ಬೆಂಗಳೂರು: ಚಿತ್ರದುರ್ಗ ಮುರುಘಾ ಮಠದ ಕೋಟ್ಯಂತರ ಹಣ ಹಾಗೂ ಭಾರಿ ಪ್ರಮಾಣದ ಸ್ಥಿರಾಸ್ತಿ ದುರುಪಯೋಗ ಆರೋಪದ ಅಸಲು ದಾವೆಗೆ ಸಂಬಂಧಿಸಿದಂತೆ ಬೃಹನ್ಮಠದ ಪೀಠಾಧಿಪತಿ ಮುರುಘಾ ಶರಣರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಮಧ್ಯಂತರ ಅರ್ಜಿ ಸೇರ್ಪಡೆ ಮೇಲ್ಮನವಿ ಕುರಿತಂತೆ ವಿಜಯಕುಮಾರ್ ಎಸ್.ದುರ್ಗದ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ (ಫೆ.23) ವಿಚಾರಣೆ ನಡೆಸಿತು.
ರಿಟ್ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿರುವ ನ್ಯಾಯಪೀಠ, ಪ್ರತಿವಾದಿ ಮುರುಘಾ ಶರಣರು ಮತ್ತು ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಸೇರಿದಂತೆ ಏಳು ಜನ ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ.
ಶರಣರ ವಿರುದ್ಧದ ಆರೋಪಗಳೇನು?
* ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿಯಾಗಿರುವ ಮುರುಘಾ ಶರಣರು ಶ್ರೀಮಠದ ಪದ್ಧತಿ, ಸಂಪ್ರದಾಯ ಹಾಗೂ ಧಾರ್ಮಿಕ ಕ್ರಿಯೆಗಳ ಅನೂಚಾನ ಪಾಲನೆ ಉಲ್ಲಂಘಿಸಿದ್ದಾರೆ.
* ಮಠದ ಹಣ, ಸ್ಥಿರಾಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾ ಅವಿವೇಕದ ನಿರ್ವಹಣೆ ಮಾಡುತ್ತಿದ್ದಾರೆ.
* ಪೀಠಾಧಿಪತಿಯಾಗಿ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ನಡೆಯುತ್ತಿದ್ದಾರೆ.
ಆದ್ದರಿಂದ, “ಮುರುಘಾ ಶರಣರು ಚಿತ್ರದುರ್ಗ ಮುರುಘಾ ಮಠದ ಪೀಠಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುವುದನ್ನು ಈ ಕೂಡಲೇ ಸ್ಥಗಿತಗೊಳಿಸಲು ಆದೇಶಿಸಬೇಕು” ಎಂಬುದು ಅರ್ಜಿದಾರರ ಅಸಲು ದಾವೆಯ ಕೋರಿಕೆ.
“ಬೆಂಗಳೂರು ನಗರದ ಸಿಸಿಎಚ್ ಕೋರ್ಟ್-56ರಲ್ಲಿ ಶರಣರ ವಿರುದ್ಧದ ಈ ಆರೋಪಗಳಿಗೆ ಸಂಬಂಧಿಸಿದಂತೆ ಯೋಜನಾ ದಾವೆ (ಸ್ಕೀಮ್ ಸೂಟ್) ದಾಖಲಾಗಿದ್ದು ಈ ಅಸಲು ದಾವೆಯಲ್ಲಿ ನನ್ನನ್ನೂ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಲು ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು” ಎಂದು ಅರ್ಜಿದಾರ ವಿಜಯಕುಮಾರ್ ಕೋರಿದ್ದರು.
ಈ ಅರ್ಜಿಯನ್ನು ಅಧೀನ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ವಿಜಯಕುಮಾರ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.