ಲಸಿಕೆ ಖರೀದಿಗೆ 1,200 ಕೋಟಿ ಖರ್ಚು; ಇದು ಬಜೆಟ್‌ನ ಶೇ 0.5ರಷ್ಟು ವೆಚ್ಚ

ಬೆಂಗಳೂರು; ಕೋವಿಡ್‌ 2ನೇ ಅಲೆ ಆರಂಭವಾದ ದಿನದಿಂದ ಈವರೆವಿಗೆ ರಾಜ್ಯ ಬಿಜೆಪಿ ಸರ್ಕಾರವು ಲಸಿಕೆ ಅಭಿಯಾನಕ್ಕೆ 1,200 ಕೋಟಿ ವೆಚ್ಚ ಮಾಡಿದೆ. ಎರಡನೇ ಹಂತಕ್ಕೆ 2 ಕೋಟಿ ಡೋಸ್‌ಗೆ ತಲಾ 400 ರೂ.ನಂತೆ 800 ಕೋಟಿ ವೆಚ್ಚವಾಗಲಿದೆ. (ಮೊದಲ ಹಂತ ಹೊರತುಪಡಿಸಿ) ಇದು ಕೂಡ ವಾರ್ಷಿಕ ಬಜೆಟ್‌ನ ಶೇ. 0.33 ರಷ್ಟು ಮಾತ್ರ. ಲಸಿಕೆ ಖರೀದಿಗಾಗಿ ಒಟ್ಟಾರೆಯಾಗಿ ವಾರ್ಷಿಕ ಬಜೆಟ್‌ನಲ್ಲಿ ಶೇ.0.5ರಷ್ಟು ಮಾತ್ರ ಖರ್ಚು ಮಾಡಿದಂತಾಗಿದೆ.

ಇಡೀ ರಾಜ್ಯದಲ್ಲಿ ಲಸಿಕೆಯನ್ನು ಉಚಿತವಾಗಿ ಎಲ್ಲರಿಗೂ ನೀಡಿದರೆ 6,000 ಕೋಟಿ ರು. ಖರ್ಚಾಗಲಿದೆ. ಇದು ಕೂಡ ರಾಜ್ಯ ಬಜೆಟ್‌ನ ಲ್ಲಿ ಶೇ.2.50ಕ್ಕಿಂತಲೂ ಕಡಿಮೆ. ರಾಜ್ಯದಲ್ಲಿ ಸಾರ್ವತ್ರಿಕವಾಗಿ ಲಸಿಕೆ ಹಾಕಬೇಕಾದರೆ ಅಂದಾಜು 14 ಕೋಟಿ ಲಸಿಕೆ ( 2 ಡೋಸ್‌ ಸೇರಿ) ಅವಶ್ಯಕತೆ ಇದೆ. ಆರೋಗ್ಯ ತುರ್ತು ಪರಿಸ್ಥಿತಿ ವೇಳೆಯಲ್ಲಿ ಲಸಿಕೆ ಖರೀದಿಯೂ ಸೇರಿದಂತೆ ಒಟ್ಟಾರೆ ಕೋವಿಡ್‌ ನಿರ್ವಹಣೆಗಾಗಿ ರಾಜ್ಯದ ಬಜೆಟ್‌ನಲ್ಲಿ ಶೇ.15ರಿಂದ 20ರಷ್ಟು ವೆಚ್ಚ ಮಾಡಬೇಕು. ಇದರ ಪ್ರಕಾರ 30,000 ಕೋಟಿ ರು.ನಿಂದ 50,000 ಕೋಟಿ ರು.ವೆಚ್ಚವಾಗಲಿದೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರ ಖರೀದಿಸುತ್ತಿರುವ 2 ಕೋಟಿ ಡೋಸ್ ಕೋವಿಶೀಲ್ಡ್ ಪೈಕಿ ಶನಿವಾರ ರಾತ್ರಿ 3.5 ಲಕ್ಷ ಡೋಸ್ ರಾಜ್ಯಕ್ಕೆ ತಲುಪಿದೆ. ಈವರೆಗೂ ಒಟ್ಟು 6.5 ಲಕ್ಷ ಡೋಸ್ ಪೂರೈಕೆಯಾಗಿದೆ. ಕೇಂದ್ರ ಸರ್ಕಾರ ಈವರೆಗೂ 99,58,190 ಕೋವಿಶೀಲ್ಡ್, 10,91,280 ಕೋವ್ಯಾಕ್ಸಿನ್ ಸೇರಿ ಒಟ್ಟು 1,10,49,470 ಡೋಸ್ ಲಸಿಕೆಗಳನ್ನು ರಾಜ್ಯಕ್ಕೆ ಪೂರೈಕೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಕೆ ಸುಧಾಕರ್‌ ಅವರು ಇತ್ತೀಚೆಗಷ್ಟೇ ಟ್ವೀಟ್‌ ಮಾಡಿದ್ದರು.

ಆರೋಗ್ಯ ಇಲಾಖೆಯ ಇನ್ನೊಂದು ಮೂಲಗಳ ಪ್ರಕಾರ ಸೀರಂ ಇನ್ಸಿಟಿಟ್ಯೂಟ್‌ ಲೈಫ್‌ ಸೈನ್ಸಸ್‌ನಿಂದ 630 (ಜಿಎಸ್‌ಟಿ ಸೇರಿ) ಕೋಟಿ ರು. ವೆಚ್ಚದಲ್ಲಿ 2 ಕೋಟಿ ಡೋಸ್‌ ಖರೀದಿಸಿದೆ. ಅದೇ ರೀತಿ ಭಾರತ್‌ ಬಯೋಟೆಕ್‌ನಿಂದ 420 ಕೋಟಿ ವೆಚ್ಚದಲ್ಲಿ 1 ಕೋಟಿ ಡೋಸ್‌ ಖರೀದಿಸಿದೆ . ಒಟ್ಟಾರೆ 1,050 ಕೋಟಿ ರು. ಖರ್ಚಾಗಿದೆ ಎಂದು ಗೊತ್ತಾಗಿದೆ.

ಆದರೂ 18 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಇಂದಿನಿಂದಲೇ (ಮೇ 10) ಲಸಿಕೆ ನೀಡಲಾಗುವುದು ಎಂದು ರಾಜ್ಯ ಬಿಜೆಪಿ ಸರ್ಕಾರವು ಹೇಳಿಕೆ ನೀಡಿತ್ತಾದರೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಲಸಿಕೆ ಇನ್ನೂ ಲಭ್ಯವಾಗಿಲ್ಲ.

 

ಸರ್ಕಾರ ಯಾವುದೇ ತರಹದ ಜಿಪುಣತನ ತೋರದೇ ಮತ್ತು ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಡಿಬೇಡುವಂತಹ ಕೆಲಸ ಮಾಡದೆ ಸ್ವಾಭಿಮಾನ ಮತ್ತು ಜವಾಬ್ದಾರಿಯಿಂದ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಎರಡು ಡೋಸ್‌ನ್ನು ಉಚಿತವಾಗಿ ನೀಡಬೇಕು. ಅಲ್ಲದೇ ಇದು ಸಾರ್ವತ್ರಿಕವಾಗಿ ಲಸಿಕೆ ಅಭಿಯಾನ ಕೈಗೊಳ್ಳಬೇಕು. ಇದಕ್ಕೆ ಖರ್ಚಾಗುವುದು 6,000 ಕೋಟಿಗಿಂತಲೂ ಕಡಿಮೆ. ಇದು ನಮ್ಮ ರಾಜ್ಯದ ಒಟ್ಟಾರೆ ವಾರ್ಷಿಕ ಬಜೆಟ್‌ನ ನಗಣ್ಯ ಎನ್ನಬಹುದಾದಷ್ಟು ಮೊತ್ತ. ಹಾಗೆಯೇ ಇದೇ ಸಮಯದಲ್ಲಿ ರಾಜ್ಯ ಸರ್ಕಾರವು ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿ ರಾಜ್ಯ ಬಜೆಟ್‌ನ ಶೇ.15ರಿಂದ 20ರಷ್ಟು ಮೊತ್ತವನ್ನು ಕೋವಿಡ್‌ ನಿಯಂತ್ರಣವೂ ಸೇರಿದಂತೆ ಆರೋಗ್ಯ ವ್ಯವಸ್ಥೆಯ ಸುಧಾರಣೆ ಮತ್ತು ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದವರಿಗೆ ತುರ್ತು ಪರಿಹಾರಕ್ಕೆ ವಿನಿಯೋಗಿಸಬೇಕು.

 

ರವಿಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು

 

ಕರ್ನಾಟಕ ರಾಷ್ಟ್ರಸಮಿತಿ

 

ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ತಮ್ಮ ಇಮ್ಯುನಿಟಿ ಹೆಚ್ಚಿಸಿಕೊಂಡು ವೈರಸ್ ವಿರುದ್ಧದ ಹೋರಾಟಕ್ಕೆ ಶಕ್ತಿ ಪಡೆಯಲು ಲಸಿಕೆ ಪಡೆಯುವಂತೆ ಸರ್ಕಾರವೇನೋ ಕೇಳಿಕೊಳ್ಳುತ್ತಿದೆ. ಆದರೆ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದ ಕೋವಿಡ್ ಲಸಿಕೆ ಲಭ್ಯವಿಲ್ಲ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಮೊದಲ ಎರಡನೆಯ ಡೋಸ್‌ ಲಸಿಕೆ ಪಡೆಯಲು ಪರದಾಡುತ್ತಿದ್ದಾರೆ. ಅದರಲ್ಲೂ 60 ವರ್ಷ ದಾಟಿದ ವಯೋ ವೃದ್ಧರು ಲಸಿಕೆ ಪಡೆದುಕೊಳ್ಳಲು ಪಡಿಪಾಟಲು ಹೇಳತೀರದಾಗಿದೆ. ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ ಮೊದಲ ಡೋಸ್ ಲಸಿಕೆ ಪಡೆದುಕೊಂಡ ಶೇ 70-90ರಷ್ಟು ಜನರು ಇನ್ನೂ ಎರಡನೆಯ ಡೋಸ್ ಪಡೆದುಕೊಳ್ಳಲು ಸರತಿಯಲ್ಲಿ ನಿಲ್ಲಬೇಕಿದೆ.

ಮೇ.1ರವರೆಗೆ ಕೋವಿಡ್ ಲಸಿಕೆ ನೇರವಾಗಿ ಲಿಸಿಕೆ ತಯಾರಿಕಾ ಕಂಪೆನಿಗಳಿಂದ ಖರೀದಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ನೀಡಿರಲಿಲ್ಲ. ಮೇ.1ರಿಂದ ಶೇ.50ರಷ್ಟು ಲಸಿಕೆಯನ್ನು ನೇರವಾಗಿ ಖರೀದಿಸುವ ಅವಕಾಶ ಒಕ್ಕೂಟ ಸರ್ಕಾರ ನೀಡಿದೆ. ಇದರಿಂದಾಗಿ ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ ಮಾತ್ರವಲ್ಲದೆ ಒಕ್ಕೂಟ ಸರ್ಕಾರ ಅನುಮತಿ ನೀಡಿರುವ ಯಾವುದೇ ವಿದೇಶೀ ಲಸಿಕೆಯನ್ನಾದರೂ ನೇರವಾಗಿ ಖರೀದಿಸುವ ಅವಕಾಶ ಕರ್ನಾಟಕ ಸರ್ಕಾರಕ್ಕಿದೆ. ಸರ್ಕಾರ ಎಷ್ಟು ಲಸಿಕೆಗಳಿಗೆ ಯಾವ ಯಾವ ಕಂಪೆನಿಗಳಿಗೆ ಬೇಡಿಕೆ ಸಲ್ಲಿಸಿದೆ ಎಂದು ಬಹಿರಂಗಪಡಿಸಬೇಕು.

 

ದಿನೇಶ್‌ಕುಮಾರ್‌ ಎಸ್‌ ಸಿ

 

ಮುಖ್ಯಸ್ಥರು, ಕರವೇ ಸಾಮಾಜಿಕ ಜಾಲತಾಣ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ 44-59 ವರ್ಷದ ವಯೋಮಿತಿಯವರಲ್ಲಿ 89,456 ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಇವರಲ್ಲಿ 9,045 ಮಂದಿ ಮಾತ್ರ ಎರಡನೆಯ ಲಸಿಕೆ ಪಡೆದುಕೊಂಡಿದ್ದಾರೆ. ಅಂದರೆ, ಇದರ ಪ್ರಮಾಣ ಕೇವಲ ಶೇ 10ರಷ್ಟು. 69,626 ಮಂದಿ ಹಿರಿಯ ನಾಗರಿಕರ ಪೈಕಿ ಶೇ 30ರಷ್ಟು ಜನರು ಎರಡನೆಯ ಡೋಸ್ ನೀಡಲಾಗಿದೆ. ದೈನಂದಿನ ಪ್ರಕ್ರಿಯೆ ಆಧಾರದಲ್ಲಿ ಬಿಬಿಎಂಪಿ ಒಂದು ಲಕ್ಷ ಡೋಸ್‌ವರೆಗೂ ಲಸಿಕೆ ನೀಡುವ ಸಾಮರ್ಥ್ಯ ಹೊಂದಿದೆಯಾದರೂ ಅದಕ್ಕೆ ತಕ್ಕಂತೆ ಅರ್ಧದಷ್ಟೂ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಕಳೆದ ವಾರ 25,000 ರಿಂದ 38,000 ಜನರಿಗಷ್ಟೇ ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇತರ ರಾಜ್ಯಗಳು ಮೂರು-ನಾಲ್ಕು ತಿಂಗಳ ಕಾಲಮಿತಿಯೊಳಗೆ ಹದಿನೆಂಟು ದಾಟಿದ ಎಲ್ಲರಿಗೂ ಲಸಿಕೆ ನೀಡುವ ರೂಪುರೇಷೆ ಸಿದ್ಧಪಡಿಸುತ್ತಿವೆ. ಒಕ್ಕೂಟ ಸರ್ಕಾರ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವಾಗಲೂ ಕರ್ನಾಟಕ, ಕನ್ನಡಿಗರ ಪರವಾಗಿ ನಿಂತುಕೊಂಡಿಲ್ಲ. ಆಕ್ಸಿಜನ್ ವಿಷಯದಲ್ಲಿ ಅದು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದೇ ಇದಕ್ಕೆ ದೊಡ್ಡ ಉದಾಹರಣೆ.

ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ಯುದ್ಧೋಪಾದಿಯಲ್ಲಿ ಲಸಿಕೆ ನೀಡಿಕೆ ಯೋಜನೆ ಹಮ್ಮಿಕೊಳ್ಳಬೇಕು. ಲಸಿಕೆಗಾಗಿ ಜನ ಅಲೆಯುವುದನ್ನು ತಪ್ಪಿಸಿ ಮನೆಮನೆಗಳಲ್ಲೇ ಲಸಿಕೆ ನೀಡುವ ಮಹಾ ಆಂದೋಲನ ನಡೆಸಬೇಕು. ಕೋವಿಡ್ ಗೆಲ್ಲಲು ಇಂಥ ಗಂಭೀರ ಪ್ರಯತ್ನವೇ ನಡೆಯಬೇಕು. ಆದರೆ ಯಡಿಯೂರಪ್ಪ ಸರ್ಕಾರವೇ ಕೋಮಾದಲ್ಲಿ ಇದ್ದಂತೆ ಕಾಣುತ್ತಿದೆ. ಈ ಸರ್ಕಾರಕ್ಕೆ ಸಮರ್ಥ ನಾಯಕತ್ವವೂ ಇಲ್ಲ, ಇರುವ ನಾಯಕರಿಗೆ ಒಗ್ಗಟ್ಟು, ಇಚ್ಛಾಶಕ್ತಿ, ಜನಪರ ಕಾಳಜಿ ಒಂದೂ ಇಲ್ಲ. ಇದರ ಪರಿಣಾಮವನ್ನು ನಾಡಿನ ಸಾಮಾನ್ಯ ಜನರು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ದಿನೇಶ್‌ಕುಮಾರ್‌.

the fil favicon

SUPPORT THE FILE

Latest News

Related Posts