ಬೆಂಗಳೂರು; ಅನುದಾನ ಹಂಚಿಕೆ ಮತ್ತು ಬಿಡುಗಡೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಸಚಿವ ಕೆ ಎಸ್ ಈಶ್ವರಪ್ಪ ಅವರು ತುಸು ತಣ್ಣಗಾಗಿದ್ದಾರೆ. ರಾಜ್ಯಪಾಲರು, ಪಕ್ಷದ ವರಿಷ್ಠರಿಗೆ ನೀಡಿದ್ದ ದೂರು ಬಹಿರಂಗಗೊಂಡ ನಂತರವೂ ಯಡಿಯೂರಪ್ಪ ಮೌನ ಮುರಿದಿಲ್ಲ. ಪಕ್ಷದ ಬಹುತೇಕ ಶಾಸಕರು ಬೆನ್ನಿಗೆ ನಿಲ್ಲದ ಕಾರಣ ಈಶ್ವರಪ್ಪ ಅವರು ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ.
ಈಶ್ವರಪ್ಪ ಅವರು ನೀಡಿದ್ದ ದೂರು ರಾಜಕೀಯಕರಣಗೊಂಡಿತೇ ವಿನಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯ ಕಾಮಗಾರಿಗಳು ನೆನೆಗುದಿಗೆ ಬಿದ್ದಂತಾದವು. ಇವರಿಬ್ಬರ ಮಧ್ಯೆ ತಿಕ್ಕಾಟದಿಂದಾಗಿ ವಿಶೇಷವಾಗಿ ವರ್ಷವೊಂದರಲ್ಲಿ 5,000 ಕಿ ಮೀ ರಸ್ತೆ ಅಭಿವೃದ್ಧಿಪಡಿಸುವ ಗ್ರಾಮೀಣ ಸುಮಾರ್ಗ ಯೋಜನೆ ಸ್ಥಗಿತಗೊಂಡಂತಾಗಿದೆ. ಇಡೀ ಯೋಜನೆಯೇ ನೆನೆಗುದಿಗೆ ಬಿದ್ದಿದ್ದರೂ ಈ ಪ್ರಕರಣದಲ್ಲಿ ಯಡಿಯೂರಪ್ಪ ಪರ ನಿಂತ ಶಾಸಕರು ದನಿ ಎತ್ತಲಿಲ್ಲ, ಇದು ಅವರ ಅರಿವಿಗೂ ಬಂದಂತಿಲ್ಲ.
ಗ್ರಾಮೀಣಾಭಿವೃದ್ಧಿ ಇಲಾಖೆಗೆ ಈಗಾಗಲೇ 3,998.56 ಕೋಟಿ ಅನುಮೋದನೆ ದೊರೆತಿದೆ. ಈ ಪೈಕಿ 1,600.42 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇನ್ನೂ 2,398.18 ಕೋಟಿ ಬಿಡುಗಡೆ ಹಂತದಲ್ಲಿದೆ. ‘ಇದರ ಅರ್ಥ ನನ್ನ ಇಲಾಖೆಯ ಯೋಜನೆಗಳನ್ನು ಕಡೆಗಣಿಸಲಾಗುತ್ತಿದೆ. ಈಗಿನ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕರ ಹಣ ದುರುಪಯೋಗ ಎಂದೇ ಕರೆಯಬೇಕಾಗುತ್ತದೆ,’ ಎಂದು ಹೇಳಿದ್ದ ಈಶ್ವರಪ್ಪ ಅವರು ಇದನ್ನು ಮುಂದುವರೆಸಲಿಲ್ಲವೇಕೆ?
ಗ್ರಾಮೀಣ ಸುಮಾರ್ಗ ಯೋಜನೆ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಶಾಸಕರು ಸಿಂಹಪಾಲು ಪಡೆದಿದ್ದರು. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ಶಾಸಕರ ಕ್ಷೇತ್ರಗಳನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗಿತ್ತು. ಅನುದಾನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಮತ್ತು ಸಚಿವರ ಮಧ್ಯೆ ಎದ್ದಿದ್ದ ಅಸಮಾಧಾನವು ಇಡೀ ಈ ಯೋಜನೆಯನ್ನು ಸ್ಥಗಿತಗೊಳಿಸಲು ಕಾರಣವಾಯಿತು. ಯೋಜನೆಯಡಿಯಲ್ಲಿ ಒಟ್ಟಾರೆ 20 ಸಾವಿರ ಕಿ ಮೀ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಚಾಲನೆ ಸಿಗಬೇಕಿತ್ತು.
ಎಡವಿದರೇ ಈಶ್ವರಪ್ಪ?
ಗ್ರಾಮೀಣ ಸುಮಾರ್ಗ ಯೋಜನೆಯೂ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಅನುದಾನ ಹಂಚಿಕೆಯಲ್ಲಿ ಮುಖ್ಯಮಂತ್ರಿಯ ಹಸ್ತಕ್ಷೇಪ ವಿಷಯವನ್ನು ಮುಂದಿಟ್ಟು ರಾಜಭವನ ಎಡತಾಕಿದ್ದ ಈಶ್ವರಪ್ಪ ಅವರು ಬಿಜೆಪಿಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಿಜಕ್ಕೂ ಯೋಜನೆಯ ಅನುಷ್ಠಾನಗೊಳಿಸುವುದು ಅವರ ಉದ್ದೇಶವಾಗಿದ್ದರೆ ಮುಖ್ಯಮಂತ್ರಿಯ ಹಸ್ತಕ್ಷೇಪ ಮತ್ತು ಬೇಕಾದವರಿಗಷ್ಟೇ ಅನುದಾನ ನೀಡುವ ಮುಖ್ಯಮಂತ್ರಿಯ ನಿರ್ಧಾರದ ಕುರಿತು ಶಾಸಕರಲ್ಲಿ ಅರಿವು ಮೂಡಿಸಬೇಕಿತ್ತು. ಅನುದಾನ ಹಂಚಿಕೆಯಲ್ಲಿ ಆಗಿರುವ ವಿಳಂಬದ ಕುರಿತು ಶಾಸಕರೇ ನೇರವಾಗಿ ಮುಖ್ಯಮಂತ್ರಿ ಗಮನಕ್ಕೆ ತರುವ ತಂತ್ರಗಾರಿಕೆಯನ್ನು ರೂಪಿಸಬೇಕಿತ್ತು.
ಆದರೆ ಇದಾವುದನ್ನೂ ಮಾಡದ ಈಶ್ವರಪ್ಪ ಅವರು ನೇರವಾಗಿ ರಾಜಭವನ ಮತ್ತು ಪಕ್ಷದ ರಾಷ್ಟ್ರೀಯ ವರಿಷ್ಠರನ್ನು ನೇರವಾಗಿ ಎಡತಾಕುವ ಮೂಲಕ ಎಡವಿ ಬಿದ್ದರು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಈಶ್ವರಪ್ಪ ತುಸು ತಣ್ಣಗಾಗಿದ್ದರೂ ಸುಮಾರ್ಗ ಯೋಜನೆಯೂ ಸೇರಿದಂತೆ ಇನ್ನಿತರೆ ಯೋಜನೆಗಳ ಅನುಷ್ಠಾನದ ಕುರಿತು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಅನುದಾನ ಬಿಡುಗಡೆ ಸಂಬಂಧ ಇಬ್ಬರಿಗೂ ಸಮ್ಮತವಾಗುವ ನಿರ್ಧಾರ ಹೊರಬೀಳದ ಹೊರತು ರಸ್ತೆ ಕಾಮಗಾರಿಗಳಿಗೆ ಚಾಲನೆ ಸಿಗುವ ಯಾವುದೆ ಲಕ್ಷಣಗಳು ಗೋಚರಿಸುತ್ತಿಲ್ಲ.
780 ಕೋಟಿ ಬಿಡುಗಡೆ ಮಾಡಿಲ್ಲವೇಕೆ?
ಗ್ರಾಮೀಣ ಸುಮಾರ್ಗ ಯೋಜನೆಯಡಿ 5 ವರ್ಷಗಳಲ್ಲಿ 20 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ನಿಗದಿಪಡಿಸಿದ್ದ 780 ಕೋಟಿ ಹಣಕಾಸು ಇಲಾಖೆ ಬಿಡುಗಡೆ ಮಾಡಿಲ್ಲ. ಇದಕ್ಕೆ ಕಾರಣವೇನೆಂದು ಗೊತ್ತಿಲ್ಲ ಎಂದು ಈಶ್ವರಪ್ಪ ಅವರು ದೂರಿನಲ್ಲಿ ತಿಳಿಸಿರುವ ಅಂಶವನ್ನು ಶಾಸಕರಿಗೆ ಮನದಟ್ಟು ಮಾಡುವ ಯತ್ನವನ್ನು ಮಾಡಿದಂತಿಲ್ಲ.
2020–21 ರ ಬಜೆಟ್‌ನಲ್ಲಿ ಪ್ರಕಟಿಸಿದ ಇತರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣಕಾಸು ಇಲಾಖೆ ಅಗತ್ಯ ಅನುದಾನ ಬಿಡುಗಡೆಯಾಗಿಲ್ಲ. ಮಾಡಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ವಿಶೇಷ ಅನುದಾನದ ಹೆಸರಿನಲ್ಲಿ (ಬಜೆಟ್ ಹೊರತುಪಡಿಸಿ) 1,439.25 ಕೋಟಿಗೆ ಅನುಮೋದನೆ (ಹಿಂದಿನ ಸರ್ಕಾರದ ಬಿಡುಗಡೆ ಮಾಡಿದ ₹973.80 ಕೋಟಿ ಬಿಟ್ಟು) ನೀಡಿದೆ.
81 ವಿಧಾನಸಭಾ ಕ್ಷೇತ್ರಗಳಿಗೆ 775 ಕೋಟಿ ರು.ಗೆ ಹಣಕಾಸು ಇಲಾಖೆ ಇತ್ತೀಚೆಗೆ ಅನುಮೋದನೆ ನೀಡಿದೆ. ಒಂದೊಂದು ವಿಧಾನಸಭಾ ಕ್ಷೇತ್ರಕ್ಕೆ 5 ಕೋಟಿಯಿಂದ 23 ಕೋಟಿವರೆಗೆ ಅನುದಾನ ಹಂಚಿಕೆಯಾಗಿದೆಯಾದರೂ ಇದು ಬೇಕಾಬಿಟ್ಟಿ ಹಣ ನೀಡಲು ದಾರಿಮಾಡಿಕೊಡುವ ಸಂಭವವೂ ಹೆಚ್ಚಿದೆ. ಈ ಎಲ್ಲವು ಗ್ರಾಮೀಣ ಮೂಲಸೌಕರ್ಯ ಯೋಜನೆಗಳ ಮೇಲೆ ದೀರ್ಘಾವಧಿಯಲ್ಲಿ ಪರಿಣಾಮ ಬೀರುವ ಆತಂಕವೂ ಇದೆ.