ಕೊಡಗಿನಲ್ಲಿ ಮೂವರನ್ನು ಬಲಿ ಪಡೆದಿದ್ದು ಗಂಡು ಹುಲಿ; ಜೆನೆಟಿಕ್‌ ಮ್ಯಾಪಿಂಗ್‌ ಸುಳಿವು

ಬೆಂಗಳೂರು: ಕೊಡಗಿನ ಶ್ರೀಮಂಗಲ ವಲಯದ ಕುಮಟೂರು, ಶೆಟ್ಟಿಗೇರಿ, ಬೆಳ್ಳೂರು ಗ್ರಾಮದಲ್ಲಿ ಮೂವರನ್ನು ಹತ್ಯೆ ಮಾಡಿದ್ದು ಗಂಡು ಹುಲಿ ಎಂಬ ಮಹತ್ವದ ಸುಳಿವು ಅರಣ್ಯಾಧಿಕಾರಿಗಳಿಗೆ ಲಭ್ಯವಾಗಿದೆ.

ಕೊಡಗಿನ ಶ್ರೀಮಂಗಲ ವ್ಯಾಪ್ತಿಯಲ್ಲಿ ಹಿಡಿದಿರುವ ಹುಲಿಯ ರಕ್ತದ ಮಾದರಿ ಹಾಗೂ ಹತ್ಯೆಗೀಡಾಗಿರುವವರ ದೇಹದ ಮೇಲೆ ದೊರೆತಿರುವ ಹುಲಿಯ ಕೂದಲನ್ನು ಹೈದರಾಬಾದ್‌ನ ಸೆಂಟರ್‌ ಫಾರ್‌ ಸೆಲ್ಯುಲರ್‌ ಅಂಡ್‌ ಮಾಲಕ್ಯುಲರ್‌ ಬಯಾಲಜಿ (Centre for Cellular & Molecular Biology) ಸಂಸ್ಥೆಗೆ ಕಳಿಸಿ ಜೆನೆಟಿಕ್‌ ಮ್ಯಾಪಿಂಗ್‌ ಮಾಡಿಸಲಾಗಿತ್ತು.

ಸಾಯಿಸಲ್ಪಟ್ಟಿದ್ದ ಜನರ ಮೇಲೆ ದೊರೆತಿರುವ ಹುಲಿಯ ಕೂದಲು ಗಂಡು ಹುಲಿಯದ್ದಾಗಿದೆ ಎಂದು ಗೊತ್ತಾಗಿದೆ. ಅರಣ್ಯಾಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ವರದಿಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಗಂಡು ಹುಲಿ ಎಂದು ಪತ್ತೆ ಹಚ್ಚಲಾಗಿದೆ. ಅದೇ ಭಾಗದಲ್ಲಿ ಜಾನುವಾರುಗಳನ್ನು ಹತ್ಯೆ ಮಾಡುತ್ತಿರುವ ಸ್ಥಳದಲ್ಲಿ ಕ್ಯಾಮರಾ ಟ್ರ್ಯಾಪ್‌ ಅಳವಡಿಸಲಾಗಿದೆ. ಅದರಲ್ಲಿ ಗಂಡು ಹುಲಿಯ ಇರುವಿಕೆ ಕಂಡು ಬಂದಿದೆ. ಅದನ್ನು ಹಿಡಿಯಲು ತಂಡಗಳು ಕಾರ್ಯಾಚರಣೆಯಲ್ಲಿ ಮುಂದುವರೆದಿವೆ ಎಂಬ ಮಾಹಿತಿಯನ್ನು ಹಿರಿಯ ಅರಣ್ಯಾಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಹಂಚಿಕೊಂಡಿದ್ದಾರೆ.

ಕಳೆದ ಮೂರು ವಾರದಲ್ಲಿ ನಡೆದಿರುವ ಹುಲಿ ದಾಳಿಗೆ ಮೂವರು ಬಲಿಯಾಗಿದ್ದರು. ನರಭಕ್ಷಕ ಹುಲಿ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆ ವೇಳೆಯಲ್ಲಿ ಹೆಣ್ಣು ಹುಲಿಯೊಂದು ಸಿಕ್ಕಿಬಿದ್ದಿದೆ ಎಂದು ಗೊತ್ತಾಗಿದೆ.

2019-20ರಲ್ಲಿ ಕೊಡಗು ವೃತ್ತದಲ್ಲಿ ಹುಲಿ ದಾಳಿ ನಡೆದಿಲ್ಲ. 2020-21ರಲ್ಲಿ ಶ್ರೀಮಂಗಲ ವಲಯ, ಪೊನ್ನಂಪೇಟೆಯಲ್ಲಿ ಕುಮಟರೂ ಗ್ರಾಮದ ಎರವರ ಅಯ್ಯಪ್ಪ, ಬೊಳ್ಳಕ್ಕ, ರಂಗಸ್ವಾಮಿ ಎಂಬುವರ ಮೇಲೆ ಹುಲಿ ದಾಳಿ ನಡೆಸಿದೆ.

ಕೊಡಗಿನ ಪೊನ್ನಂಪೇಟೆ ಸುತ್ತಮುತ್ತ ಗ್ರಾಮಗಳು ನರಭಕ್ಷಕ ಹುಲಿಯ ಭೀತಿಯಲ್ಲಿವೆ. ಶ್ರೀಮಂಗಲ, ಮಂಚಳ್ಳಿ, ತೆರಾಲು, ತಾವಳಗೇರಿ, ಕುಮಟೂರು, ಬಾಡಗಕೇರಿ, ಬೆಳ್ಳೂರು, ನಿಟ್ಟೂರು, ಹುದಿಕೇರಿ ಮತ್ತಿತರ ಗ್ರಾಮಗಳ ಕಾಫಿ ಎಸ್ಟೇಟ್‌ ಸುತ್ತಮುತ್ತ ಹುಲಿ ದಾಳಿ ಭೀತಿ ಆವರಿಸಿದೆ.

Your generous support will help us remain independent and work without fear.

Latest News

Related Posts