ಒಕ್ಕಲಿಗರ ಸಂಘ; ಬೈಲಾ ತಿದ್ದುಪಡಿಯೋ, ಹೈಕೋರ್ಟ್‌ ಆದೇಶದಂತೆ ಚುನಾವಣೆಯೋ?

ಬೆಂಗಳೂರು; ರಾಜ್ಯ ಒಕ್ಕಲಿಗರ ಸಂಘಕ್ಕೆ ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ. ಸಂಘಕ್ಕೆ ಚುನಾವಣೆ ನಡೆಸುವ ಸಂಬಂಧ ನ್ಯಾಯಾಲಯವು ನೀಡಿರುವ ಸೂಚನೆ ಕುರಿತು ಸರ್ಕಾರದಿಂದ ಮಾಹಿತಿ ಪಡೆಯಲು ಸಹಕಾರ ಇಲಾಖೆಯು ಸಂಘದ ಆಡಳಿತಾಧಿಕಾರಿಗೆ ಕಳೆದ ಕೆಲ ದಿನದ ಹಿಂದೆ ಪತ್ರ ಬರೆದಿದ್ದ ಬೆನ್ನಲ್ಲೇ ಹೈಕೋರ್ಟ್‌ನ ಆದೇಶ ಮಹತ್ವ ಪಡೆದುಕೊಂಡಿದೆ.

ಅಲ್ಲದೆ ಸಂಘದ ಬೈಲಾ ತಿದ್ದುಪಡಿ ಮಾಡಿದ ನಂತರ ಚುನಾವಣೆ ನಡೆಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರ ಮನವಿಯನ್ನು ಬಿಜೆಪಿ ಸರ್ಕಾರ ಪುರಸ್ಕರಿಸಿರಲಿಲ್ಲ. 3 ತಿಂಗಳ ಒಳಗೆ ಚುನಾವಣೆ ನಡೆಸಲು ಹೈಕೋರ್ಟ್‌ ನೀಡಿರುವ ಆದೇಶವನ್ನು ಬಿಜೆಪಿ ಸರ್ಕಾರ ಪಾಲಿಸಲಿದೆಯೇ ಅಥವಾ ಮೇಲ್ಮನವಿ ಸಲ್ಲಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

ಕಳೆದ ಎರಡೂವರೆ ವರ್ಷದಿಂದ ಆಡಳಿತಾಧಿಕಾರಿಯೇ ಸಂಘದ ಕಾರ್ಯ ನಿರ್ವಹಣೆಗಳನ್ನು ನಿಭಾಯಿಸಿಕೊಂಡು ಬರುತ್ತಿದ್ದಾರೆ ಎಂದು ಅಭಿಪ್ರಾಯಿಸಿದೆ. ಅಲ್ಲದೆ ಆರು ತಿಂಗಳಿಗೊಮ್ಮೆ ಆಡಳಿತಾಧಿಕಾರಿಯ ಅಧಿಕಾರ ವಿಸ್ತರಿಸಲಾಗುತ್ತಿದೆ. ಸತತವಾಗಿ ಆಡಳಿತಾಧಿಕಾರಿಯ ಅಧಿಕಾರ ವಿಸ್ತರಿಸಲಾಗದು. ಆದ್ದರಿಂದ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರ ಏಕ ಸದಸ್ಯ ನ್ಯಾಯಪೀಠ ಸರ್ಕಾರಕ್ಕೆ ಆದೇಶಿಸಿದೆ.

ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಲು ಆದೇಶಿಸುವಂತೆ ಕೋರಿ ಸಂಘದ ಆಜೀವ ಸದಸ್ಯ ಕೃಷ್ಣೇಗೌಡ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಪರ ವಕೀಲ ಧರ್ಮಪಾಲ ಗೌಡ ವಾದ ಮಂಡಿಸಿದ್ದರು.

ಸಂಘದ ಆಡಳಿತಾಧಿಕಾರಿ ಅವಧಿಯಲ್ಲಿ ಬೈಲಾ ತಿದ್ದುಪಡಿ ಮಾಡಲು ಸರ್ಕಾರವು ನಿರಾಕರಿಸಿದ್ದರ ಬೆನ್ನಲ್ಲೇ ಸಂಘದ ಚುನಾವಣೆಯು ಯಾವಾಗ ನಡೆಯಲಿದೆ ಎಂಬ ಬಗ್ಗೆ ಸರ್ಕಾರದಿಂದ ಸೂಚನೆಗಳನ್ನು ಪಡೆಯಲು ಸಹಕಾರ ಇಲಾಖೆ ಬರೆದಿದ್ದ ಪತ್ರವು ಮಹತ್ವ ಪಡೆದುಕೊಂಡಿತ್ತು.

ಅಲ್ಲದೆ ಸಂಘದ ಆಡಳಿತ ಮಂಡಳಿಯು ನಡೆಸಿರುವ ಅಕ್ರಮಗಳು, ದುರುಪಯೋಗ ಮತ್ತು ಅಸಮರ್ಪಕ ಕಾರ್ಯಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸಂಘದ ಆಡಳಿತಾಧಿಕಾರಿಗೆ ಸೂಚಿಸಿತ್ತು. ಈ ಬಗ್ಗೆ ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಒಕ್ಕಲಿಗರ ಸಂಘದ ಚುನಾವಣೆ; ಸರ್ಕಾರದಿಂದ ಸೂಚನೆ ಪಡೆಯಲು ಆಡಳಿತಾಧಿಕಾರಿಗೆ ಪತ್ರ

ರಾಜ್ಯ ಒಕ್ಕಲಿಗರ ಸಂಘದ ಬೈಲಾ ತಿದ್ದುಪಡಿ ಮಾಡಿ ಆ ನಂತರ ಸಂಘದ ಚುನಾವಣೆ ನಡೆಸಬೇಕು ಎಂದು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ, ಸಚಿವ ಗೋಪಾಲಯ್ಯ, ವಿಧಾನಪರಿಷತ್‌ ಸದಸ್ಯ ಅ ದೇವೇಗೌಡ ಅವರು ಸಹಕಾರಿ ಇಲಾಖೆಗೆ ಪತ್ರ ಬರೆದಿದ್ದರು.

ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಇನ್ನಿತರೆ ಪದಾಧಿಕಾರಿಗಳನ್ನು ನೇರವಾಗಿ ಸಂಘದ ಎಲ್ಲಾ ಸದಸ್ಯರುಗಳಿಂದ ನಿರ್ದೇಶಕರ ಚುನಾವಣೆಯಲ್ಲಿಯೇ ಆಯ್ಕೆ ಮಾಡುವ ಸಂಬಂಧ ಉದ್ಧೇಶಿತ ಬೈಲಾ ತಿದ್ದುಪಡಿಗೆ ಒಪ್ಪದಿರಲು ಸಹಕಾರ ಇಲಾಖೆ ನಿಲುವು ತಾಳಿದೆ. ಬೈಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಸೇರಿದಂತೆ ಹಲವರು ಬರೆದಿದ್ದ ಪತ್ರಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಮಾನ್ಯತೆ ನೀಡಿರಲಿಲ್ಲ.

ಒಕ್ಕಲಿಗರ ಸಂಘದ ಬೈಲಾ ತಿದ್ದುಪಡಿ; ದೇವೇಗೌಡರ ಮನವಿಗೆ ಮನ್ನಣೆ ನೀಡದ ಸರ್ಕಾರ

ಸಂಘದಲ್ಲಿ ಒಟ್ಟು 5,20,721 ಮಂದಿ ಸದಸ್ಯರು ನೋಂದಣಿಯಾಗಿದ್ದಾರೆ. ಸಂಘದ ಬೈಲಾ 7(3)ರ ಪ್ರಕಾರ 11 ಜಿಲ್ಲಾ ಕ್ಷೇತ್ರಗಳಿಂದ 35 ಕಾರ್ಯಕಾರಿ ಸಮಿತಿ ಸದಸ್ಯರಿದ್ದಾರೆ. ಪದಾಧಿಕಾರಿಗಳ ನೇರ ಚುನಾವಣೆಗೆ ಬೈಲಾ ತಿದ್ದುಪಡಿ ಮಾಡಲು ಅಧ್ಯಕ್ಷರು, ಉಪಾಧ್ಯಕ್ಷರು, ಸಹಾಯಕ ಕಾರ್ಯದರ್ಶಿ, ಖಜಾಂಚಿ ಸೇರಿ ಒಟ್ಟು 5 ಸ್ಥಾನಗಳಿಗೆ ಯಾವ ಜಿಲ್ಲೆಯ ನಿರ್ದೇಶಕರ ಸಂಖ್ಯೆಯಲ್ಲಿ ಕಡಿಮೆ ಮಾಡಬೇಕು ಎಂಬ ಬಗ್ಗೆಯೂ ತೀರ್ಮಾನವಾಗಿಲ್ಲ ಎಂಬ ಸಂಗತಿ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಪದಾಧಿಕಾರಿಗಳ ನೇರ ಆಯ್ಕೆ ಮಾಡಲು 11 ಜಿಲ್ಲಾ ಕ್ಷೇತ್ರಗಳ ವ್ಯಾಪ್ತಿಯ ಪ್ರತಿ ಮತಗಟ್ಟೆಯಲ್ಲಿಯೂ 6 ಪೆಟ್ಟಿಗೆಗಳನ್ನು ಇಡಬೇಕಿದೆ. ಇದರ ನಿರ್ವಹಣೆ ಮತ್ತು ಖರ್ಚು ವೆಚ್ಚಗಳು ಗಣನೀಯವಾಗಿ ಹೆಚ್ಚುತ್ತದೆ. ಈ ರೀತಿಯ ಬೈಲಾ ತಿದ್ದುಪಡಿಯನ್ನು ಸಂಘದ ಆಡಳಿತಾಧಿಕಾರಿ ಅವಧಿಯಲ್ಲಿ ಆಡಳಿತಾಧಿಕಾರಿ ಮಾಡಲು ಕಾನೂನಿನಲ್ಲಿ ಅವಕಾಶ ಇದೆಯೇ ಎಂಬ ಬಗ್ಗೆ ಸರ್ಕಾರವನ್ನು ಕೋರಲು ಇಲಾಖೆ ಮುಂದಾಗಿದೆ ಎಂಬುದು ಗೊತ್ತಾಗಿದೆ.

‘ಸಂಘದ ಸದಸ್ಯರ ಪೈಕಿ ಶೇ.60ಕ್ಕಿಂತಲೂ ಹೆಚ್ಚಿನ ಸದಸ್ಯರು ಗ್ರಾಮೀಣ ಭಾಗದವರಾಗಿದ್ದು ಅವರೆಲ್ಲರೂ ಮೊಬೈಲ್‌ ಸಂಖ್ಯೆಯನ್ನು ಹೊಂದಿರುವುದಿಲ್ಲ. ವರ್ಚುವಲ್‌ ಸರ್ವ ಸದಸ್ಯರ ಸಭೆಗೆ ಭಾಗವಹಿಸಲು ಅಗತ್ಯವಿರುವ ಸ್ಮಾರ್ಟ್‌ ಫೋನ್‌ ಹೊಂದಿರುವ ಸಾಧ್ಯತೆ ಕಡಿಮೆ ಇದೆ. ಇವರುಗಳು ವರ್ಚುವಲ್‌ ಸರ್ವ ಸದಸ್ಯರ ಸಭೆಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ದೊಡ್ಡಮಟ್ಟದ ಸದಸ್ಯರನ್ನೊಳಗೊಂಡ ಸಂಘದ ಸದಸ್ಯರನ್ನು ಕರೆದು ಬೈಲಾ ತಿದ್ದುಪಡಿ ಅಂಶಗಳನ್ನೊಳಗೊಂಡ ದೊಡ್ಡಮಟ್ಟದ ತೀರ್ಮಾನದ ಬಗ್ಗೆ ಸದಸ್ಯರ ಅಭಿಪ್ರಾಯವನ್ನು ಏಕಕಾಲದಲ್ಲಿ ಸಂಗ್ರಹಿಸುವುದು ಕಷ್ಟಕರ. ಹೀಗಾಗಿ ಸಂಘದ ಚುನಾವಣೆ ನಡೆಸಲು ಚುನಾವಣಾಧಿಕಾರಿ ನೇಮಕ ಮಾಡಬೇಕು,’ ಎಂದು ಹಲವರು ಕೋರಿದ್ದರು.

ಮಹತ್ವವಾದ ಬೈಲಾ ತಿದ್ದುಪಡಿಯನ್ನು ಆಡಳಿತಾಧಿಕಾರಿಯವರ ಅವಧಿಯಲ್ಲಿ ಸಂಘಗಳ ಕಾಯ್ದೆ ಅಡಿಯಲ್ಲಿ ಮಾಡುವುದು ಸೂಕ್ತವೇ ಎಂಬ ಬಗ್ಗೆ ಸರ್ಕಾರದ ನಿರ್ದೇಶನ ಕೋರಿದ್ದ ಇಲಾಖೆ, ಅಂತಿಮವಾಗಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ಸಂಘಗಳ ಬೈಲಾ ತಿದ್ದುಪಡಿ ಮಾಡುವ ಅವಕಾಶವಿಲ್ಲ ಎಂದು ನಿಲುವು ತಾಳಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts