ತೆರಿಗೆಯೇತರ ವರಮಾನದಲ್ಲಿ ಭಾರೀ ಇಳಿಕೆ; ಅನ್ಯ ರಾಜ್ಯಗಳಿಗಿಂತ ಕರ್ನಾಟಕದಲ್ಲೆ ಅತ್ಯಂತ ಕಡಿಮೆ

ಬೆಂಗಳೂರು; ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಅಭಿವೃದ್ಧಿ ಹರಿಕಾರರಂತೆ ಭಾರೀ ಪ್ರಚಾರಗಿಟ್ಟಿಸಿಕೊಂಡು ಸರ್ಕಾರ ರಚಿಸಿದ್ದ ಯಡಿಯೂರಪ್ಪ ಅವರ ಒಂದು ವರ್ಷದ ಅವಧಿಯಲ್ಲಿ ಆಡಳಿತ ಇಲಾಖೆಗಳಲ್ಲಿ ಅದಕ್ಷತೆ ಮತ್ತು ಅಧಿಕಾರಿಗಳ ಮೈಗಳ್ಳತನವು ಮತ್ತೊಮ್ಮೆ ಬಹಿರಂಗವಾಗಿದೆ. ಹೀಗಾಗಿಯೇ ತೆರಿಗೆಯೇತರ ಆದಾಯದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸತತವಾಗಿ ತುಂಬಾ ಕಡಿಮೆಯಾಗುತ್ತಿದೆ.

ಆಡಳಿತ ಇಲಾಖೆಗಳಲ್ಲಿ ಮೇಲ್ವಿಚಾರಣೆಯೇ ಇರಲಿಲ್ಲ ಎಂಬ ಸಂಗತಿಯನ್ನು 2020-21ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯು ಹೊರಗೆಡವಿದೆ. ರಾಜಸ್ವ ಸ್ವೀಕೃತಿಯಲ್ಲಿ ತೆರಿಗೆಯೇತರ ರಾಜಸ್ವದ ಪಾಲು ಹಿಂದಿನ ಹಲವಾರು ವರ್ಷಗಳಿಂದಲೂ ಇಳಿಮುಖಗೊಂಡಿದೆ. ಪ್ರಮುಖವಾಗಿ ವೆಚ್ಚ ವಸೂಲಾತಿ ದರದಲ್ಲಿನ ಇಳಿಕೆ ಮತ್ತು ಕ್ಷೀಣತೆ ಸಾರ್ವಜನಿಕ ಉದ್ದಿಮೆಗಳ ಕಳಪೆ ಕಾರ್ಯನಿರ್ವಹಣೆ ಹಾಗೂ ಲಾಭಕರವಲ್ಲದ, ದುಬಾರಿ ಸಹಾಯಧನ ಮತ್ತು ಆಡಳಿತ ಇಲಾಖೆಗಳಿಂದ ಕಾಲಕಾಲಕ್ಕೆ ಕ್ರಮಬದ್ಧವಾಗಿ ನಡೆಸಬೇಕಾಗಿದ್ದ ಮೇಲ್ವಿಚಾರಣೆಯ ಕೊರತೆ ಮತ್ತು ಬಳಕೆ ಶುಲ್ಕಗಳನ್ನು ಪರಿಷ್ಕರಿಸಿರುವುದು ತೆರಿಗೆಯೇತರ ರಾಜಸ್ವವು ನಿಶ್ಚಲಗೊಳ್ಳಲು ಕಾರಣಗಳಲ್ಲಿ ಒಂದಾಗಿದೆ.

ತೆರಿಗೆಯೇತರ ರಾಜಸ್ವವು ಸಾಮಾಜಿಕ, ಆರ್ಥಿಕ ಮತ್ತು ಸಾಮಾನ್ಯ ಸೇವೆಗಳು, ಬಡ್ಡಿ ಮತ್ತು ಡಿವಿಡೆಂಡ್‌ಗಳ ಜಮೆಗಳನ್ನು ಒಳಗೊಂಡಿರುತ್ತದೆ. ಈ ಮೂರು ಸೇವೆಗಳ ರಾಜಸ್ವವು 2019-20ರಲ್ಲಿ 7,508 ಕೋಟಿ ರು.ಗಳಾಗಿದ್ದರೆ 2020-21ರಲ್ಲಿ 7,767.24 ಕೋಟಿ ರು.ಗಳಾಗಿತ್ತು. ತೆರಿಗೆಯೇತರ ರಾಜಸ್ವದಲ್ಲಿ ಆಗುತ್ತಿರುವ ಇಳಿಕೆಯು ರಾಜ್ಯವು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲೊಂದಾಗಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆಯು ವಿವರಿಸಿದೆ.

ನಿರ್ದಿಷ್ಟ ಮಟ್ಟದಲ್ಲಿ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುವಂತಹ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಒಟ್ಟು ಜಮೆಗೆ ತೆರಿಗೆಯೇತರ ಆದಾಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ತುಂಬಾ ಕಡಿಮೆಯಾಗುತ್ತಿದೆ ಎಂದು ಆತಂಕವನ್ನೂ ಹೊರಗೆಡವಿದೆ. ಅಲ್ಲದೆ ರಾಜ್ಯದ ತೆರಿಗೆಯೇತರ ವರಮಾನವನ್ನು ರಾಜ್ಯಾದಾಯದ ಪ್ರಮಾಣಕ್ಕೆ ಹೋಲಿಸಿದಾಗ ದೇಶದಲ್ಲಿಯೆ ಇದು ಅತ್ಯಂತ ಕಡಿಮೆಯಾಗಿದೆ ಎಂಬ ಅಂಶವು ಕರ್ನಾಟಕ ಆರ್ಥಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.

ತೆರಿಗೆಯೇತರ ರಾಜಸ್ವವು ಕಳೆದ 5-6 ವರ್ಷಗಳಿಂದಲೂ ಶೇ.1ರತ್ತಲೇ ಸುಳಿದಾಡುತ್ತಿದೆ. ವೆಚ್ಚಗಳ ಸಂಗ್ರಹಣೆಯಲ್ಲಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಅನೇಕ ಇಲಾಖೆಗಳಲ್ಲಿ ಬಳಕೆದಾರರ ಶುಲ್ಕ, ದಂಡ ಹಾಗೂ ಇತರೆ ತೆರಿಗೆಯೇತರ ಜಮೆಗಳ ಪರಿಷ್ಕರಣೆಯನ್ನು ಅನೇಕ ವರ್ಷಗಳಿಂದ ಕೈಗೆತ್ತಿಕೊಂಡಿರುವುದಿಲ್ಲ ಎಂದು ಸಮೀಕ್ಷೆ ವಿವರಿಸಿದೆ.

the fil favicon

SUPPORT THE FILE

Latest News

Related Posts