ಸಹಾಯಧನ ಲೂಟಿ; ಉಪಕರಣ ದಾಸ್ತಾನು ಪಡೆಯದೇ ಏಜೆನ್ಸಿಗಳಿಗೆ ಕೋಟ್ಯಂತರ ರು. ಪಾವತಿ

ಬೆಂಗಳೂರು: ಕೃಷಿ ಇಲಾಖೆಯ ಹಲವು ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಕೋಟ್ಯಂತರ ರುಪಾಯಿ ಮೊತ್ತದ ಸಹಾಯಧವನ್ನು ದುರ್ಬಳಕೆ ಮಾಡಿಕೊಂಡಿರುವ ಕೃಷಿ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಖಜಾನೆಯಿಂದಲೇ ಸೆಳೆದು ಜೇಬು ತುಂಬಿಸಿಕೊಂಡಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ರೈತರಿಂದ ಬೇಡಿಕೆ ಇರದಿದ್ದರೂ ಮತ್ತು ಅರ್ಜಿ ಸಲ್ಲಿಸದಿದ್ದರೂ ಕೃಷಿ ಯಂತ್ರೋಪಕರಣಗಳನ್ನು ಪೂರೈಕೆ ಮಾಡಿಕೊಳ್ಳಲಾಗಿದೆ ಎಂದು ಸುಳ್ಳು ಮಾಹಿತಿ ನಮೂಸದಿಸಲಾಗಿದೆ. ಅಲ್ಲದೆ ಉಪಕರಣಗಳನ್ನು ದಾಸ್ತಾನಿಗೆ ಪಡೆಯದಿದ್ದರೂ ಡಿ ಸಿ ಬಿಲ್‌ಗಳಲ್ಲಿ ದಾಸ್ತಾನುಗಳನ್ನು ವಿತರಿಸಲಾಗಿದೆ ಎಂದು ಸುಳ್ಳು ಮಾಹಿತಿ ನಮೂದಿಸಿ ಕೋಟ್ಯಂತರ ರು.ಮೊತ್ತದ ಸಹಾಯಧನವನ್ನು ಲೂಟಿಗೈಯಲಾಗಿದೆ. ಆದರೂ ಕೃಷಿ ಇಲಾಖೆಯ ಸಚಿವ ಬಿ ಸಿ ಪಾಟೀಲ್‌ ಅವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಡೀಸೆಲ್‌ ಪಂಪ್‌ಸೆಟ್‌, ಪವರ್‌ ಸ್ಪ್ರೇಯರ್‌, ಬ್ಯಾಟರಿ ಚಾಲಿತ ಬ್ಯಾಕ್‌ಪ್ಯಾಕ್‌ ಸ್ಪ್ರೇಯರ್‌ ಸೇರಿದಂತೆ ಇನ್ನಿತರೆ ಕೃಷಿ ಯಂತ್ರೋಪಕರಣಗಳನ್ನು ದಾಸ್ತಾನು ಪಡೆಯದಿದ್ದರೂ ಯಂತ್ರೋಪಕರಣಗಳು ಪೂರೈಕೆಯಾಗಿವೆ ಎಂದು ಡಿ ಸಿ ಬಿಲ್‌ಗಳನ್ನು ನಮೂದಿಸಿ ಖಜಾನೆಯಿಂದ ಕೋಟ್ಯಂತರ ರುಪಾಯಿಗಳನ್ನು ಸೆಳೆಯಲಾಗಿದೆ. ಹಾಗೆಯೇ ಯಂತ್ರೋಪಕರಣಗಳ ಸರಬರಾಜುದಾರರ ಹೆಸರಿನಲ್ಲಿ ಚೆಕ್‌ಗಳನ್ನು ಪಡೆದು ಅಕ್ರಮ ಎಸಗಿರುವುದಲ್ಲದೆ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯಲ್ಲದೆ ಆರ್ಥಿಕ ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇಂತಹ ಪ್ರಕರಣವೊಂದು ಪತ್ತೆಯಾಗಿದೆ. ಇದೊಂದೇ ತಾಲೂಕಿನಲ್ಲಿ 2017-18ನೇ ಸಾಲಿನಲ್ಲಿ 81,27,748 ಲಕ್ಷ ರು. ದುರ್ಬಳಕೆ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಅಮರೇಶ ನಂದಿಹಾಳ ಎಂಬುವರು ಕೃಷಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

2020ರ ಡಿಸೆಂಬರ್‌ 30ರಂದು ದೂರು ಸಲ್ಲಿಕೆಯಾಗಿದ್ದರೂ ಸಚಿವ ಬಿ ಸಿ ಪಾಟೀಲ್‌ ಅವರು ಈ ಕುರಿತು ಯಾವುದೇ ಕ್ರಮ ವಹಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಏಜೆನ್ಸಿಗಳು ಮತ್ತು ಭ್ರಷ್ಟ ಅಧಿಕಾರಿಗಳಿಗೆ ಸಚಿವರೇ ರಕ್ಷಣೆ ಒದಗಿಸಿದ್ದಾರೆ ಎಂಬ ಬಲವಾದ ಆರೋಪವೂ ಕೇಳಿ ಬಂದಿದೆ.

ಸಿಂಧನೂರು ತಾಲೂಕಿನ ಕೃಷಿ ಸಹಾಯಕ ನಿರ್ದೇಶಕ ಟಿ ಸಿ ಜಯಪ್ರಕಾಶ್‌ ಎಂಬುವರು ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪಕ್ಕೆ ಗುರಿಯಾಗಿದ್ದಾರೆ. 2017-18ನೇ ಸಾಲಿನಲ್ಲಿ ಸಿಂಧನೂರಿನ ಸಾಯಿ ಅಗ್ರಿಟೆಕ್‌, ಬಳ್ಳಾರಿಯ ಕರ್ನಾಟಕ ಆಗ್ರೋ ಏಜೆನ್ಸೀಸ್‌, ಸಿರಗುಪ್ಪದ ಮೌನೇಶ್ವರ ಇಂಜಿನಿಯರಿಂಗ್‌ ಏಜೆನ್ಸೀಸ್‌, ಬಾಗಲಕೋಟೆಯ ಸಂಗಮ್‌ ಆಗ್ರೋಟೆಕ್‌ ಏಜೆನ್ಸೀಸ್‌ ಮೂಲಕ ಕೃಷಿ ಯಂತ್ರೋಪಕರಣಗಳನ್ನು ಪೂರೈಕೆ ಮಾಡಿಕೊಳ್ಳಲಾಗಿದೆ ಎಂದು ಬಿಲ್‌ಗಳನ್ನು ಸಲ್ಲಿಸಿ ಖಜಾನೆಯಿಂದ ಹಣವನ್ನು ಸೆಳೆದಿದ್ದಾರೆ ಎಂಬ ಆರೋಪಕ್ಕೆ ಪೂರಕವಾಗಿ ದೂರುದಾರ ಅಮರೇಶ್‌ ಅವರು ಜಿಎಸ್‌ಟಿ ಬಿಲ್‌ಗಳನ್ನು ಸಲ್ಲಿಸಿದ್ದಾರೆ.

59.94 ಲಕ್ಷ ರು. ರು. ಮೊತ್ತದ ಬ್ಯಾಟರಿ ಚಾಲಿತ ಬ್ಯಾಕ್‌ ಪ್ಯಾಕ್‌ ಸ್ಪ್ರೇಯರ್‌, ಸ್ಪ್ರೇಯರ್‌, ಮತ್ತು ಅಗ್ರಿಮೇಟ್‌ ಸ್ಟ್ರೋಕ್‌ ಸ್ಪ್ರೇಯರ್‌ಗಳನ್ನು ಸಾಯಿ ಅಗ್ರಿಟೆಕ್‌ನಿಂದ ಖರೀದಿಸಲಾಗಿದೆ ಎಂದು ಟಿ ಸಿ ಜಯಪ್ರಕಾಶ್‌ ಅವರ ಹೆಸರಿನಲ್ಲಿ 2017 ಮತ್ತು 2018ರ ವಿವಿಧ ತಿಂಗಳುಗಳಲ್ಲಿ ಜಿಎಸ್‌ಟಿ ಬಿಲ್‌ಗಳನ್ನು ಪಡೆಯಲಾಗಿದೆ. ಈ ಮೊತ್ತದಲ್ಲಿ ಕೃಷಿ ಯಂತ್ರೋಪಕರಣಗಳ ಖರೀದಿ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೀಡಿರುವ 27 ಲಕ್ಷ ರು. ಸಹಾಯಧನವೂ ಒಳಗೊಂಡಿದೆ (ಡಿಸಿಬಿ ಸಂಖ್ಯೆ; 1157/2017-18ರಿಂಧ 1161/2017-18) ಎಂಬ ಸಂಗತಿ ದೂರಿನಿಂದ ತಿಳಿದು ಬಂದಿದೆ.

‘2017-18 ಸಾಲಿನ ಬಿಲ್‌ಗಳನ್ನು ಎನ್‌ಎಫ್‌ಎಸ್‌ಎಂ(ಸಾಮಾನ್ಯ) ಹೈಟೆಕ್‌, ಯೋಜನೆಗಳಲ್ಲಿ ತಯಾರಿಸಿ ಈ ಬಿಲ್‌ಗಳಿಗೆ ಅಂದಿನ ಉಪ ಕೃಷಿ ನಿರ್ದೇಶಕ ಎಸ್‌ ಎಸ್‌ ಅಬೀದ್‌ ಅವರಿಂದ ಡಿ ಸಿ ಬಿಲ್‌ಗಳನ್ನು ಮತ್ತು ಜಿಎಸ್‌ಟಿ ಬಿಲ್‌ಗಳನ್ನು ಅನುಮೋದಿಸಿ ಹಾಗೆಯೇ ಮೇಲುರುಜುಗಳನ್ನು ಪಡೆದು ಖಜಾನೆಗೆ ಸಲ್ಲಿಸಲಾಗಿದೆ. ಬ್ಯಾಟರಿ ಚಾಲಿತ ಸ್ಪ್ರೇಯರ್‌ಗಳ ಮ್ತು ಅಗ್ರಿಮೇಟ್‌ 2 ಸ್ಟ್ರೋಕ್‌ ಸ್ಪ್ರೇಯರ್‌ಗಳ ದಾಸ್ತಾನು ಪಡೆಯದೇ ಇದ್ದರೂ ಯಂತ್ರೋಪಕರಣಗಳನ್ನು ಪೂರೈಕೆ ಮಾಡಲಾಗಿದೆ ಎಂದು ಡಿ ಸಿ ಬಿಲ್‌ಗಳನ್ನು ನಮೂದಿಸಿ ಖಜಾನೆಯಿಂದ ಹಣ ಸೆಳೆದು ಸಾಯಿ ಅಗ್ರಿಟೆಕ್‌ ಹೆಸರಿನಲ್ಲಿ ಚೆಕ್‌ಗಳನ್ನು ಪಡೆಯುವ ಮೂಲಕ ಅಕ್ರಮವಾಗಿ ಸರ್ಕಾರದ ಹಣ ದುರ್ಬಳಕೆ ಮಾಡಿ ಕಾರ್ಯವಿಧಾನಗಳ ಪತನಕ್ಕೆ ಕಾರಣವಾಗಿ ಆರ್ಥಿಕ ಅಪರಾಧವೆಸಗಿದ್ದಾರೆ,’ ಎಂದು ದೂರುದಾರ ದೂರಿರುವುದು ಗೊತ್ತಾಗಿದೆ.

ಇನ್ನು, ಬಳ್ಳಾರಿಯ ಕರ್ನಾಟಕ ಆಗ್ರೋ ಏಜೆನ್ಸೀಸ್‌ನಿಂದ ಬ್ಯಾಟರಿ ಚಾಲಿತ ಸ್ಪ್ರೇಯರ್‌ ಳನ್ನು ಮಾದರಿ ರಹಿತ ಬ್ಯಾಟರಿ ಚಾಲಿತ ಬ್ಯಾಕ್‌ಪ್ಯಾಕ್‌ ಸ್ಪ್ರೇಯರ್‌ಗಳ ಜಿಎಸ್‌ಟಿ ಬಿಲ್‌ಗಳನ್ನು ಸಹಾಯಕ ನಿರ್ದೇಶಕರ ಹೆಸರಿಗೆ ಪಡೆಯಲಾಗಿದೆ. ಇಲಾಖೆಯ ಸಹಾಯಧನ 20.04 ಲಕ್ಷ ರು.ಗಳನ್ನು (ಬಿಲ್‌ ಸಂಖ್ಯೆ; 270/2017-18ರಿಂದ 273/2017-18ವರೆಗೆ ) ಡಿ ಸಿ ಬಿಲ್‌ಗಳನ್ನು ಕೇಂದ್ರ ಪುರಸ್ಕೃತ ಯೋಜನೆ ಎನ್‌ಎಫ್‌ಎಸ್‌ಎಂ ಯೋಜನೆಯಲ್ಲಿ ತಯಾರಿಸಿ ಜಿಎಸ್‌ಟಿ ಬಿಲ್‌ಗಳನ್ನು ಅನುಮೋದಿಸಿ ಮೇಲುರುಜು ಪಡೆದಿರುವುದು ದೂರಿನಿಂದ ತಿಳಿದು ಬಂದಿದೆ.

ಇಲ್ಲಿಯೂ ಸಹ ಬ್ಯಾಟರಿ ಬ್ಯಾಕ್‌ಪ್ಯಾಕ್‌ ಚಾಲಿತ ಸ್ಪ್ರೇಯರ್‌ಗಳು ದಾಸ್ತಾನು ಪಡೆಯದೇ ಇದ್ದರೂ ಡಿ ಸಿ ಬಿಲ್‌ಗಳಲ್ಲಿ ದಾಸ್ತಾನು ವಿತರಿಸಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ನಮೂದಿಸುವ ಮೂಲಕ ಖಜಾನೆಯಿಂದ ಹಣವನ್ನು ಸೆಳೆಯಲಾಗಿದೆ. ಈ ರೀತಿ ಕರ್ನಾಟಕ ಆಗ್ರೋ ಏಜೆನ್ಸೀಸ್‌ ಹೆಸರಿನಲ್ಲಿ ಸಹಾಯಧನದ ಚೆಕ್‌ ಪಡೆದು ನಗದೀಕರಿಸಲು ನೀಡಿರುವುದು ಗೊತ್ತಾಗಿದೆ.

ಅದೇ ರೀತಿ ಬಾಗಲಕೋಟೆಯ ಸಂಗಮ್‌ ಆಗ್ರೋಟೆಕ್‌ನಿಂದ ಬ್ಯಾಟರಿ ಚಾಲಿತ ಬ್ಯಾಕ್‌ಪ್ಯಾಕ್‌ ಸ್ಪ್ರೇಯರ್‌ಗಳ ಜಿಎಸ್‌ಟಿ ಬಿಲ್‌ಗಳನ್ನು ಪಡೆದು ಒಟ್ಟು ಒಟ್ಟು 19.60 ಲಕ್ಷ ರು., ಡೀಸೆಲ್‌ ಪಂಪ್‌ ಪಡೆಯಲಾಗಿದೆ ಎಂದು ಸಿರಗುಪ್ಪದ ಮೌನೇಶ್ವರ ಇಂಜಿನಿಯರಿಂಗ್‌ ಏಜೆನ್ಸೀಸ್‌ ಹೆಸರಿನಲ್ಲಿ 14.62 ಲಕ್ಷ ರು., ಡಿ ಸಿ ಬಿಲ್‌ಗಳನ್ನು ನಗದಿಕರಿಸಲು ಕೊಡಲಾಗಿತ್ತು.

‘ಸಹಾಯ ಧನ ವಿತರಿಸುವ ಕೃಷಿ ಯಂತ್ರೋಪಕರಣಗಳನ್ನು ಇಲಾಖೆಯು ಖರೀದಿಸುವುದಿಲ್ಲ.ರೈತರು ತಮಗೆ ಅವಶ್ಯವಿರುವ ಕೃಷಿ ಉಪಕರಣಗಳನ್ನು ಇಲಾಖೆಯಲ್ಲಿ ಅನುಮೋದನೆಗೊಂಡ ಸಂಸ್ಥೆಗಳೊಂದಿಗೆ ಚೌಕಾಸಿ ಮಾಡಿ ಹಾಗೂ ದರಗಳ ಬಗ್ಗೆ ಸ್ಥಳೀಯವಾಗಿ ಚರ್ಚಿಸಿ ಕಡಿಮೆ ದರದಲ್ಲಿ ನೀಡುವ ಸಂಸ್ಥೆಗಳಿಂದ ಯಂತ್ರೋಪಕರಣ ಖರೀದಿಸಲು ಅನುಕೂಲ ಮಾಡಲು ಸರ್ಕಾರ ಉದ್ದೇಶಿಸಿತ್ತು. ಆದರೆ ಕೃಷಿ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಟಿ ಸಿ ಜಯಪ್ರಕಾಶ್‌ ಮತ್ತು ಉಪ ನಿರ್ದೇಶಕ ಎಂ ಕಿರಣ್‌ಕುಮಾರ್‌ ಸೇರಿಕೊಂಡು ಒಟ್ಟು 81.27 ಲಕ್ಷ ರು.ಗಳನ್ನು 4 ಏಜನ್ಸಿಗಳಿಗೆ ನೀಡುವ ಮೂಲಕ ಸರ್ಕಾರದ ಹಣವನ್ನು ಹಂಚಿಕೊಳ್ಳಲಾಗಿದೆ,’ ಎಂದು ದೂರಲಾಗಿದೆ.

the fil favicon

SUPPORT THE FILE

Latest News

Related Posts