ಮುನ್ನೆಲೆಗೆ ಬಂದ ‘ಫೈಲ್‌’ ವರದಿಯಲ್ಲಿನ ಅಂಶ ; ಕೋವಿಡ್‌ ಆಸ್ಪತ್ರೆ ವಿಸ್ತರಣೆಗೆ ಸಲಹೆ

ಬೆಂಗಳೂರು; ದೇಶವನ್ನು ತಲ್ಲಣಗೊಳಿಸಿರುವ ಕೊರೊನಾ 2ನೇ ಅಲೆಯನ್ನು ನಿಯಂತ್ರಿಸುವ ಕುರಿತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪತ್ರ ಬರೆದ ಬೆನ್ನಲ್ಲೇ ಮತ್ತೊಬ್ಬ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಪತ್ರ ಚರ್ಚೆಗೊಳಗಾಗಿದೆ.

ವಿವಿಧ ದೇಶಗಳ ಹಲವು ಪ್ರಧಾನಿಗಳು, ನೀತಿ ನಿರೂಪಕರು ದೇವೇಗೌಡ ಅವರು ಬರೆದಿರುವ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊರೊನಾ 2ನೇ ಅಲೆ ನಿಯಂತ್ರಣ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸುವುದು ಮತ್ತು ಈ ನಿಟ್ಟಿನಲ್ಲಿ ರಚನಾತ್ಮಕ ಸಲಹೆಗಳನ್ನು ನೀಡಿರುವ ಕುರಿತು ಹಲವು ಪ್ರಶಂಸೆಗಳು ಪಕ್ಷಾತೀತವಾಗಿ ವ್ಯಕ್ತವಾಗಿವೆ.

ಕೋವಿಡ್‌ ಆಸ್ಪತ್ರೆಗಳ ಸಂಖ್ಯೆಯಲ್ಲಿ ಶೇ.6ರಷ್ಟು ಇಳಿಕೆಯಾಗಿರುವ ಕುರಿತು ದೇವೇಗೌಡರು ಅವರು ಬರೆದಿರುವ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ತಕ್ಷಣವೇ ಆರೋಗ್ಯ ಕೇಂದ್ರಗಳನ್ನು ವಿಸ್ತರಿಸಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ದೇಶದಾದ್ಯಂತ ಆರೋಗ್ಯ ಕೇಂದ್ರಗಳು, ಕೋವಿಡ್‌ ಆರೈಕೆ ಕೇಂದ್ರ, ಕೋವಿಡ್‌ ಆಸ್ಪತ್ರೆಗಳ ಸಂಖ್ಯೆಯಲ್ಲಿ ಡಿಸೆಂಬರ್‌ 2020ರಿಂದ ಏಪ್ರಿಲ್‌ 2021ರವರೆಗೆ ಶೇ.6ರಷ್ಟು ಇಳಿಕೆಯಾಗಿದೆ ಎಂದು ‘ದಿ ಫೈಲ್‌’ 2021ರ ಏಪ್ರಿಲ್‌ 23ರಂದು ವರದಿ ಪ್ರಕಟಿಸಿತ್ತು.

ಮೂರನೇ ಅಲೆ ಆತಂಕ; ಕೋವಿಡ್‌ ಆಸ್ಪತ್ರೆಗಳ ಸಂಖ್ಯೆಯಲ್ಲಿ ಶೇ.6ರಷ್ಟು ಇಳಿಕೆ!

ವರದಿಯಲ್ಲಿನ ಅಂಶಗಳನ್ನು ದೇವೇಗೌಡರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವುದು ಮತ್ತೊಂದು ವಿಶೇಷ.

ಕೋವಿಡ್‌ 2ನೇ ಅಲೆ ದೇಶದಾದ್ಯಂತ ಕೋಲಾಹಲ ಎಬ್ಬಿಸಿದ್ದರೂ ಆರೋಗ್ಯ ಮೂಲ ಸೌಕರ್ಯಯಗಳು, ಆರೋಗ್ಯ ಕೇಂದ್ರ ಮತ್ತು ಕೋವಿಡ್‌ ಆಸ್ಪತ್ರೆಗಳ ಸ್ಥಾಪನೆ ಸಂಖ್ಯೆಯಲ್ಲಿ ಹೆಚ್ಚಳವಾಗಿರಲಿಲ್ಲ. 2020ರ ಡಿಸೆಂಬರ್ ಮತ್ತು ಏಪ್ರಿಲ್‌ 2021ರ ಮಧ್ಯೆ ಕೋವಿಡ್‌ ಆಸ್ಪತ್ರೆಗಳ ಸಂಖ್ಯೆಯಲ್ಲಿ ಶೇ.6ರಷ್ಟು ಇಳಿಕೆಯಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

2020ರ ಡಿಸೆಂಬರ್‌ನಲ್ಲಿದ್ದ 4,300 ಕೋವಿಡ್‌ ಆಸ್ಪತ್ರೆಗಳಿದ್ದವು. 2021ರ ಏಪ್ರಿಲ್‌ ಹೊತ್ತಿಗೆ ಇದರ ಸಂಖ್ಯೆ 4,043ಕ್ಕೆ ಇಳಿದಿದೆ. ಅದೇ ರೀತಿ ಕೋವಿಡ್‌ಗೆಂದೇ ಮೀಸಲಾದ ಆರೈಕೆ ಕೇಂದ್ರಗಳ ಸಂಖ್ಯೆಯಲ್ಲಿ ಶೇ.5ರಷ್ಟು ಏರಿಕೆಯಾಗಿದೆ. ಡಿಸೆಂಬರ್‌ 2020ರಲ್ಲಿ 8,857 ಕೇಂದ್ರಗಳಿದ್ದರೆ 2021ರ ಏಪ್ರಿಲ್‌ನಲ್ಲಿ 9,313ಕ್ಕೆ ಏರಿವೆ. ಆದರೆ ಕೋವಿಡ್‌ ಆರೈಕೆ ಕೇಂದ್ರಗಳು ತೀವ್ರತರವಾದ ಪ್ರಕರಣಗಳನ್ನು ಎದುರಿಸುವಷ್ಟು ಸಜ್ಜುಗೊಂಡಿಲ್ಲ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ಆಧರಿಸಿ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ದೇವೇಗೌಡರ ಪತ್ರದಲ್ಲೇನಿದೆ?

ಕೋವಿಡ್‌ ಸಾಂಕ್ರಾಮಿಕವನ್ನು ನಿಯಂತ್ರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲವು ಸಲಹೆಗಳನ್ನು ಒಳಗೊಂಡ ಪತ್ರವನ್ನು ನಿನ್ನೆ ಬರೆದಿದ್ದೇನೆ. ಇದು ರಾಷ್ಟ್ರೀಯ ಬಿಕ್ಕಟ್ಟಾಗಿದೆ, ನಾವೆಲ್ಲರೂ ಇದನ್ನು ಒಂದು ರಾಷ್ಟ್ರವಾಗಿ ಎದುರಿಸಬೇಕಿದೆ. ಜೀವ ಉಳಿಸಲು ಮತ್ತು ಸಂಕಟವನ್ನು ತಪ್ಪಿಸುವ ಕುರಿತಾದ ಎಲ್ಲ ಸೂಕ್ತ ಕ್ರಮಗಳನ್ನು ನಾವು ಬೆಂಬಲಿಸಬೇಕಿದೆ,’ ಎಂದು ಹೇಳಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದ ಕ್ರಮವಾಗಿ ಎಲ್ಲಾ ಉಪ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯನ್ನು 6 ತಿಂಗಳ ಕಾಲ ಮುಂದೂಡಿ, ಚುನಾವಣಾ ವಿಜಯೋತ್ಸವನ್ನು ಮೊಟಕುಗೊಳಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಮುಂದಿನ ಆರು ತಿಂಗಳ ಕಾಲ ಎಲ್ಲಾ ಬೃಹತ್ ಜನಸಂಖ್ಯೆ ಸೇರುವ ಕಾರ್ಯಕ್ರಮವನ್ನು ರದ್ದುಪಡಿಸಬೇಕು. ಈ ತಿಂಗಳಿನಲ್ಲಿ ಚುನಾವಣೆ ನಡೆದ ರಾಜ್ಯಗಳಲ್ಲಿ ರಾಜ್ಯಗಳಲ್ಲಿ ಚುನಾವಣಾ ವಿಜಯೋತ್ಸವವನ್ನು ಮೊಟಕುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಎಲ್ಲಾ ಉಪ ಚುನಾವಣೆಗಳು ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಆರು ತಿಂಗಳುಗಳ ಕಾಲ ಮುಂದೂಡಬೇಕು ಎಂದು ಸಲಹೆ ನೀಡಿದ್ದಾರೆ.

ಈ ಅವಧಿಯಲ್ಲಿ, ಚುನಾವಣಾ ಆಯೋಗವು ಸುರಕ್ಷಿತವಾಗಿ ಚುನಾವಣೆಗಳನ್ನು ನಡೆಸಲು ಹೊಸ ನಿಯಮಗಳನ್ನು ರೂಪಿಸಬಹುದು ಮತ್ತು ಏಕಕಾಲದಲ್ಲಿ, ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು ಎಂದು ದೇವೇಗೌಡ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ನಿಯಂತ್ರಣ ಹಾಗೂ ಲಸಿಕೆ ಕಾರ್ಯಕ್ರಮಗಳನ್ನು ಹೆಚ್ಚಿಸಿ, ಜನರ ಪ್ರಾಣವನ್ನು ಉಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲಾ ರಚನಾತ್ಮಕ ನಿರ್ಧಾರಗಳನ್ನು ಬೆಂಬಲಿಸಲಾಗುವುದು ಎಂದು ಹೇಳಿರುವ ದೇವೇಗೌಡ ಅವರು ಈ ಸಂದರ್ಭದಲ್ಲಿ ಕ್ಷಿಪ್ರ ಗತಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದಿದ್ದಾರೆ. ಅದೇ ರೀತಿ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಸೇವೆಯನ್ನು ಜಿಲ್ಲಾ ಆಸ್ಪತ್ರೆಗಳಿಗೆ ನೀಡಬೇಕು ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಾರ್ ರೂಮ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಸ್ತುತ ದೊಡ್ಡ ನಗರಗಳತ್ತ ಮಾತ್ರ ಗಮನ ಹರಿಸಲಾಗುತ್ತಿದೆ. ಆದರೆ, ನಗರಯೇತರ ಜಿಲ್ಲೆಗಳು ಮತ್ತು ತಾಲೂಕ್ ಕೇಂದ್ರಗಳಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ. ಹಳ್ಳಿ ಕ್ಲಸ್ಟರ್ ಗಳತ್ತ ತುರ್ತಾಗಿ ಗಮನಹರಿಸಬೇಕು. ಇಂತಹ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು ಮಹತ್ವದ ಪಾತ್ರ ವಹಿಸಬೇಕು.

ಲಸಿಕೆ ಬಗ್ಗೆ ಇನ್ನೂ ಸ್ಪಷ್ಟ ಸಂದೇಶ ಇಲ್ಲದಂತಾಗಿದೆ. ಲಸಿಕೆಯಿಂದ ನಾವು ಮಾತ್ರವಲ್ಲದೇ, ನಮ್ಮವರನ್ನು ಕೂಡಾ ಕಾಪಾಡಬೇಕಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕಾಗಿದೆ ಎಂದು ದೇವೇಗೌಡರು ಸಲಹೆ ನೀಡಿದ್ದಾರೆ.

the fil favicon

SUPPORT THE FILE

Latest News

Related Posts