ಬೆಂಗಳೂರು; ಸ್ಥಳೀಯ ನಿರುದ್ಯೋಗಿ ಯುವಜನರಿಗೆ ಹೆಚ್ಚಿನ ಉದ್ಯೋಗ ಅವಕಾಶ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ವರ್ಷದ ಹಿಂದೆಯೇ ಕನ್ನಡ ಅಭಿವೃದ್ದಿ ಪ್ರಾಧಿಕಾರ ಸಿದ್ಧಪಡಿಸಿರುವ ಮಸೂದೆಯನ್ನು ವಿಧಾನಮಂಡಲಕ್ಕೆ ಮಂಡಿಸದ ಕಾರ್ಮಿಕ ಇಲಾಖೆ ಕಾಲಹರಣ ಮಾಡುತ್ತಿದೆ. ಇಲಾಖೆ ಸಚಿವ ಮತ್ತು ಉನ್ನತ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ವರ್ಷದ ಹಿಂದೆಯೇ ಸಿದ್ಧಗೊಂಡಿರುವ ಮಸೂದೆ ಮಂಡನೆಯಾಗುತ್ತಿಲ್ಲ.
ಈಗಾಗಲೇ ನೆರೆಯ ಆಂಧ್ರ ಪ್ರದೇಶ ರಾಜ್ಯ ಸರ್ಕಾರ ರೂಪಿಸಿರುವ ಸಮಗ್ರ ಕಾಯ್ದೆ ಮಾದರಿಯಲ್ಲಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಕರಡು ಪ್ರಸ್ತಾವನೆಯನ್ನು ಸಲ್ಲಿಸಿದೆ. ಆದರೆ ಕಾರ್ಮಿಕ ಇಲಾಖೆ ಕಣ್ಣೆತ್ತಿಯೂ ನೋಡಿಲ್ಲ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಪ್ರಾದೇಶಿಕ ಭಾಷೆಗಳ ಕುರಿತಾದ ಚರ್ಚೆ ಬಿರುಸಿನಿಂದ ನಡೆಯುತ್ತಿರುವ ಹೊತ್ತಿನಲ್ಲಿಯೇ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಮಸೂದೆಯನ್ನು ಮಂಡಿಸದಿರುವ ವಿಚಾರವೂ ಮುನ್ನೆಲೆಗೆ ಬಂದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರು 2020ರ ಫೆ.17ರಲ್ಲಿಯೇ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಪತ್ರ ಬರೆದಿದ್ದಾರೆ.
ನಾಗಾಭರಣ ಬರೆದಿರುವ ಪತ್ರದಲ್ಲೇನಿದೆ?
‘ಕನ್ನಡಿಗರಿಗೆ ಉದ್ಯೋಗ ಅವಕಾಶಗಳು ದೊರೆಯುವ ಸಂಬಂಧ ಹಿಂದಿನ ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಮೂರ್ನಾಲ್ಕು ಸಭೆಗಳು ನಡೆದಿವೆ. ಈ ಉದ್ದೇಶದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವ ಮೂಲಕ ಈ ಪ್ರಸ್ತಾವನೆಯನ್ನು ಪ್ರಸ್ತುತ ಅಧಿವೇಶನದಲ್ಲಿ ಮಂಡಿಸಿ ಮಸೂದೆ ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಆಂಧ್ರ ಪ್ರದೇಶ ಮಾದರಿಯ ಮಸೂದೆಯನ್ನು ಕರ್ನಾಟಕದಲ್ಲೂ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಎಂಬ ಮಸೂದೆಯನ್ನು ಜಾರಿಗೊಳಿಸಿದಲ್ಲಿ ಕನ್ನಡಿಗರಿಗೆ ಹೆಚ್ಚಿನ ಬಲ ಬರುತ್ತದೆ,’ ಎಂದು ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಅವರು ವಿವರಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪತ್ರ ಬರೆದ ಒಂದು ತಿಂಗಳ ಅಂತರದಲ್ಲೇ ಅಂದರೆ ಮಾರ್ಚ್‌ನಲ್ಲಿ ಅಧಿವೇಶನ ನಡೆದಿತ್ತು. ಆದರೆ ಕಾರ್ಮಿಕ ಇಲಾಖೆ ಸಚಿವರು ಸಮಗ್ರ ಕಾಯ್ದೆಯನ್ನು ಸದನಕ್ಕೆ ಮಂಡಿಸಲಿಲ್ಲ. ಇದಾದ ನಂತರ ಸೆಪ್ಟಂಬರ್, ಡಿಸೆಂಬರ್ ಮತ್ತು ಫೆಬ್ರುವರಿಯಲ್ಲಿ ನಡೆದ ಅಧಿವೇಶದಲ್ಲೂ ಮಸೂದೆಯನ್ನು ಸದನಕ್ಕೆ ಮಂಡಿಸಲಿಲ್ಲ.
ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಕುರಿತು ಸರ್ಕಾರವು 1984ರ ಏಪ್ರಿಲ್ 25ರಲ್ಲಿ ರಚನೆಯಾಗಿದ್ದ ಡಾ ಸರೋಜಿನಿ ಮಹಿಷಿ ಸಮಿತಿಯು 1986ರಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಕಲ್ಪಿಸುವ ಕುರಿತು 58 ಶಿಫಾರಸ್ಸುಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಇದೇ ಶಿಫಾರಸ್ಸುಗಳನ್ನು ಸಮಗ್ರವಾಗಿ ಪರಿಶೀಲಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪರಿಷ್ಕರಿಸಿದ ವರದಿಯನ್ನು ಸರ್ಕಾರಕ್ಕೆ 2017ರ ಫೆ.1ರಂದು ಸಲ್ಲಿಸಿತ್ತು.
ಪರಿಷ್ಕೃತ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 2 ವರ್ಷಗಳುರುಳಿದರೂ ಸಮಗ್ರ ಕಾಯ್ದೆ ಜಾರಿಯಾಗುವ ಮಾತಿರಲಿ, ಸದನಕ್ಕೂ ಮಂಡಿಸಿಲ್ಲ. ರಾಜ್ಯ ಔದ್ಯಮಿಕ ಉದ್ಯೋಗಗಳ ನೇಮಕಾತಿ ನಿಯಮಗಳಿಗೆ ಅಗತ್ಯ ಪೂರಕ ತಿದ್ದುಪಡಿಗಳನ್ನು ತರುವ ನಿಟ್ಟಿನಲ್ಲಿಯೂ ಪ್ರಾಧಿಕಾರ ಸರ್ಕಾರಕ್ಕೆ ಸ್ಪಷ್ಟವಾಗಿ ಮಾಡಿದ್ದ ಶಿಫಾರಸ್ಸು ಕೂಡ ಜಾರಿಯಾಗಿಲ್ಲ.
ಖಾಸಗಿ ಉದ್ಯೋಗಗಳಲ್ಲಿ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಸಂಪೂರ್ಣವಾಗಿ ಸ್ಥಳೀಯ ಕನ್ನಡಿಗರಿಗೆ ಮೀಸಲಿಡಬೇಕು. ಅಧಿಕಾರಿಗಳ ಹಂತದಲ್ಲಿ ಶೇ.40ರಷ್ಟು ಹುದ್ದೆಗಳನ್ನು ಸ್ಥಳೀಯರಿಗೇ ಮೀಸಲಿಡಬೇಕು. ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಡೆಯುವ ಕ್ಯಾಂಪಸ್ ಆಯ್ಕೆಗಳಲ್ಲಿ ಕಡ್ಡಾಯವಾಗಿ ರಾಜ್ಯದ ಪ್ರತಿನಿಧಿಗಳು ಇರಬೇಕು.
ಈ ಎಲ್ಲಾ ಹಿನ್ನೆಲೆಯಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಉದ್ದೇಶಿಸಿರುವ ಕರ್ನಾಟಕ ಔದ್ಯಮಿಕ ಉದ್ಯೋಗಗಳ(ಸ್ಥಾಯಿ ಆದೇಶಗಳು) ಅಧಿನಿಯಮಕ್ಕೆ ತಿದ್ದುಪಡಿ ತಂದು ಸ್ಥಳೀಯ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಆದ್ಯತೆ ನೀಡಲಾಗಿದೆ.