ಬೆಂಗಳೂರು; ಬಳ್ಳಾರಿಯಲ್ಲಿರುವ ಜಿಂದಾಲ್ ಉಕ್ಕು ಕಂಪನಿಗೆ 3,677 ಎಕರೆ ಜಮೀನನ್ನು ಕಡಿಮೆ ದರಕ್ಕೆ ರಾಜ್ಯ ಸರ್ಕಾರ ನೀಡಿದ್ದರೂ ಜಿಂದಾಲ್ ಸಮೂಹದ 4 ಕಂಪನಿಗಳು ಕಳೆದ 4 ದಿನದಲ್ಲಿ ಆಮ್ಲಜನಕ ಪೂರೈಕೆ ಮಾಡಿದ್ದು 2,073.15 ಟನ್ ಮಾತ್ರ.
ವಿಶೇಷವೆಂದರೆ ಈ ಸಮೂಹದ 4 ಕಂಪನಿಗಳು ಪ್ರತಿನಿತ್ಯ ಸರಾಸರಿ 1,000 ಟನ್ ಆಮ್ಲಜನಕವನ್ನು ಉತ್ಪಾದಿಸುತ್ತಿದೆ. ಇದರ ಪ್ರಕಾರ 4 ದಿನದಲ್ಲಿ 4,000 ಟನ್ ಆಮ್ಲಜನಕವನ್ನು ಉತ್ಪಾದಿಸಿದ್ದರೂ ಒಟ್ಟು ಉತ್ಪಾದನೆಯಲ್ಲಿ ರಾಜ್ಯಕ್ಕೆ ಅರ್ಧದಷ್ಟು ಮಾತ್ರ ಸರಬರಾಜು ಮಾಡಿದೆ.!
ಅದೇ ರೀತಿ 2021ರ ಏಪ್ರಿಲ್ 27ರಿಂದ 30 ರವರೆಗೆ ರಾಜ್ಯಕ್ಕೆ ಜಿಂದಾಲ್ ಸ್ಟೀಲ್ ಕಂಪನಿಯೊಂದೇ 290.93 ಟನ್ ಅಮ್ಲಜನಕ ಸರಬರಾಜು ಮಾಡಿದೆ. ತೀವ್ರ ವಿರೋಧದ ನಡುವೆಯೂ ಜಿಂದಾಲ್ ಉಕ್ಕು ಕಂಪನಿ ಪರ ನಿಂತಿರುವ ಬಿಜೆಪಿ ಸರ್ಕಾರವು ಈ ಕಂಪನಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ ನಿಗದಿತ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆ ಆಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಜಿಂದಾಲ್ ಸ್ಟೀಲ್ ಲಿಮಿಟೆಡ್‌ನ ಸಮೂಹದ ಕಂಪನಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.
ಇನ್ನು, ರಾಜ್ಯದಲ್ಲಿ ಪ್ರತಿ ನಿತ್ಯ 1,043 ಟನ್ ಆಮ್ಲಜನಕ ಉತ್ಪಾದನೆಯಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ ಏಪ್ರಿಲ್ 27ರಿಂದ 30ರವರೆಗೆ 7 ಕಂಪನಿಗಳು 2,398 ಟನ್ ಆಮ್ಲಜನಕ ಸರಬರಾಜು ಮಾಡಿರುವುದು ಔಷಧ ನಿಯಂತ್ರಕರ ಕಚೇರಿ ದಾಖಲೆಯಿಂದ ತಿಳಿದು ಬಂದಿದೆ.
ತೋರಣಗಲ್ಲುವಿನಲ್ಲಿ ಜಿಂದಾಲ್ ಹೊಂದಿರುವ 4 ಘಟಕ ( ಬಳ್ಳಾರಿ ಆಕ್ಸಿಜನ್, ಏರ್ ಇಂಡಿಯಾ ಪ್ರೈ ಲಿ., ಪ್ರಾಕ್ಸೈರ್ ಇಂಡಿಯಾ, ಜೆಎಸ್‌ಡಬ್ಲ್ಯೂ)ಗಳಲ್ಲಿ ಪ್ರತಿ ನಿತ್ಯ 1,000 ಟನ್ ಆಕ್ಸಿಜನ್ ಉತ್ಪಾದನೆ ಮಾಡುತ್ತಿದೆ. ಈ ಪೈಕಿ ಜಿಂದಾಲ್ ಸ್ಟೀಲ್ ಲಿಮಿಟೆಡ್‌ನಿಂದ ಏಪ್ರಿಲ್ 27ರಿಂದ 30ರವರೆಗೆ ಒಟ್ಟು 290.93 ಟನ್‌ನಷ್ಟು ಆಮ್ಲಜನಕವನ್ನು ಪೂರೈಕೆ ಮಾಡಿದೆ ಎಂದು ಗೊತ್ತಾಗಿದೆ.
4 ಘಟಕಗಳಿಂದ 1,000 ಟನ್ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಜಿಂದಾಲ್ ಸಮೂಹದ ಕಂಪನಿಗಳು 4 ದಿನದಲ್ಲಿ ಒಟ್ಟು 4,000 ಟನ್ ಆಮ್ಲಜನಕವನ್ನು ಪೂರೈಕೆ ಮಾಡಬಹುದಿತ್ತು. ಏಪ್ರಿಲ್ 27ರಂದು 569.71 ಟನ್ ಸರಬರಾಜು ಮಾಡಿದೆ. ಅದೇ ರೀತಿ ಏಪ್ರಿಲ್ 28ರಂದು 520.9, ಏಪ್ರಿಲ್ 29ರಂದು 531.72 ಟನ್, ಏಪ್ರಿಲ್ 30ರಂದು 450.82 ಟನ್ ಸೇರಿದಂತೆ ಒಟ್ಟು 4 ದಿನದಲ್ಲಿ 2,073.15 ಟನ್ ಸರಬರಾಜು ಮಾಡಿದೆ.
ಜಿಂದಾಲ್ ಸಮೂಹ ಹೊರತುಪಡಿಸಿದಂತೆ ಭರೂಕ ಗ್ಯಾಸಸ್ ಕಂಪನಿಯು ಏಪ್ರಿಲ್ 27ರಿಂದ 30ರವರೆಗೆ 216.93 ಟನ್, ಕುಣಿಗಲ್‌ನಲ್ಲಿರುವ ಯೂನಿವರ್ಸಲ್ ಏರ್ ಪ್ರಾಡಕ್ಟ್ ಕಂಪನಿಯು ಇದೇ ಅವಧಿಯಲ್ಲಿ 107.62 ಟನ್‌ನಷ್ಟು ಆಮ್ಲಜನಕವನ್ನು ಪೂರೈಕೆ ಮಾಡಿರುವುದು ಔಷಧ ನಿಯಂತ್ರಕರ ಕಚೇರಿ ದಾಖಲೆಯಿಂದ ತಿಳಿದು ಬಂದಿದೆ.
ಇನ್ನು, ಔಷಧ ನಿಯಂತ್ರಕರ ಕಚೇರಿ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 69 ಮೆಡಿಕಲ್ ಆಕ್ಸಿಜನ್ ತಯಾರಿಸುವ ಘಟಕಗಳಿವೆ. ಆದರೆ ರಾಜ್ಯಕ್ಕೆ ಈ ಪೈಕಿ 7 ಘಟಕಗಳು ಮಾತ್ರ ಆಕ್ಸಿಜನ್ ಸರಬರಾಜು ಮಾಡಿವೆ. 62 ಕಂಪನಿಗಳಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವು ಯಾವ ರಾಜ್ಯಕ್ಕೆ ಸರಬರಾಜು ಅಗುತ್ತಿದೆ ಎಂಬ ಬಗ್ಗೆ ಔಷಧ ನಿಯಂತ್ರಕರ ಕಚೇರಿ ಮೂಲಗಳು ಮಾಹಿತಿ ಒದಗಿಸಲು ನಿರಾಕರಿಸಿದವು.