ಸೋಲಾರ್‌ ಹಗರಣದ ಮತ್ತೊಂದು ಮುಖ;ಗುಣಮಟ್ಟ ಪರಿಶೀಲಿಸದೆಯೇ 618 ಕೋಟಿ ಪಾವತಿ

ಬೆಂಗಳೂರು; ಉಗ್ರಾಣ ನಿಗಮಗಳ ಮೇಲ್ಛಾವಣಿಗಳ ಮೇಲೆ ಸೋಲಾರ್‌ ಅಳವಡಿಸುವ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಗಳ ಪರಿಮಾಣ ಮತ್ತು ಗುಣಮಟ್ಟ ಪರಿಶೀಲಿಸದೆಯೇ ಗುತ್ತಿಗೆದಾರರಿಗೆ 618 ಕೋಟಿ ಕೋಟಿ ಪಾವತಿಸಿರುವುದು ಇದೀಗ ಬಹಿರಂಗವಾಗಿದೆ.

ಈ ಯೋಜನೆಯ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರು ಸಲ್ಲಿಸಿದ್ದ 34 ಬಿಲ್‌ಗಳ ಪೈಕಿ 24 ಬಿಲ್‌ಗಳಿಗೆ ಶೇ. 80ರಷ್ಟು ಹಣ ಪಾವತಿಸಿಲಾಗಿದೆ. ಕಾಮಗಾರಿಗಳ ಪರಿಮಾಣ ಮತ್ತು ಗುಣಮಟ್ಟ ಪರಿಶೀಲಿಸದೆಯೇ ಪಾವತಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂಬಂಧ ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

24 ಬಿಲ್‌ಗಳಿಗೆ ಹಣ ಪಾವತಿಸಿರುವುದಷ್ಟೇ ಅಲ್ಲ, ಉಳಿದ ಶೇ.20ರಷ್ಟು ಮೊತ್ತದಲ್ಲಿನ ಎಲ್ಲಾ ಬಿಲ್‌ಗಳಿಗೂ ಶೇ.80ರಷ್ಟು ಪಾವತಿಯನ್ನು ಸಹ ಮಾಡಲಾಗಿದೆ. ಇಲ್ಲಿಯೂ ಸಹ ಪರಿಮಾಣ ಮತ್ತು ಗುಣಮಟ್ಟ ಪರಿಶೀಲಿಸದೆಯೇ ಪಾವತಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಹಣ ಪಾವತಿಸಿದ ನಂತರ ಪರಿಮಾಣ ಮತ್ತು ಗುಣಮಟ್ಟವನ್ನು ಪಿಎಂಸಿಗಳಿಂದ ವರದಿ ಪಡೆದು 25ರಿಂದ 28ರವರೆಗಿನ 4 ಬಿಲ್‌ಗಳ ಮೊತ್ತದಲ್ಲಿ 21.15 ಕೋಟಿ ರು. ಪಾವತಿಸಲಾಗಿದೆ.

ಅದೇ ರೀತಿ ಒಟ್ಟಾರೆ 28 ಬಿಲ್‌ಗಳಿಗೆ ಸಂಬಂಧಿಸಿದಂತೆ ಒಟ್ಟು 612.18 ಕೋಟಿ ರು. ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಹಣ ಪಾವತಿಸುವ ಮೊದಲು ಪರಿಮಾಣ ಮತ್ತು ಗುಣಮಟ್ಟ ಪರಿಶೀಲಿಸದೆಯೇ ಇಷ್ಟೊಂದು ದೊಡ್ಡ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿಸಿರುವುದೇ ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಇನ್ನು, ಹೆಚ್ಚುವರಿ/ಬದಲಾಯಿಸಿರುವ ಕಾಮಗಾರಿಗಳನ್ನು ಪೂರೈಸಿರುವ ಗುತ್ತಿಗೆದಾರರು ಹಣ ಪಾವತಿ ಸಂಬಂಧ ಕೌಂಟರ್ ಕ್ಲೈಮ್‌ಗಳನ್ನು ಮಧ್ಯಸ್ಥಿಕೆದಾರರಿಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆದಾರರ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ನಿಗಮಕ್ಕೆ ಬಂದೊದಗಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಹಾಗೆಯೇ 600ರಿಂದ 800 ಕೋಟಿ ರು.ವರೆಗಿನ ಕಾಮಗಾರಿಗಳು ನಡೆಯುವ ಉಗ್ರಾಣ ನಿಗಮದಲ್ಲಿ ಪಿಡಬ್ಲ್ಯೂಡಿಯಿಂದ ನಿಯೋಜನೆ ಮೇರೆಗೆ ಒಬ್ಬ ಕಾರ್ಯನಿರ್ವಾಹಕ ಇಂಜಿನಿಯರ್‌, ನಿಗಮದ ಸಹಾಯಕ ಕಾರ್ಯಪಾಲಕ ಇಂಜಿಯರ್‌, ಮತ್ತು 5 ಸಹಾಯಕ ಇಂಜಿನಿಯರ್‌ಗಳಷ್ಟೇ ಇದ್ದಾರೆ. ಹೀಗಾಗಿ ಕಾಮಗಾರಿಗಳ ನಿರ್ವಹಣೆ ಕಷ್ಟಸಾಧ್ಯ ಎಂದು ತಾಂತ್ರಿಕ ಸಮಿತಿ ಸರ್ಕಾರಕ್ಕೆ ತಿಳಿಸಿದೆ.

ಬಹುತೇಕ ಕಾಮಗಾರಿಗಳು ವಿವಿಧ ಹಂತದಲ್ಲಿ ಇನ್ನೂ ಬಾಕಿ ಇದೆ. ಉಳಿದ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸದಿದ್ದರೆ ಕಾಮಗಾರಿಗಳಿಗೆ ಈಗಾಗಲೇ ವಿನಿಯೋಗಿಸಿದ ಮೊತ್ತ ನಿರರ್ಥಕವಾಗಲಿದೆ. ಅಲ್ಲದೆ ಉಗ್ರಾಣಗಳ ನಿರ್ಮಾಣ ಉದ್ದೇಶವೇ ಈಡೇರದು. ಈ ಎಲ್ಲಾ ಹಿನ್ನೆಲೆಯಲ್ಲಿ ಹೆಚ್ಚುವರಿ ಮೊತ್ತ ಒದಗಿಸಬೇಕು ಎಂದು ಸಮರ್ಥನೆ ಮಾಡಿಕೊಂಡಿರುವ ನಿಗಮವು ಪರಿಷ್ಕೃತ ಅಂದಾಜಿಗೆ ಸರ್ಕಾರದ ಮಂಜೂರಾತಿ ಪಡೆಯುವುದು ಸೂಕ್ತ ಎಂದು ಸಮಿತಿ ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts