ಬೆಂಗಳೂರು; ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಪರದಾಡುತ್ತಿರುವ ರಾಜ್ಯ ಸರ್ಕಾರ ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧವನ್ನೇಕೆ ಕಾಯಂ ಮಲ್ಟಿ ಸ್ಪೆಷಾಲಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಬಾರದು ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಮಾಡಿದ್ದ ಟ್ವೀಟ್ ಇದೀಗ ಹಲವು ಶಾಸಕರ ಕಣ್ತೆರೆಸಿದೆ.
ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧ ವರ್ಷಕ್ಕೆ ಒಂದು ಅಥವಾ ಎರಡು ಬಾರಿಯಷ್ಟೇ ಬಳಕೆಯಾಗುತ್ತಿದೆ. ಈ ಕಟ್ಟಡವನ್ನು ಕಾಯಂ ಆಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಿದಲ್ಲಿ ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗಲಿದೆ ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಹಲವು ಶಾಸಕರು ಇದೊಂದು ಉತ್ತಮವಾದ ಸಲಹೆ ಎಂದು ಅಭಿಪ್ರಾಯಿಸಿದ್ದಾರಲ್ಲದೆ ಟ್ವೀಟ್ ಕೂಡ ಮಾಡಿದ್ದಾರೆ. ಕಾಂಗ್ರೆಸ್‌ನ ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರವನ್ನೂ ಬರೆದಿದ್ದಾರೆ. ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧವನ್ನು ಕೋವಿಡ್ ಕೇರ್ ಸೆಂಟರ್‌ನ್ನಾಗಿ ಬಳಕೆ ಮಾಡಿಕೊಳ್ಳಿ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಹಾಗೆಯೇ ಮಾಜಿ ಸಚಿವ ಎಂ ಬಿ ಪಾಟೀಲ್ ಕೂಡ ದನಿಗೂಡಿಸಿದ್ದಾರೆ. ಸುಗತ ಶ್ರೀನಿವಾಸರಾಜು ಅವರ ಟ್ವೀಟ್‌ನ್ನು ರೀ ಟ್ವೀಟ್ ಮಾಡಿರುವ ಅವರು ಸುವರ್ಣ ವಿಧಾನಸೌಧವನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು ಸೂಕ್ತ ಎಂದಿದ್ದಾರೆ. ಅಲ್ಲದೆ ಬೆಂಗಳೂರು ನಗರದ ವಸ್ತುಪ್ರದರ್ಶನ ಮೈದಾನವನ್ನೇ ಕೋವಿಡ್ ಕೇರ್ ಸೆಂಟರ್‌ನ್ನಾಗಿ ಪರಿವರ್ತಿಸಿದ್ದ ಸರ್ಕಾರ, ಸುವರ್ಣ ವಿಧಾನಸೌಧವನ್ನೇಕೆ ಬಳಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ.
ಅದೇ ರೀತಿ ದಿನೇಶ್ ಗುಂಡೂರಾವ್, ಡಾ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಹಲವರು ಇದೇ ನಿಲುವನ್ನು ತಳೆದಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪ್ರತಿಸ್ಪಂದನಕ್ಕೆ 438 ಕೋಟಿ ರು. ವೆಚ್ಚದಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಾಣ ಮಾಡಲಾಗಿತ್ತು. ಉತ್ತರ ಕರ್ನಾಟಕದ ಸಮಸ್ಯೆಗಳನ್ನೂ ಸೇರಿದಂತೆ ಈ ಭಾಗದಲ್ಲಿನ ಪ್ರಾದೇಶಿಕ ಅಸಮಾನತೆ ತೊಡೆದು ಹಾಕುವ ಭಾಗವಾಗಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಲಾಗಿತ್ತು. ಅಲ್ಲದೆ ವರ್ಷದಲ್ಲಿ 2 ಬಾರಿ ಇಲ್ಲಿ ವಿಧಾನಮಂಡಲದ ಅಧಿವೇಶನ ನಡೆಸಲಾಗುವುದು ಎಂದು ತೀರ್ಮಾನಿಸಿತ್ತು. ಆದರೆ ನಿಯಮಿತವಾಗಿ ಅಧಿವೇಶನ ನಡೆಯದ ಕಾರಣ ಇಡೀ ಕಟ್ಟಡ ಪಾಳು ಬಿದ್ದಂತಾಗಿತ್ತು.
ಸುವರ್ಣ ವಿಧಾನಸೌಧವನ್ನು ನಿಯಮಿತವಾಗಿ ಬಳಕೆ ಮಾಡದ ಕಾರಣ ಸರ್ಕಾರದ ಪಾಲಿಗೆ ಇದೊಂದು ಬಿಳಿಯಾನೆಯಂತಾಗಿತ್ತು. ಬಳಕೆಯಾಗದಿದ್ದರೂ ನಿರ್ವಹಣೆಗಾಗಿಯೇ ತಿಂಗಳಿಗೆ ಅರ್ಧ ಕೋಟಿಯಷ್ಟು ಖರ್ಚು ಮಾಡಲಾಗುತ್ತಿದೆ. ಈ ಮಧ್ಯೆ ಬೆಂಗಳೂರಿನಲ್ಲಿರುವ ಹಲವು ಕಚೇರಿಗಳನ್ನು ಸುವರ್ಣ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತಾದರೂ ಬಹುತೇಕ ಕಚೇರಿಗಳು ಈವರೆವಿಗೂ ಸುವರ್ಣ ವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಗೊಂಡಿಲ್ಲ.
ಸುವರ್ಣ ವಿಧಾನಸೌಧವು 60,398 ಮೀಟರ್ ಸುತ್ತಳತೆಯ ವಿಶಾಲವಾದ ಕಟ್ಟಡವಾಗಿದೆ. ಆದರೆ ಈ ಕಟ್ಟಡವನ್ನು ಸಮರ್ಥ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ. ಕಟ್ಟಡ ನಿರ್ವಹಣೆಗಾಗಿ 70 ಕೋಟಿಗೂ ಹೆಚ್ಚು ಖರ್ಚಾಗಿದೆ ಎಂದು ಹೇಳಲಾಗಿದೆ.
ಅಲ್ಲದೆ ಇದೇ ಜಾಗದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಹೆಲಿಪ್ಯಾಡ್ ಕೂಡ ನಿರ್ಮಿಸಲಾಗಿದೆ. ಆದರೆ ಇದು ಕೂಡ ಸಮರ್ಥವಾಗಿ ಬಳಕೆ ಆಗಿಯೇ ಇಲ್ಲ. ಸೌಧದ ಸೌಂದರ್ಯ ವೃದ್ಧಿಗೆ ಲೇಸರ್ ಲೈಟ್ ವ್ಯವಸ್ಥೆ ಇದೆಯಾದರೂ ವರ್ಷಕ್ಕೊಮ್ಮೆ ಇದನ್ನು ಬಳಸುವುದಕ್ಕೂ ದುರಸ್ತಿಗೆಂದು ಸಾವಿರಾರು ರೂ. ಖರ್ಚು ಮಾಡಲಾಗುತ್ತಿದೆ.
ಅಧಿವೇಶನ ನಡೆಯುವಾಗ ಇಲ್ಲಿಗೆ ರಾಜ್ಯ ಮಟ್ಟದ ಕಚೇರಿಗಳು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ. ಕಾರ್ಯನಿರ್ವಹಣೆಗಾಗಿ ಕಡಿಮೆ ವಿಸ್ತಾರದ ಕೊಠಡಿ ನಿರ್ಮಿಸಲಾಗಿದೆ. ಅಲ್ಲದೆ ಅಧಿವೇಶನ ವೇಳೆ ಸೌಧದ ನೆಲಮಹಡಿಯ ಸುಮಾರು 10 ಕೊಠಡಿ, ಮೂರನೇ ಮಹಡಿಯ ಎರಡು ಕೊಠಡಿಯಷ್ಟೇ ಖಾಲಿ ಉಳಿಯುತ್ತವೆ.
ಇನ್ನು, ಸೌಧ ನಿರ್ಮಾಣವಾದಗಿನಿಂದ ಇದರ ನಿರ್ವಹಣೆ ವೆಚ್ಚ ಹೆಚ್ಚುತ್ತಲೇ ಇದೆ. ಮೊದಲು ವಾರ್ಷಿಕ ನಾಲ್ಕು ಕೋಟಿ ರೂ. ಇದ್ದ ವೆಚ್ಚ ಈಗ ಆರು ಕೋಟಿ ರೂ.ಗಳನ್ನೂ ದಾಟಿದೆ. ಸದ್ಯ ಲೋಕೋಪಯೋಗಿ ಇಲಾಖೆಯೇ ಸೌಧವನನ್ನು ನಿರ್ವಹಿಸುತ್ತಿದೆಯಾದರೂ ಸೌಧದ ವಿದ್ಯುತ್ ಬಿಲ್ಲೇ ವರ್ಷಕ್ಕೆ ಒಂದು ಕೋಟಿ ರೂ. ದಾಟುತ್ತಿದೆ. ಅಧಿವೇಶನದ ಸಂದರ್ಭದಲ್ಲಿ ಹೆಚ್ಚುವರಿ ಕನಿಷ್ಠ ಒಂದು ಕೋಟಿ ರೂ. ನಿರ್ವಹಣೆ ವೆಚ್ಚ ಮಾಡಲಾಗುತ್ತದೆ. ಒಟ್ಟಾರೆ ಕಟ್ಟಡ ನಿರ್ಮಾಣ ಸೇರಿ ಈವರೆಗೆ ಸೌಧಕ್ಕೆ ಬರೋಬ್ಬರಿ 500 ಕೋಟಿಗೂ ಹೆಚ್ಚು ಖರ್ಚಾಗಿದೆ.