ನಿಯಂತ್ರಣಕ್ಕೆ ಸಿಗದ ಕೋವಿಡ್‌; ಶೇ. 32.71ರಷ್ಟು ಏರಿಕೆಯಾಗಿರುವ ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿತೇ?

ಬೆಂಗಳೂರು; ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ದೃಢಪಟ್ಟ ಪ್ರಕರಣಗಳ ಶೇಕಡವಾರು ದರದಲ್ಲಿಯೂ ಹೆಚ್ಚಳವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಡೆಸಿರುವ ವಿಶ್ಲೇಷಣೆ ಪ್ರಕಾರ ಕೋವಿಡ್‌ ದೃಢಪಟ್ಟ (ಟಿಪಿಆರ್‌) ದರ ಶೇ.5ಕ್ಕಿಂತ ಕಡಿಮೆ ಇದ್ದರೆ ಅದು ನಿಯಂತ್ರಣದಲ್ಲಿರುತ್ತದೆ. ಆದರೆ 2021ರ ಮೇ 3ರ ವೇಳೆಗೆ ಭಾರತದಲ್ಲಿ ಈ ದರ ಶೇ. 21.5ರಷ್ಟಕ್ಕೇರಿದೆ.

2020ರ ಮೇ ತಿಂಗಳಲ್ಲಿ ಈ ದರ ಶೇ. 21ರಷ್ಟಿತ್ತು. ಅದೇ ವರ್ಷದ ಸೆಪ್ಟಂಬರ್‌ನ ಕೊನೆ ಅವಧಿಯಲ್ಲಿ ಗರಿಷ್ಠ ಶೇ.13ರಷ್ಟು ಹೆಚ್ಚಾಗಿತ್ತು. 2021ರಲ್ಲಿ ಈ ಪ್ರಮಾಣವೂ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಅಂದರೆ ದೇಶದಲ್ಲಿಯೂ ಕೋವಿಡ್‌ ಸಾಂಕ್ರಾಮಿಕವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಎಲ್ಲಾ ಕ್ರಮಗಳೂ ವಿಫಲವಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಕರ್ನಾಟಕದಲ್ಲಿಯೂ ಕೋವಿಡ್‌ ಸಾಂಕ್ರಾಮಿಕವು ಈವರೆವಿಗೂ ನಿಯಂತ್ರಣಕ್ಕೆ ಬಂದಿಲ್ಲ. 2021ರ ಏಪ್ರಿಲ್‌ 30ರಲ್ಲಿ ಇದರ ದರ ಶೇ.23.03ರಷ್ಟಿದ್ದರೇ ಮೇ 6ರ ಹೊತ್ತಿಗೆ ಅದು ಶೇ.30.69ಕ್ಕೇರಿತ್ತು. ಕಠಿಣ ಕಫ್ಯ್ರೂ ಮತ್ತು ವಾರಾಂತ್ಯದ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆಯು ಇನ್ನಷ್ಟು ಏರುಗತಿ ಕಂಡಿದೆ.

ಏಪ್ರಿಲ್ 27 ರಿಂದ ಮೇ 7 ವೇಳೆಗೆ ಸಕ್ರಿಯ ಸೋಂಕಿನ ಸಂಖ್ಯೆ 3 ಲಕ್ಷದಿಂದ 5.36 ಲಕ್ಷಕ್ಕೆ ಏರಿದೆ. ಕಳೆದ 10 ದಿನದಲ್ಲಿ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣ ಶೇ 24ರಷ್ಟು ಹೆಚ್ಚಿದೆ. ಚೇತರಿಕೆ ಪ್ರಮಾಣ ಶೇ. 98.28ರಿದ್ದೆ (ಫೆ)ರಿಂದ 69.9% ಮೇ8ಕ್ಕೆ ಇದರ ಪ್ರಮಾಣವು ಶೇ. 28.2ರಷ್ಟು ಕುಸಿದಿದೆ. ಬೆಂಗಳೂರು ನಗರದಲ್ಲಿ ಇದರ ಪ್ರಮಾಣವು ಶೇ. 61-62 ರಷ್ಟು ಕುಸಿದು ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿದು ಬಂದಿದೆ.

ಏಪ್ರಿಲ್‌ 30ರಿಂದ ಮೇ 8ರವರೆಗೆ ಕೋವಿಡ್‌ ದೃಢಪಟ್ಟ ಪ್ರಕರಣಗಳ ದರ

ಏಪ್ರಿಲ್‌,30- ಶೇ.23.03

ಮೇ 1- ಶೇ.23.82

ಮೇ 2- ಶೇ. 29.80

ಮೇ 3- ಶೇ.29.03

ಮೇ 4- ಶೇ.32.28

ಮೇ 5- ಶೇ. 29.83

ಮೇ 6- ಶೇ.30.69

ಮೇ 7- ಶೇ. 30.28

ಮೇ 8- ಶೇ. 32.71

ಕೋವಿಡ್‌ ದೃಢಪಟ್ಟ ಪ್ರಕರಣಗಳು ಹೆಚ್ಚುತ್ತಿದ್ದರೂ ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಿಲ್ಲ. ಹೆಚ್ಚಿನ ನಿರ್ಬಂಧಗಳನ್ನು ಹೇರಲಿಲ್ಲ. ಹೀಗಾಗಿ ಕೋವಿಡ್‌ ದೃಢಪಟ್ಟ ಪ್ರಕರಣಗಳ ದರದಲ್ಲಿ ಹೆಚ್ಚುತ್ತಿದೆ ಎನ್ನಲಾಗಿದೆ.

ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಶೇ.5 ಜನರಿಗೆ ಕೋವಿಡ್‌ ದೃಢಪಟ್ಟು ಅದು ಸಾಂಕ್ರಾಮಿಕ ಪರಿಗಣಿಸಲ್ಪಡುವ ಸಂದರ್ಭದಲ್ಲಿ ಎಷ್ಟೆಲ್ಲಾ ವೈದ್ಯಕೀಯ ಆರೋಗ್ಯ ವ್ಯವಸ್ಥೆ ಯಾವ ಮಟ್ಟಕ್ಕೆ ಸನ್ನದ್ಧಗೊಳ್ಳಬೇಕಿತ್ತೋ ಆ ಮಟ್ಟಕ್ಕೂ ರಾಜ್ಯವಾಗಲೀ, ಕೇಂದ್ರ ಸರ್ಕಾರವಾಗಲಿ ಸನ್ನದ್ಧವಾಗಲೇ ಇಲ್ಲ.

ರವಿಕೃಷ್ಣಾರೆಡ್ಡಿ.

ರಾಜ್ಯಾಧ್ಯಕ್ಷ ,ಕರ್ನಾಟಕ ರಾಷ್ಟ್ರಸಮಿತಿ

ದೇಶಾದ್ಯಂತ ಕೋವಿಡ್‌ ಪರೀಕ್ಷೆಗಳಲ್ಲಿ ಎಲ್ಲಾ ಮಾದರಿಗಳಲ್ಲಿ 2021ರ ಫೆ.11ರಂದು ದೃಢಪಟ್ಟ ಪ್ರಕರಣಗಳು ಶೇ.1.58ರಷ್ಟಿತ್ತು. ಇದು ಸ್ಥಿರವಾಗಿ ಏರುತ್ತಲೇ ಇದೆ. ಫೆ.28ರ ಹೊತ್ತಿಗೆ ಇದು ಶೇ.2 ಮತ್ತು ಮಾರ್ಚ್‌ 16ರ ವೇಳೆಗೆ ಶೇ.3 ಮತ್ತು ಮಾರ್ಚ್‌ 27ರ ಹೊತ್ತಿಗೆ ಶೇ.5ರಷ್ಟರ ಗಡಿ ದಾಟಿತ್ತು. ಆರೋಗ್ಯ ತಜ್ಞರು ನಡೆಸಿದ್ದ ಈ ವಿಶ್ಲೇಷಣೆ ಪ್ರಕಾರ ದೇಶದಲ್ಲಿ ಮಾರ್ಚ್‌ 27ರ ನಂತರ ಕೋವಿಡ್‌ ತನ್ನ ಹತೋಟಿಯನ್ನು ಕಳೆದುಕೊಂಡಿತ್ತು ಎಂದು ಹೇಳಬಹುದು.

ಕೋವಿಡ್‌ ಸಾಂಕ್ರಾಮಿಕ ರೋಗವು ಎಷ್ಟು ಬೇಗನೆ ಹರಡುತ್ತಿದೆ ಎಂಬುದು ಪ್ರಕರಣಗಳ ದ್ವಿಗುಣಗೊಳ್ಳುವುದನ್ನಾಧರಿಸಿರುತ್ತದೆ. ಹೊಸ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದಂತೆ, ದ್ವಿಗುಣಗೊಳಿಸುವ ಸಮಯವೂ ಹೆಚ್ಚುತ್ತಲೇ ಇರುತ್ತದೆ. ಈ ಸೂಚಕವು ಕಡಿಮೆಯಾಗಲು ಪ್ರಾರಂಭಿಸಿದಾಗ, ಇದು ಪ್ರತಿದಿನ ಹೊಸ ಪ್ರಕರಣಗಳಲ್ಲಿ ಉಲ್ಬಣಗೊಳ್ಳುವುದು ಮುಂದಿನ ಅಪಾಯದ ಎಚ್ಚರಿಕೆಯ ಮುನ್ಸೂಚನೆಯಾಗಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ದೇಶದಲ್ಲಿ ಸಾರ್ವತ್ರಿಕ ಪರೀಕ್ಷೆಗಳಾದಾಗ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳು ಸೂಕ್ತವಾಗಿ ಅನ್ವಯವಾಗುತ್ತವೆ. ಆದರೆ ಕರ್ನಾಟಕವೂ ಸೇರಿದಂತೆ ಬಾರತದಲ್ಲಿಈಗ ತೀವ್ರ ರೋಗ ಲಕ್ಷಣಗಳು ಇರುವವರು ಮತ್ತು ರೋಗಿಗಳ ಕುಟುಂಬಸ್ಥರು ಮಾತ್ರ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಣಗಳೀಗಾಗಿಯೆ ಬೆಂಗಳೂರು ನಗರದಲ್ಲಿ ಒಮ್ಮೊಮ್ಮೆ ಶೇ.50 ಟಿಪಿಆರ್‌ ದಾಟುತ್ತಿದೆ. ಈ ಪರೀಕ್ಷೆಗಳನ್ನು ಸಾರ್ವತ್ರಿಕವಾಗಿ ಹೆಚ್ಚಳ ಮಾಡಿದರೂ ಬೆಂಗಳೂರಿನಲ್ಲಿ ಅದು ಪ್ರತಿಶತ 20ರಿಂದ 30ರಷ್ಟು ಇರುವ ಸಾಧ್ಯತೆಗಳು ಹೆಚ್ಚಿವೆ. ಹಾಗಾಗಿ ಯಾವುದೇ ನಿಟ್ಟಿನಲ್ಲಿ ನೋಡಿದರೂ ಇದು ಕರ್ನಾಟಕದಲ್ಲಿ ಹತೋಟಿಗೆ ಬಾರದ ಸಾಂಕ್ರಾಮಿಕ ರೋಗವಾಗಿದೆ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

the fil favicon

SUPPORT THE FILE

Latest News

Related Posts