ಕೋವಿಡ್‌ ನಿಧಿಯಲ್ಲಿ ಉಳಿದಿದ್ದು 2.33 ಕೋಟಿಯಷ್ಟೇ; 309 ಕೋಟಿ ವೆಚ್ಚದ ವಿವರಗಳೆಲ್ಲಿ?

ಬೆಂಗಳೂರು; ಕೋವಿಡ್‌-19 ಸಾಂಕ್ರಾಮಿಕ ಕಾಯಿಲೆ ಸಂಬಂಧ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಕೋವಿಡ್‌-19ರ ಖಾತೆಯಲ್ಲಿ ಸಂಗ್ರಹವಾಗಿದ್ದ 312.24 ಕೋಟಿ ರು. ಪೈಕಿ ಈಗ ಉಳಿದಿರುವುದು ಕೇವಲ 2.33 ಕೋಟಿ ರು. ಮಾತ್ರ.

‘ಮುಖ್ಯಮಂತ್ರಿ ಕೋವಿಡ್‌-19 ಪರಿಹಾರ ನಿಧಿ ಖಾತೆಯಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ರೋಗ ನಿಯಂತ್ರಿಸಲು ಅವಶ್ಯ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ ‘ಆಪತ್‌ ನಿಧಿ’ಯಾಗಿ ಕಾಯ್ದಿರಿಸಲಾಗಿತ್ತು. ಅದರಂತೆ 2020ರ ಮೇ 19ರವರೆಗೂ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್‌-19 ನಿಧಿ ಖಾತೆ ಸಂಖ್ಯೆ 39234923151ನಲ್ಲಿ ಒಟ್ಟು 267,72,37,574 ರು. ಲಭ್ಯವಿತ್ತು. ಆದರೀಗ 2021ರ ಮಾರ್ಚ್ ಅಂತ್ಯಕ್ಕೆ ಕೇವಲ 2 ಕೋಟಿ ರು. ಮಾತ್ರ ಲಭ್ಯವಿದೆ.

ವಿಧಾನಪರಿಷತ್‌ ಸದಸ್ಯ ಎಂ ನಾರಾಯಣಸ್ವಾಮಿ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 2021ರ ಮಾರ್ಚ್‌ 18ರಂದು ಉತ್ತರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಪರಿಹಾರ ನಿಧಿಯಿಂದ ಕಳೆದ 1 ವರ್ಷದ ಅವಧಿಯಲ್ಲಿ ಯಾವುದೇ ಫಲಾನುಭವಿಗಳಿಗೂ ನೇರವಾಗಿ ಪರಿಹಾರದ ಮೊತ್ತವನ್ನು ಒದಗಿಸಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

ಕೋವಿಡ್‌-19ರ ಖಾತೆಗೆ ಸಂಗ್ರಹವಾಗಿದ್ದ ಒಟ್ಟು 312.24 ಕೋಟಿ ರು.ಗಳನ್ನು ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಿರುವುದು ಯಡಿಯೂರಪ್ಪ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಕಂದಾಯ ಇಲಾಖೆಗೆ 14.86 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 209.65 ಕೋಟಿ, ವೈದ್ಯಕೀಯ ಶಿಕ್ಷಣ ಇಲಾಖೆಗೆ 85.39 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಕೋವಿಡ್‌-19ರ ಖಾತೆಯಿಂದ ಬಿಡುಗಡೆಯಾಗಿರುವ 309.91 ಕೋಟಿ ರು.ಗಳನ್ನು ಇಲಾಖೆಗಳು ಯಾವ ಯಾವ ಬಾಬ್ತುಗಳಿಗೆ ಖರ್ಚು ಮಾಡಿವೆ ಎಂಬ ಮಾಹಿತಿ ಮತ್ತು ವಿವರಗಳನ್ನು ಉತ್ತರದಲ್ಲಿ ಒದಗಿಸಿಲ್ಲ.

2020ರ ಮಾರ್ಚ್ 25 ರಿಂದ ಮೇ 19 ರವರೆಗೆ ಸಾರ್ವಜನಿಕರಿಂದ ಬರೋಬ್ಬರಿ 267 ಕೋಟಿ ರು. ಕೋವಿಡ್‌-19ರ ಖಾತೆಗೆ ಹರಿದು ಬಂದಿತ್ತು. ಕೊರೋನಾ ರೋಗ ನಿಯಂತ್ರಿಸಲು ಅವಶ್ಯ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ ಆಪತ್‌ ನಿಧಿಯಾಗಿ ಈ ಮೊತ್ತವನ್ನು ಸರ್ಕಾರ ಕಾಯ್ದಿರಿಸಿತ್ತು.

ಕಳೆದ ವರ್ಷದಲ್ಲಿ ಸಂಗ್ರಹವಾಗಿದ್ದ 307 ಕೋಟಿ ರು.ನಲ್ಲಿ 170 ಕೋಟಿ ರು. ಖರ್ಚು ಮಾಡಿದ್ದ ಸರ್ಕಾರ ಅದರ ವಿವರಗಳನ್ನೂ ಒದಗಿಸಿರಲಿಲ್ಲ. ವಿಶೇಷವೆಂದರೆ ಈ ದೇಣಿಗೆ ಮೊತ್ತವನ್ನು ಆರೋಗ್ಯ ಕಾರ್ಯಕರ್ತರಿಗೆ ವೈಯಕ್ತಿಕ ಸುರಕ್ಷಾ ಪರಿಕರಗಳು ಒದಗಿಸಲು ಬಳಸಿಲ್ಲ. ಹಾಗೆಯೇ ಐಸಿಯು ಸ್ಥಾಪನೆ, ವೆಂಟಿಲೇಟರ್‌ ಖರೀದಿಗೂ ಖರ್ಚು ಮಾಡಿದೆಯೇ ಅಥವಾ ಬೇರೆ ಯಾವ ಉದ್ದೇಶಕ್ಕೆ ಬಳಸಿದೆಯೇ ಎಂಬ ಮಾಹಿತಿಯನ್ನು ಬಹಿರಂಗಪಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

2021ರಲ್ಲೂ ಕೋವಿಡ್‌-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿಯೂ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. 2021ರ ಏಪ್ರಿಲ್‌ 4 ರ ಅಂತ್ಯಕ್ಕೆ ರಾಜ್ಯದಲ್ಲಿ 4,553 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 2,2787 ಸಂಖ್ಯೆಯ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

ಈ ಹಿನ್ನೆಲೆಯಲ್ಲಿ ಕೋವಿಡ್‌ ಕಾಳಜಿ ಕೇಂದ್ರಗಳನ್ನು ಪುನರಾರಂಭಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಹೊತ್ತಿನಲ್ಲಿ ಕೋವಿಡ್‌-19 ಖಾತೆಯಲ್ಲಿ ಕೇವಲ 2.33 ಕೋಟಿ ರು. ಮಾತ್ರ ಉಳಿದಿರುವುದು ಹೆಚ್ಚಿನ ನೆರವಿಗಾಗಿ ಸರ್ಕಾರ ಮತ್ತೊಮ್ಮೆ ಕೈ ಚಾಚುವ ಸ್ಥಿತಿ ಬಂದೊದಗಿದೆ. ಅಲ್ಲದೆ 2020ರಲ್ಲಿ ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕ ಉದ್ಯಮಗಳೂ ಸೇರಿದಂತೆ ಖಾಸಗಿ ಉದ್ಯಮಗಳ ಕಾರ್ಯಾಚರಣೆಯಿಲ್ಲದ ಕಾರಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣದ ಹರಿವು ಕಡಿಮೆಯಾಗಿತ್ತು.

the fil favicon

SUPPORT THE FILE

Latest News

Related Posts