40 ಸಾವಿರ ಕಡಿಮೆ ಪರೀಕ್ಷೆ; ಆಸ್ಪತ್ರೆಗಳ ಮೇಲಿನ ಒತ್ತಡ ತಡೆಯುವ ತಂತ್ರವೇ?

ಬೆಂಗಳೂರು; ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಆಸ್ಪತ್ರೆಗಳ ಮೇಲಿನ ಉಂಟಾಗುತ್ತಿರುವ ಒತ್ತಡವನ್ನು ಕಡಿಮೆ ಮಾಡುವ ಏಕೈಕ ಉದ್ದೇಶದಿಂದಲೇ ಆರ್‌ಟಿಪಿಸಿಆರ್‌ ಮತ್ತು ರ್ಯಾಪಿಡ್‌ ಆಂಟಿಜಿನ್‌ ಟೆಸ್ಟ್‌ ಸಂಖ್ಯೆಯಲ್ಲಿ ಇಳಿಕೆ ಮಾಡಲಾಗುತ್ತಿದೆ!

ಕಳೆದ ಒಂದು ವಾರದಿಂದಲೂ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆ ನಾಗಲೋಟದಲ್ಲಿದೆ. ಏಪ್ರಿಲ್‌ 29 ಅಂತ್ಯಕ್ಕೆ 48,296 ಹೊಸ ಪ್ರಕರಣಗಳು ವರದಿಯಾಗಿದ್ದರೆ ಮೇ 5ಕ್ಕೆ 50,112 ಪ್ರಕರಣಗಳು ವರದಿಯಾಗಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾದಂತೆಲ್ಲಾ ಪರೀಕ್ಷೆ ಮಾಡುವ ಪ್ರಮಾಣದಲ್ಲೂ ಹೆಚ್ಚಳವಾಗಬೇಕು. ಆದರಿಲ್ಲಿ ಪರೀಕ್ಷೆಗಳನ್ನೇ ಕಡಿಮೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ಕಳೆದ 4 ದಿನಗಳ ಹಿಂದಿನ ತನಕವೂ ಪ್ರತಿ ದಿವಸ ಆರ್‌ಟಿಪಿಸಿಆರ್‌ ಒಳಗೊಂಡಂತೆ ಪ್ರತಿ ದಿನ 1,75,000 ದಿಂದ 1,94,000 ತನಕ ಪರೀಕ್ಷೆಗಳಾಗಿವೆ. ಆದರೆ ಈ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಇಲಾಖೆ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ 1,45,000ಕ್ಕೆ ಇಳಿದಿದೆ.

ಏಪ್ರಿಲ್‌ 30ರಂದು 1,89,793 ಪರೀಕ್ಷೆಗಳಾಗಿದ್ದರೆ ಮೇ 1ರಂದು 1,77,000ಕ್ಕೆ ಇಳಿದಿದೆ. ಮೇ 2ರಂದು ಆ ಸಂಖ್ಯೆ 1,58,365ಕ್ಕೆ ಕುಸಿದಿದೆ. ಮೇ 3ರಂದು 1,49,090ಕ್ಕೆ ಇಳಿದಿದೆ. ಬಂದಿದೆ. ಮೇ 4 ಮತ್ತು 5ರಂದು ಕೂಡ ಅದೇ ಸಂಖ್ಯೆಯಲ್ಲಿವೆ. ಅಂದರೆ ಈ ಮೂರು ದಿನದಲ್ಲಿ 40,000 ಪರೀಕ್ಷೆಗಳು ಕಡಿಮೆಯಾಗಿವೆ.

ಪರೀಕ್ಷೆ ಸಂಖ್ಯೆವಾರು 

ಏಪ್ರಿಲ್‌ 29
ರ್ಯಾಪಿಡ್‌ ಆಂಟಿಜಿನ್‌ ಟೆಸ್ಟ್‌ -15,118
ಆರ್‌ಟಿಪಿಸಿಆರ್‌- 1,60,698

ಏಪ್ರಿಲ್‌ 30
ರ್ಯಾಪಿಡ್‌ ಆಂಟಿಜಿನ್‌ ಟೆಸ್ಟ್‌- 14,280
ಆರ್‌ಟಿ ಪಿಸಿಆರ್‌- 1,75,513

ಮೇ 1
ರ್ಯಾಪಿಡ್ ಅಂಟಿಜೆನ್‌ ಟೆಸ್ಟ್‌- 13,279
ಆರ್‌ಟಿ ಪಿಸಿಆರ್‌- 1,64,703

ಮೇ 2
ರ್ಯಾಪಿಡ್‌ ಅಂಟಿಜಿನ್‌ ಟೆಸ್ಟ್‌- 12,424
ಆರ್‌ಟಿ ಪಿಸಿಆರ್‌- 1,45,941

ಮೇ 3
ರ್ಯಾಪಿಡ್‌ ಆಂಟಿಜಿನ್‌ ಟೆಸ್ಟ್‌- 8,164
ಆರ್‌ಟಿ ಪಿಸಿಆರ್‌- 1,40,926

ಮೇ 4
ರ್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌- 13,098
ಆರ್‌ಟಿಪಿಸಿಆರ್‌- 1,40,609

ಮೇ 5
ರ್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌- 9,827
ಆರ್‌ಟಿ ಪಿಸಿಆರ್‌ – 1,45,397

ತುಮಕೂರು, ರಾಮನಗರ, ಹಾಸನ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಕೋವಿಡ್‌ ದೃಢಪಟ್ಟ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳು ಪರೀಕ್ಷೆಗಳ ಸಂಖ್ಯೆಯನ್ನು ಕಡಿಮೆಗೊಳಿಸಬೇಕು ಎಂದು ನೇರವಾಗಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನವೊಂದಕ್ಕೆ ಕೇವಲ 15 ಪರೀಕ್ಷೆಗಳನ್ನಷ್ಟೇ ಮಾಡಬೇಕು ಎಂದೂ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ತುಮಕೂರು ಜಿಲ್ಲಾಧಿಕಾರಿ ವೈ ಎಸ್‌ ಪಾಟೀಲ್‌ ಅವರನ್ನು ಸಂಪರ್ಕಿಸಲು ‘ದಿ ಫೈಲ್‌’ ಯತ್ನಿಸಿದರೂ ಕರೆಯನ್ನು ಸ್ವೀಕರಿಸಲಿಲ್ಲ.

ಸೋಂಕು ವ್ಯಾಪಕವಾಗಿ ಹರಡಿರುವ ಸಂದರ್ಭದಲ್ಲಿ ಪರೀಕ್ಷೆಗಳು ಸಹ ಹೆಚ್ದುತ್ತಲೇ ಹೋಗಬೇಕು. ಆದರೆ ಇಲ್ಲಿ ಅದು ವ್ಯತಿರಿಕ್ತವಾಗಿದೆ. ಇದರಿಂದಾಗಿ ಕೋವಿಡ್‌ 19 ಇರುವ ಜನ ಅವರ ಪರೀಕ್ಷೆ ವರದಿ ಬರದೇ ಇದ್ದರೂ ಆರೋಗ್ಯ ತೀವ್ರ ಹದಗೆಡುವ ತನಕ ಅವರಿಗೆ ಸರ್ಕಾರದಿಂದ ಯಾವ ವೈದ್ಯಕೀಯ ಸೌಲಭ್ಯವೂ ಸಿಗದೇ ಮರಣ ಹೊಂದುವ ಸಂಖ್ಯೆಯೂ ಹೆಚ್ಚುತ್ತದೆ. ಕೋವಿಡ್‌ ಪೀಡಿತರ ಸಂಖ್ಯೆಯ ಕುರಿತು ಸರ್ಕಾರ ವರದಿ ನೀಡುತ್ತಿದೆಯಾದರೂ ವಾಸ್ತವದಲ್ಲಿ ಅ ಸಂಖ್ಯೆಯಲ್ಲಿ ಇನ್ನೂ ಹೆಚ್ಚಿರುವ ಸಾಧ್ಯತೆ ಇರುತ್ತದೆ.

ರವಿಕೃಷ್ಣಾರೆಡ್ಡಿ, ಅಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ

ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಸೋಂಕು ಹೆಚ್ಚುತ್ತಿರುವ ಕೆಲ ಜಿಲ್ಲೆಗಳಲ್ಲಿ ನಿರ್ದಿಷ್ಟಪ್ರಮಾಣದ ಸೋಂಕು ಪರೀಕ್ಷೆಯ ಹೊಸ ಗುರಿ ನಿಗದಿ ಮಾಡಿತ್ತು. ಅಲ್ಲದೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಆರೋಗ್ಯ ಇಲಾಖೆ ಈ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿತ್ತು. ಇದರ ಪ್ರಕಾರ ಎಂಟು ಜಿಲ್ಲೆಗಳಲ್ಲಿ ಹೊಸದಾಗಿ ಸೋಂಕು ಪರೀಕ್ಷೆ ಪ್ರಮಾಣವನ್ನು ನಿಗದಿ ಮಾಡಿತ್ತು.

ಈ ಪೈಕಿ ಅತಿ ಹೆಚ್ಚು ಪರೀಕ್ಷೆಗಳನ್ನು ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಯ ಪ್ರದೇಶಕ್ಕೆ ನಿಗದಿ ಮಾಡಿದೆ. ಬೆಂಗಳೂರಿನಲ್ಲಿ ನಿತ್ಯ 40 ಸಾವಿರ ಸೋಂಕು ಪರೀಕ್ಷೆ ನಡೆಸುವಂತೆ ಸೂಚಿಸಿತ್ತು. ಉಳಿದಂತೆ ಮೈಸೂರು 5,000, ತುಮಕೂರು 3,500, ಬೆಳಗಾವಿ ಮತ್ತು ದಕ್ಷಿಣ ಕನ್ನ ಡ ಜಿಲ್ಲೆಯಲ್ಲಿ 3,000 ವಿಜಯಪುರ ಮತ್ತು ಉಡುಪಿ ಜಿಲ್ಲೆಯಲ್ಲಿ 2,000 ಹಾಗೂ ಕೊಡಗಿನಲ್ಲಿ 1,000 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದು ತಿಳಿಸಿತ್ತು.

ಇನ್ನು ಬಳ್ಳಾರಿ, ದಾವಣಗೆರೆ, ಚಿಕ್ಕಮಗಳೂರು, ಬಾಗಲಕೋಟೆ, ವಿಜಯಪುರ, ಬೀದರ್‌, ಕಲಬುರಗಿ, ಬೆಂಗಳೂರು ಗ್ರಾಮಾಂತರಗಳಲ್ಲಿನ ಈಗಾಗಲೇ ನಿಗದಿಪಡಿಸಿರುವ ಗುರಿಯನ್ನು ತಲುಪಲು ಅಗತ್ಯ ಕ್ರಮ ಕೈಗೊಳ್ಳಬೇಕು. ದಾವಣಗೆರೆ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬಳ್ಳಾರಿ, ಮೈಸೂರು, ಬೆಳಗಾವಿ ಜಿಲ್ಲೆಗಳಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸೂಚಿಸಲಾಗಿದೆ. ಆದರೆ, ಎಷ್ಟು ಹೆಚ್ಚಿಸಬೇಕು ಎಂಬುದನ್ನು ತಿಳಿಸಿರಲಿಲ್ಲ.

ಎರಡನೇ ಅಲೆಯಲ್ಲಿ ಆರ್‌ಟಿ ಪಿಸಿಆರ್‌ ಸಾಮಾನ್ಯಜನರಿಗೆ ಪರೀಕ್ಷೆಗೆ ಒಳಪಡಿಸಿದರೆ ನೆಗೆಟಿವ್‌ ಬರುವ ಸಾಧ್ಯತೆಗಳೇ ಹೆಚ್ಚಿವೆ. ಆದರೆ ಶೀತ, ಜ್ವರದಿಂದ (ಐಎಲ್‌ಇ- ಸಾರಿ ಪ್ರಕರಣ) ಬಳಲುತ್ತಿರುವವರಿಗೆ ಆರ್‌ಟಿಪಿಸಿಆರ್‌ ಮಾಡಿಸಿದರೆ ನೆಗೆಟಿವ್‌ ಬರುತ್ತಿದೆ. ವೈರಾಣು ಮಾರ್ಪಾಡಾಗಿರುವುದರಿಂದ ನೆಗೆಟಿವ್‌ ಬರುತ್ತಿದೆ. ಸಾಮಾನ್ಯ ಜನರಿಗೆ ಆರ್‌ಟಿ ಪಿಸಿಆರ್‌ ಪರೀಕ್ಷೆ ನಡೆಸುವುದು ಬೇಡ ಎಂಬ ಸೂಚನೆಗಳಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಹೇಳಿದ್ದಾರೆ.

the fil favicon

SUPPORT THE FILE

Latest News

Related Posts