ಅವ್ಯವಹಾರ; ಎಸಿಬಿ ದಾಳಿಗೊಳಗಾದ ಪಾಂಡುರಂಗ ಗರಗ್‌ಗೆ ತನಿಖೆ ಹೊಣೆ

ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿ ಎಸಿಬಿ ದಾಳಿಗೊಳಗಾಗಿರುವ ಅಧಿಕಾರಿಗೇ ಕೋಲಾರ-ಚಿಕ್ಕಬಳ್ಳಾಪುರ ಮೆಗಾ ಡೈರಿಯ ಬಾಯ್ಲರ್‌ ಖರೀದಿಯಲ್ಲಿನ ಅವ್ಯವಹಾರಗಳ ಕುರಿತು ತನಿಖೆಯ ಜವಾಬ್ದಾರಿಯನ್ನು ಬಿಜೆಪಿ ಸರ್ಕಾರ ಮುಂದುವರೆಸಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

ಬೆಂಗಳೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ ಪಾಂಡುರಂಗ ಗರಗ್‌ ಅವರನ್ನು ಪರಿವೀಕ್ಷಣಾಧಿಕಾರಿಯನ್ನಾಗಿ ನೇಮಿಸಿದ್ದ ರಾಜ್ಯ ಸರ್ಕಾರ, ಅವರ ನೇತೃತ್ವದಲ್ಲೇ ತನಿಖೆ ಅವಧಿಯನ್ನು 3 ತಿಂಗಳ ಅವಧಿಗೆ ವಿಸ್ತರಿಸಿ ಹೊರಡಿಸಿರುವ ಆದೇಶದ ಕುರಿತು ಇಲಾಖೆಯಲ್ಲಿಯೇ ಆಕ್ಷೇಪಗಳು ವ್ಯಕ್ತವಾಗಿವೆ.

ಪಾಂಡುರಂಗ್‌ ಗರಗ್‌ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರಿಗೆ ಪತ್ರ ಬರೆದಿರುವ ಬೆನ್ನಲ್ಲೇ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಅವ್ಯವಹಾರದ ತನಿಖೆಗೆ ನೇಮಿಸಿರುವುದು ಮುನ್ನೆಲೆಗೆ ಬಂದಿದೆ.

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಾಂಡುರಂಗ ಗರಗ್‌ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಗರಗ್ ಅವರಿಗೆ ಸಂಬಂಧಿಸಿದ ವಿಜಯನಗರದ ಮನೆ, ಜಯನಗರ, ಮಲ್ಲೇಶ್ವರಂ ಕಚೇರಿ ಹಾಗೂ ಚಿತ್ರದುರ್ಗದ ಮನೆ ಸೇರಿ ಐದು ಕಡೆ ಏಕಕಾಲಕ್ಕೆ ದಾಳಿ ನಡೆದಿತ್ತು. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ ಸಂಬಂಧ ಇವರನ್ನು ಅಮಾನತುಗೊಳಿಸಲು ಎಸಿಬಿಯು ಸಹಕಾರ ಇಲಾಖೆಗೆ ಪತ್ರ ಬರೆದಿತ್ತು. ಆದರೆ ಈವರೆವಿಗೂ ಸೇವೆಯಿಂದ ಅಮಾನತುಗೊಳಿಸಿಲ್ಲ ಎಂದು ತಿಳಿದು ಬಂದಿದೆ.

ಇವರನ್ನು ಅಮಾನತುಗೊಳಿಸುವ ಪ್ರಸ್ತಾವನೆ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಮುನ್ನವೇ ಮೆಗಾ ಡೈರಿಯ ಬಾಯ್ಲರ್‌ ಖರೀದಿ ಅವ್ಯವಹಾರಗಳ ಕುರಿತು ಶಾಸನಬದ್ಧ ಪರಿವೀಕ್ಷಣೆ ನಡೆಸಲು ಗರಗ್‌ ಅವರ ಅವಧಿಯನ್ನು 3 ತಿಂಗಳ ಅವಧಿಗೆ ವಿಸ್ತರಿಸಿ 2021ರ ಫೆ. 3ರಂದು ಆದೇಶ ಹೊರಡಿಸಿದೆ. ಆದೇಶದ ಪ್ರತಿ ‘ದಿ ಫೈಲ್‌ಗೆ ಲಭ್ಯವಾಗಿದೆ.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 65ರಡಿ ಶಾಸನಬದ್ಧ ಪರಿವೀಕ್ಷಣೆ ನಡೆಸಲು ಪಾಂಡುರಂಗ ಗರಗ್‌ ಅವರನ್ನು ಸರ್ಕಾರ ನೇಮಿಸಿತ್ತು. ಗರಗ್‌ ಅವರು ಶೇ.50ರಷ್ಟು ಮಾತ್ರ ಪರಿವೀಕ್ಷಣೆಯನ್ನು ಪೂರ್ಣಗೊಳಿಸಿದ್ದರು. ಹೀಗಾಗಿ ವರದಿ ಸಲ್ಲಿಸಲು ಇನ್ನೂ 3 ತಿಂಗಳ ಕಾಲಾವಕಾಶ ನೀಡಿ ಎಂದು ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಎಸ್‌ ಜಿಯಾಉಲ್ಲಾ ಅವರು 2021ರ ಫೆ.20ರಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರವೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣದ ಹಿನ್ನೆಲೆ

120 ಕೋಟಿ ಅಂದಾಜು ವೆಚ್ಚದಲ್ಲಿ ನಂದಿ ಕ್ರಾಸ್‌ನಲ್ಲಿ ಮೆಗಾ ಡೇರಿ ನಿರ್ಮಾಣ ಸಂಬಂಧ 2013ರಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ 18 ತಿಂಗಳ ಕಾಲಾವಧಿಯಲ್ಲಿ ಮೆಗಾ ಡೈರಿ ನಿರ್ಮಾಣ ಕಾರ್ಯ ಪೂರ್ಣಗೊಂಡಿರಲಿಲ್ಲ. ನಿಗದಿತ ಅವಧಿಯಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಕಾರಣ ವೆಚ್ಚವು 200 ಕೋಟಿಗೇರಿತ್ತು. ಹೀಗಾಗಿ ಸುಮಾರು 80 ಕೋಟಿ ರು. ಒಕ್ಕೂಟಕ್ಕೆ ನಷ್ಟವಾಗಿತ್ತು ಎಂಬ ಅಂಶ ಜಿಯಾಉಲ್ಲಾ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ. ಹಾಗೆಯೇ ಬಾಯ್ಲರ್‌ ಖರೀದಿ, ಸಿವಿಲ್‌ ಕಾಮಗಾರಿ ಮತ್ತು ಇಟಿಪಿ (ಎಫಲಿಯಂಟ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌) ಘಟಕ ನಿರ್ಮಾಣದಲ್ಲೂ ಅವ್ಯವಹಾರ ನಡೆದಿದೆ ಎಂಬ ದೂರು ಸಲ್ಲಿಕೆಯಾಗಿತ್ತು.

ಈ ಹಾಲು ಮಹಾಮಂಡಳಕ್ಕೆ ಸಂಬಂಧಿಸಿದಂತೆ ಪರಿವೀಕ್ಷಣೆ ಮಾಡಲು ಕೊಟ್ಟಿದ್ದ ಜವಾಬ್ದಾರಿಯನ್ನು ಸದರಿ ಅಧಿಕಾರಿಯಿಂದ ಈ ಕೂಡಲೇ ಹಿಂಪಡೆಯಬೇಕು. ಕಳೆದ 6 ತಿಂಗಳಿನಲ್ಲಿ ಅವರು ಮಾಡಿರುವ ಕೆಲಸ ಮತ್ತು ಕೊಟ್ಟಿರುವ ವರದಿಗಳನ್ನು ಉನ್ನತ ಮಟ್ಟದ ಸಮಿತಿ ಮೂಲಕ ಪುನರ್‌ ಪರಿಶೀಲನೆಗೊಳಪಡಿಸಬೇಕು. ಎಸಿಬಿ ಕೊಟ್ಟಿರುವ ಶಿಫಾರಸ್ಸಿನಂತೆ ಈ ಕೂಡಲೇ ಸದರಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಮತ್ತು ಯಾವುದೇ ಕಾರಣಕ್ಕೂ ಇಲಾಖೆ ವಿಚಾರಣೆ ಅಥವಾ ಎಸಿಬಿ ವಿಚಾರಣೆ ಪೂರ್ಣಗೊಳ್ಳುವ ತನಕ ಅಮಾನತಿನಲ್ಲಿರಿಸಬೇಕು. ಇದು ಯಾವುದು ಆಗಿಲ್ಲವೆಂದರೆ ಈ ವ್ಯಕ್ತಿಗೆ ದೊಡ್ಡಮಟ್ಟದ ಭ್ರಷ್ಟ ರಾಜಕಾರಣಿಗಳ ಅಥವಾ ಅಧಿಕಾರಿಗಳ ಕೃಪಾಕಟಾಕ್ಷ ಇದೆ ಎನ್ನುವುದು ಶತಸಿದ್ಧ.

ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷರು. ಕರ್ನಾಟಕ ರಾಷ್ಟ್ರ ಸಮಿತಿ

‘ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಮತ್ತು ಅವ್ಯವಹಾರದಲ್ಲಿ ಭಾಗಿಯಾದ, ಕರ್ತವ್ಯಲೋಪ, ಬೇಜವಾಬ್ದಾರಿ ವರ್ತನೆ, ಸಂಘದ ಮತ್ತು ಸದಸ್ಯರ ಹಿತ ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಆಡಳಿತ ದುರುಪಯೋಗಪಡಿಸಿಕೊಂಡು ಒಕ್ಕೂಟಕ್ಕೆ ಆಗಿರುವ ನಷ್ಟ ಉಂಟಾಗಲು ಕಾರಣಕರ್ತರಾಗಿರುವವರ ವಿರುದ್ಧ ನಿಖರವಾಗಿ ಜವಾಬ್ದಾರಿ ನಿಗದಿಪಡಿಸಿ ಒಕ್ಕೂಟಕ್ಕೆ ಆಗಿರುವ ನಷ್ಟ ವಸೂಲಿ ಮಾಡುವ ಸಂಬಂಧ ಪರಿವೀಕ್ಷಣೆ ನಡೆಸಲು ಪಾಂಡುರಂಗ ಗರಗ್‌ ಅವರನ್ನು ನೇಮಿಸಲಾಗಿತ್ತು ಎಂಬ ಸಂಗತಿ ಪತ್ರದಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts