ಬೆಂಗಳೂರು: ಕೇರಳ, ಆಂಧ್ರಪ್ರದೇಶ ತಮಿಳುನಾಡು, ತೆಲಂಗಾಣ ಸೇರಿದಂತೆ ಹೊರ ರಾಜ್ಯಗಳಲ್ಲಿರುವ ಪ್ರಿಯದರ್ಶಿನಿ ಮಳಿಗೆಗಳನ್ನು ಮಾರಾಟ ಮಾಡಲು ಹೊರಟಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಈ ಸಂಬಂಧ ಸಚಿವ ಸಂಪುಟದ ಅನುಮೋದನೆಯನ್ನೇ ಪಡೆದಿಲ್ಲ ಎಂಬ ಸಂಗತಿ ಇದೀಗ ಹೊರಬಿದ್ದಿದೆ.
ನಿಗಮದ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಅನುಮೋದನೆ ಪಡೆದಿದ್ದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಹೊರರಾಜ್ಯಗಳಲ್ಲಿರುವ ಪ್ರಿಯದರ್ಶಿನಿ ಮಾರಾಟ ಮಳಿಗೆಗಳನ್ನು ಮಾರಾಟ ಮಾಡಲು ಸಚಿವ ಸಂಪುಟದ ಅನುಮೋದನೆ ಪಡೆಯದಿರುವುದಕ್ಕೆ ಆರ್ಥಿಕ ಇಲಾಖೆ ತಕರಾರು ಎತ್ತಿದೆ. ಈ ಕುರಿತು ಮಾಹಿತಿ ಕೋರಿರುವ ಆರ್ಥಿಕ ಇಲಾಖೆಯು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಪತ್ರವನ್ನೂ ಬರೆದಿದೆ. ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಯೊಂದು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಅಧೀನದಲ್ಲಿ ಬರುವ ನಿಗಮ, ಮಂಡಳಿ ಮತ್ತು ಸಂಸ್ಥೆಗಳಿಗೆ ಮಾರಾಟ ಅಥವಾ ಬಾಡಿಗೆ ಆಧಾರದ ಮೇಲೆ ಪಡೆಯಲು ಪತ್ರ ಬರೆದಿದೆ. ಆದರೆ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂದು ಕಂಡು ಬರುತ್ತಿದೆ. ಅಂದ ಮೇಲೆ ಇದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂಬ ಉದ್ದೇಶವೇ,’ ಎಂದು ಆರ್ಥಿಕ ಇಲಾಖೆಯು ವಾಣಿಜ್ಯ ಕೈಗಾರಿಕೆ ಇಲಾಖೆಯನ್ನು ಪ್ರಶ್ನಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಆರ್ಥಿಕ ಇಲಾಖೆ ಕೋರಿರುವ ಮಾಹಿತಿ ಏನು?
ಇತ್ತೀಚೆಗಷ್ಟೇ ಹಲಸೂರಿನಲ್ಲಿದ್ದ ನಿಗಮದ ಕೇಂದ್ರ ಕಚೇರಿಯನ್ನು ಜಂಗಲ್ ಲಾಡ್ಜಸ್‌ಗೆ ಮಾರಾಟ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಈ ಆಸ್ತಿ ಮಾರಾಟ ಮಾಡಲಾಯಿತೇ, ಅದರಿಂದ ಬ್ಯಾಂಕಿನ ಸಾಲದ ಪೈಕಿ ಎಷ್ಟು ತೀರುವಳಿಯಾಗಿದೆ?
ಕೇರಳ, ಆಂಧ್ರಪ್ರದೇಶ,ತಮಿಳುನಾಡು, ತೆಲಂಗಾಣ ಅಧೀನದಲ್ಲಿ ಬರುವ ನಿಗಮ, ಮಂಡಳಿ, ಸಂಸ್ಥೆಗಳಿಗೆ ಮಾರಾಟ ಅಥವಾ ಬಾಡಿಗೆ ಆಧಾರದ ಮೇಲೆ ಪಡೆಯಲು ಕೋರಿ ಪತ್ರ ಬರೆಯಲಾಗಿದ್ದು, ಯಾವುದೇ ಪತ್ರತ್ಯುತ್ತರ ಬಂದಿಲ್ಲ ಎಂದು ಕಂಡು ಬರುತ್ತಿದೆ. ಅಂದ ಮೇಲೆ ಇದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂಬ ಉದ್ದೇಶವೇ? ಹಾಗಿದ್ದರೆ ಆಯಾ ಪ್ರದೇಶಗಳಲ್ಲಿನ ಸರ್ಕಾರಿ ಮೌಲ್ಯವೆಷ್ಟು, ಮಾರುಕಟ್ಟೆ ಮೌಲ್ಯವೆಷ್ಟು, ಎಷ್ಟು ಆದಾಯವನ್ನು ಈ ಮಾರಾಟದಿಂದ ನಿರೀಕ್ಷಿಸಬಹುದು?
ಈ ಮಳಿಗೆಗಳನ್ನು ಸರ್ಕಾರದ ನೆರವಿನೊಂದಿಗೆ ಖರೀದಿಸಲಾಗಿದೆಯೇ ಎಂಬ ಬಗ್ಗೆ ವಿವರಗಳನ್ನು ಒದಗಿಸುವುದು ನಿಗಮದ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಅನುಮೋದನೆ ಪಡೆದಿದ್ದರಿಂದ ಈ ಮಾರಾಟಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಲ್ಲವೇ? ಎಂದು ಪ್ರಶ್ನಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಕೈಮಗ್ಗ ಅಭಿವೃದ್ಧಿ ನಿಗಮದ ಪ್ರಿಯದರ್ಶಿನಿ ವಾಣಿಜ್ಯ ಮಳಿಗೆಗಳು ನಷ್ಟ ಹೊಂದಿವೆ ಎಂಬ ನೆಪವನ್ನು ಮುಂದಿರಿಸಿಕೊಂಡು ಒಂದೊಂದೇ ಮಳಿಗೆಗಳ ಬಾಗಿಲನ್ನು ಮುಚ್ಚುತ್ತಿದೆ. ಕೈಮಗ್ಗ ನೇಕಾರರು ಮತ್ತು ಗ್ರಾಹಕರ ನಡುವಿನ ಸಂಪರ್ಕದ ಕೊಂಡಿಗಳು ಕಳಚುತ್ತಿವೆ. ಇದಕ್ಕೆ ಸರ್ಕಾರದ ತಪ್ಪು ನೀತಿಯೇ ಕಾರಣ ಎನ್ನಲಾಗಿದೆ. ಇನ್ನು, ಪ್ರಿಯದರ್ಶಿನಿ ಮಳಿಗೆಗಳನ್ನು ಪುನಶ್ಚೇತನ ಮಾಡಬೇಕು ಎಂಬ ಬೇಡಿಕೆಯನ್ನು ಸರ್ಕಾರ ಈಡೇರಿಸಿಲ್ಲ ಎಂದು ತಿಳಿದು ಬಂದಿದೆ.
ಕೈಮಗ್ಗ ಉತ್ಪನ್ನಗಳ ಮಾರಾಟದ ವಾಣಿಜ್ಯ ಉದ್ದೇಶದೊಂದಿಗೆ 1983ರಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮ ಪ್ರಿಯದರ್ಶಿನಿ ಮಳಿಗೆಗಳನ್ನು ಪ್ರಾರಂಭಿಸಿತ್ತು. ರಾಜ್ಯದ ಕೈಮಗ್ಗ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದ್ದ ಕಾರಣ ಹೊರ ರಾಜ್ಯಗಳಲ್ಲಿಯೂ ಪ್ರಿಯದರ್ಶಿನಿ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದವು. ದೆಹಲಿ, ಚೆನ್ನೈ, ಕೋಯಮತ್ತೂರು, ಪುಣೆ ಸೇರಿದಂತೆ ರಾಜ್ಯದ ವಿವಿಧೆಡೆ 80ಕ್ಕೂ ಹೆಚ್ಚು ಮಳಿಗೆಗಳಿದ್ದವು. ಕೈಮಗ್ಗದ ಸೀರೆಗಳು, ಜಮ್ಖಾನಾ, ಟಾವೆಲ್, ಬೆಡ್‌ಶೀಟ್ ಸೇರಿದಂತೆ ಹಲವು ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿತ್ತು.
ಹಾಗೆಯೇ ನೇಕಾರರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಕೈಮಗ್ಗ ಅಭಿವೃದ್ಧಿ ನಿಗಮ, ಪ್ರಿಯದರ್ಶಿನಿ ಮಳಿಗೆಗಳ ಮೂಲಕ ಮಾಡುತ್ತಿತ್ತು. ಹೊರ ರಾಜ್ಯದಲ್ಲಿನ ಎಲ್ಲಾ ಮಳಿಗೆಗಳು ಬಾಗಿಲು ಮುಚ್ಚಿವೆ. ರಾಜ್ಯದಲ್ಲಿನ ಮಳಿಗೆಗಳ ಸಂಖ್ಯೆ 25ಕ್ಕೆ ಕುಸಿದಿದೆ. ನಷ್ಟದ ಕಾರಣ ನೀಡಿ ಮಳಿಗೆಗಳನ್ನು ಮುಚ್ಚಲಾಗುತ್ತಿದೆ.
ಪ್ರಿಯದರ್ಶಿನಿ ಮಳಿಗೆಗಳು ಪ್ರತಿವರ್ಷ ಅಂದಾಜು 40 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದ್ದವು. ಈಗ ಅದರ ಅರ್ಧದಷ್ಟು ಗಳಿಸಲೂ ಶಕ್ತವಾಗಿಲ್ಲ. ಸರ್ಕಾರದ ತಪ್ಪು ನೀತಿಗಳು, ವಿದ್ಯುತ್ ಚಾಲಿತ ಯಂತ್ರಗಳ ಭರಾಟೆ ಸಾಂಪ್ರದಾಯಿಕ ಉದ್ಯೋಗವನ್ನು ಹೊಸಕಿ ಹಾಕಿದೆ. ಕೈಮಗ್ಗ ಅಭಿವೃದ್ಧಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯವೂ ಮಳಿಗೆಗಳು ಮುಚ್ಚಲು ಕಾರಣ ಎಂಬ ಆರೋಪವೂ ಕೇಳಿ ಬಂದಿದೆ.
ಸರ್ಕಾರದ 2020-21ನೇ ಸಾಲಿನ ಆಯವ್ಯಯದಲ್ಲಿ ಕೈಮಗ್ಗ ನಿಗಮದ ಜಿ.ಐ. ಟ್ಯಾಗ್ ಹೊಂದಿರುವ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ 2 ಕೋಟಿ ರೂಪಾಯಿ ಮೀಸಲಿರಿಸಿತ್ತು. ಆನೇಕಲ್, ತಿಪಟೂರು, ಕೊಳ್ಳೆಗಾಲ, ಕೊಲ್ಲೂರು, ಮೊಳಕಾಲ್ಮೂರು, ಚಿಂತಾಮಣಿಗಳಲ್ಲಿ ರೇಷ್ಮೆ ಕೈಮಗ್ಗಗಳು ಇವೆ. ವಿವಿಧ ರೇಷ್ಮೆ ಉತ್ಪನ್ನಗಳನ್ನು ಪ್ರಿಯದರ್ಶಿನಿ ಮಳಿಗೆಗಳ ಮೂಲಕ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿತ್ತು.
ನಿಗಮದಲ್ಲಿ 9 ಸಾವಿರ ನೊಂದಾಯಿತ ನೇಕಾರರಿದ್ದು 6 ಸಾವಿರ ಜನರು ಕಾರ್ಯ ನಿರತರಾಗಿದ್ದಾರೆ. ಬನಹಟ್ಟಿ, ರಬಕವಿ, ರಾಮದುರ್ಗ, ಇಳಕಲ್, ರಾಣೆಬೆನ್ನೂರು, ಕಲಬುರ್ಗಿ, ಗದಗ, ಬೆಟಗೇರಿ, ಮೊಳಕಾಲ್ಮೂರು, ಮಂಗಳೂರು ಸೇರಿದಂತೆ ವಿವಿದೆಡೆ 5, 183 ಕೈಮಗ್ಗಗಳು ಕಾರ್ಯನಿರತವಾಗಿವೆ.