ ಕರ್ನಾಟಕದಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆಗೆ ತಕ್ಕಂತೆ ಹಂಚಿಕೆ ಮಾಡಿಲ್ಲ.

ಕಳೆದ ಬಾರಿ ಗುಜರಾತ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವಯಲ್‌ಗಳನ್ನು ಹಂಚಿಕೆ ಮಾಡಿದ್ದ ಕೇಂದ್ರ ಸರ್ಕಾರವು ಮತ್ತೊಮ್ಮೆ ಅವೈಜ್ಞಾನಿಕವಾಗಿ ಹಂಚಿಕೆ ಮಾಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 500 ರೋಗಿಗಳಿಗೆ ದಿನಕ್ಕೆ 7 ವಯಲ್‌ಗಳಂತೆ ಒಟ್ಟು 3,500 ವಯಲ್‌ಗಳನ್ನು ಹಂಚಿಕೆ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರವು ಕೇವಲ 1,270 ವಯಲ್‌ಗಳನ್ನು ಹಂಚಿಕೆ ಮಾಡಿದೆ.

‘ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಪ್ಪು ಶಿಲೀಂಧ್ರ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ಹಂಚಿಕೆ ಮಾಡಲಾಗಿದೆ. ಒಟ್ಟು ರೋಗಿಗಳ ಸಂಖ್ಯೆ ಆಧರಿಸಿ ಈ ಹಂಚಿಕೆ ಮಾಡಲಾಗಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ, ಅವರು ತಿಳಿಸಿದ್ದರ ಬೆನ್ನಲ್ಲೇ ಕರ್ನಾಟಕಕ್ಕೆ ಹಂಚಿಕೆ ಆಗಿರುವ ವಯಲ್‌ಗಳು, ರೋಗಿಗಳ ಅನುಪಾತಕ್ಕೆ ತಕ್ಕಂತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಸದ್ಯ ಹಂಚಿಕೆ ಮಾಡಿರುವ 1,270 ವಯಲ್‌ ಒಂದು ದಿನಕ್ಕಷ್ಟೇ ಬಳಕೆ ಮಾಡಬಹುದು. ಒಬ್ಬ ರೋಗಿಗೆ ಕನಿಷ್ಠ 30ರಿಂದ 40 ವಯಲ್‌ಗಳು ಬೇಕು. ಒಟ್ಟು 15 ದಿನ ಚಿಕಿತ್ಸೆಗೆ ಒಬ್ಬ ರೋಗಿಗೆ 105 ವಯಲ್‌ ಬೇಕಾಗಲಿದೆ. ಇದರ ಪ್ರಕಾರ 500 ರೋಗಿಗಳಿಗೆ 52,500 ವಯಲ್‌ ಬೇಕಾಗಲಿದೆ ಎಂದು ಹೇಳಲಾಗುತ್ತಿದೆ.

ಹುಬ್ಬಳ್ಳಿಯ ಕಿಮ್ಸ್‌ವೊಂದರಲ್ಲೇ 77 ರೋಗಿಗಳಿದ್ದಾರೆ. ಈ ರೋಗಿಗಳಿಗೆ ಕನಿಷ್ಠ 2,000 ವಯಲ್‌ ಬೇಕು. ಆದರೆ ಇಲ್ಲಿಗೆ ಸರಬರಾಜು ಅಗಿರುವುದು ಕೇವಲ 100. ಇದು ಕೇವಲ ಇಬ್ಬರು ರೋಗಿಗಳಿಗಷ್ಟೇ ಸಾಕಾಗಲಿದೆ. ಉಳಿದವರಿಗೆ ಚುಚ್ಚುಮದ್ದು ಕೊರತೆಯಾಗಿದೆ. ಕಿಮ್ಸ್‌ ವೈದ್ಯರ ಪ್ರಕಾರ ರಾಜ್ಯದಲ್ಲಿ ಒಂದು ದಿನಕ್ಕೆ ಕನಿಷ್ಠ 1,900 ವಯಲ್‌ ಬೇಕು. ಆದರೆ ಸದ್ಯ ಪೂರೈಕೆಯಾಗುತ್ತಿರುವುದು ಕೇವಲ 300 ಎನ್ನುತ್ತಾರೆ ಕಿಮ್ಸ್‌ ವೈದ್ಯರೊಬ್ಬರು.

‘ಕೇಂದ್ರ ಸರ್ಕಾರವು ಹಂಚಿಕೆ ಮಾಡಿರುವ 1,270 ವಯಲ್‌ಗಳನ್ನು ಯಾವ ಜಿಲ್ಲೆ, ಯಾವ ಆಸ್ಪತ್ರೆಗೆ ನೀಡುವುದು. ಇದು ತುಂಬಾ ಕಷ್ಟಕರ, ರೋಗಿ ಗುಣಮುಖವಾಗುವವರೆಗೂ ಈ ಚುಚ್ಚುಮದ್ದು ನೀಡಬೇಕು. ಈಗ ಹಂಚಿಕೆ ಮಾಡಿರುವ ವಯಲ್‌ಗಳ ಪ್ರಕಾರ ರೋಗಿಗಳಿಗೆ ಒಂದು ದಿನವಷ್ಟೇ ನೀಡಬಹುದು. ಚಿಕಿತ್ಸಾ ಅವಧಿ ಪೂರ್ಣಗೊಳ್ಳುವವರೆಗೂ ಯಾವ ಚುಚ್ಚುಮದ್ದು ನೀಡಬೇಕು. ಇದು ಸರಿಯಾದ ಕ್ರಮವಲ್ಲ. ವೈಜ್ಞಾನಿಕವಾಗಿ ಹಂಚಿಕೆ ಮಾಡಬೇಕು ಎನ್ನುತ್ತಾರೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಸದ್ಯ ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಆಂಪೋಟೆರಿಸಿಯನ್‌ ಬಿ ಚುಚ್ಚುಮದ್ದು ತೀವ್ರ ಕೊರತೆಯಲ್ಲಿದೆ. ಮುಕ್ತ ಮಾರುಕಟ್ಟೆಯಲ್ಲಿ ಒಂದು ವಯಲ್‌ಗೆ 7,000 ರು. ಸರಾಸಸರಿ ದರವಿದೆ. ಇದರ ಪ್ರಕಾರ ಒಬ್ಬ ರೋಗಿ 50,000 ರು. ತೆರಬೇಕು. 15 ದಿನದ ಚಿಕಿತ್ಸೆಗೆ ಕನಿಷ್ಠ 7.50 ಲಕ್ಷ ರು.ಗಳನ್ನು ಒಬ್ಬ ರೋಗಿ ತೆರಬೇಕಿದೆ. ಇದು ಅತ್ಯಂತ ದುಬಾರಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ‘ದಿ ಫೈಲ್‌’ನೊಂದಿಗೆ ಮಾಹಿತಿ ಹಂಚಿಕೊಂಡರು.

ಈ ಮಧ್ಯೆ ಬ್ಲಾಕ್ ಫಂಗಸ್ ಕಾಯಿಲೆಗೆ ಬಳಸುವ Amphotericin B ಇಂಜೆಕ್ಷನ್ ಬೇಡಿಕೆಗೆ ತಕ್ಕಷ್ಟು ಲಭ್ಯವಿಲ್ಲದ ಕಾರಣ ಕಾಳ ಸಂತೆಯಲ್ಲಿ 20000 ರೂಪಾಯಿಗೆ ಒಂದು ಇಂಜೆಕ್ಷನ್ ಮಾರಾಟವಾಗುತ್ತಿದೆ. ರೆಮ್‌ಡಿಸಿವಿರ್‌ ಕಾಳಸಂತೆಯಲ್ಲಿ ಮಾರಾಟವಾದ ಹಾಗೆಯೇ ಆಂಪೋಟೆರಿಸಿನ್‌ ಬಿ ಇಂಜೆಕ್ಷನ್‌ ಕೂಡ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

‘ರೋಗಿಯೊಬ್ಬರಿಗೆ ದಿನವೊಂದಕ್ಕೆ 7 ಇಂಜೆಕ್ಷನ್ ಗಳ ಅಗತ್ಯವಿದೆ. ದಿನವೊಂದರ ಚಿಕಿತ್ಸೆಗೆ 140000 ರೂಪಾಯಿಗಳು ಬೇಕಾಗುತ್ತದೆ. ಇನ್ನೂ 15 ದಿನಗಳ ಚಿಕಿತ್ಸೆಗೆ 2100000 ಲಕ್ಷ ರೂಪಾಯಿಗಳು ಬೇಕಾಗುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ಮತ್ತು ಬಡ ರೋಗಿಗಳ ಪಾಡೇನು,’ ಎಂದು ಪ್ರಶ್ನಿಸುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಘು ಜಾಣಗೆರೆ.

ಕರ್ನಾಟಕದಿಂದಲೂ 20 ಸಾವಿರ ವಯಲ್ಸ್’ಗೆ ಬೇಡಿಕೆ ಬಂದಿದೆ. ಆಂತರಿಕವಾಗಿ ಇದರ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ (ಭಾರತದಲ್ಲಿ ಐದು ಫಾರ್ಮಾ ಕಂಪನಿಗಳು ಈ ಔಷಧ ಉತ್ಪಾದನೆಯ ಲೈಸನ್ಸ್ ಪಡೆದಿದ್ದು ಹೊಸದಾಗಿ ಇನ್ನೂ 5 ಕಂಪನಿಗಳಿಗೆ ಅನುಮತಿ ದೊರಕಿಸಿಕೊಡಲಾಗಿದೆ. ಮೈಲಾನ್ ಫಾರ್ಮಾ ಕಂಪನಿಯ ಮೂಲಕ ಮೂರು ಲಕ್ಷ ವಯಲ್ಸ್ ಎಂಫೋಟೆರಿಸಿನ್-ಬಿ ಆಮದು ಮಾಡಿಕೊಳ್ಳಲಾಗುತ್ತಿದೆ. 40 ಸಾವಿರ ವಯಲ್ಸ್ ಎಂಫೋಟೆರಿಸಿನ್-ಬಿ ಭಾರತ ತಲುಪಲಿದ್ದು ರಾಜ್ಯಕ್ಕೆ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಈ ಔಷಧವನ್ನು ದೊರಕಿಸಿಕೊಡಲು ಯತ್ನಿಸುವುದಾಗಿ ಔಷಧ ಇಲಾಖೆಯನ್ನೂ ಹೊಂದಿರುವ ಸದಾನಂದ ಗೌಡ ಅವರು ಭರವಸೆ ನೀಡಿದ್ದನ್ನು ಸ್ಮರಿಸಬಹುದು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು, ನಾನಾ ರಾಜ್ಯಗಳಲ್ಲಿ ಮ್ಯೂಕರ್ ಮೈಕೋಸಿಸ್ ಪ್ರಕರಣಗಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಆಂಫೊಟೆರಿಸಿನ್-ಬಿ ಔಷಧ ಲಭ್ಯತೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು. ಆನಂತರ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ ಒಟ್ಟು 23,68- ವಯಲ್ಸ್ ಆಂಫೊಟೆರಿಸಿನ್-ಬಿ ಔಷಧವನ್ನು ಹಂಚಿಕೆ ಮಾಡಲಾಗಿದೆ ಎಂದು ಪ್ರಕಟಿಸಿದ್ದರು.

ಅಲ್ಲದೆ, ದೇಶಾದ್ಯಂತ ಒಟ್ಟು 8848 ರೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅದಕ್ಕೆ ಅನುಗುಣವಾಗಿ ಔಷಧವನ್ನು ಹಂಚಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು.
ಅತೀ ಹೆಚ್ಚು ಕಪ್ಪು ಶಿಲೀಂಧ್ರ ರೋಗಿಗಳು ಗುಜರಾತ್‌ನಲ್ಲಿ 2,281 ಇದ್ದಾರೆ. ಆ ರಾಜ್ಯಕ್ಕೆ 5,800 ವಯಲ್ಸ್ ಹಂಚಿಕೆ ಮಾಡಲಾಗಿದೆ. ಉಳಿದಂತೆ, ಮಹಾರಾಷ್ಟ್ರದಲ್ಲಿ 2,000 (5090), ಆಂಧ್ರಪ್ರದೇಶ 910 (2,310), ಮದ್ಯಪ್ರದೇಶ 720 (1830), ರಾಜಸ್ಥಾನ 700 (1780), ತೆಲಂಗಾಣ 350 (890), ಹರಿಯಾಣ 250 (640) ರೋಗಿಗಳಿದ್ದಾರೆ.

ಕರ್ನಾಟಕವೂ ಸೇರಿದಂತೆ ಈ ಎಂಟು ರಾಜ್ಯಗಳಿಗೆ ಒಟ್ಟು ಔಷಧ ಪ್ರಮಾಣದ ಶೇ 75ರಷ್ಟನ್ನು ಹಂಚಿಕೆ ಮಾಡಲಾಗಿದೆ. ಉಳಿದ ಶೇ 25ರಷ್ಟನ್ನು ರೋಗಿಗಳ ಸಂಖ್ಯೆಯನ್ನು ಪರಿಶೀಲಿಸಿದ ಬಳಿಕ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

the fil favicon

SUPPORT THE FILE

Latest News

Related Posts