ತೇಜಸ್ವಿ ಸೂರ್ಯ ಹೇಳಿಕೆ ಪರಿಣಾಮ; ಇತರೆ ಕಂಪನಿ ಮುಸ್ಲಿಂ ಉದ್ಯೋಗಿಯತ್ತ ಪೊಲೀಸರ ಕೆಂಗಣ್ಣು

ಬೆಂಗಳೂರು; ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್‌ ಬ್ಲಾಕಿಂಗ್‌ ದಂಧೆಯಲ್ಲಿ ಮುಸ್ಲಿಂ ಉದ್ಯೋಗಿಗಳಿದ್ದರು ಎಂದು ಸಂಸದ ತೇಜಸ್ವಿ ಸೂರ್ಯ ನೀಡಿದ್ದ ಹೇಳಿಕೆಯ ನಂತರ ಬೆಂಗಳೂರು ನಗರದಲ್ಲಿರುವ ಕೆಲ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಸ್ಲಿಂ ಉದ್ಯೋಗಿಗಳನ್ನು ಅನುಮಾನದಿಂದ ನೋಡಲಾರಂಭಿಸಿರುವ ಪೊಲೀಸ್‌ ಇಲಾಖೆಯ ಕೆಲ ಸಿಬ್ಬಂದಿ ಕೆಂಗಣ್ಣು ಬೀರಿದ್ದಾರೆ.

ಬೆಂಗಳೂರು ನಗರದ ಬೊಮ್ಮಸಂದ್ರ ಠಾಣೆಯಲ್ಲಿ ನಡೆದಿರುವ ಪ್ರಕರಣವೇ ಇದಕ್ಕೆ ಜ್ವಲಂತ ಸಾಕ್ಷಿ.

ವಾರ್‌ ರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು ಸಿಬ್ಬಂದಿ ಹೆಸರುಗಳಲ್ಲಿ ಆಯ್ದ ಮುಸ್ಲಿಂ ಉದ್ಯೋಗಿಗಳ ಹೆಸರುಗಳನ್ನು ತೇಜಸ್ವಿ ಸೂರ್ಯ ಹೇಳಿದ ಒಂದು ದಿನದ ಅಂತರದಲ್ಲೇ ಬೊಮ್ಮಸಂದ್ರ ಠಾಣೆ ವ್ಯಾಪ್ತಿಯಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಉದ್ಯೋಗಿ ಮೇಲೆ ಕೆಂಗಣ್ಣು ಬೀರಿದ ಪ್ರಕರಣ ನಡೆದಿದೆ.

ಹಾಲು ಉತ್ಪಾದಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್‌ ಮತ್ತು ಆತನ ದ್ವಿಚಕ್ರ ವಾಹವನ್ನು ವಶಪಡಿಸಿಕೊಂಡಿದ್ದ ಬೀಟ್‌ ಪೊಲೀಸರು ಆರಂಭದಲ್ಲಿ ಡೆಲಿವರಿ ಬಾಯ್‌ನಿಂದ ಹಣ ವಸೂಲಿಗೆ ಮುಂದಾಗಿದ್ದರು. ಆತ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ಗೊತ್ತಾದಾಗ ಅವರ ವರಸೆಯೂ ಬದಲಾಗಿತ್ತು.

ಆಗ ಡೆಲಿವರಿಬಾಯ್‌ ನೇರವಾಗಿ ಕಂಪನಿಯ ಪ್ರತಿನಿಧಿಗೆ ಕರೆ ಮಾಡಿದ್ದರು. ಆಗ ಕಂಪನಿಯ ಪ್ರತಿನಿಧಿಯಿಂದಲೇ ಡೆಲಿವರಿ ಬಾಯ್‌ ಹೆಸರನ್ನು ಮೂರ್ನಾಲ್ಕು ಬಾರಿ ಪುನರುಚ್ಛರಿಸಿದ್ದಾರೆ ಎಂದು ಗೊತ್ತಾಗಿದೆ.

ಏನದು ಪ್ರಕರಣ?

ಬೆಳಗ್ಗೆ 6ರಿಂದ 10ರವರೆಗೆ ಹಾಲಿನ ಉತ್ಪನ್ನಗಳನ್ನು ವಿತರಿಸಲು ಮಾರ್ಗಸೂಚಿಯಲ್ಲಿ ಅವಕಾಶವಿದ್ದರೂ ಯುವಕನ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದರು. ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಡೆಲಿವರಿ ಬಾಯ್‌ ಕಂಪನಿಗೆ ತಿಳಿಸಿದಾಗ ಈ ಸಂಬಂಧ ಕಂಪನಿಯ ಪ್ರತಿನಿಧಿಯು ನೇರವಾಗಿ ಠಾಣೆಗೆ ಕರೆ ಮಾಡಿದ್ದರು.

ಸ್ಥಳದಲ್ಲಿದ್ದ ಎಎಸ್‌ಐ ಅವರು ಡೆಲಿವರಿ ಬಾಯ್‌ನ ಹೆಸರು ಏನು ಎಂದು ಕೇಳಿದ್ದಾರೆ. ಆಗ ಕಂಪನಿ ಪ್ರತಿನಿಧಿ ಸಾದಿಕ್ ಪಾಶ (ಹೆಸರು ಬದಲಿಸಲಾಗಿದೆ) ಎಂದು ಹೇಳಿದಾಗ ತಕ್ಷಣವೇ ಎಎಸ್‌ಐ ಏನು….ಹೆಸರನ್ನು ಇನ್ನೊಮ್ಮೆ ಹೇಳಿ… ಎಂದು ಕಂಪನಿ ಪ್ರತಿನಿಧಿಯಿಂದ ಮೂರ್ನಾಲ್ಕು ಬಾರಿ ಹೆಸರನ್ನು ಹೇಳಿಸಿದ್ದಾರೆ ಎಂದು ಗೊತ್ತಾಗಿದೆ. ಗೌಪ್ಯತೆ ಕಾರಣದಿಂದ ಕಂಪನಿಯ ಹೆಸರನ್ನು ಬಹಿರಂಗಪಡಿಸುತ್ತಿಲ್ಲ.

‘ದಿ ಫೈಲ್‌’ ಜತೆ ಅನೌಪಚಾರಿಕವಾಗಿ ಮಾತನಾಡಿದ ಕಂಪನಿ ಪ್ರತಿನಿಧಿಯು ತೇಜಸ್ವಿ ಸೂರ್ಯ ಬೆಡ್‌ ಬ್ಲಾಕಿಂಗ್‌ ಹಗರಣದ ಕುರಿತು ಕೇವಲ ಮುಸ್ಲಿಂ ಉದ್ಯೋಗಿಗಳ ಹೆಸರುಗಳನ್ನು ಹೇಳಿದ ನಂತರ ಈ ಪ್ರಕರಣ ನಡೆದಿದೆ. ನಮ್ಮ ಕಂಪನಿಯಲ್ಲಿ ಒಟ್ಟು 500 ಉದ್ಯೋಗಿಗಳಿದ್ದಾರೆ. ಈ ಪೈಕಿ ಕನಿಷ್ಠ 30 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಿದ್ದಾರೆ. ಎಲ್ಲರೂ ಆರ್ಥಿಕವಾಗಿ ಹಿಂದುಳಿದವರು. ಡೆಲಿವರಿ ಕೆಲಸಕ್ಕೆ ಬರುವ ಮೂಲಕ ಸಂಸಾರವನ್ನು ಮುನ್ನೆಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವುದೋ ಪ್ರಕರಣವನ್ನು ಇಲ್ಲಿ ಥಳಕು ಹಾಕಿ ನೋಡುವುದು ಎಷ್ಟರಮಟ್ಟಿಗೆ ಸರಿ,’ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.

ಠಾಣೆಯ ಎಎಸ್‌ಐ ಮಾತನಾಡುವ ಮುನ್ನವೇ ಕಂಪನಿ ಪ್ರತಿನಿಧಿಯು  ಅಧಿಕಾರಿಗಳನ್ನೊಳಗೊಂಡ ಸಣ್ಣ ಪ್ರಮಾಣದ ಉದ್ದಿಮೆದಾರರ ವಾಟ್ಸಾಪ್‌ ಗ್ರೂಪ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಗ್ರೂಪ್‌ನಲ್ಲಿದ್ದ ಡಿವೈಎಸ್ಪಿ ಅವರು ತಕ್ಷಣಕ್ಕೆ ಸಂಬಂಧಿಸಿದ ಠಾಣೆಯ ಎಎಸ್‌ಐಗೆ ಕರೆ ಮಾಡಿ ಪ್ರಕರಣದ ಕುರಿತು ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ. ಇದಾದ ನಂತರ ಡೆಲಿವರಿಬಾಯ್‌ ಮತ್ತು ವಶಕ್ಕೆ ಪಡೆದಿದ್ದ ದ್ವಿಚಕ್ರ ವಾಹನವನ್ನು ಮರಳಿ ನೀಡಲಾಗಿದೆ ಎಂದು ಕಂಪನಿ ಪ್ರತಿನಿಧಿಯು ‘ದಿ ಫೈಲ್‌’ಗೆ ತಿಳಿಸಿದರು.

the fil favicon

SUPPORT THE FILE

Latest News

Related Posts