ಆಮ್ಲಜನಕ; ಔಷಧ ನಿಯಂತ್ರಣ ಇಲಾಖೆ ಆಂತರಿಕ ವರದಿಯತ್ತ ಕಣ್ಣಾಯಿಸದ ಸರ್ಕಾರ

ಬೆಂಗಳೂರು; ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಿದಂತೆಲ್ಲಾ ಆಮ್ಲಜನಕ ಪೂರೈಕೆ ನಿರ್ವಹಣೆ ವಿಚಾರವು ಕೇವಲ ಬೇಡಿಕೆಯೊಂದಿಗೆ ಪೂರೈಕೆಯ ಪ್ರಶ್ನೆಯಾಗಿ ಉಳಿದಿಲ್ಲ. ಹಲವು ಉದ್ದೇಶಗಳಿಗಾಗಿ ಉತ್ಪಾದನೆ ಆಗುತ್ತಿರುವ ಆಮ್ಲಜನಕವನ್ನು ವೈದ್ಯಕೀಯ ಉದ್ದೇಶಕ್ಕಾಗಿ ಬಳಸಿದರೂ ಆಮ್ಲಜನಕ ಸಾಗಿಸುವ ಮತ್ತು ಸಂಗ್ರಹಿಸುವ ಸವಾಲು ಎದುರಿಸಲು ರಾಜ್ಯ ಬಿಜೆಪಿ ಸರ್ಕಾರ ಸಜ್ಜುಗೊಂಡಿಯೇ ಇಲ್ಲ!

ಹಾಗೆಯೇ ಕರ್ನಾಟಕ ಔಷಧ ನಿಯಂತ್ರಣ ಇಲಾಖೆಯು ಆಮ್ಲಜನಕದ ಬಗ್ಗೆ ಸಿದ್ಧಪಡಿಸಿದ್ದ ಆಂತರಿಕ ವರದಿಯತ್ತ ಕಣ್ಣಾಯಿಸಲೂ ಇಲ್ಲ. ಕೋವಿಡ್‌ ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಆಗುತ್ತಿರುವ ಹೆಚ್ಚಳ ಮತ್ತು ಆಮ್ಲಜನಕದ ಪೂರೈಕೆ ಕುರಿತು ಆಂತರಿಕ ವರದಿಯು ಹಲವು ಅಂಶಗಳನ್ನು ಹೊರಗೆಡವಿದೆ.

ಅಲ್ಲದೆ ಸದ್ಯ ರಾಜ್ಯದಲ್ಲಿ ಆಮ್ಲಜನಕ ಉತ್ಪಾದನೆಯನ್ನು ಸಮನಾಗಿ ವಿತರಿಸದಿರುವುದು ಇಂದಿನ ಬಿಕ್ಕಟ್ಟಿಗೆ ಮತ್ತೊಂದು ಕಾರಣ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳುತ್ತಿವೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 3 ದೊಡ್ಡ ಉತ್ಪಾದಕರಿರುವುದನ್ನು ಹೊರತುಪಡಿಸಿದರೆ ಗದಗ್‌, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೀದರ್‌, ಯಾದಗಿರಿ, ಚಾಮರಾಜನಗರ, ಕೊಡಗು, ಮಂಡ್ಯ ಮತ್ತು ಉಡುಪಿ ಜಿಲ್ಲೆಯಲ್ಲಿ ಆಮ್ಲಜನಕ ಉತ್ಪಾದನೆಯ ಸಣ್ಣ ಘಟಕಗಳೂ ಇಲ್ಲ ಎಂದು ತಿಳಿದು ಬಂದಿದೆ.

ಕರ್ನಾಟಕ ಸರ್ಕಾರವು ಪ್ರತಿದಿನ 1,500 ಮೆಟ್ರಿಕ್ ಟನ್ (ಎಂಟಿ) ಆಮ್ಲಜನಕವನ್ನು ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ. ಶನಿವಾರ ರಾತ್ರಿ ರಾಜ್ಯದ ಹಂಚಿಕೆಯನ್ನು ದಿನಕ್ಕೆ 300 ಮೆ.ಟನ್ ನಿಂದ 800 ಮೆ.ಟನ್ ಗೆ ಹೆಚ್ಚಿಸಲಾಗಿದೆ. ಆದರೆ ಈ ಪೂರೈಕೆ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಅದನ್ನು ಹೇಗೆ ವಿತರಿಸಲಾಗುವುದು ಎಂಬುದು ಈವರೆವಿಗೂ ಸ್ಪಷ್ಟವಾಗಿಲ್ಲ.

ಕರ್ನಾಟಕವು ಏಳು ದ್ರವ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೊಂದಿದೆ. ಈ ಎಲ್ಲವೂ ಖಾಸಗಿ ಕಂಪನಿಗಳ ಒಡೆತನದಲ್ಲಿದೆ. ಒಟ್ಟು ದೈನಂದಿನ ಉತ್ಪಾದನೆ 812 ಮೆ.ಟನ್ ಪ್ರಮಾಣದಷ್ಟಿದೆ. ಬೊರೊಕಾ ಗ್ಯಾಸ್‌ ಕಂಪನಿಯು ದಿನಕ್ಕೆ 65 ಮೆಟ್ರಿಕ್‌ ಟನ್‌, ಬೆಂಗಳೂರಿನ ಯೂನಿವರ್ಸಲ್‌ ಏರ್‌ ಪ್ರಾಡಕ್ಟ್‌ 50 ಮೆಟ್ರಿಕ್‌ ಟನ್‌, ಕೊಪ್ಪಳದಲ್ಲಿರುವ ಪ್ರಾಕ್ಸೇರ್‌ 225 ಮೆಟ್ರಿಕ್‌ ಟನ್‌, ಬಳ್ಳಾರಿಯಲ್ಲಿರುವ ಏರ್‌ ವಾಟರ್ಸ್‌ ಇಂಡಿಯಾ 92 ಮೆಟ್ರಿಕ್‌ ಟನ್‌, ಬಳ್ಳಾರಿ ಆಕ್ಸಿಜನ್‌ 80 ಮೆಟ್ರಿಕ್‌ ಟನ್‌ ಮತ್ತು ಜೆಎಸ್‌ಡಬ್ಲ್ಯೂ ಕಂಪನಿಯು ದಿನಕ್ಕೆ 300 ಮೆಟ್ರಿಕ್‌ ಟನ್‌ನಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತಿವೆ. ಇದರಲ್ಲಿ ಬಹುತೇಕ ಕಂಪನಿಗಳು ಬಳ್ಳಾರಿ ಮೂಲದವು.

ಅಲ್ಲದೆ ಪ್ರಮುಖ ತಯಾರಕರ ಶೇಖರಣಾ ಸಾಮರ್ಥ್ಯ 5,780 ಟನ್, ಪ್ರಾಕ್ಸೇರ್ (2,730 ಟನ್), ಏರ್ ವಾಟರ್ಸ್ (1,000 ಟನ್) ಮತ್ತು ಜೆಎಸ್‌ಡಬ್ಲ್ಯೂ (1,000 ಟನ್) ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. ಈ ಮೂವರೂ ತಯಾರಕರು ರಾಜ್ಯದ ಉತ್ತರ ಭಾಗದ ಬಳ್ಳಾರಿಯಲ್ಲಿವೆ.

ಕರ್ನಾಟಕದ ಚಿಂತೆ ಏನು?

ಕರ್ನಾಟಕ ಔಷಧ ನಿಯಂತ್ರಣ ಇಲಾಖೆ ಸಿದ್ಧಪಡಿಸಿದ ಆಂತರಿಕ ವರದಿಯ ಪ್ರಕಾರ, ಏಪ್ರಿಲ್‌ 14ರಲ್ಲಿ ರಾಜ್ಯದ ಒಟ್ಟು ಸಕ್ರಿಯ ಕೋವಿಡ್‌ -19 ಪ್ರಕರಣಗಳಲ್ಲಿ 9,830 ರೋಗಿಗಳಿಗೆ (85,480) ಆಮ್ಲಜನಕಯುಕ್ತ ಹಾಸಿಗೆಗಳು ಬೇಕಾಗಿದ್ದವು. ಆ ಸಮಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಇದು ಶೇ. 11.5ರಷ್ಟಿತ್ತು. ಇತರರಿಗೆ 295 ಐಸಿಯು ಹಾಸಿಗೆಗಳ ಅಗತ್ಯವಿದ್ದವು. ಅದು ಆ ಸಮಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳಲ್ಲಿನ ಶೇ. 0.34ರಷ್ಟಿತ್ತು. ಈ ಹಂತದಲ್ಲಿ ಪ್ರತಿದಿನ 197.2 ಮೆಟ್ರಿಕ್‌ ಟನ್‌ ಪ್ರಮಾಣದಲ್ಲಿ ಆಮ್ಲಜನಕದ ಅವಶ್ಯಕತೆ ಇತ್ತು ಎಂಬುದು ಆಂತರಿಕ ವರದಿಯಿಂದ ತಿಳಿದು ಬಂದಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏಪ್ರಿಲ್ 24 ರ ವೇಳೆಗೆ 2,34,483 ರೋಗಿಗಳಿಗೆ ದ್ವಿಗುಣಗೊಂಡಿದೆ. ಏಪ್ರಿಲ್‌ 25ರ ಅಂತ್ಯಕ್ಕೆ ರಾಜ್ಯದಲ್ಲಿ 34,804 ಮತ್ತು ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 20,733 ಪ್ರಕರಣಗಳು ದಾಖಲಾಗಿವೆ. ಇದು ಈ ಹಿಂದಿನ ದಿನಗಳಿಗಿಂತಲೂ ನಾಲ್ಕು ಪಟ್ಟು ಹೆಚ್ಚಿದೆ. ಅದೇ ರೀತಿ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿರುವ ಕೋವಿಡ್‌ ರೋಗಿಗಳ ಸಂಖ್ಯೆಯಲ್ಲಿಯೂ ನಾಲ್ಕು ಪಟ್ಟು ಹೆಚ್ಚಾಗಿದೆ.

ಏಪ್ರಿಲ್‌ 25ರ ಅಂತ್ಯಕ್ಕೆ ಐಸಿಯುನಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 1,492ಕ್ಕೇರಿದೆ. ಇದು ಏಪ್ರಿಲ್‌ 14ರಲ್ಲಿ 1, 280ರಷ್ಟಿತ್ತು. ಅಲ್ಲದೆ ಕೋವಿಡ್‌ ಅಲ್ಲ ರೋಗಿಗಳಿಗೂ ಆಮ್ಲಜನಕದ ಅಗತ್ಯವಿರುತ್ತದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ‘ದಿ ಫೈಲ್‌’ ನೊಂದಿಗೆ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಆಮ್ಲಜನಕ ಸ್ಥಾವರಗಳ ಸಾಮರ್ಥ್ಯ 870 ಮೆಟ್ರಿಕ್ ಟನ್ ಆಗಿದೆ. ಮೇ ಅಂತ್ಯದ ವೇಳೆ 1,500 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯತೆ ಬೀಳಬಹುದು ಎಂದು ನಿರೀಕ್ಷಿಸಲಾಗಿದೆ. 1,400 ಮೆಟ್ರಿಕ್ ಟನ್ ನಷ್ಟು ಆಮ್ಲಜನಕ ಸರಬರಾಜು ಮಾಡುವಂತೆ ಕೇಂದ್ರದ ಮುಂದೆ ಬೇಡಿಕೆ ಇರಿಸಲಾಗಿದೆ. ಕೈಗಾರಿಕೆಗೆ ಬಳಕೆ ಮಾಡುತ್ತಿರುವ ಆಕ್ಸಿಜನ್’ನ್ನು ವೈದ್ಯಕೀಯ ಬಳಕೆಗೆ ನೀಡುವಂತೆ ನಿರ್ದೇಶಿಸಿರುವುದು ಗೊತ್ತಾಗಿದೆ.

ಆಮ್ಲಜನಕದ ಉತ್ಪಾದನೆಯಲ್ಲಿ ಸಮರ್ಪಕತೆ ಕಂಡು ಬಂದಿದೆಯಾದರೂ ವಿತರಣಾ ವಿಷಯದಲ್ಲಿ ಕಳಪೆ ಪ್ರದರ್ಶನ ಕಂಡು ಬಂದಿದೆ. ಉತ್ಪಾದನೆಯಲ್ಲಿ ಯಾವುದೇ ಏರಿಳಿತಗಳಿಲ್ಲ ಎಂದಾದ ಮೇಲೆ ಅದು ಸ್ಪಷ್ಟವಾಗಿ ವಿತರಣೆ ಮತ್ತು ಪೂರ್ವಸಿದ್ಧತೆಯಲ್ಲಿಯೇ ಮುಗ್ಗುರಿಸಿತ್ತು ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ.

the fil favicon

SUPPORT THE FILE

Latest News

Related Posts