Saturday | July 11, 2026 |

ಟಾಸ್ಕ್‌ಪೋರ್ಸ್‌ನಲ್ಲಿ ತಳಮಟ್ಟದ ಅನುಭವಸ್ಥರಿಲ್ಲ, ಕಾರ್ಯಸೂಚಿಯಿಲ್ಲ, ಆರೋಗ್ಯ ಅರಾಜಕತೆಯೇ ಎಲ್ಲ

ಬೆಂಗಳೂರು; ಕೋವಿಡ್‌ ಸೋಂಕಿತರ ಸಂಖ್ಯೆ ನಾಗಾಲೋಟದಲ್ಲಿ ಏರುತ್ತಿದ್ದರೂ ಸರಿಯಾದ ಕಾರ್ಯಸೂಚಿಯನ್ನೇ ರೂಪಿಸಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ. ಈ ಸಂಬಂಧ ನೇರವಾಗಿ ಬಿಜೆಪಿ ಸರ್ಕಾರದತ್ತ ಬೊಟ್ಟು ಮಾಡಿರುವ ಮಾಜಿ ಆರೋಗ್ಯ ಸಚಿವ ಡಾ ಎಚ್‌ ಸಿ ಮಹದೇವಪ್ಪ ಅವರು ಸರ್ಕಾರ ರೂಪಿಸಿರುವ ಟಾಸ್ಕ್ ಫೋರ್ಸ್ ನಲ್ಲಿ ತಳಮಟ್ಟದ ಅನುಭವ ಇರುವಂತವರು (Ground reality experts) ಇಲ್ಲ ಎಂಬ ಸಂಗತಿಯನ್ನೂ ಹೊರಗೆಡವಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರವನ್ನು ಸುದೀರ್ಘ ಪತ್ರವನ್ನು ಬರೆದಿದ್ದಾರೆ. ಟಾಸ್ಕ್‌ಪೋರ್ಸ್‌ನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರನ್ನು ನಿರ್ವಹಣಾ ಸ್ಥಾನಕ್ಕೆ ನಿಯೋಜಿಸಿರುವುದು ಅಷ್ಟೊಂದು ಅನುಕೂಲಕರವಾದ ಕ್ರಮವಲ್ಲ ಎಂದು ಹೇಳಿರುವುದು ಕೊರೊನಾ ನಿರ್ವಹಣೆಯ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ.

‘ರಾಜ್ಯ ಸರ್ಕಾರವು ಕರೋನಾ ನಿರ್ವಹಣೆಯಲ್ಲಿ ಬಹಳಷ್ಟು ಗೊಂದಲಮಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು ಸೋಂಕು ನಿವಾರಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಸೋಂಕು ಸರಪಳಿಯನ್ನು ಕಡಿದುಹಾಕಲು ಲಾಕ್‌ಡೌನ್‌ ಜಾರಿಗೊಳಿಸಬೇಕು,’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಪತ್ರದಲ್ಲೇನಿದೆ?

1. ಕರೋನಾ ಸೋಂಕು ಈಗಾಗಲೇ ಕೈಮೀರಿ ಹೊರಟು ಹೋಗಿದ್ದು ಸರ್ಕಾರವು 10 ರಿಂದ 15 ದಿನಗಳ ಕಾಲ ಕಠಿಣವಾದ ಲಾಕ್ ಡೌನ್ ಅನ್ನು ಜಾರಿಗೊಳಿಸಿ, ಈ ಸೋಂಕು ಸರಪಳಿಯನ್ನು ಕಡಿದುಹಾಕಬೇಕು ( break the spread chain). ತದನಂತರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕು. ಇನ್ನು ಲಾಕ್ ಡೌನ್ ವೇಳೆ ಜನ ಸಾಮಾನ್ಯರ ಬದುಕಿಗೆ ತೊಂದರೆಯಾಗದಂತೆ ಅವರಿಗೆ ಅಗತ್ಯವಾದ ಆಹಾರ ಮತ್ತು ದಿನಬಳಕೆ ವಸ್ತುಗಳನ್ನು ಸರ್ಕಾರವೇ ಒದಗಿಸಬೇಕು.

2. ಇನ್ನು ನೀಡಲಾಗಿರುವ ಕರೋನಾ ಲಸಿಕೆಯ ಪ್ರಮಾಣವು ಕೇವಲ 10% ಇದ್ದು ಲಸಿಕೆ ನೀಡುವಿಕೆ ಪ್ರಮಾಣವವನ್ನು 80% ಗೆ ಏರಿಕೆ ಮಾಡಬೇಕು. ಆಗ ಸೋಂಕು ನಿಯಂತ್ರಣಾ ಕ್ರಮಗಳು ಹೆಚ್ಚು ಫಲಪ್ರದವಾಗಿರುತ್ತವೆ ಮತ್ತು ರೋಗದ ನಿಯಂತ್ರಣದ ಸರ್ಕಾರದ ಪ್ರಯತ್ನಗಳ ಮೇಲೆ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಮೂಡುತ್ತದೆ.

3. ನಮ್ಮ ದೇಶದ ಜನರಿಗೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಇಲ್ಲದಿರುವಾಗ ಹುಸಿ ಪ್ರಚಾರಕ್ಕಾಗಿ ಬೇರೆ ದೇಶಗಳಿಗೆ 6 ಕೋಟಿಗೂ ಅಧಿಕ ಪ್ರಮಾಣದ ಲಸಿಕೆಯನ್ನು ವಿತರಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಸರ್ಕಾರ ದೇಶದ ನಾಗರೀಕರ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿಸಿಕೊಳ್ಳಬೇಕು.

4. ಕರೋನಾ ನಿಯಂತ್ರಣದಲ್ಲಿ ಸರ್ಕಾರವು ಈಗ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು (link workers) ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳು ಮತ್ತು ಬ್ಲಾಕ್ ಮಟ್ಟದ ಆರೋಗ್ಯ ಸಲಹೆಗಾರರ ಸೇವೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಹೀಗಾದರೆ ವ್ಯಾಪಕವಾಗಿ ಹರಡುತ್ತಿರುವ ಸೋಂಕನ್ನು ತಡೆಗಟ್ಟುವುದಾಗಲೀ ಮತ್ತು ಆ ಬಗ್ಗೆ ಜಾಗೃತಿ ಮೂಡಿಸುವುದಾಗಲೀ ಹೇಗೆ ಸಾಧ್ಯ ?

5. ಇನ್ನು ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ surveillance unit ಗಳನ್ನು ಸ್ಥಾಪನೆ ಮಾಡಿದ್ದರೂ ಕೂಡಾ, ಅವುಗಳು ಸಮರ್ಪಕವಾಗಿ ಬಳಕೆಯಾಗದೇ ದುರ್ಬಲಗೊಂಡಿವೆ. ಅಲ್ಲದೇ surveillance unit ಗಳಲ್ಲಿ ಸಾಂಕ್ರಾಮಿಕ ರೋಗ ತಜ್ಞರೇ (Epidemiologist) ಇಲ್ಲದೇ ಸೂಕ್ತವಲ್ಲದ ವ್ಯಕ್ತಿಗಳನ್ನು ಆರೋಗ್ಯ ಸೇವೆಗಳಿಗೆ ನಿಯೋಜಿಸಲಾಗಿದೆ.

6. ಇನ್ನು ಸರ್ಕಾರವು ಟಿವಿ, ರೇಡಿಯೋ, ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕರೋನಾ ಸೋಂಕಿಗೆ ಸಂಬಂಧಿಸಿದಂತೆ motivation ರೀತಿಯ ಕೆಲಸ ಮಾಡದೇ ಕೇವಲ ಪ್ರಚಾರ (Publicity/ Advertisement) ಮಾಡುವುದರಲ್ಲಿ ಮತ್ತು ಭಯಪಡಿಸುವುದರಲ್ಲಿ ತಲ್ಲೀನವಾಗಿದೆ. ಕರೋನಾ ಸೋಂಕು ವ್ಯಾಪಕವಾಗಿ ಹೆಚ್ಚಾಗಿರುವುದು ನನ್ನ ಈ ಮಾತಿಗೆ ಸಾಕ್ಷಿ. ಈ ನಿಟ್ಟಿನಲ್ಲಿ ಸರ್ಕಾರ ಸೋಂಕು ನಿಯಂತ್ರಣದ ಕುರಿತಂತೆ ಹೆಚ್ಚಾಗಿ ಜಾಗೃತಿ ಕೆಲಸವನ್ನು ಮಾಡಬೇಕೇ ವಿನಃ ಪ್ರಚಾರದಿಂದ ಯಾವುದೇ ಪ್ರಯೋಜನ ಆಗದು.

7. Motivation ಮಾಡುವುದಕ್ಕಾಗಿ ಸರ್ಕಾರವು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು (link workers) ಗಳನ್ನು Block health Educators ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದರ ಜೊತೆಗೆ ಸಮುದಾಯ ಆರೋಗ್ಯ ತಜ್ಞರ ( Community medicine experts) ಸೇವೆಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಇಲ್ಲದೇ ಹೋದರೆ ದೊಡ್ಡ ಜನಸಂಖ್ಯೆಯ ಸಂದರ್ಭದಲ್ಲಿ ಸೋಂಕು ನಿವಾರಣೆ ಬಹಳಷ್ಟು ಕಷ್ಟಕರ ಸಂಗತಿಯಾಗಿ ಕಾಣುತ್ತದೆ.

8. ಇನ್ನು ಈ ಸೋಂಕು ಸಂದರ್ಭದಲ್ಲಿ ಗ್ರಾಮೀಣ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಿಸುವ ಆರೋಗ್ಯ ವ್ಯವಸ್ಥೆಗೆ ( Hospital Management) ಇನ್ನೂ ಸಿಬ್ಬಂದಿಗಳು ಬೇಕು ಎನಿಸುತ್ತಿದೆ. ಈ ಹಿನ್ನಲೆಯಲ್ಲಿ Public Health ವಿಭಾಗದಲ್ಲಿ ಪದವಿ ಪಡೆದ ವೃತ್ತಿಪರ ಆರೋಗ್ಯ ಸಿಬ್ಬಂದಿಗಳನ್ನು ಸೇವೆಗೆ ನಿಯೋಜಿಸುವ ಮೂಲಕ ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಕೆಲಸ ಮಾಡಬೇಕು.

9. ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಇತರೆ ಸೌಲಭ್ಯಗಳ ನಿರ್ವಹಣೆಗೆ ಸಾರ್ವಜನಿಕ ಆರೋಗ್ಯ ಸೇವಾ ಸಿಬ್ಬಂದಿಗಳು ಇದ್ದರು. ಈಗ ಅವರ ಅನುಪಸ್ಥಿತಿ ಕಾಡುತ್ತಿದ್ದು ಸರ್ಕಾರ ಅಂತವರ ಸೇವೆಯನ್ನು ಸರಿಯಾಗಿ ಬಳಸಿಕೊಂಡರೆ ಹೆಚ್ಚು ಅನುಕೂಲಕರವಾಗಲಿದೆ.

10. ರಾಜ್ಯ ಔಷಧಿ ನಿಯಂತ್ರಣಾ ಘಟಕವು ( State Drug Controller Department) ಬಹಳಷ್ಟು ಸಕ್ರಿಯವಾಗಬೇಕಿದ್ದು ಎಲ್ಲೆಲ್ಲಿ ಅನಗತ್ಯ ಬೇಡಿಕೆಯನ್ನು ಸೃಷ್ಟಿಸಲಾಗುತ್ತಿದೆ, ಎಲ್ಲಿ ನಿಜವಾದ ಬೇಡಿಕೆ ಇದೆ ಎಂಬುದನ್ನು ಸರಿಯಾಗಿ ಮನಗಂಡು ಲಸಿಕೆ ಮತ್ತು ಇನ್ನಿತರೆ ಆರೋಗ್ಯ ಸೌಲಭ್ಯಗಳು ಸಾರ್ವಜನಿಕರಿಗೆ ಲಭ್ಯವಾಗುವಂತಹ ವಾತಾವರಣ ರೂಪಿಸಬೇಕೇ ವಿನಃ, ಅಸಹಾಯಕತೆಯಿಂದ ವರ್ತಿಸುವುದರಿಂದ ಯಾವುದೇ ಪ್ರಯೋಜನವಾಗದು.

11. ಇನ್ನು ಈ ಸದ್ಯ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಸೂಕ್ತ ರೀತಿಯಲ್ಲಿ ವಿಶ್ರಾಂತಿ ನೀಡುವ (healthy Shifts) ಮತ್ತು ಅವರ ಶ್ರಮವನ್ನು ಗೌರವಿಸುವಂತಹ ಭತ್ಯೆ ಮತ್ತು ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಏಕೆಂದರೆ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಅವರ ಶ್ರಮ ದೊಡ್ಡದು ಎಂಬುದನ್ನು ಸರ್ಕಾರ ನೆನಪಿಡಬೇಕು.

ಅರ್ಥವಿಲ್ಲದ ಪ್ರಚಾರ ಮತ್ತು ಜನರಲ್ಲಿ ಭೀತಿ ಮೂಡಿಸುವುದರಿಂದ ರೋಗ ನಿಯಂತ್ರಣವಾಗುವುದಿಲ್ಲ ಬದಲಿಗೆ ಆರೋಗ್ಯದ ಅರಾಜಕತೆಯ ವಾತಾವರಣ ಸೃಷ್ಟಿಯಾಗುತ್ತದೆ ಎಂದೂ ಪತ್ರದಲ್ಲಿ ಎಚ್ಚರಿಸಿದ್ದಾರೆ.

Hot this week

ಕಸದ ವಾಹನಗಳ ಇಂಧನಕ್ಕೆ ಸಾವಿರಾರು ಲೀಟರ್‌ ಪೆಟ್ರೋಲ್, ಡೀಸೆಲ್ ಬಳಕೆ; ನಗರಾಭಿವೃದ್ಧಿ ಸಚಿವರ ತವರಲ್ಲೇ ಇ ವಿ ವಾಹನಗಳ ಬಳಕೆಗೆ ಉದಾಸೀನತೆ

ಮೈಸೂರು; ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಒಟ್ಟು ವಾಹನಗಳ...

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...
Please Scan to make Your Contribution

Topics

ಪಿಎಸ್‌ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್‌ ಪೌಲ್ ವಿರುದ್ಧ 4 ವರ್ಷಗಳ ಬಳಿಕ ಇಲಾಖೆ ವಿಚಾರಣೆ ಪ್ರಕ್ರಿಯೆಗೆ ಚಾಲನೆ, ದೋಷಾರೋಪಣೆ ಪಟ್ಟಿ ಜಾರಿ

ಬೆಂಗಳೂರು; ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪ್ರಕರಣದ ಹಗರಣದಲ್ಲಿ ಆರೋಪಿಯಾಗಿ, ಅಮಾನತುಗೊಂಡಿರುವ ಪೊಲೀಸ್‌...

ಸುರಂಗ ಮಾರ್ಗ; ಅದಾನಿ ಎಂಟರ್ ಪ್ರೈಸೆಸ್‌ಗೆ ಬಿಟ್ಟಿ ರಿಯಲ್‌ ಎಸ್ಟೇಟ್‌ ಆದಾಯ ಭಾಗ್ಯ ಕರುಣಿಸಲಿದೆಯೇ ಸರ್ಕಾರ?

ಬೆಂಗಳೂರು; ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ ಉದ್ದೇಶಿತ  ಸುರಂಗ ಮಾರ್ಗ ನಿರ್ಮಾಣದ ಹೆಸರಿನಲ್ಲಿ...

Related Articles

Popular Categories

error: Content is protected !!