ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ‘ಮೀಸಲಾತಿ’ ಖಾತರಿ; ನೀತಿ ನಿಯಮ ರೂಪಿಸದ ಸರ್ಕಾರ

ಬೆಂಗಳೂರು; ರಾಜ್ಯದ ಖಾಸಗಿ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಖಾತರಿಪಡಿಸಲು ರಾಜ್ಯದ ಕಾರ್ಮಿಕ ಇಲಾಖೆಯು ಈವರೆವಿಗೂ ಯಾವುದೇ ನೀತಿ ನಿಯಮಗಳನ್ನು ರೂಪಿಸಿಲ್ಲ.

ಹಿಂದಿ ಹೇರಿಕೆ ವಿರುದ್ಧ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವುದರ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರ ಮೀಸಲಾತಿಯನ್ನು ಖಾತರಿಪಡಿಸದಿರುವ ವಿಚಾರ ಮುನ್ನೆಲೆಗೆ ಬಂದಿದೆ.

ಮೂಡಬಿದರೆಯ ಉಮಾನಾಥ ಎ ಕೋಟ್ಯಾನ್‌ ಅವರು ವಿಧಾನಸಭೆಯಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಅವರು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಖಾತರಿಪಡಿಸಲು ಇಲಾಖೆಯಿಂದ ಯಾವುದೇ ನೀತಿ ನಿಯಮಗಳನ್ನು ರೂಪಿಸಿಲ್ಲ ಎಂದು ಮಾಹಿತಿ ಒದಗಿಸಿದ್ದಾರೆ.

ರಾಜ್ಯದಲ್ಲಿ ಖಾಸಗಿ ವಲಯದಲ್ಲಿ ಬರುವ ಸಂಸ್ಥೆಗಳಲ್ಲಿ 50ಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಳ್ಳುವ ಕೈಗಾರಿಕೆ ಸಂಸ್ಥೆಗಳಲ್ಲಿ ಉದ್ಯೋಗ ಒದಗಿಸುವಲ್ಲಿ ಆದ್ಯತೆ ಕಲ್ಪಿಸಿಕೊಡಲು 1961ರ ಕರ್ನಾಟಕ ಔದ್ಯೋಗಿಕ ಉದ್ಯೋಗ ನಿಯಮಗಳಿಗೆ ತಿದ್ದುಪಡಿ ಮಾಡಿ ಅವಕಾಶ ಕಲ್ಪಿಸಲಾಗಿದೆ. ಆದರೆ ಕನ್ನಡಗಿರಿಗೆ ಮೀಸಲಾತಿ ಖಾತರಿಪಡಿಸುವ ಸಂಬಂಧ ಈವರೆಗಿನ ಎಲ್ಲಾ ಸರ್ಕಾರಗಳು ನೀತಿ, ನಿಯಮಗಳನ್ನೇಕೆ ರೂಪಿಸಿಲ್ಲ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ಡಾ ಸರೋಜಿನಿ ಮಹಿಷಿ ಸಮಿತಿ ವರದಿಯನ್ವಯ 50ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ ಬೃಹತ್‌, ಮಧ್ಯಮ, ಸಣ್ಣ ಕೈಗಾರಿಕೆ ಘಟಕಗಳಲ್ಲಿ ಎ ಮತ್ತು ಬಿ ವರ್ಗಗಳಲ್ಲಿ ಕ್ರಮವಾಗಿ ಶೇ. 65 ಮತ್ತು ಶೇ.80 ಹಾಗೂ ಸಿ, ಡಿ ವರ್ಗಗಳಲ್ಲಿ ಶೇ.100ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ/ಸ್ಥಳೀಯರಿಗೆ ನಿಗದಿಪಡಿಸಲು ಷರತ್ತನ್ನು ವಿಧಿಸಲಾಗುತ್ತಿದೆ. ಆದರೆ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಖಾತರಿಪಡಿಸುವ ಸಂಬಂಧ ಯಾವುದೇ ನೀತಿ ನಿಯಮಗಳನ್ನೂ ರೂಪಿಸದಿರುವುದು ಅಚ್ಚರಿ ಮೂಡಿಸಿದೆ.

ಕರ್ನಾಟಕ ಮಾತ್ರ “ತೋಟದಪ್ಪನ ಛತ್ರ” ವಾಗಿ ಹೋಗಿದೆ. ಇಲ್ಲಿ ಜನಪ್ರತಿನಿಧಿಗಳಿಗೆ ‘ಕನ್ನಡಪ್ರಜ್ಞೆ’ ಇಲ್ಲ. ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ. ಕರ್ನಾಟಕದಲ್ಲಿ ಕನ್ನಡಿಗರೇ ಎರಡನೇ ದರ್ಜೆ ಪ್ರಜೆಗಳಂತೆ ಬದುಕಬೇಕಾದ ದಾರುಣ ದಿನಗಳಿಗೆ ಇವೆಲ್ಲ ಮುನ್ನುಡಿ ಬರೆದಂತಿದೆ.

-ದಿನೇಶ್ ಕುಮಾರ್ ಎಸ್.ಸಿ

ಕರ್ನಾಟಕ ರಕ್ಷಣಾ ವೇದಿಕೆ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ.

ಕೈಗಾರಿಕೆ ನೀತಿಯನ್ವಯ ಸರ್ಕಾರದಿಂದ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ಪಡೆಯುವ ಕೈಗಾರಿಕೆ ಘಟಕಗಳು ‘ಡಿ’ ವರ್ಗದ ಉದ್ಯೋಗಗಳಲ್ಲಿ ಶೇ.100ರಷ್ಟು ಹಾಗೂ ಘಟಕದ ಒಟ್ಟಾರೆ ಉದ್ಯೋಗಗಳಲ್ಲಿ ಶೇ.70ರಷ್ಟನ್ನು ಕನ್ನಡಿಗರಿಗೆ/ಸ್ಥಳೀಯರಿಗೆ ನೀಡುವ ನಿಬಂಧನೆಯೂ ಇದೆ. ಅದರಂತೆ ಉದ್ಯೋಗಗಳನ್ನು ನೀಡಿದ ಘಟಕಗಳಿಗೆ ಮಾತ್ರ ಅರ್ಹ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನೂ ಮಂಜೂರು ಮಾಡಲಾಗುತ್ತಿದೆ. ಇಷ್ಟಾಗಿಯೂ ಕನ್ನಡಿಗರಿಗೆ ಮೀಸಲಾತಿಯನ್ನು ಖಾತರಿಪಡಿಸುವ ಸಂಬಂಧ ನೀತಿ ನಿಯಮಗಳನ್ನೇಕೆ ಈವರೆವಿಗೂ ರೂಪಿಸಿಲ್ಲ, ಅಲ್ಲದೆ ಮುಂದಿನ ದಿನಗಳಲ್ಲಿ ನೀತಿ, ನಿಯಮಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಿದೆಯೆ ಎಂಬ ಬಗ್ಗೆಯೂ ಯಾವ ಮಾಹಿತಿಯನ್ನೂ ಉತ್ತರದಲ್ಲಿ ಒದಗಿಸಿಲ್ಲ.

ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂದು ಡಾ.ಸರೋಜಿನಿ ಮಹಿಷಿ ವರದಿ ಹೇಳುತ್ತದೆ. ಆದರೆ ಅದು ಜಾರಿಯಾಗಲೇ ಇಲ್ಲ. ಹಿಂದಿನ ಸರ್ಕಾರ ಮಹಿಷಿ‌ ವರದಿಯನ್ನು ಪರಿಷ್ಕರಿಸಿ ಕಾನೂನು ಜಾರಿಮಾಡುವುದಾಗಿ ಹೇಳಿತು. ಆದರೆ ಅದೂ ಕೂಡ ಆಗಲಿಲ್ಲ. ಈಗ ಇರುವ ಸರ್ಕಾರ ಕನ್ನಡಿಗರಿಗೆ ಮೀಸಲಾತಿ ನೀಡುವ ಸಂಬಂಧ ಗೊತ್ತು ಗುರಿ ಇಟ್ಟುಕೊಂಡಂತಿಲ್ಲ. ಒರಿಸ್ಸಾ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಸ್ಥಳೀಯರಿಗೆ ಉದ್ಯೋಗ ಕಡ್ಡಾಯಗೊಳಿಸುವ ಕಾನೂನುಗಳನ್ನು ರೂಪಿಸಿಕೊಂಡಿವೆ. ಅಲ್ಲಿನ ಖಾಸಗಿ ಕಂಪೆನಿಗಳು ಇವುಗಳನ್ನು ಪಾಲಿಸಲೇಬೇಕು.ಅಲ್ಲಿ ಇಂಥ ಆದೇಶಗಳನ್ನು ಖಾಸಗಿ ಸಂಸ್ಥೆಗಳು ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದೂ ಇಲ್ಲ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ದಿನೇಶ್‌ಕುಮಾರ್‌.

the fil favicon

SUPPORT THE FILE

Latest News

Related Posts