‘ಸೋಲಾರ್‌’ ಹಗರಣ; ಅಧಿಕಾರಿಗಳ ಲೋಪಕ್ಕೆ 56.72 ಕೋಟಿ ಹೆಚ್ಚುವರಿ ಹೊರೆ

ಬೆಂಗಳೂರು; ಉಗ್ರಾಣಗಳ ಛಾವಣಿ ಮೇಲೆ ಸೋಲಾರ್‌ ಅಳವಡಿಸಿ ಸೌರ ವಿದ್ಯುತ್‌ ಶಕ್ತಿ ಮಾರಾಟ ಮಾಡುವ ಯೋಜನೆಗೆ ಸಂಬಂಧಿಸಿದಂತೆ ಮೂಲ ಅಂದಾಜನ್ನು ಸರಿಯಾಗಿ ತಯಾರಿಸದ ಕಾರಣ ಬೊಕ್ಕಸಕ್ಕೆ ಅಂದಾಜು 56.72 ಕೋಟಿ ಹೆಚ್ಚುವರಿ ಹೊರೆ ಬಿದ್ದಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ. ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ಕೋಟ್ಯಂತರ ರುಪಾಯಿ ಗುತ್ತಿಗೆದಾರರ ಖಜಾನೆ ಭರ್ತಿ ಮಾಡಿದಂತಾಗಿದೆ.

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಯೋಜನೆ ಅನುಷ್ಠಾನದಲ್ಲಿ ಹಲವು ಅಕ್ರಮಗಳು ನಡೆದಿರುವುದು ಮತ್ತು ಇದರಲ್ಲಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆರ್ಥಿಕ ಇಲಾಖೆಯು ಹಲವು ಮಾಹಿತಿಗಳನ್ನು ಕೇಳಿದೆ. ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಡಬ್ಲ್ಯೂಐಎಫ್‌, ಎನ್‌ಡಬ್ಲ್ಯೂಎಸ್‌, ಆರ್‌ಐಡಿಎಫ್‌ ಯೋಜನೆ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಕೋರಿದ್ದ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಹೆಚ್ಚುವರಿ ಹೊರೆಯಾಗಿರುವ ಪ್ರಕರಣವು ಬೆಳಕಿಗೆ ಬಂದಿದೆ. ಆದರೆ ಈ ಪ್ರಕರಣ ಕುರಿತು ಸಹಕಾರ ಸಚಿವ ಎಸ್‌ ಟಿ ಸೋಮಶೇಖರ್‌ ಅವರ ಗಮನದಲ್ಲಿದ್ದರೂ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಈವರೆವಿಗೂ ಕಠಿಣ ಕ್ರಮ ಜರುಗಿಸಿಲ್ಲ ಎಂದು ತಿಳಿದು ಬಂದಿದೆ.

ಹೆಚ್ಚುವರಿ ಹೊರೆಗೆ ಅಧಿಕಾರಿಗಳು ಸಮರ್ಥನೆ ನೀಡಿದ್ದಾರಾದರೂ ಸರಿಯಾದ ಅಂದಾಜನ್ನು ತಯಾರಿಸಿದ್ದರೆ 56.72 ಕೋಟಿ ರು.ಗಳ ಗುತ್ತಿಗೆ ಹೆಚ್ಚುವರಿ ಹೊರೆಯನ್ನು ತಪ್ಪಿಸಬಹುದಾಗಿತ್ತು ಎಂದು 2021ರ ಜನವರಿ 19ರಂದು ನಡೆದಿದ್ದ ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿಯ 104ನೇ ಸಭೆಯು ಅಭಿಪ್ರಾಯಿಸಿದೆ.

ವೆಚ್ಚದಲ್ಲಿ ಏರಿಕೆಯಾಗಿದ್ಹೇಗೆ?

ಉಗ್ರಾಣಗಳ ತಾರಸಿ ಮೇಲೆ ಸೋಲಾರ್‌ ಅಳವಡಿಸಿ ಉತ್ಪಾದಿಸುವ ಸೌರ ವಿದ್ಯುತ್‌ ಶಕ್ತಿಯನ್ನು ಮಾರಾಟ ಮಾಡುವ ಯೋಜನೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ 2015ರ ಅಕ್ಟೋಬರ್‌ 8ರಂದು ಉಗ್ರಾಣ ನಿಗಮದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆರಂಭದಲ್ಲಿ 724.81 ಕೋಟಿ ರು. ಇದ್ದ ಯೋಜನಾ ವೆಚ್ಚವು ಆ ನಂತರ ಇದು 867.37 ಕೋಟಿ ರು.ಗೇರಿತ್ತು. ಮೂಲ ವೆಚ್ಚವು ಏರಿಕೆಯಾಗಿದ್ದರ ಹಿಂದೆ ಅಧಿಕಾರಿಗಳು ತಯಾರಿಸಿದ್ದ ಅಂದಾಜು ಸರಿಯಾಗಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಈ ಸಂಬಂಧ ಎಲೆಕ್ಟ್ರಿಕ್‌ ಕಂಪನಿಗಳೊಂದಿಗೆ 2015ರ ಡಿಸೆಂಬರ್‌31ರಂದು ಕರಾರನ್ನು ಮಾಡಿಕೊಂಡಿತ್ತು. ತಾರಸಿ ಮೆಲೆ ಅಳವಡಿಸುವ ಸೋಲಾರ್‌ ಪ್ಯಾನೆಲ್‌ಗಳಿಗೆ ತೂಕವನ್ನು ತಡೆಯುವ ಟ್ರಸ್ಟ್‌ಗಳನ್ನು ಮರು ವಿನ್ಯಾಸಿಸಲಾಗಿತ್ತು. ಇದರಿಂದಾಗಿ ಹೆಚ್ಚುವರಿ ಸ್ಟ್ರೆಕ್ಚರಲ್‌ ಕಬ್ಬಿಣ ತೂಕ ಯೋಜನಾ ವರದಿಯಲ್ಲಿ ಅಳವಡಿಸಿದ್ದ ತೂಕ 15,547 ಟನ್‌ಗೆ ಬದಲಿಗೆ 19,985 ಟನ್‌ಗೆ ಏರಿಕೆಯಾಗಿತ್ತು. ಹೀಗಾಗಿ 61 ಕೋಟಿ ರು.ಹೆಚ್ಚುವರಿಯಾಗಿತ್ತು ಎಂಬ ಅಂಶ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಮೂಲ ಯೋಜನಾ ವರದಿಯಲ್ಲಿ ನೆಲಹಾಸಿಗೆ, ವಾಕ್ಯೂಮ್‌ ಡೀ ವಾಟರಿಂಗ್‌ ಫ್ಲೋರಿಂಗ್‌ಗೆ ಪ್ರಸ್ತಾಪಿಸಲಾಗಿತ್ತು. ಆದರೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ ಶೇಖರಿಸುವ ಧಾನ್ಯಗಳ ತೂಕವನ್ನು ತಡೆಯಲು ಗ್ರಾನ್ಯೂಲಾರ್‌ ಸಬ್‌ ಬೇಸ್‌ ನ್ನು ಅಳವಡಿಸಲಾಗಿತ್ತು. ಇದರೊಂದಿಗೆ ರಸ್ತೆಗಳ ಅಡಿಯಲ್ಲೂ ಸಹ ಅಳವಡಿಸಲಾಗಿತ್ತು. ಇದರಿಂದಾಗಿ 18 ಕೋಟಿ ಹೆಚ್ಚುವರಿಯಾಗಿತ್ತು ಎಂದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಹಾಗೆಯೇ ಮೂಲ ಯೋಜನಾ ವರದಿಯಲ್ಲಿ ಆವರಣದ ಕಾಂಕ್ರಿಟ್‌ ರಸ್ತೆಗಳ ಅಗಲವನ್ನು 3.75 ಮೀಟರ್‌ನಿಂದ 7.00 ಮೀ ವರೆಗೆ ಹಾಗೂ 7.00 ಮೀಟರ್‌ ರಸ್ತೆಯನ್ನು 15.00 ಮೀಟರ್‌ವರೆಗೆ ಅಗಲಗೊಳಿಸಲಾಗಿತ್ತು. ಇದರಿಂದಾಗಿ ಕಾಂಕ್ರಿಟ್‌ ಅಂಶವೊಂದರಲ್ಲೇ 35 ಕೋಟಿ ಹೆಚ್ಚುವರಿಯಾಗಿತ್ತು. ಇದಲ್ಲದೆ ಮೆಶ್‌ ಫ್ಲಾಸ್ಟರಿಂಗ್‌ ಮಣ್ಣಿನ ಏರಿ ಇತರೆ ಅಂಶಗಳುಲ್ಲಿಯೂ ಸುಮಾರು 15 ಕೋಟಿ ರು.ಹೆಚ್ಚುವರಿಯಾಗಿತ್ತು.

ಅದೇ ರೀತಿ ಅನುಮೋದಿಸಿದ್ದ ಗುತ್ತಿಗೆ ದರವು ಶೇ.7.67ರಷ್ಟು ಹೆಚ್ಚುವರಿಯಾಗಿತ್ತು. ಹೀಗಾಗಿ ಒಟ್ಟಾರೆ 56.72 ಕೋಟಿ ರು. ಹೆಚ್ಚುವರಿಯಾಗಿತ್ತು. ಅಧಿಕಾರಿಗಳು ಸರಿಯಾಗಿ ‘ಅಂದಾಜನ್ನು ತಯಾರಿಸದೇ ಇದ್ದದ್ದರಿಂದಾಗಿಯೇ 724.81 ಕೋಟಿ ರು.ಮೊತ್ತವು 862.37 ಕೋಟಿ ರು.ಗೇರಿತ್ತು. ಈ ಎಲ್ಲಾ ಹೆಚ್ಚುವರಿಗಳನ್ನು ಮೂಲ ಅಂದಾಜನ್ನು ತಯಾರಿಸಿದಾಗ ಅಳವಡಿಸಿದ್ದಲ್ಲಿ ಗುತ್ತಿಗೆ ಹೆಚ್ಚುವರಿ ಹೊರೆಯನ್ನು ತಪ್ಪಿಸಬಹುದಾಗಿತ್ತು,’ ಎಂದು ತಾಂತ್ರಿಕ ಸಲಹಾ ಸಮಿತಿಯು ಅಭಿಪ್ರಾಯ ವ್ಯಕ್ತಪಡಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts