ವಿವಾದಕ್ಕೆ ದಾರಿಯಾದ ಕೆಪಿಎಸ್‌ಸಿ ಅಧ್ಯಕ್ಷರ ನೇಮಕ; ಸಂವಿಧಾನಕ್ಕೆ ವಿರುದ್ಧವಾಗಿ ನಡೆಯಿತೇ ಸರ್ಕಾರ?

ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ಕ್ಕೆ ಶಿವಶಂಕರಪ್ಪ ಎಸ್ ಸಾಹುಕಾರ್ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರವು ಇದೀಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.

ಆಯೋಗದ ಅಧ್ಯಕ್ಷ ಅಥವಾ ಸದಸ್ಯ ಭಾರತ ಸರ್ಕಾರದ ಅಧೀನದಲ್ಲಾಗಲಿ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಾಗಲಿ ಕನಿಷ್ಠ ಪಕ್ಷ 10 ವರ್ಷಗಳವರೆಗೆ ಪದಧಾರಣೆ ಮಾಡಿರಬೇಕು ಎಂದು ಸಂವಿಧಾನದ 316ನೇ ವಿಧಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರೂ ಬಿಜೆಪಿ ಸರ್ಕಾರವು ಸಹಕಾರಿ ಯೂನಿಯನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು  ಆಯೋಗಕ್ಕೆ ಅಧ್ಯಕ್ಷನನ್ನಾಗಿ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಆಯೋಗಕ್ಕೆ ಅಧ್ಯಕ್ಷರಾಗಿ ನೇಮಕವಾಗಿರುವ ಶಿವಶಂಕರಪ್ಪ ಎಸ್‌ ಸಾಹುಕಾರ್‌ ಅವರು 10 ವರ್ಷದ ಹಿಂದೆ ರಾಷ್ಟ್ರೀಯ ಸಹಕಾರ ಯೂನಿಯನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಿದ್ದರು. ಇವರ ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದು ಎಂದು ಹೊರಡಿಸಿದ್ದ ಆದೇಶವು ಇದೀಗ ದಿಢೀರ್‌ ಎಂದು ಮುನ್ನೆಲೆಗೆ ಬಂದಿದೆ. ಶಿವಶಂಕರಪ್ಪ ಎಸ್‌ ಸಾಹುಕಾರ್‌ ಅವರ ಕಾರ್ಯಕ್ಷಮತೆ ಬಗ್ಗೆ ಸಹಕಾರ ಯೂನಿಯನ್‌ ನಕಾರಾತ್ಮಕ ವರದಿ ನೀಡಿತ್ತು. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಂವಿಧಾನ ವಿರೋಧಿ ನಡೆಯೇ?

ಪ್ರತಿಯೊಂದು ಲೋಕಸೇವಾ ಆಯೋಗದ ಸದಸ್ಯರಲ್ಲಿ ಸಾಧ್ಯವಾಗಬಹುದಾದ ಮಟ್ಟಿಗೆ ಅರ್ಧದಷ್ಟು ಸದಸ್ಯರು, ಅವರು ಅನುಕ್ರಮವಾಗಿ ನೇಮಕಗೊಂಡ ದಿನಾಂಕಗಳಂದು ಭಾರತ ಸರ್ಕಾರದ ಅಧೀನದಲ್ಲಾಗಲಿ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಾಗಲಿ ಕನಿಷ್ಠ ಪಕ್ಷ 10 ವರ್ಷಗಳವರೆಗೆ ಪದಧಾರಣೆ ಮಾಡಿರಬೇಕು. ಮತ್ತು ಈ 10 ವರ್ಷಗಳ ಅವಧಿಯನ್ನು ಲೆಕ್ಕ ಹಾಕುವಲ್ಲಿ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಭಾರತ ಸಾಮ್ರಾಟನ ಅಧೀನದಲ್ಲಿ ಅಥವಾ ಒಂದು ಭಾರತೀಯ ಸಂಸ್ಥಾನ ಸರ್ಕಾರದ ಅಧೀನದಲ್ಲಿ ಒಬ್ಬ ವ್ಯಕ್ತಿಯು ಪದಧಾರಣೆ ಮಾಡಿದ್ದ ವ್ಯಕ್ತಿಯನ್ನು ಸೇರಿಸಿಕೊಳ್ಳತಕ್ಕದ್ದು ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಅಧ್ಯಕ್ಷನನ್ನಾಗಿಸಿರುವುದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದೇ ಅರ್ಥೈಯಿಸಲಾಗುತ್ತಿದೆ.

ಎನ್‌ಸಿಯುಐನಲ್ಲಿ(ನ್ಯಾಷನಲ್‌ ಕೋ ಆಪರೇಟೀವ್‌ ಯೂನಿಯನ್‌ ಆಫ್‌ ಇಂಡಿಯಾ)ದ ಗುಲ್ಬರ್ಗಾ ಶಾಖೆಯ ಕಾರ್ಯಕ್ಷೇತ್ರದಲ್ಲಿ ಶಿವಶಂಕರಪ್ಪ ಎಸ್‌ ಸಾಹುಕಾರ್‌ ಅವರು ಎಫ್‌ಜಿಐ ಆಗಿ ಗುತ್ತಿಗೆ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಅವಧಿಯಲ್ಲಿ ಅವರ ಕಾರ್ಯನಿರ್ವಹಣೆ ತೃಪ್ತಿಕರವಾಗಿರಲಿಲ್ಲ ಮತ್ತು ಸಮಯ ಪ್ರಜ್ಞೆ ಹೊಂದಿರಲಿಲ್ಲ. ಹೀಗಾಗಿ ಅವರ ಗುತ್ತಿಗೆ ಅವಧಿಯನ್ನು ವಿಸ್ತರಿಸಬಾರದು ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಕ ಅನಿತಾ ಮಂಚಾಡ ಅವರು 2010ರ ಮಾರ್ಚ್‌ 18ರಂದು ಆದೇಶ ಹೊರಡಿಸಿದ್ದರು. ಮತ್ತು ಯಾವುದೇ ಪ್ರಭಾರ ಕಾರ್ಯಭಾರವನ್ನೂ ವಹಿಸಬಾರದು ಎಂದು ಸಲಹೆ ನೀಡಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

ಲೋಕಸೇವಾ ಆಯೋಗವು ಕೆಎಎಸ್‌ ಹುದ್ದೆಯೂ ಸೇರಿದಂತೆ ಸರ್ಕಾರದ ಇತರೆ ಇಲಾಖೆಗಳಿಗೆ ಗ್ರೂಪ್‌ ಎ, ಬಿ ಮತ್ತು ಸಿ ಗುಂಪಿಗೆ ಅಧಿಕಾರಿ, ನೌಕರರನ್ನು ಆಯ್ಕೆ ಮಾಡುವ ಪ್ರಾಧಿಕಾರ. ಇಂತಹ ಹುದ್ದೆಗಳಿಗೆ ಆಯ್ಕೆ ಮಾಡುವ ಲೋಕಸೇವಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಉನ್ನತ ಅರ್ಹತೆಯುಳ್ಳ ಮತ್ತು ಸರ್ಕಾರದ ಉನ್ನತ ಹುದ್ದೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿರುವವರನ್ನು ನೇಮಿಸಬೇಕಿತ್ತು.

ಆದರೆ ಬಿಜೆಪಿ ಸರ್ಕಾರವು ಸಹಕಾರಿ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದವರನ್ನು ಆಯೋಗದ ಅಧ್ಯಕ್ಷನ್ನಾಗಿಸಿ ನೇಮಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ ಹಿಂದಿನ ಸಂಸ್ಥೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡದ ಮತ್ತು ಸಮಯ ಪ್ರಜ್ಞೆ ಹೊಂದಿಲ್ಲ ಎಂದು ನಕಾರಾತ್ಮಕ ವರದಿ ನೀಡಿದ್ದ ಸಂಸ್ಥೆಯು ಹೊರಡಿಸಿದ್ದ ಆದೇಶ ಮತ್ತು ಅವರ ಸೇವಾ ಹಿನ್ನೆಲೆ ಪರಿಶೀಲಿಸದೆಯೇ ಆಯೋಗಕ್ಕೆ ಅಧ್ಯಕ್ಷನನ್ನಾಗಿ ನೇಮಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೇಳಿ ಬಂದಿವೆ. ವಿಶೇಷವೆಂದರೆ ಶಿವಶಂಕರಪ್ಪ ಸಾಹುಕಾರ್‌ ಅವರು ಕಳೆದ ಒಂದೂವರೆ ವರ್ಷದ ಮೊದಲು ಆಯೋಗಕ್ಕೆ ಸದಸ್ಯರಾಗಿ ನೇಮಕವಾಗಿದ್ದರು.

the fil favicon

SUPPORT THE FILE

Latest News

Related Posts