ಎಪಿಎಂಸಿ ಕಾಯ್ದೆ; ಸಂತೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೂ ಅಡ್ಡಿ

ಬೆಂಗಳೂರು; ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದಿರುವ ಎಪಿಎಂಸಿ ಕಾಯ್ದೆಯು ಗ್ರಾಮೀಣ ಸಂತೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಾಭಿಸಿದೆ. ಸಂತೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಲು ಮುಂದಾಗಿದ್ದ ಕೃಷಿ ಮಾರಾಟ ಇಲಾಖೆಗೆ ಎಪಿಎಂಸಿ ಕಾಯ್ದೆ ತೊಡಕಾಗಿ ಪರಿಣಿಮಿಸಿದೆ.

ಬೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿದಂತೆ ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿರುವ ಗ್ರಾಮೀಣ ಸಂತೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪಿಸಲು ಕೃಷಿ ಮಾರಾಟ ಇಲಾಖೆ ಮುಂದಾಗಿತ್ತು.

ಎಪಿಎಂಸಿಗಳ ವ್ಯಾಪ್ತಿಯಲ್ಲಿರುವ ಗ್ರಾಮೀಣ ಸಂತೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪನೆ ಸಂಬಂಧದ ಪ್ರಸ್ತಾವನೆಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಸಹಕಾರ ಇಲಾಖೆಯು ಕೃಷಿ ಮಾರಾಟ ಇಲಾಖೆಗೆ 2021ರ ಮಾರ್ಚ್‌ 4ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೆಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ 11 ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಲು ಕೃಷಿ ಮಾರಾಟ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಘಟಕಗಳಿಗೆ ನಿಯಮಾನುಸಾರ ವಾರ್ಷಿಕ 60.00 ಲಕ್ಷ ರು. ಭರಿಸಲು ಅವಕಾಶವಿದೆ. ಆದರೆ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಯು ಘಟಕಗಳ ಸ್ಥಾಪನೆಗೂ ಅಡ್ಡಿಯಾಗಿರುವುದು ಸಹಕಾರ ಇಲಾಖೆ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸಂಬಂಧಪಟ್ಟ ಕಾಯ್ದೆಗಳ ತಿದ್ದುಪಡಿಯ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮಾರುಕಟ್ಟೆ ವ್ಯಾಪ್ತಿಯು ತುಂಬಾ ಕಡಿಮೆಯಾಗಿದೆ. ಅಲ್ಲದೆ, ಮಾರುಕಟ್ಟೆ ಸಮಿತಿಗಳು ಆಕರಿಸುತ್ತಿದ್ದ ಬಳಕೆದಾರರ, ಮಾರುಕಟ್ಟೆ ಶುಲ್ಕವನ್ನು ಶೇ.1.5ರಿಂದ ಶೇ.0.60ಕ್ಕೆ ಕಡಿಮೆ ಮಾಡಿ ನಿಗದಿಪಡಿಸಿದೆ. ಸದ್ಯದ ಸ್ಥಿತಿಯಲ್ಲಿ ಸಮಿತಿಗಳ ಆದಾಯ ಗಣನೀಯವಾಗಿ ಇಳಿಕೆಯಾಗುವ ಸಂಭವವಿದೆ. ಹೀಗಾಗಿ ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪನೆ ಬಗ್ಗೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿ,’ ಎಂದು ಸಹಕಾರ ಇಲಾಖೆಯು ಕೃಷಿ ಮಾರಾಟ ಇಲಾಖೆಗೆ ನಿರ್ದೇಶಿಸಿದೆ.

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಎಪಿಎಂಸಿ ಕಾಯಿದೆ ಗೆ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿತ್ತು. ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳಿಗೆ ಅನಕೂಲ ಮಾಡಿಕೊಡುವುದಕ್ಕಾಗಿ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸ ಬೇಕೆಂದು ಕೇಂದ್ರ ಕೃಷಿ ಸಚಿವಾಲಯ ರಾಜ್ಯ ಸರ್ಕಾಕ್ಕೆ ಮೇ 5 ರಂದು ಪತ್ರ ಬರೆದು ಸೂಚಿಸಿತ್ತು.

ಏನಿದು ಎಪಿಎಂಸಿ ಕಾಯ್ದೆ

ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ ನಿಯಂತ್ರಣ ಮತ್ತು ಅಭಿವೃದ್ದಿ ಕಾಯಿದೆಯನ್ನು ಮೊದಲ ಬಾರಿಗೆ 1966ರಲ್ಲಿ ಜಾರಿಗೆ ತರಲಾಗಿತ್ತು. ನಂತರ 20 ವರ್ಷಗಳ ಬಳಿಕ 1986ರಲ್ಲಿ ರೈತರ ಹಿತವನ್ನೇ ಗಮನದಲ್ಲಿಟ್ಟುಕೊಂಡು ಎಪಿಎಂಸಿ ಕಾಯ್ದೆಗೆ ಪ್ರಬಲವಾದ ತಿದ್ದುಪಡಿ ಮಾಡಲಾಗಿತ್ತು. ನಂತರ 2017ರಲ್ಲಿ ಎಪಿಎಂಸಿ ಮಾದರಿ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ಈಗ ಅದೇ ಮಾದರಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರಲಾಗಿದೆ.

ರೈತರು ಬೆಳೆಯುವ ಫಸಲನ್ನು ಎಪಿಎಂಸಿಗಳಲ್ಲಿ ಮಾರಾಟ ಮಾಡಬೇಕು.ಅದನ್ನು ಖರೀದಿ ಮಾಡುವ ವ್ಯಾಪಾರಿಗಳು ಎಪಿಎಂಸಿಗಳಲ್ಲಿ ನೋಂದಣಿ ಮಾಡಿಸಿಕೊಂಡು ರೈತರು ಬೆಳೆದ ಮಾಲನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶವಿತ್ತು. ಜೊತೆಗೆ 2017ರ ಮಾದರಿ ಕಾಯಿದೆಯ ಪ್ರಕಾರ ಆನ್‌ಲೈನ್‌ ಮೂಲಕ ಟೆಂಡರ್‌ ಖರೀದಿದಾರರು ಭಾಗವಹಿಸಲು ಅವಕಾಶವಿತ್ತು.

ಸುಗ್ರೀವಾಜ್ಞೆಯಲ್ಲಿ ಏನಿದೆ?

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸುಗ್ರೀವಾಜ್ಞೆ ಮೇಲ್ನೋಟಕ್ಕೆ ರೈತರಿಗಾಗಿಯೆ ತಿದ್ದುಪಡಿ ಮಾಡಿದಂತಿದೆ. ಆದರೆ ಭವಿಷ್ಯದ ದೃಷ್ಟಿಯಿಂದ ನೋಡಿದರೆ ಬಹುರಾಷ್ಟ್ರೀಯ ಕಂಪನಿಗಳ ಹಿತ ಎದ್ದು ಕಾಣುತ್ತಿದೆ. ಯಾಕೆಂದರೆ ಈಗಿರುವ ಎಪಿಎಂಸಿ ಕಾಯ್ದೆ ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಇರಲಿಲ್ಲ.

ಬಹುರಾಷ್ಟ್ರೀಯ ಕಂಪನಿಗಳು ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಕೃಷಿ ನಿರ್ದೇಶನಾಲಯದ ಅನುಮತಿ ಅಗತ್ಯವಾಗಿತ್ತು. ಆದರೆ ಎಂಪಿಎಂಸಿ ಒಳಗೆ ಅಥವಾ ಹೊರೆಗೆ ರೈತರ ಉತ್ನನ್ನಗಳನ್ನು ಖರೀದಿ ಮಾಡಲು ಅನುಮತಿ ಬೇಕಿಲ್ಲ. ಇದರಿಂದ ರೈತರಿಗೆ ನಿಗದಿತ ಬೆಲೆ ಸಿಗುವ ಯಾವುದೇ ಖಾತ್ರಿಯಿಲ್ಲ ಎಂದು ರೈತ ಮುಖಂಡರು ಸುಗ್ರೀವಾಜ್ಞೆ ವಿರೋಧಿಸಿದ್ದರು.

ರಿಲಯನ್ಸ್‌ ಫ್ರೆಶ್, ಬಿಗ್‌ಬಜಾರ್, ಅಮೆಜಾನ್, ಫ್ಲಿಫ್‌ಕಾರ್ಟ್‌, ವಾಲ್‌ಮಾರ್ಟ್‌ನಂತರ ದೈತ್ಯ ಕಂಪನಿಗಳಿಗೆ ಅನಕೂಲ ಮಾಡಿಕೊಡಲು ರೈತರ ಈ ಸಂಕಷ್ಟದ ಸಮಯವನ್ನು ಸರ್ಕಾರ ಬಳಸಿಕೊಂಡಿದೆ ಎಂದು ರೈತರು ಆರೋಪಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts