ಕೋವಿಡ್‌ ತೀವ್ರತೆ; ಸಾವಿನ ಸಂಖ್ಯೆ ಮುಚ್ಚಿಟ್ಟು ದಾರಿತಪ್ಪಿಸುತ್ತಿದೆಯೇ ಸರ್ಕಾರ?

ಬೆಂಗಳೂರು; ರಾಜ್ಯದಲ್ಲಿ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಕೋವಿಡ್‌ ಸಾವಿನ ಸಂಖ್ಯೆಗಳನ್ನು ಮುಚ್ಚಿಡಲಾಗುತ್ತಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ರಾಜಧಾನಿ ಬೆಂಗಳೂರು ನಗರದಲ್ಲಿ ಬಿಬಿಎಂಪಿ ವರದಿ ಮಾಡುತ್ತಿರುವ ಸಾವಿನ ಸಂಖ್ಯೆಗೂ ಚಿತಾಗಾರಗಳಲ್ಲಿ ಕೋವಿಡ್‌ ಶಿಷ್ಟಾಚಾರದ ಪ್ರಕಾರ ಅಂತ್ಯಕ್ರಿಯೆ ಆಗಿರುವ ಸಂಖ್ಯೆಗೂ ವ್ಯತ್ಯಾಸಗಳಿರುವುದು ಕಂಡು ಬಂದಿದೆ.

ರೋಗದ ತೀವ್ರತೆಯ ಬಗ್ಗೆ ಬಿಬಿಎಂಪಿಯು ಸಾರ್ವಜನಿಕರನ್ನು ದಾರಿ ತಪ್ಪಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನ ನಡೆಸಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇನ್ನು, ಕೋವಿಡ್‌ ಸಾವಿನ ಸಂಖ್ಯೆ ಕುರಿತು ಬಿಬಿಎಂಪಿ ನೀಡುತ್ತಿರುವ ಅಂಕಿ ಅಂಶಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ಬುಲೆಟಿನ್‌ಗಳಲ್ಲಿ ಸೇರ್ಪಡೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಸಾವಿನ ಸಂಖ್ಯೆಗಳನ್ನು ಕಡಿಮೆ ವರದಿ ಮಾಡುವ ಮೂಲಕ ಕೋವಿಡ್‌ ತೀವ್ರತೆ ಅಷ್ಟಾಗಿ ಇಲ್ಲವೆಂದು ನಂಬಿಸಲು ಸರ್ಕಾರ ಯತ್ನಿಸಿದಂತಿದೆ.

ಸರ್ಕಾರದ ದಾಖಲೆಗಳ ಪ್ರಕಾರ 2021ರ ಏಪ್ರಿಲ್‌ 18ರಿಂದ 24ರವರೆಗೆ ಬೆಂಗಳೂರು ನಗರದಲ್ಲಿ ಒಟ್ಟು 451 ಕೋವಿಡ್ ಸಾವುಗಳು ಸಂಭವಿಸಿವೆ. ಆದರೆ ಇದೇ ಅವಧಿಯಲ್ಲಿ ಕೋವಿಡ್‌ನಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿವೆ. ಆದರೆ ಬಿಬಿಎಂಪಿ ಅಧಿಕಾರಿಗಳು ಸಾವಿನ ಸಂಖ್ಯೆ ಬಚ್ಚಿಟ್ಟಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ.

ಈ ಕುರಿತು ಸ್ವತಂತ್ರ ಸುದ್ದಿ ಜಾಲತಾಣ ದಿ ನ್ಯೂಸ್‌ ಮಿನಿಟ್‌ ಸ್ವತಂತ್ರ ತನಿಖೆ ನಡೆಸಿದೆ. ಮತ್ತು ಟೈಮ್ಸ್‌ ಆಫ್‌ ಇಂಡಿಯಾ ಕೂಡ ಈ ಬಗ್ಗೆ ಅಂಕಿ ಅಂಶಗಳನ್ನು ಕಲೆ ಹಾಕಿ ವರದಿ ಪ್ರಕಟಿಸಿದೆ. ಬಿಬಿಎಂಪಿ ನೀಡಿರುವ ಸಾವಿನ ಸಂಖ್ಯೆ ಮತ್ತು ಚಿತಾಗಾರಗಳಲ್ಲಿ ಅಂತ್ಯಕ್ರಿಯೆ ನಡೆಸಿರುವ ಸಂಖ್ಯೆಯನ್ನು ತುಲನೆ ಮಾಡಿ ತನಿಖಾ ವರದಿಯನ್ನು ಪ್ರಕಟಿಸಿದೆ.

ಕೋವಿಡ್‌ ಸೋಂಕಿತ ಎಂದು ಶಂಕಿಸಲಾಗಿರುವ ಅನೇಕ ರೋಗಿಗಳ ಮರಣದ ನಂತರವೂ ಕೋವಿಡ್‌ ದೃಢಪಟ್ಟ ವರದಿಗಳು ದಾಖಲಾಗುತ್ತಿವೆ. ಸಾವುಗಳು ಸಂಭವಿಸಿದ ಹಲವು ದಿನಗಳ ನಂತರವೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡುವ ಅಧಿಕೃತ ಬುಲೆಟಿನ್‌ನಲ್ಲಿ ಈ ಸಂಖ್ಯೆಗಳು ದಾಖಲಾಗಿಲ್ಲ ಎಂಬುದು ದಿ ನ್ಯೂಸ್‌ ಮಿನಿಟ್‌ನ ತನಿಖಾ ವರದಿಯಿಂದ ಗೊತ್ತಾಗಿದೆ.

ಬಿಬಿಎಂಪಿಯು ಏಪ್ರಿಲ್‌ 16ರಿಂದ ಎಲ್ಲಾ ಕೋವಿಡ್‌-19 ಶವಗಳನ್ನು ಬೆಂಗಳೂರು ನಗರದಾದ್ಯಂತ ಏಳು ಶವಾಗಾರಗಳಿಗೆ ಕೊಂಡೊಯ್ದಿದೆ. ಎಂ ಎಸ್ ಪಾಳ್ಯದಲ್ಲಿರುವ ಸ್ಮಶಾನದಲ್ಲಿ ಬಿಬಿಎಂಪಿಯ ಒಬ್ಬ ಸಿಬ್ಬಂದಿ ಮತ್ತು 14 ಸ್ಮಶಾನ ಕಾರ್ಮಿಕರನ್ನು ಹೊಂದಿದೆ. ಇಲ್ಲಿ ಯಾವುದೇ ವಿರಾಮಗಳಿಲ್ಲದೆ ಅಂತ್ಯಕ್ರಿಯೆ ನಡೆಸಲಾಗುತ್ತಿದೆಯಲ್ಲದೆ 2 ಪಾಳಿಗಳಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 18 ರಿಂದ ಏಪ್ರಿಲ್ 22 ರವರೆಗೆ ಈ ಶವಾಗಾರದಲ್ಲಿ 168 ಜನರ ಶವಗಳನ್ನು ದಹನ ಮಾಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಅದೇ ರೀತಿ ದಿ ನ್ಯೂಸ್‌ಮಿನಿಟ್‌ನ ಪ್ರತಿನಿಧಿ ಬೆಂಗಳೂರಿನ ಎಲ್ಲಾ ಏಳು ಶವಾಗಾರಗಳಿಗೆ ಭೇಟಿ ನೀಡಿದ್ದರು. ಭಾರತೀಯ ಕ್ರಿಶ್ಚಿಯನ್ ಸ್ಮಶಾನ ಮತ್ತು ನಂದಿದುರ್ಗದ ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್ ಸ್ಮಶಾನವನ್ನು ನಿರ್ವಹಿಸುವವರೊಂದಿಗೆ ಮಾಹಿತಿ ಕಲೆ ಹಾಕಿದ್ದಾರೆ. ಬೆಂಗಳೂರಿನಲ್ಲಿ ದಿನಕ್ಕೆ ಶವಸಂಸ್ಕಾರ ಮಾಡುವ ದೇಹಗಳ ಸಂಖ್ಯೆಯ ಪೂರ್ಣ ಚಿತ್ರವನ್ನು ನೀಡುತ್ತಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಬಿಬಿಎಂಪಿ ಮೂಲಗಳು ಕೂಡ ಇದನ್ನೇ ದೃಢಪಡಿಸಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೋವಿಡ್‌-19 ನಿಂದ ಸಾವನ್ನಪ್ಪಿದವರ ಸಂಖ್ಯೆಯು ನಿಜಕ್ಕೂ ವರದಿಯಾಗಿರುವುದಕ್ಕಿಂತ ಹೆಚ್ಚಿನದಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದೆ.

ಏಪ್ರಿಲ್ 18 ರಿಂದ ಏಪ್ರಿಲ್ 22 ರವರೆಗೆ ಆರು ಶವಾಗಾರಗಳಲ್ಲಿ ( ಎಂ.ಎಸ್.ಪಾಳ್ಯ, ಕುಡ್ಲು, ಪೀಣ್ಯ, ಸುಮನಹಳ್ಳಿ, ಕೆಂಗೇರಿ, ಜೊತೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸ್ಮಶಾನ) ಒಟ್ಟು 860 ಶವಗಳನ್ನು ಅಂತ್ಯಕ್ರಿಯೆ ಮಾಡಲಾಗಿದೆ. ರಾಜ್ಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳಲ್ಲಿ ಈ ಐದು ದಿನಗಳಲ್ಲಿ ನಗರದಲ್ಲಿ ಕೇವಲ 467 ಜನರು ಕೋವಿಡ್‌-19 ಸಾವನ್ನಪ್ಪಿದ್ದಾರೆ. ಅಂತ್ಯಸಂಸ್ಕಾರದ ಶವಗಳಲ್ಲಿ ಹೆಚ್ಚಿನವು ಹಿಂದಿನ ದಿನ ಸಾವನ್ನಪ್ಪಿದ ಕಾರಣ, ರಾಜ್ಯ ಬುಲೆಟಿನ್ ಪ್ರಕಾರ ಏಪ್ರಿಲ್ 17 ರಂದು ಸಂಭವಿಸಿದ 60 ಸಾವುಗಳನ್ನು ಅಧಿಕೃತ ಲೆಕ್ಕಕ್ಕೆ ಸೇರಿಸಲಾಗಿದೆ. ಅಂದರೆ ಏಪ್ರಿಲ್ 18 ಮತ್ತು ಏಪ್ರಿಲ್ 24 ರ ನಡುವೆ ಬೆಂಗಳೂರಿನಲ್ಲಿ ಕೋವಿಡ್‌-19 ನಿಂದ 527 ಜನರು ಸಾವನ್ನಪ್ಪಿದ್ದಾರೆ ಎಂಬುದು ತಿಳಿದು ಬಂದಿದೆ.

ಕೋವಿಡ್‌-19 ಪರೀಕ್ಷೆಗೆ ರೋಗಿಯ ಮಾದರಿಗಳನ್ನು ಕಳುಹಿಸಿದಾಗ ಎಸ್‌ಆರ್‌ಎಫ್ ಅಥವಾ ಸ್ಪೆಸಿಮೆನ್ ರೆಫರಲ್ ಫಾರ್ಮ್ ನೀಡಲಾಗುತ್ತದೆ. ದೇಹವನ್ನು ದಹನ ಮಾಡಿದಾಗ ಫಲಿತಾಂಶಗಳು ಲಭ್ಯವಾಗಿಲ್ಲ. ರೋಗಿಗೆ ಕರೋನ ವೈರಸ್ ಇರುವುದು ಖಚಿತವಾದಾಗ BU ಅಥವಾ ಬೆಂಗಳೂರು ನಗರ ಸಂಕೇತವನ್ನು ನೀಡಲಾಗುತ್ತದೆ.

ಹೀಗಾಗಿ ದಿ ನ್ಯೂಸ್‌ಮಿನಿಟ್‌ ಎಸ್‌ಆರ್‌ಎಫ್ ಸಂಖ್ಯೆಗಳನ್ನು ಪರಿಶೀಲಿಸಿದೆ. ಪರೀಕ್ಷಾ ಫಲಿತಾಂಶವನ್ನು ತಿಳಿಯುವ ಸಲುವಾಗಿ ಬಿಬಿಎಂಪಿಯ ಜಾಲತಾಣದಲ್ಲಿ 65 ಎಸ್‌ಆರ್‌ಎಫ್ ಸಂಖ್ಯೆಗಳನ್ನು ಪರಿಶೀಲಿಸಿದೆ. ಈ 65 ಜನರಲ್ಲಿ ನಲವತ್ತು ನಾಲ್ಕು ಜನರು ಕೋವಿಡ್‌ ಎಂಟು ಪ್ರಕರಣಗಳು ನೆಗೆಟಿವ್ ಮತ್ತು 13 ಪ್ರಕರಣಗಳಲ್ಲಿ ಫಲಿತಾಂಶ ಪ್ರಕಟವಾಗಿರಲಿಲ್ಲ.

ಸಾವುಗಳನ್ನು ನಂತರ ದಾಖಲಿಸಲಾಗಿದೆಯೇ?

ರಾಜ್ಯ ಮತ್ತು ಬಿಬಿಎಂಪಿ ಪ್ರಕಟಿಸುವ ದೈನಂದಿನ ಬುಲೆಟಿನ್‌ನಲ್ಲಿ ಸಾವನ್ನಪ್ಪಿದವರಿಗೆ ಬಿಯು ಕೋಡ್ ಅಥವಾ ಎಸ್ಆರ್‌ಎಫ್‌ನ್ನು ಉಲ್ಲೇಖಿಸುವುದಿಲ್ಲ. ಪ್ರತಿ ರೋಗಿಯ ‘ಪಿ ಕೋಡ್’ ಅನ್ನು ಪಟ್ಟಿ ಮಾಡುತ್ತಾರೆ. ಕೋವಿಡ್‌ ದೃಢಪಟ್ಟ ನಂತರ ಐಸಿಎಂಆರ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಸಕಾರಾತ್ಮಕ ವರದಿಯನ್ನು ಆಧರಿಸಿ ರೋಗಿಯ ಕೋಡ್ (ಪಿ ಕೋಡ್)ನ್ನು ನೀಡಲಾಗುತ್ತದೆ.

ಈ ಎಲ್ಲಾ 65 ಎಸ್‌ಆರ್‌ಎಫ್ ಸಂಖ್ಯೆಗಳ ಪಿ ಕೋಡ್‌ನ್ನು ದಿ ನ್ಯೂಸ್‌ ಮಿನಿಟ್‌ ಪರಿಶೀಲಿಸಿದೆ. ಕೋವಿಡ್‌ ದೃಢಪಟ್ಟಿದ್ದ 44 ಜನರಲ್ಲಿ ಕೇವಲ 10, ಕೇವಲ ನಾಲ್ಕನೇ ಒಂದು ಭಾಗಕ್ಕಿಂತ ಕಡಿಮೆ ಸಂಖ್ಯೆಯವರು ನಂತರದ ಬುಲೆಟಿನ್‌ಗಳಲ್ಲಿ ಸೇರಿಸಲಾಗಿದೆ. ಮೃತಪಟ್ಟವರಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಗುರುತಿಸಲಾಗಿದೆ. 65 ರಲ್ಲಿ 34 ಸಾವುಗಳನ್ನು ಏಪ್ರಿಲ್ 26 ರವರೆಗೆ ಕೋವಿಡ್‌-19 ಸಾವುಗಳೆಂದು ಪರಿಗಣಿಸಲಾಗಿಲ್ಲ.ಐದು ದಿನಗಳಲ್ಲಿ 300 ಕ್ಕೂ ಹೆಚ್ಚು ರೋಗಿಗಳ 65 ಎಸ್‌ಆರ್‌ಎಫ್ ವಿವರಗಳನ್ನಷ್ಟೇ ಪರಿಶೀಲಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಮಾರ್ಚ್‌ 1ರಿಂದ ಏಪ್ರಿಲ್‌ 26ರವರೆಗೂ ಸರ್ಕಾರದ ಅಧಿಕೃತ ಮಾಹಿತಿಯಂತೆ 1,422 ಕೋವಿಡ್‌ ಸಾವುಗಳು ಬೆಂಗಳೂರು ನಗರದಲ್ಲಿ ಸಂಭವಿಸಿದೆ. ಆದರೆ ನಗರದ 12 ಚಿತಾಗಾರಗಳಲ್ಲಿ ಕೋವಿಡ್‌ ಶಿಷ್ಟಾಚಾರದ ಪ್ರಕಾರ ನಡೆದಿರುವ ಅಂತ್ಯಕ್ರಿಯೆ ಸಂಖ್ಯೆ 3,104 ಇವೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. ಇದರ ಪ್ರಕಾರ 1,688 ಪ್ರಕರಣಗಳು ಸರ್ಕಾರದಲ್ಲಿ ಈವರೆವಿಗೂ ವರದಿಯಾಗಿಲ್ಲ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇದೇ ಅವಧಿಯಲ್ಲಿ 94 ಸಾವುಗಳು ವರದಿಯಾಗಿವೆ. ಅದೇ ರೀತಿ ಸಾವನ್ನಪ್ಪಿರುವವರ ಪೈಕಿ ಕೋವಿಡ್‌ ದೃಢಪಟ್ಟ ವರದಿಗಳು ಇನ್ನೂ ಸರ್ಕಾರದ ಕೈ ಸೇರದೇ ಇದ್ದರೂ ಅದು ಸಹ ಶೇ.10ರಿಂದ 12ರಷ್ಟಿರುತ್ತದೆ. 12 ಚಿತಾಗಾರಗಳನ್ನೂ ಹೊರತುಪಡಿಸಿ ಬೇರೆಡೆಯೂ ಅಂತ್ಯಕ್ರಿಯೆ ನಡೆದಿದೆ. ಅದರ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ಜನವರಿ 5 ರಿಂದ ಫೆಬ್ರವರಿ 5 ರವರೆಗೆ 112 ಮತ್ತು ಫೆಬ್ರವರಿ 6 ರಿಂದ ಮಾರ್ಚ್ 5 ರವರೆಗೆ 121, ಮಾರ್ಚ್ 6 ರಿಂದ ಏಪ್ರಿಲ್ 5 ರವರೆಗೆ 298 ಕೋವಿಡ್ ಸಾವುಗಳು ಸಂಭವಿಸಿದೆ ಎಂದು ತಿಳಿಸಿದೆ. ಏಪ್ರಿಲ್‌ 27ರ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ 97 ಸಾವಿನ ಪ್ರಕರಣಗಳು ವರದಿಯಾಗಿದೆ. ಬೆಂಗಳೂರು ನಗರವೊಂದರಲ್ಲಿ ಏಪ್ರಿಲ್‌ 27ರ ಅಂತ್ಯಕ್ಕೆ 6,002 ಕೋವಿಡ್‌ ಮರಣಗಳು ಸಂಭವಿಸಿದೆ.

SUPPORT THE FILE

Latest News

Related Posts