ಭತ್ತ ಬೆಳೆಗಾರರಿಗೆ 126 ಕೋಟಿ ರು. ಬಾಕಿ ; ಬೆಂಬಲ ಬೆಲೆಗೂ ಹಣವಿಲ್ಲವೇ?

ಬೆಂಗಳೂರು; ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಕರ್ನಾಟಕ ಯೋಜನೆಯಡಿ ಎರಡನೇ ಕಂತಿನ ಹೆಚ್ಚುವರಿ ನೆರವಿನ ಅನುದಾನವನ್ನು ಬಿಡುಗಡೆ ಮಾಡದ ರಾಜ್ಯ ಬಿಜೆಪಿ ಸರ್ಕಾರವು ಕನಿಷ್ಟ ಬೆಂಬಲ ಬೆಲೆಯಡಿ ಭತ್ತ ಖರೀದಿ ಸಂಬಂಧ 126 ಕೋಟಿ ರು.ಗಳನ್ನೂ ಪಾವತಿಸದೇ ಬಾಕಿ ಉಳಿಸಿಕೊಂಡಿದೆ.

ಮಠ, ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ ಕೋಟ್ಯಂತರ ರುಪಾಯಿಗಳನ್ನು ಅನುದಾನ ನೀಡುತ್ತಿರುವ ಬೆನ್ನಲ್ಲೇ ಭತ್ತ, ಜೋಳ ಮತ್ತು ರಾಗಿ ಖರೀದಿ ಸಂಬಂಧ ಬಾಕಿ ಮೊತ್ತವನ್ನು ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

ಬೆಳಗಾವಿ, ಚಾಮರಾಜನಗರ, ಧಾರವಾಡ, ಗುಲ್ಬರ್ಗಾ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಜಿಲ್ಲೆಯ ರೈತರಿಂದ ಒಟ್ಟು 250.61 ಕೋಟಿ ಮೌಲ್ಯದಲ್ಲಿ ಭತ್ತ ಖರೀದಿಸಿತ್ತು. ಈ ಪೈಕಿ ಮಂಡ್ಯ ಮತ್ತು ಮೈಸೂರು ಜಿಲ್ಲೆಯಿಂದ ಒಟ್ಟು 235.23 ಕೋಟಿ ರು.ಮೌಲ್ಯದ 1,25,620 ಮೆಟ್ರಿಕ್‌ ಟನ್‌ ಪ್ರಮಾಣ ಭತ್ತವನ್ನು ಖರೀದಿಸಿತ್ತು.

ಈ ಎರಡೂ ಜಿಲ್ಲೆಗೆ 119.66 ಕೋಟಿ ರು. ಪಾವತಿಯಾಗದೇ ಬಾಕಿ ಉಳಿದುಕೊಂಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಹೀಗಾಗಿ ಈ ಎರಡೂ ಜಿಲ್ಲೆಯೊಂದರಿಂದಲೇ 18,412 ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ಸಚಿವ ಬಿ ಸಿ ಪಾಟೀಲ್‌ ಅವರು ಇದುವರೆಗೂ ಸಂಕಷ್ಟಕ್ಕೊಳಗಾಗಿರುವ ಭತ್ತ ಬೆಳೆಗಾರರ ನೆರವಿಗೆ ಧಾವಿಸಿಲ್ಲ!

ಅದೇ ರೀತಿ 49.96 ಕೋಟಿ ರು. ಮೌಲ್ಯದ 26,124 ಮೆಟ್ರಿಕ್‌ ಟನ್‌ ಪ್ರಮಾಣದ ರಾಗಿ ಮತ್ತು ಜೋಳ ಖರೀದಿಸಿರುವ ರಾಜ್ಯ ಸರ್ಕಾರ ಈ ಬಾಬ್ತಿನಲ್ಲೂ 10.59 ಕೋಟಿ ರು. ಗಳನ್ನು 963 ರೈತರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ. ಬಳ್ಳಾರಿ, ದಾವಣಗೆರೆ, ದಕ್ಷಿಣ ಕನ್ನಡ, ಹಾವೇರಿ, ಕೊಪ್ಪಳ, ಕಾರವಾರ, ರಾಯಚೂರು, ರಾಮನಗರ, ಶಿವಮೊಗ್ಗ, ಉಡುಪಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ರಾಗಿ, ಜೋಳವನ್ನು ಕನಿಷ್ಟ ಬೆಂಬಲ ಬೆಲೆಯಲ್ಲಿ ಖರೀದಿಸಿತ್ತು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 2020ರ ಡಿಸೆಂಬರ್‌ 8ರಂದೇ ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ಆರಂಭಿಸಿತ್ತು. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ ಸಾಮಾನ್ಯ ಭತ್ತದ ತಳಿಗೆ 1868.00 ರು., ಗ್ರೇಡ್‌ ಎ ತಳಿಗೆ 1,888.00 ರು. ದರವನ್ನು ನಿಗದಿಪಡಿಸಿತ್ತು. ಪ್ರಸ್ತುತ 12.10 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿಗೆ ಸರ್ಕಾರ ಆದೇಶಿಸಿದೆ. 18.01 ಲಕ್ಷ ಮೆಟ್ರಿಕ್‌ ಟನ್‌ಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.

2021ರ ಮಾರ್ಚ್‌ 6ರ ಅಂತ್ಯಕ್ಕೆ 159854.917 ಮೆಟ್ರಿಕ್‌ ಟನ್‌ ಭತ್ತವನ್ನು ರೈತರಿಂದ ಖರೀದಿಸಿದೆ. ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ, ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಗಳಿಂದ ಒಟ್ಟು 162.57 ಕೋಟಿ ರು. ರೈತರಿಗೆ ಪಾವತಿಯಾಗಿದೆ. ಅಲ್ಲದೆ 2018-19ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿರುವ ಭತ್ತಕ್ಕೆ ಸಂಬಂಧಿಸಿದಂತೆ ಡ್ರೈಯೆಜ್‌ ಶುಲ್ಕ ಪಾವತಿಸುವುದನ್ನು ಹೊರತುಪಡಿಸಿ ಉಳಿದ ಪೂರ್ಣ ಮೊತ್ತವನ್ನು ಅಕ್ಕಿ ಗಿರಣಿ ಮಾಲೀಕರಿಗೆ ಪಾವತಿಸಿದೆ ಎಂದು ಗೊತ್ತಾಗಿದೆ.

ಅದೇ ರೀತಿ 2019-20ನೇ ಸಾಲಿನಲ್ಲಿ ಭತ್ತದ ಹಲ್ಲಿಂಗ್‌ಗೆ ಸಂಬಂಧಿಸಿದಂತೆ ಅಕ್ಕಿ ಗಿರಣಿ ಮಾಲೀಕರಿಗೆ ಹಣ ಪಾವತಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಈ ಬಾಬ್ತಿನಲ್ಲೂ ಒಟ್ಟು 5,93.16,550 ರು. ಮೊತ್ತ ಬಿಡುಗಡೆಯಾಗದೇ ಬಾಕಿ ಉಳಿದಿದೆ. ಪ್ರತಿ ಕ್ವಿಂಟಾಲ್ ಭತ್ತ ಹಲ್ಲಿಂಗ್‌ ಮಾಡಲು 10 ರು.ಗಳನ್ನು ರೈಸ್‌ಮಿಲ್‌ ಮಾಲೀಕರಿಗೆ ಹಲ್ಲಿಂಗ್‌ ವೆಚ್ಚವಾಗಿ ನೀಡಲಾಗುತ್ತಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತದ ಸಂಗ್ರಹಣೆ ಹಲ್ಲಿಂಗ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ದರ ನಿಗದಿಪಡಿಸಿದೆ. ಆದರೆ 2010-11ನೇ ಸಾಲಿನಿಂದ ಇಲ್ಲಿಯವರೆಗೆ ಹಲ್ಲಿಂಗ್‌ ವೆಚ್ಚದ ದರದಲ್ಲಿ ಪರಿಷ್ಕರಣೆಯಾಗಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts