ಬ್ಲಾಕ್ ಫಂಗಸ್ ; ಗುಜರಾತ್‌ಗೆ ಆಂಪೋಟೆರಿಸಿನ್‌ ಬಿ 15,000, ರಾಜ್ಯಕ್ಕೆ ಕೇವಲ 1,050 ವಯಲ್‌

ಬೆಂಗಳೂರು; ರಾಜ್ಯಕ್ಕೆ ಆಮ್ಲಜನಕ, ರೆಮ್‌ಡಿಸಿವಿರ್‌ ಸೇರಿದಂತೆ ಇನ್ನಿತರೆ ಔಷಧಗಳ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಅಸಡ್ಡೆ ತೋರಿರುವ ಬೆನ್ನಲ್ಲೇ ಬ್ಲಾಕ್‌ ಫಂಗಸ್‌ ಚಿಕಿತ್ಸೆಗೆ ನೀಡುವ ಆಂಪೋಟೆರಿಸಿನ್ ಬಿ ಔಷಧ ಹಂಚಿಕೆಯಲ್ಲಿಯೂ ತಾರತಮ್ಯ ಎಸಗಿರುವುದು ಇದೀಗ ಬಹಿರಂಗವಾಗಿದೆ.

ಭಾರತ್‌ ಸಿರಮ್ಸ್‌ ಮತ್ತು ಮೈಲಾನ್‌ ಫಾರ್ಮಾ ಕಂಪನಿಗಳು ತಯಾರಿಸಿರುವ ಆಂಪೋಟೆರಿಸಿನ್ ಬಿ ಔಷಧವನ್ನು ಮೇ 31ರವರೆಗೆ ಒಟ್ಟು 44,250 ವಯಲ್ ಹಂಚಿಕೆ ಮಾಡಿದೆಯಾದರೂ ಕರ್ನಾಟಕದ ಬೇಡಿಕೆಗೆ ತಕ್ಕಂತೆ ಈ ಔಷಧವನ್ನು ಹಂಚಿಕೆ ಮಾಡಿಲ್ಲ. ಆಂಪೋಟೆರಿಸಿನ್ ಬಿ ಔಷಧಕ್ಕೆ ರಾಜ್ಯ ಸರ್ಕಾರವು 20,000 ವಯಲ್‌ಗೆ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ ಹಂಚಿಕೆ ಮಾಡಿದ್ದು ಕೇವಲ 1,050 ಮಾತ್ರ.

ಬ್ಲ್ಯಾಕ್​ ಫಂಗಸ್ ಗೆ ನೀಡುವ ಲಿಪೋಸೋಮಲ್ ಆಂಪೋಟೆರಿಸಿನ್ ಬಿ ಔಷಧದ ಕೊರತೆಯೂ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ವಿವಿಧ ರಾಜ್ಯಗಳಿಗೆ ಮಾಡಿರುವ ಹಂಚಿಕೆಯಲ್ಲಿನ ತಾರತಮ್ಯವೂ ಮುನ್ನೆಲೆಗೆ ಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಮಹಾರಾಷ್ಟ್ರ ಮತ್ತ ಗುಜರಾತ್‌ಗೆ ಹೆಚ್ಚು ಹಂಚಿಕೆ ಮಾಡಿದೆ. ಮಹಾರಾಷ್ಟ್ರಕ್ಕೆ 16,500 ಮತ್ತು ಗುಜರಾತ್‌ಗೆ 15,000 ಹಂಚಿಕೆ ಮಾಡಿದೆ. ರಾಜ್ಯದಲ್ಲಿಯೂ ಬ್ಲಾಕ್‌ ಫಂಗಸ್‌ ಹರಡುವಿಕೆ ಪ್ರಮಾಣವೂ ಹೆಚ್ಚಾಗುವ ಮೂಲಕ ಆತಂಕ ಮೂಡಿದ್ದರೂ ಕೇಂದ್ರ ಸರ್ಕಾರವು ಮೇ 31ರವರೆಗೆ ಕೇವಲ 1,050 ವಯಲ್‌ಗಳನ್ನಷ್ಟೇ ಹಂಚಿಕೆ ಮಾಡಿದೆ.

ಭಾರತ್‌ ಸಿರಮ್ಸ್‌ ಕಂಪನಿಯ 600 ಮತ್ತು ಮೈಲಾನ್‌ ಫಾರ್ಮಾ ಕಂಪನಿಯ 450 ವಯಲ್‌ಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಿದೆ. ಮಹಾರಾಷ್ಟ್ರಕ್ಕೆ ಭಾರತ್‌ ಸಿರಮ್ಸ್‌ 14,000 ಮತ್ತು ಮೈಲಾನ್‌ ಫಾರ್ಮಾದ 2,500 ಸೇರಿ ಒಟ್ಟು 16,500, ಗುಜರಾತ್‌ಗೆ ಭಾರತ್ ಸಿರಮ್ಸ್‌ನ 5,500 ಮತ್ತು ಮೈಲಾನ್‌ ಫಾರ್ಮಾದ 9,500 ಸೇರಿ ಒಟ್ಟು 15,000 ವಯಲ್‌ಗಳನ್ನು ಹಂಚಿಕೆ ಮಾಡಿದೆ.

ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಂಚಿಕೆ ಮಾಡಿರುವ 1,050 ವಯಲ್‌ಗಳ ಪೈಕಿ ಬೌರಿಂಗ್‌ ಆಸ್ಪತ್ರೆಗೆ 1,000 ವಯಲ್‌ಗಳನ್ನು ಹಂಚಿಕೆ ಮಾಡಲಾಗಿದೆ. ವಿಜಯಪುರ, ಮಡಿಕೇರಿ, ಗುಲ್ಬರ್ಗಾ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಬ್ಲಾಕ್‌ ಫಂಗಸ್‌ ಕಾಣಿಸಿಕೊಳ್ಳಲಾರಂಭಿಸಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಈ ಔಷಧದ ಅಭಾವ ತೀವ್ರವಾಗಿದೆ ಎಂದು ತಿಳಿದು ಬಂದಿದೆ.

ಬ್ಲಾಕ್‌ ಫಂಗಸ್‌ ಔಷಧಿಯ ವಿಷಯದಲ್ಲೂ ಈಗ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಇದನ್ನು ಪ್ರಶ್ನಿಸಬೇಕಾದ ಸರ್ಕಾರ, ಜನಪ್ರತಿನಿಧಿಗಳು ನಮ್ಮ ಪಾಲಿಗೆ ಬದುಕಿದ್ದೂ ಸತ್ತಂತಿದ್ದಾರೆ. ಆಕ್ಸಿಜನ್‌ ನಿಂದ ಹಿಡಿದು ರೆಮ್ಡಿಸಿವಿರ್‌ ಹಂಚಿಕೆಯವರೆಗೆ ಎಲ್ಲದರಲ್ಲೂ ಗುಜರಾತ್‌ಗೆ ಅಗ್ರಸ್ಥಾನ! ಕರ್ನಾಟಕಕ್ಕೆ ಕಾಟಾಚಾರಕ್ಕೆ ಒಂದಷ್ಟು ಕೊಟ್ಟು ಕೈ ತೊಳೆದುಕೊಂಡಿದೆ ಕೇಂದ್ರ ಸರ್ಕಾರ. ಲಸಿಕೆಯ ವಿಷಯದಲ್ಲೂ ನಮ್ಮ ಪಾಲು ನಮಗೆ ಬರುತ್ತಿಲ್ಲ. ಗುಜರಾತ್‌ ಇತರ ರಾಜ್ಯಗಳ ಪಾಲನ್ನು ತಾನೇ ಕಸಿಯುತ್ತಿದೆ. ಪ್ರಧಾನಿ ಮೋದಿ ಗುಜರಾತ್‌ಗೆ ಮಾತ್ರ ಪ್ರಧಾನಿಯೋ ಅಥವಾ ಇಡೀ ದೇಶಕ್ಕೆ ಆಗಿದ್ದಾರೋ ಎಂದು ಜನಪ್ರತಿನಿಧಿಗಳು ಪ್ರಶ್ನಿಸಬೇಕಿದೆ,’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದಿನೇಶ್‌ಕುಮಾರ್‌ .

ತಜ್ಞ ವೈದ್ಯರ ಪ್ರಕಾರ ಒಬ್ಬ ರೋಗಿಗೆ 15ರಿಂದ 20 ವಯಲ್‌ ಬೇಕು. ಭಾರತ್‌ ಸಿರಮ್ಸ್‌ ಬಿಡುಗಡೆ ಮಾಡಿರುವ ಈ ಔಷಧಕ್ಕೆ ಮಾರುಕಟ್ಟೆಯಲ್ಲಿ ಒಂದು ವಯಲ್‌ಗೆ 4,744 ರು.ಗಳಿವೆ. ಮೈಲಾನ್‌ ಕಂಪನಿ ದರ ಒಂದು ವಯಲ್‌ಗೆ 7,814 ರು. ಇದೆ. ಸಿರಮ್ಸ್‌ ಕಂಪನಿ ದರ ಪ್ರಕಾರ ಒಬ್ಬ ರೋಗಿ 20 ವಯಲ್‌ ಬೇಕೇಂದರೆ 94,880 ರು. , ಮೈಲಾನ್‌ ಕಂಪನಿ ದರ ಪ್ರಕಾರ ಒಬ್ಬ ರೋಗಿ 20 ವಯಲ್‌ಗೆ 1,56,280 ರು. ತೆತ್ತಬೇಕು. ಒಬ್ಬ ರೋಗಿಗೆ ದಿನಕ್ಕೆ ಮೂರು ವಯಲ್‌ ಎಂದು ಲೆಕ್ಕ ಹಾಕಿದರೂ ಭಾರತ್‌ ಸಿರಮ್ಸ್‌ನ ದರದ ಪ್ರಕಾರ 14,232, ಮೈಲಾನ್‌ ಕಂಪನಿ ದರದ ಪ್ರಕಾರ 23,442 ರು. ಬೇಕಾಗಲಿದೆ.

ಎಂದಿನಂತೆ ಈಗಲೂ ಸಹ ಯಾವ ಮಾನದಂಡಗಳಿಲ್ಲದೆ ಕೇಂದ್ರ ಸರ್ಕಾರವು ತನ್ನ ಮನಸ್ಸಿಗೆ ಬಂದಂತೆ ಹಂಚಿಕೆ ಮಾಡುತ್ತಿದೆ. ಮತ್ತು ಇದರಲ್ಲಿ ಪಕ್ಷಪಾತವೂ ಎದ್ದು ಕಾಣುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ತಾರತಮ್ಯವನ್ನು ನಿಲ್ಲಿಸಿ ವೈದ್ಯರ ಮತ್ತು ತಜ್ಞರ ಅಭಿಪ್ರಾಯದಂತೆ ನಿಷ್ಪಕ್ಷಪಾತದಿಂದ ಹಂಚಿಕೆ ಮಾಡಬೇಕು.

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು

ಕರ್ನಾಟಕ ರಾಷ್ಟ್ರಸಮಿತಿ

ದೇಶದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಬ್ಲಾಕ್ ಫಂಗಸ್ ಸೋಂಕಿತರ ಸಂಖ್ಯೆ ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚಾಗುತ್ತಿದೆ. ಆಂಪೋಟೆರಿಸಿನ್-ಬಿ ಔಷಧಿಯ ಪೂರೈಕೆ ಹಲವು ಪಟ್ಟು ಹೆಚ್ಚಾಗಿದೆ. ಆದರೆ ಸದ್ಯ ಔಷಧಕ್ಕೆ ಭಾರಿ ಬೇಡಿಕೆ ಇದೆ. ಆದರೆ ಕೇಂದ್ರ ಸರ್ಕಾರ ಈಗ ಹಂಚಿಕೆ ಮಾಡಿರುವ ಪ್ರಮಾಣವನ್ನು ನೋಡಿದರೆ ಅಗತ್ಯವಿರುವ ರೋಗಿಗಳಿಗೂ ಔಷಧ ಲಭ್ಯವಾಗುವುದು ಅನುಮಾನ ಎನ್ನಲಾಗಿದೆ.

ಬ್ಲಾಕ್ ಫಂಗಸ್ ಔಷಧಿಗಳ ದರ ತೀರಾ ದುಬಾರಿಯಾಗಿದೆ. ಸಾಮಾನ್ಯ ಜನರು ಅದನ್ನು ಕೊಳ್ಳುವುದು ಸಾಧ್ಯವೇ ಇಲ್ಲ. ಸರ್ಕಾರವೇ ಕೊಂಡು ಜನರಿಗೆ ಉಚಿತವಾಗಿ ಒದಗಿಸಬೇಕಿರುವುದು ಅದರ ಕರ್ತವ್ಯ. ಆದರೆ ಈಗ ಕೇಂದ್ರ ಸರ್ಕಾರ ಕಳಿಸುತ್ತಿರುವ ಸಾವಿರ ಚಿಲ್ಲರೆ ವಯಾಲ್ ಗಳನ್ನು ಎಷ್ಟು ಜನರಿಗೆ ನೀಡಲು ಸಾಧ್ಯ? ಕೋವಿಡ್ ಗೆ ಬಲಿಯಾದಂತೆ ಜನರು ಬ್ಲಾಕ್ ಫಂಗಸ್ ಗೂ ಬಲಿಯಾಗುತ್ತಿರಬೇಕೇ?

 

ದಿನೇಶ್‌ಕುಮಾರ್‌ ಎಸ್‌ ಸಿ , ಮುಖ್ಯಸ್ಥರು

 

ಕರ್ನಾಟಕ ರಕ್ಷಣಾ ವೇದಿಕೆ, ಸಾಮಾಜಿಕ ಜಾಲತಾಣ

 

ಆಂಪೋಟೆರಿಸಿನ್-ಬಿ ಔಷಧಿಯ ಪೂರೈಕೆ ಸರಣಿ ನಿರ್ವಹಣೆ ಮತ್ತು ಪರಿಣಾಮಕಾರಿ ವಿತರಣೆಗೆ ಸರ್ಕಾರ ವ್ಯವಸ್ಥೆಯನ್ನು ರೂಪಿಸಿದೆ. ಔಷಧಿಯ ಕೊರತೆ ಆದಷ್ಟು ಬೇಗ ನಿವಾರಣೆಯಾಗಲಿದೆ. ರಾಜ್ಯಗಳು ನಿಗದಿತ ಮಾರ್ಗಸೂಚಿಯನ್ನು ಕಠಿಣವಾಗಿ ಪಾಲಿಸಿ, ಔಷಧಿಯನ್ನು ನ್ಯಾಯಯುತವಾಗಿ ಬಳಕೆ ಮಾಡಬೇಕು ಎಂದು ಕೇಂದ್ರ ಸಚಿವ ಮಾಂಡವಿಯ ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts