ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಹೆಚ್ಚಳ; ಅವಕಾಶಗಳಿದ್ದರೂ ಕೈಚೆಲ್ಲಿದ್ದ ಸಿದ್ದರಾಮಯ್ಯ

ಬೆಂಗಳೂರು; ಪರಿಶಿಷ್ಟ ವರ್ಗದವರಿಗೆ ಉನ್ನತ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಪ್ರಸ್ತುತ ಜಾರಿ ಇರುವ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ಶಿಫಾರಸ್ಸು ಮಾಡಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿಯೇ ಅವಕಾಶಗಳಿದ್ದವು. ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ಎಲ್ಲಾ ಅವಕಾಶಗಳಿದ್ದರೂ ಬಳಸಿಕೊಂಡಿರಲಿಲ್ಲ ಎಂಬುದಕ್ಕೆ ಒಂದಷ್ಟು ಪುರಾವೆಗಳು ಲಭ್ಯವಾಗಿವೆ.

ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ಅಂದಿನ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರ ಅನುಮೋದನೆ ಪಡೆಯಬೇಕು ಎಂದು ಟಿಪ್ಪಣಿಯನ್ನೂ ಹಾಕಿದ್ದರು. ಮುಖ್ಯ ಕಾರ್ಯದರ್ಶಿ ಹಾಕಿದ್ದ ಟಿಪ್ಪಣಿಯತ್ತ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರಾಗಲಿ ಗಮನಹರಿಸಿರಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಅವಧಿ ಪೂರ್ಣಗೊಳ್ಳುವವರೆಗೂ ಮುಖ್ಯ ಕಾರ್ಯದರ್ಶಿ ಹೊರಡಿಸಿದ್ದ ಟಿಪ್ಪಣಿ ಮೇಲೆ ಯಾವ ಕ್ರಮವೂ ಕೈಗೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

ಪರಿಶಿಷ್ಟ ಸಮುದಾಯವಾಗಿರುವ ವಾಲ್ಮೀಕಿ ಸಮುದಾಯಕ್ಕೆ ಉನ್ನತ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳ ಕುರಿತಂತೆ ಸತೀಶ್‌ ಜಾರಕಿಹೊಳಿ ಅವರ ಸೋದರರಲ್ಲೊಬ್ಬರಾದ ಲಖನ್‌ ಜಾರಕಿಹೊಳಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು (ರಿಟ್ ಅರ್ಜಿ ಸಂಖ್ಯೆ 16852-54/2015). ರಾಜ್ಯದಲ್ಲಿ ಪರಿಶಿಷ್ಟ ವರ್ಗದವರ ಜನಸಂಖ್ಯೆಯಲ್ಲಿ ಹೆಚ್ಚಳ, ಉನ್ನತ ಶಿಕ್ಷಣದಲ್ಲಿ ಪ್ರವೇಶಾತಿ ಪಡೆದವರ ವಿವರ, ಆ ವರ್ಗದವರ ಆರೋಗ್ಯ ಸಮಸ್ಯೆ ಸೇರಿದಂತೆ ಇತ್ಯಾದಿ ವಿಚಾರಗಳ ಕುರಿತು ಅಂಕಿ ಸಂಖ್ಯೆ ದಾಖಲೆಗಳ ಸಮೇತವಾಗಿ ವಾದಿಸಿದ್ದರಲ್ಲದೆ, ಪರಿಶಿಷ್ಟ ವರ್ಗದ ಜನಾಂಗದವರಿಗೆ ಉನ್ನತ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ  ಪ್ರಸ್ತುತ ಜಾರಿ ಇರುವ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲು ಅರ್ಜಿಯಲ್ಲಿ ಕೋರಿದ್ದರು.

ನಾಯಕ ವಿದ್ಯಾರ್ಥಿ ಫೆಡರೇಷನ್‌ ಕಾರ್ಯದರ್ಶಿಯೂ ಆಗಿದ್ದ ಲಖನ್ ಜಾರಕಿಹೊಳಿ ಅವರ ರಿಟ್‌ ಅರ್ಜಿ ಕುರಿತು ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿಯೇ ಬಗೆಹರಿಸಿಕೊಳ್ಳಬೇಕು ಎಂದು ಹೈಕೋರ್ಟ್ ಅರ್ಜಿಯನ್ನು ವಿಲೇವಾರಿ ಮಾಡಿತ್ತು.

ಮುಖ್ಯ ಕಾರ್ಯದರ್ಶಿ ಆಗಿದ್ದ ಅರವಿಂದ್‌ಜಾಧವ್‌ ಅವರು ಈ ಕುರಿತು 2016ರ ಆಗಸ್ಟ್‌ 29ರಂದು ವಿಚಾರಣೆ ನಡೆಸಿದ್ದರು. ಅರ್ಜಿದಾರರ ಅವಲೋಕನ ಮತ್ತು ಅವರು ನೀಡಿದ್ದ ವಿವರಣೆಗಳನ್ನು ಅರವಿಂದ್‌ ಜಾಧವ್‌ ಪರಿಗಣಿಸಿದ್ದರು. ” ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪರಿಶಿಷ್ಟ ವರ್ಗದ ಜನಾಂಗದವರಿಗೆ ಉನ್ನತ ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಪ್ರಸ್ತುತ ಜಾರಿ ಇರುವ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸುವುದು ಸೂಕ್ತ,” ಎಂದು ಅರವಿಂದ್‌ ಜಾಧವ್‌ ಅಭಿಪ್ರಾಯಿಸಿದ್ದರು ಎಂದು ತಿಳಿದು ಬಂದಿದೆ.

ಅಲ್ಲದೆ ಇದೊಂದು ಸರ್ಕಾರದ ಪ್ರಮುಖ ನೀತಿಗೆ ಸಂಬಧಿಸಿದ ವಿಷಯವಾಗಿರುವುದರಿಂದ ಮೊದಲಿಗೆ ಈ ಪ್ರಸ್ತಾವನೆ ಕುರಿತಂತೆ ಮುಖ್ಯಮಂತ್ರಿಯವರ ಅನುಮೋದನೆಯನ್ನು ಸಮಾಜ ಕಲ್ಯಾಣ ಸಚಿವರ ಮುಖಾಂತರ ಪಡೆದ ಬಳಿಕ ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟದ ಮುಂದೆ ಮಂಡಿಸಿದ ಬಳಿಕ ಮೀಸಲಾತಿ ಮರು ನಿಗದಿಗೊಳಿಸಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯನ್ನು ಕೋರಬಹುದು ಎಂದು 2016ರ ಆಗಸ್ಟ್‌ 29ರಂದು ಅರವಿಂದ್‌ಜಾಧವ್‌ ಆದೇಶ ಮಾಡಿದ್ದರು.

ಈ ಪ್ರಕರಣ ಕುರಿತಂತೆ 2016ರ ಮೇ 27, ಜೂನ್‌ 17 ಮತ್ತು 29ರಂದು ಅರ್ಜಿದಾರರು ಹಾಗೂ ಅವರನ್ನು ಪ್ರತಿನಿಧಿಸಿದ್ದ ನ್ಯಾಯವಾದಿಗಳು ವಿವರಣೆ ನೀಡಿದ್ದರು. ಸರ್ವೋಚ್ಛ ನ್ಯಾಯಾಲಯ ಹಾಗೂ ಇತರ ನ್ಯಾಯಾಲಯಗಳ ಪ್ರಕರಣ, ದೇಶದ ಇತರೆ ರಾಜ್ಯಗಳಲ್ಲಿ ಮೀಸಲಾತಿ ಕುರಿತು ಸಮರ್ಥನೆ ನೀಡಲಾಗಿತ್ತು.

ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ವಾಲ್ಮೀಕಿ ಗುರುಪೀಠವು ಮೈತ್ರಿ ಸರ್ಕಾರದ ಅವಧಿಯಲ್ಲಿಯೂ ಬೃಹತ್‌ ರ್ಯಾಲಿ ನಡೆಸಿತ್ತು. ಮೀಸಲಾತಿ ಪ್ರಮಾಣ ಹೆಚ್ಚಳ ಮಾಡದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಪಕ್ಷಬೇಧ ಮರೆತು ಬೆದರಿಕೆ ಒಡ್ಡುವ ಮೂಲಕ ಮೀಸಲಾತಿ ವಿಚಾರವನ್ನು ಶ್ರೀರಾಮುಲು ಅವರು ರಾಜಕೀಯಕರಣಗೊಳಿಸಿದ್ದರು. ವಿಶೇಷವೆಂದರೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಗಿದ್ದ ಅವಧಿಯಲ್ಲಿ ವಾಲ್ಮೀಕಿ ಗುರುಪೀಠವು ಬೀದಿಗಿಳಿದಿರಲಿಲ್ಲ.

“ವಾಲ್ಮೀಕಿ ಸಮುದಾಯದ 17 ಶಾಸಕರಿದ್ದಾರೆ. ನೀವು ನನ್ನ ಕೈಗೆ ರಾಜಿನಾಮೆ ನೀಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲ, ಅವರಪ್ಪನೂ ನನ್ನ ಮಾತು ಕೇಳೋ ಹಂಗೆ ಮಾಡುತ್ತೇನೆ,’ ಎಂದು ವಾಲ್ಮಿಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ಗುಡುಗಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts