ನೂರಾರು ಕೋಟಿ ಆದಾಯವಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಲೆಕ್ಕಪರಿಶೋಧನೆಯೇ ನಡೆದಿಲ್ಲ!

ಬೆಂಗಳೂರು; ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ 5 ವರ್ಷದಲ್ಲಿ ₹ 100 ಕೋಟಿಗೂ ಹೆಚ್ಚು ಹಣ‌ ಸಂಗ್ರವಾಗಿದ್ದರೂ ಲೆಕ್ಕ ಪರಿಶೋಧನೆ ನಡೆದಿಲ್ಲ” ಎಂದು ಆರೋಪಿಸಿ ವಕೀಲ ಶ್ರೀಹರಿ ಕುತ್ಸ ಅವರು ಮುಖ್ಯಮಂತ್ರಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ.

2020-21ನೇ ಆರ್ಥಿಕ ವರ್ಷದಲ್ಲಿ 68.94 ಕೋಟಿ ಆದಾಯ ಗಳಿಸಿರುವ ಬೆನ್ನಲ್ಲೇ ಕಳೆದ 5 ವರ್ಷದಲ್ಲಿ ಲೆಕ್ಕ ಪರಿಶೋಧನೆಯೇ ನಡೆದಿಲ್ಲ ಎಂದು ಸಲ್ಲಿಕೆಯಾಗಿರುವ ದೂರು ಮಹತ್ವ ಪಡೆದುಕೊಂಡಿದೆ.

“ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಮೂಲ ಹೊಂದಿರುವ ದೇವಸ್ಥಾನಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಅಗ್ರಸ್ಥಾನದಲ್ಲಿದೆ. ಆದರೆ, ಕಳೆದ 5 ವರ್ಷಗಳಿಂದ ದೇಗುಲದಲ್ಲಿ ಆದಾಯ ಮೂಲ ಹಾಗೂ ಖರ್ಚು ವೆಚ್ಚಗಳ ಲೆಕ್ಕ ಪರಿಶೋಧನೆಯೇ ನಡೆದಿಲ್ಲ” ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

“ಆಡಳಿತ ಮಂಡಳಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಧಾರ್ಮಿಕೇತರ ಹಾಗೂ ನಿಷ್ಪ್ರಯೋಜಕ ಚಟುವಟಿಕೆಗಳಿಗೆ ₹ 60 ಕೋಟಿಗೂ ಹೆಚ್ಚು ಹಣ ಪೋಲು ಮಾಡಿದೆ. ಠೇವಣಿಗೆ ಸಂಬಂಧಿಸಿದಂತೆ ನೋಂದಣಿ ಪುಸ್ತಕ ಹಾಗೂ ಇನ್ನಿತರೆ ಅವಶ್ಯಕ ಮಾಹಿತಿಯ ದಾಖಲೆ ಪುಸ್ತಕ ನಿರ್ವಹಿಸಿಲ್ಲ” ಎಂದು ವಿವರಿಸಲಾಗಿದೆ.

“ದೇಗುಲಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳು ದೇಗುಲದ ಲೇವಾದೇವಿ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ದೇಗುಲದ ನಿತ್ಯ ನಿರ್ವಹಣಾ ಚಟುವಟಿಕೆಗಳಲ್ಲಿ ಸಾಕಷ್ಟು ಕಾನೂನು ಬಾಹಿರ ಅಂಶಗಳು ವ್ಯಕ್ತವಾಗಿದ್ದು ಕೂಡಲೇ ಇದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಬೇಕು” ಎಂದು ಶ್ರೀಹರಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

2019-20ನೇ ಸಾಲಿನಲ್ಲಿ 98.92 ಕೋಟಿ ರು. ಗಳಿಸಿತ್ತು. ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷ ಸೆ.8ರವರೆಗೆ ದೇವಸ್ಥಾನವೂ ಬಂದ್‌ ಆಗಿತ್ತು. ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಬಂದಿರುವ ಆದಾಯಕ್ಕೆ ಹೋಲಿಸಿದರೆ 29.97 ಕೋಟಿ ರು. ಕಡಿಮೆಯಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಈಚೆಗಷ್ಟೇ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts