ಸೇಫ್‌ ಸಿಟಿ ಯೋಜನೆ; ಅಕ್ರಮದ ತನಿಖೆ ನಡೆಸದೆಯೇ ಟೆಂಡರ್‌ ರದ್ದುಗೊಳಿಸಿದ ಸರ್ಕಾರ?

ಬೆಂಗಳೂರು; ನಿರ್ಭಯಾ ಅನುದಾನದಡಿಯಲ್ಲಿ ಸೇಫ್‌ ಸಿಟಿ ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರ ಇದೀಗ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.

ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಿ ರೂಪ ಮೌದ್ಗಿಲ್‌ ಅವರು 2020ರ ಡಿಸೆಂಬರ್‌ 28ರಂದು ನೀಡಿದ್ದ ವರದಿ ಆಧರಿಸಿ ಟೆಂಡರ್‌ನ್ನು ರದ್ದುಗೊಳಿಸಿದೆ ಎಂದು ಗೊತ್ತಾಗಿದೆ. ಟೆಂಡರ್‌ ರದ್ದಾಗಿರುವ ಬಗ್ಗೆ ಸರ್ಕಾರದ ಆದೇಶ ಇನ್ನೂ ಹೊರಬಿದ್ದಿಲ್ಲ.

ಕೆಟಿಪಿಪಿ ಕಾಯ್ದೆ ಮತ್ತು 2017ರಲ್ಲಿ ಭಾರತ ಸರ್ಕಾರ ಹೊರಡಿಸಿದ್ದ ಸಾರ್ವಜನಿಕ ಸಂಗ್ರಹಣೆಗಳ ಕುರಿತಾದ ಆದೇಶವನ್ನೂ ಉಲ್ಲಂಘಿಸಿರುವುದು ಸೇರಿದಂತೆ ಟೆಂಡರ್‌ ಪ್ರಕ್ರಿಯೆಯಲ್ಲಿ ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಗೃಹ ಕಾರ್ಯದರ್ಶಿಯಾಗಿದ್ದ ರೂಪ ಮೌದ್ಗಿಲ್‌ ಅವರು ವರದಿಯಲ್ಲಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡಲಾಗಿದ್ದ ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಭಾರತ ಸರ್ಕಾರಕ್ಕೆ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರವು ಯಾವುದೇ ವಿಚಾರಣೆಯನ್ನಾಗಲೀ ಕ್ರಮವನ್ನಾಗಲೀ ಕೈಗೊಂಡಿಲ್ಲ ಎಂಬುದು ರೂಪ ಅವರು ನೀಡಿರುವ ವರದಿಯಿಂದ ಗೊತ್ತಾಗಿದೆ.

ಪ್ರಧಾನಿ ಕಚೇರಿ ಮೆಟ್ಟಿಲೇರಿತ್ತು ಟೆಂಡರ್‌ ಪ್ರಕರಣ

ಈ ಯೋಜನೆಗೆ ಆರಂಭದಲ್ಲಿ ಪೊಲೀಸ್‌ ಇಲಾಖೆ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಮತ್ತು ಕಂಪನಿಯನ್ನು ಅಯ್ಕೆ ಮಾಡಿದ್ದ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಪ್ರಧಾನಿ ಕಚೇರಿಗೆ 2020ರ ಜೂನ್‌ 29ರಂದು ದೂರು ಸಲ್ಲಿಸಿತ್ತು.

ಟೆಂಡರ್‌ನಲ್ಲಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌, ಲಾರ್ಸನ್‌ ಅಂಡ್‌ ಟೋಬ್ರೋ (ಎಲ್‌ ಅಂಡ್‌ ಟಿ), ಮಾಟ್ರಿಕ್ಸ್‌ ಸೆಕ್ಯುರಿಟಿ ಅಂಡ್‌ ಸರ್ವೇಲೆಯನ್ಸ್‌ ಪ್ರೈವೈಟ್‌ ಲಿಮಿಟೆಡ್‌, ಎನ್‌ಸಿಸಿ ಲಿಮಿಟೆಡ್‌ ಭಾಗವಹಿಸಿದ್ದವು.

ಹಿತಾಸಕ್ತಿ ಸಂಘರ್ಷ ಆರೋಪ

ಟೆಂಡರ್‌ನಲ್ಲಿ ಭಾಗವಹಿಸಿದ್ದ ಮ್ಯಾಟ್ರಿಕ್ಸ್‌ ಮತ್ತು ಎನ್‌ಸಿಸಿ ನಿರ್ದೇಶಕರೊಬ್ಬರು ಎರಡೂ ಕಂಪನಿಯಲ್ಲಿ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಷೇರು ಹೊಂದಿದ್ದರು. ಹೀಗಾಗಿ ಎರಡೂ ಕಂಪನಿಗಳಿಗೆ ಅವಕಾಶಕೊಟ್ಟಲ್ಲಿ ಇದು ಹಿತಾಸಕ್ತಿ ಸಂಘರ್ಷವಾಗಲಿದೆ. ಹಾಗೆಯೇ ಆರ್‌ಎಫ್‌ಪಿ ಷರತ್ತುಗಳನ್ನು ನೇರವಾಗಿ ಉಲ್ಲಂಘಿಸಿದೆ ಎಂದು ಬಿಇಎಲ್‌ ಕಂಪನಿ ಪ್ರಧಾನಿಗೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿತ್ತು.

ಅನರ್ಹಗೊಂಡಿದ್ದ ಎನ್‌ಸಿಸಿ

ಆರ್‌ಎಫ್‌ಪಿ ಪ್ರಕಾರ ದಾಖಲೆಗಳನ್ನು ನೀಡದ ಕಾರಣ ಟೆಂಡರ್‌ ಸಮಿತಿಯು ಎನ್‌ಸಿಸಿ ಲಿಮಿಟೆಡ್‌ನ್ನು ಅನರ್ಹಗೊಳಿಸಿತ್ತು. ಹೀಗಾಗಿ ಮ್ಯಾಟ್ರಿಕ್ಸ್‌ ಕಂಪನಿಯನ್ನು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಚೀನಾ ಉತ್ಪನ್ನ ನಮೂದಿಸಿದ್ದ ಮ್ಯಾಟ್ರಿಕ್ಸ್‌

ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದ ಮ್ಯಾಟ್ರಿಕ್ಸ್‌ ಕಂಪನಿಯು ಚೀನಾ ತಯಾರಿಸಿರುವ ಕ್ಯಾಮರಾ, ಸರ್ವರ್‌, ಸಂಗ್ರಹಣಾ ಕೋಶ ಉಪಕರಣಗಳ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ನಮೂದಿಸಿತ್ತು. ಟೆಂಡರ್‌ ಮೌಲ್ಯಮಾಪನ ಸಮಿತಿ ಮುಂದೆ ಇದೇ ಉಪಕರಣಗಳ ಮಾದರಿಯನ್ನು ಪ್ರದರ್ಶಿಸಿತ್ತು.

ಚೀನಾ ತಯಾರಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿದಲ್ಲಿ ಸಾರ್ವಜನಿಕ ಭದ್ರತೆ, ಸುರಕ್ಷತೆಗೆ ಧಕ್ಕೆ ಆಗಲಿದೆ ಎಂದು ದೂರಿದ್ದ ಬಿಇಎಲ್‌, ನಿವಾಸಿಗಳ ದತ್ತಾಂಶವೂ ಸೋರಿಕೆಯಾಗಲಿದೆ. ಹಾಗೆಯೇ ಖಾಸಗಿತನದ ಮಹತ್ವ ಕಳೆದುಕೊಳ್ಳಲಿದೆ. ಹೀಗಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವ ಮೂಲಕ ಟೆಂಡರ್‌ ಪ್ರಾಧಿಕಾರವು ಮ್ಯಾಟ್ರಿಕ್ಸ್‌ ಕಂಪನಿಯನ್ನು ಅನರ್ಹಗೊಳಿಸಲು ಟೆಂಡರ್‌ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ದೂರಿನಲ್ಲಿ ಕೋರಿತ್ತು.

ಆದರೆ ಇದನ್ನು ಮರೆಮಾಚಿದ್ದ ಅಧಿಕಾರಿಗಳ ಗುಂಪೊಂದು 612 ಕೋಟಿ ಮೊತ್ತದ ಟೆಂಡರ್‌ ಪ್ರಕ್ರಿಯೆಯನ್ನು ಸಚಿವ ಸಂಪುಟದ ಗಮನಕ್ಕೂ ತಂದಿರಲಿಲ್ಲ ಎನ್ನಲಾಗಿದೆ. ಇಡೀ ಟೆಂಡರ್‌ ಪ್ರಕ್ರಿಯೆಯನ್ನು ಹಿರಿಯ ಐಪಿಎಸ್‌ ಅಧಿಕಾರಿಗಳ ಹಂತದಲ್ಲೇ ನಡೆಸಲು ಪೂರ್ಣಗೊಳಿಸಲು ಮುಂದಾಗಿತ್ತು.

ಈ ಹಿಂದೆ ಇದೇ ಯೋಜನೆಗೆ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಪ್ರಧಾನಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ನೀಡಿದ್ದರಿಂದ ಮರು ಟೆಂಡರ್‌ ಪ್ರಕ್ರಿಯೆ ನಡೆದಿದೆ. ಯೋಜನೆ ಮೊತ್ತ 10 ಕೋಟಿ ರು. ಮೀರಿರುವುದರಿಂದ ಸಚಿವ ಸಂಪುಟಕ್ಕೆ ಟೆಂಡರ್‌ ಪ್ರಕ್ರಿಯೆಗಳನ್ನು ಮಂಡಿಸಬೇಕು. ಈ ಕುರಿತು ರಾಜ್ಯ ಸರ್ಕಾರವು ಈ ಹಿಂದೆ ಆದೇಶ ಹೊರಡಿಸಿತ್ತು.

ಆದರೆ ಟೆಂಡರ್‌ ಆಹ್ವಾನ ಸಮಿತಿಯ ಅಧ್ಯಕ್ಷ ಹೆಚ್ಚುವರಿ ಪೊಲೀಸ್‌ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರು ಸಚಿವ ಸಂಪುಟಕ್ಕೆ ಮಂಡಿಸದೆಯೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದರು.

ಅಲ್ಲದೆ ಐಎಂಎ ವಂಚನೆ ಪ್ರಕರಣದಲ್ಲಿ ಗುರುತರ ಆರೋಪ ಮತ್ತು ಸಿಬಿಐ ವಿಚಾರಣೆಗೊಳಪಟ್ಟಿರುವ ಹೇಮಂತ್‌ ನಿಂಬಾಳ್ಕರ್‌ ಅವರನ್ನೇ ಟೆಂಡರ್‌ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ಮುಂದುವರೆಸಿರುವುದಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳ ವಲಯದಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಪ್ರಕರಣದ ಕುರಿತು ಗೃಹ ಕಾರ್ಯದರ್ಶಿಯಾಗಿದ್ದ ರೂಪ ಅವರು ಕಂಪನಿಯ ಪ್ರತಿನಿಧಿ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ಹೇಮಂತ್‌ ನಿಂಬಾಳ್ಕರ್‌ ಅವರು ಮುಖ್ಯ ಕಾರ್ಯದರ್ಶಿಗೆ ಬರೆದಿದ್ದ ಪತ್ರವು ಸೋರಿಕೆಯಾಗಿತ್ತು. ಈ ಪತ್ರದ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಪ್ರಕರಣವು ಮುನ್ನೆಲೆಗೆ ಬಂದಿತ್ತಲ್ಲದೆ ಈ ಅಧಿಕಾರಿಗಳಿಬ್ಬರ ಆರೋಪ-ಪ್ರತ್ಯಾರೋಪವು ಬಿಜೆಪಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿತ್ತು. ಟೆಂಡರ್‌ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರು ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ರೂಪ ಅವರು ಮಾಡಿದ್ದ ಆರೋಪಗಳನ್ನು ಅಲ್ಲಗಳೆದಿದ್ದರು.

ಅಕ್ರಮಗಳನ್ನು ಹೊರಗೆಡವಿದ್ದ ರೂಪ ಮೌದ್ಗಿಲ್‌ ಅವರನ್ನು ಗೃಹ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿದ್ದ ಸರ್ಕಾರ, ಹೇಮಂತ್‌ ನಿಂಬಾಳ್ಕರ್‌ ಅವರನ್ನೂ ಎತ್ತಂಗಡಿ ಮಾಡಿದ್ದನ್ನು ಸ್ಮರಿಸಬಹುದು.

ಟೆಂಡರ್‌ ಪ್ರಕ್ರಿಯೆಯನ್ನು ತನಿಖೆಗೊಳಪಡಿಸುವುದು ಮತ್ತು ಸರ್ಕಾರದ ಹಣವನ್ನು ಸಂರಕ್ಷಣೆ ಮಾಡುವ ಸಂಬಂಧ ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ಬಾಬು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮನವಿ ಸಲ್ಲಿಸಿದ್ದರು. ಇದನ್ನಾಧರಿಸಿ ಸಮಗ್ರ ವರದಿ ಸಲ್ಲಿಸಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಒಳಾಡಳಿತ ಇಲಾಖೆಗೆ ಸೂಚಿಸಿತ್ತು. ಆದರೆ ಇಲಾಖೆ ಈವರೆವಿಗೂ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts