Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ವಿಜಯೇಂದ್ರ ಮತ್ತಿತರ ವಿರುದ್ಧ ಎಫ್‌ಐಆರ್‌ ದಾಖಲಿಸದ ಇನ್ಸ್‌ಪೆಕ್ಟರ್‌ಗೆ ನೋಟೀಸ್‌ ಜಾರಿ

ಬೆಂಗಳೂರು; ಬಹುಮಹಡಿ ಸಮುಚ್ಛಯ ನಿರ್ಮಾಣ ಕಂಪನಿಯಿಂದ 7.40 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ, ಶಶಿಧರ್‌ ಮರಡಿ ಸೇರಿದಂತೆ ಇತರ ಸಹಚರರ ವಿರುದ್ಧ ಎಫ್‌ಐಆರ್‌ ದಾಖಲಿಸದೆಯೇ ದೂರನ್ನು ಮುಕ್ತಾಯಗೊಳಿಸಿದ್ದ ಶೇಷಾದ್ರಿಪುರಂ ಠಾಣೆ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಅವರಿಗೆ 65ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ನೋಟೀಸ್‌ ಜಾರಿಗೊಳಿಸಿದೆ.

ಎಫ್‌ಐಆರ್‌ ದಾಖಲಿಸದೆಯೇ ದೂರನ್ನು ಮುಕ್ತಾಯಗೊಳಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಶೇಷಾದ್ರಿಪುರಂ ಇನ್ಸ್‌ಪೆಕ್ಟರ್‌ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್‌ 2021ರ ಮಾರ್ಚ್‌ 3ರಂದು ದಾಖಲಿಸಿದ್ದ ಕ್ರಿಮಿನಲ್‌ ರಿವಿಷನ್‌ ಪಿಟಿಷನ್‌ (ಸಿಆರ್‌ಎಲ್‌ಆರ್‌ಪಿ 107/2021) ಆಧರಿಸಿ ನ್ಯಾಯಾಲಯವು ನೋಟೀಸ್‌ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆಯನ್ನು 2021ರ ಏಪ್ರಿಲ್‌ 7ಕ್ಕೆ ಮುಂದೂಡಿದೆ.

32ನೇ ಎಸಿಎಂಎಂ ನ್ಯಾಯಾಲಯವು (ಪಿಸಿಆರ್‌ ನಂ 11321/2020) 2020ರ ನವೆಂಬರ್ 25ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಜನಾಧಿಕಾರ ಸಂಘರ್ಷ ಪರಿಷತ್‌, ಕ್ರಿಮಿನಲ್‌ ರಿವಿಷನ್‌ ಪಿಟಿಷನ್‌ ಸಲ್ಲಿಸಿದೆ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಧಿಕಾರ ಸಂಘರ್ಷ ಪರಿಷತ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಮತ್ತಿತರರ ವಿರುದ್ಧ ಪರಿಷತ್‌ ದೂರು ದಾಖಲಿಸಿತ್ತು.

ಆದರೆ ಈ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸಬೇಕಿದ್ದ ಶೇಷಾದ್ರಿಪುರಂ ಠಾಣೆ ಇನ್ಸ್‌ಪೆಕ್ಟರ್‌ ಎಂ ಎನ್‌ ಕೃಷ್ಣಮೂರ್ತಿ ಅವರು ದೂರನ್ನು ಏಕಾಏಕೀ ಮುಕ್ತಾಯಗೊಳಿಸಿದ್ದರು. ಹೀಗಾಗಿ ಜನಾಧಿಕಾರ ಸಂಘರ್ಷ ಪರಿಷತ್‌, ಠಾಣೆ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಅವರ ವಿರುದ್ಧ ಖಾಸಗಿ ದೂರು ದಾಖಲಿಸಿತ್ತು. ಆದರೆ ಈ ದೂರನ್ನು 32ನೇ ಎಸಿಎಂಎಂ ನ್ಯಾಯಾಲಯವು ನವೆಂಬರ್‌ 25ರಂದು ವಜಾಗೊಳಿಸಿತ್ತು. ಈ ಆದೇಶವನ್ನು ಬದಿಗಿರಿಸಬೇಕೆಂದು ಕೋರಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಕ್ರಿಮಿನಲ್‌ ರಿವಿಷನ್‌ ಪಿಟಿಷನ್‌ ದಾಖಲಿಸಿದೆ ಎಂದು ತಿಳಿದು ಬಂದಿದೆ.

ಸುಲಿಗೆ ಮತ್ತು ಕ್ರಿಮಿನಲ್‌ ಸಂಚು ಆರೋಪದಡಿಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌, ಶೇಷಾದ್ರಿಪುರಂ ಠಾಣಾಧಿಕಾರಿಗೆ 2020ರ ಸೆಪ್ಟಂಬರ್‌ 25ರಂದು ಲಿಖಿತ ದೂರು ಸಲ್ಲಿಸಿತ್ತು. ಠಾಣೆಗೆ ದೂರು ಸಲ್ಲಿಕೆಯಾದ 24 ಗಂಟೆಯೊಳಗೆ ಆರೋಪಿತರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಲಲಿತಾಕುಮಾರಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಆದರೆ ವಿಜಯೇಂದ್ರ ಪ್ರಕರಣದಲ್ಲಿ ಶೇಷಾದ್ರಿಪುರಂ ಪೊಲೀಸ್‌ ಠಾಣಾಧಿಕಾರಿಗಳು ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದರು.

ಪ್ರಕರಣದ ಹಿನ್ನಲೆ

ವಸತಿ ಸಮುಚ್ಛಯ ನಿರ್ಮಾಣದ ರಾಮಲಿಂಗಂ ಕನ್ಸ್‌ಟ್ರಕ್ಷನ್ಸ್‌ ಕಂಪನಿಯಿಂದ ನಗದು ಮತ್ತು ಆರ್‌ಟಿಜಿಎಸ್‌ ಮೂಲಕ ಸುಮಾರು 20 ಕೋಟಿ ರು.ಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ದೂರಿನಲ್ಲಿ ವಿವರಿಸಿದೆ.

ಬಿ ವೈ ವಿಜಯೇಂದ್ರ ಮತ್ತು ಶಶಿಧರ್‌ ಮರಡಿ ಎಂಬುವರ ಮೇಲೆ ಐಪಿಸಿ 384, ಸೆಕ್ಷನ್‌ 34 ಮತ್ತು 120(ಬಿ) ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ಆಗ್ರಹಿಸಿದೆ. ಖಾಸಗಿ ಮಾಧ್ಯಮವೊಂದು ಇತ್ತೀಚೆಗೆ ಮಾಡಿದ್ದ ವರದಿ ಆಧರಿಸಿ ಈ ದೂರನ್ನು ಸಲ್ಲಿಸಿತ್ತು.

ಶಶಿಧರ್‌ ಮರಡಿ ಅವರು ಹೊಂದಿರುವ ಬ್ಯಾಂಕ್‌ ಖಾತೆಗೆ 7.4 ಕೋಟಿ ರು.ಗಳನ್ನು ನಿರ್ಮಾಣ ಕಂಪನಿ ಆರ್‌ಟಿಜಿಎಸ್‌ ಮೂಲಕ ಸಂದಾಯ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಅದೇ ರೀತಿ ವಾಟ್ಸಾಪ್‌ ಸಂಭಾಷಣೆಯಲ್ಲಿ ನಮೂದಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಷಾದ್ರಿಪುರಂ ಶಾಖೆಯಲ್ಲಿ ಶಶಿಧರ್‌ ಮರಡಿ ಹೊಂದಿರುವ ಉಳಿತಾಯ ಖಾತೆಗೆ ಜನಾಧಿಕಾರ ಸಂಘರ್ಷ ಪರಿಷತ್‌ 100 ರು. ನಗದನ್ನು ಪಾವತಿಸಿ ಖಾತೆಯನ್ನು ಖಚಿತಪಡಿಸಿಕೊಂಡಿರುವುದನ್ನೂ ದೂರಿನಲ್ಲಿ ಉಲ್ಲೇಖಿಸಿತ್ತು.

ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಬಳಸಿಕೊಂಡು ನಿರ್ಮಾಣ ಕಂಪನಿಯಿಂದ ಲಂಚ ಪಡೆದಿರುವುದು ತಿಳಿದಿದ್ದರೂ ಸಹ ಆ ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದಿರುವುದು ಬಿ ವೈ ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಣ ಕಂಪನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ಪರಿಷತ್‌ ವಿವರಿಸಿತ್ತು.

ವಾಟ್ಸಾಪ್‌ ಚಾಟ್‌ಗಳಲ್ಲಿ ಶಶಿಧರ್‌ ಮರಡಿ ಎಂಬುವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್‌ಟಿಜಿಎಸ್‌ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತದೆ ಎಂದು ದೂರಿನಲ್ಲಿ ಹೇಳಲಾಗಿತ್ತು.

Share:

Leave a Reply

Your email address will not be published. Required fields are marked *