ಬೆಂಗಳೂರು; ಕೃಷಿ ಇಲಾಖೆಯ ಅಧಿಕಾರಿ, ನೌಕರರ ವರ್ಗಾವಣೆಗೆ ಸಚಿವ ಬಿ ಸಿ ಪಾಟೀಲ್ ಅವರು ಹಣಕ್ಕಾಗಿ ಬೇಡಿಕೆ ಇರಿಸಿದ್ದಾರೆ ಎಂಬ ದೂರಿನ ಕುರಿತು ‘ದಿ ಫೈಲ್’ ಮೂರು ತಿಂಗಳ ಹಿಂದೆಯೇ ಪ್ರಕಟಿಸಿದ್ದ ವರದಿ ಇದೀಗ ಸಂಚಲನ ಮೂಡಿಸಿದೆ.
ಪ್ರಕರಣದ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಮಾಜಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ದನಿ ಎತ್ತಿರುವ ಬೆನ್ನಲ್ಲೇ ಜೆಡಿಎಸ್‌ನ ಶಾಸಕ ಹಾಗೂ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷರೂ ಆಗಿರುವ ಸಾ ರಾ ಮಹೇಶ್ ಕೂಡ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದ ಕುರಿತು ಟ್ವೀಟ್ ಮಾಡಿರುವ ಸಾ ರಾ ಮಹೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನವನ್ನೂ ಸೆಳೆದಿದ್ದಾರೆ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಈವರೆವಿಗೂ ಮೌನ ಮುರಿದಿಲ್ಲ.
ವರ್ಗಾವಣೆ ಹೆಸರಿನಲ್ಲಿ ಕೃಷಿ ಇಲಾಖೆಯ ಸಚಿವರು, ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಇಲಾಖೆ ಸಿಬ್ಬಂದಿಯೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಸರಿಪಡಿಸದಿದ್ದರೆ ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಈ ಭ್ರಷ್ಟಾಚಾರದ ಆರೋಪ ಬಂದಿದ್ದು ಹೇಗೆ, ಇದು ಎಂಥ ದೌರ್ಬಲ್ಯ ಎಂದು ಸಾ ರಾ ಮಹೇಶ್ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಬಿ ಸಿ ಪಾಟೀಲ್ ಮೊದಲು ರೈತರ ಕ್ಷಮೆ ಕೇಳಬೇಕು. ಕೃಷಿ ಇಲಾಖೆಯ ಸಿಬ್ಬಂದಿಯೇ ಮಾಡಿರುವ ಲಂಚದ ಆರೋಪದ ಕುರಿತು ಸ್ಪಷ್ಟನೆ ನೀಡಬೇಕು. ಸರ್ಕಾರ ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು. ಭ್ರಷ್ಟಾಚಾರ ಸಾಬೀತಾದರೆ ಬಿ ಸಿ ಪಾಟೀಲ್ ಅವರನ್ನು ಮುಲಾಜಿಲ್ಲದೆ ಮಂತ್ರಿಮಂಡಲದಿಂದ ಹೊರದಬ್ಬಬೇಕು ಎಂದೂ ಆಗ್ರಹಿಸಿದ್ದಾರೆ.
ಎಚ್ ನಾಗೇಶ್ ಮತ್ತು ಬಿ ಸಿ ಪಾಟೀಲ್ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಪ್ರಕರಣದಲ್ಲಿ ಬಿಜೆಪಿ ಸರ್ಕಾರದ ತಾರತಮ್ಯವನ್ನು ಮಾಜಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ಪ್ರಶ್ನಿಸಿದ ಬೆನ್ನಲ್ಲೇ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೂ ಬಿ ಸಿ ಪಾಟೀಲ್ ಅವರ ಮೌನದ ಹಿಂದೆ ಅನುಮಾನವನ್ನೂ ವ್ಯಕ್ತಪಡಿಸಿದೆ. ಈ ಕುರಿತು ಟ್ವೀಟ್ ಕೂಡ ಮಾಡಿದೆ.
‘ಕೃಷಿ ಇಲಾಖೆಯ ನೌಕರರ ವರ್ಗಾವಣೆಗೆ ಸಚಿವ ಬಿ ಸಿ ಪಾಟೀಲ್ ಹಾಗೂ ಉನ್ನತಾಧಿಕಾರಿಗಳು ಹಣಕ್ಕಾಗಿ ಪೀಡಿಸುತ್ತಿರುವ ದೂರು ನಿಮಗೆ ಬಂದಿದೆ. ನಿಮ್ಮ ಮೌನ ನೋಡಿದರೆ ನಿಮಗೂ ಪಾಲಿರುವ ಅನುಮಾನ ಮೂಡುತ್ತಿದೆ. ನಾ ಖಾವೂಂಗಾ ನಾ ಖಾನೆದುಂಗ ಎನ್ನುವುದನ್ನು ಖಾವುಂಗಾ ಸಬ್ ಕೋ ಖಾನೆದುಂಗ ಎಂದು ಬದಲಿಸಿದ್ದೀರಾ,’ ಎಂದು ಬಿಜೆಪಿಯ ಕರ್ನಾಟಕ ಘಟಕವನ್ನೂ ಪ್ರಶ್ನಿಸಿತ್ತು.
‘ದಲಿತರ ಮೇಲೆ ಕೇವಲ ಆರೋಪ ಬಂದರೂ ಅವರ ತಲೆದಂಡ ಮಾಡುವ ಮನುವಾದಿ ಬಿಜೆಪಿ ಸರ್ಕಾರ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಾಕ್ಷಿಗಳಿದ್ದರೂ ಅಂತವರ ಬಗ್ಗೆ ಮೌನ ವಹಿಸುತ್ತದೆ. ಮುಖ್ಯಮಂತ್ರಿಗಳೇ ಭ್ರಷ್ಟಾಚಾರವನ್ನು ಜಾತಿ ನೋಡಿ ಅಳೆಯುವ ನಿಮ್ಮ ದಲಿತ ವಿರೋಧಿ ನೀತಿಯನ್ನು ಬದಿಗಿಟ್ಟು ನ್ಯಾಯಯುತವಾಗಿ ಕ್ರಮ ವಹಿಸಿ ತನಿಖೆಗೆ ಸೂಚನೆ ನೀಡಿ,’ ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಅವರು ಟ್ವೀಟ್‌ನಲ್ಲಿ ಆಗ್ರಹಿಸಿದ್ದನ್ನು ಸ್ಮರಿಸಬಹುದು.
ಪ್ರಕರಣದ ಹಿನ್ನೆಲೆ
ಸಚಿವ ಬಿ ಸಿ ಪಾಟೀಲ್ ಅವರ ಹೆಸರು ಬಳಸಿ ಅವರ ಆಪ್ತಕೂಟ ಕೃಷಿ ಇಲಾಖೆ ಅಧಿಕಾರಿ, ನೌಕರರುಗಳಿಂದ ಲಕ್ಷಗಟ್ಟಲೇ ಸುಲಿಗೆ ಮಾಡಿದೆ ಎಂದು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೇ ಇಲಾಖೆಯ ಗ್ರೂಪ್ ಎ , ಗ್ರೂಪ್ ಬಿ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿ ನೌಕರರ ವರ್ಗಾವಣೆಯಲ್ಲಿಯೂ ಲಂಚಕ್ಕಾಗಿ ಬೇಡಿಕೆ ಇರಿಸಲಾಗಿತ್ತು ಎಂಬ ಮಾಹಿತಿಯನ್ನು ಸ್ವತಃ ಕೆಲ ಅಧಿಕಾರಿ, ನೌಕರರುಗಳೇ ಈ ಕುರಿತು ಒಂದಷ್ಟು ಅಧಿಕಾರಿಗಳು ಲಿಖಿತವಾಗಿ ಮುಖ್ಯಮಂತ್ರಿಗೆ 2020ರ ಜುಲೈ 1ರಂದು ಪತ್ರ ಮುಖೇನ ಗಮನಕ್ಕೆ ತಂದಿದ್ದರು.
‘2020-21ನೇ ಸಾಲಿನ ಗ್ರೂಪ್ ಎ, ಗ್ರೂಪ್ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ 2020ರ ಜುಲೈ 10ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರುಗಳಿಗೆ ಅಧಿಕಾರಿ ಪ್ರತ್ಯಾಯೋಜಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಕೃಷಿ ಸಚಿವರಿಗೆ ಹಣ ಸಂದಾಯ ಮಾಡಬೇಕು ಎಂಬ ಸಬೂಬು ಹೇಳಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿ/ನೌಕರರು ವರ್ಗಾವಣೆ ಪಡೆಯಬೇಕಾದರೆ ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲಿಯೇ ಮುಂದುವರೆಯಬೇಕಾದರೆ ಲಕ್ಷ ರು.ಗಳನ್ನು ಕಡ್ಡಾಯವಾಗಿ ನೀಡಬೇಕು,’ ಎಂದು ಆದೇಶ ನೀಡಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಿದ್ದರು.
ಸಚಿವ ಬಿ ಸಿ ಪಾಟೀಲ್ ಅವರ ಆಪ್ತ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಸಿ ಎಲ್ ಶಿವಕುಮಾರ್, ಎ ಸಿ ಮಂಜುನಾಥ್, ದಯಾನಂದ ಎಂಬುವರಿಗೆ ಹಣ ಸಂದಾಯ ಮಾಡಿರುವ ಪಟ್ಟಿಯನ್ನೂ ಕೃಷಿ ಇಲಾಖೆ ಸಿಬ್ಬಂದಿಗಳು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದನ್ನು ಸ್ಮರಿಸಬಹುದು.
ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ 50 ಲಕ್ಷ, ಅಪರ ನಿರ್ದೇಶಕರುಗಳು 50 ಲಕ್ಷ, ಬೆಳಗಾವಿ ಜಂಟಿ ನಿರ್ದೇಶಕರು (ಜಿಲಾನಿ ಮತ್ತು ಪಾಟೀಲ್) 2 ಕೋಟಿ, ಕಲ್ಬುರ್ಗಿ ಜಂಟಿ ನಿರ್ದೇಶಕ (ಸೂಗೂರು) 1 ಕೋಟಿ, ರೂಪಾದೇವಿ 75 ಲಕ್ಷ, ಅಪರ ನಿರ್ದೇಶಕರು( ದಿವಾಕರ) 1 ಕೋಟಿ, ಚಿಕ್ಕಬಳ್ಳಾಪುರ ಜಂಟಿ ನಿರ್ದೇಶಕರು (ರೂಪ) 50 ಲಕ್ಷ, ದಾವಣಗೆರೆ ಜಂಟಿ ನಿರ್ದೇಶಕರು 50 ಲಕ್ಷ, ಜಂಟಿ ನಿರ್ದೇಶಕರು ಹಾವೇರಿ (ಮಂಜುನಾಥ್) 1 ಕೋಟಿ ನೀಡಿದ್ದಾರೆ ಎಂಬ ಸಂಗತಿ ಕೃಷಿ ಇಲಾಖೆ ಸಿಬ್ಬಂದಿ ಮುಖ್ಯ ಕಾರ್ಯದರ್ಶಿಗೆ ಪಟ್ಟಿ ಸಮೇತ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಆಪ್ತ ಕಾರ್ಯದರ್ಶಿ ಶಿವಕುಮಾರ್, ದಯಾನಂದ್ ಮತ್ತು ಮಂಜುನಾಥ್ ಎಂಬುವರು ಇಲಾಖೆಯ ಅಧಿಕಾರಿ, ನೌಕರರುಗಳಿಗೆ ವಾಟ್ಸಾಪ್ ಕರೆ ಮಾಡುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದ ನೌಕರರು, ಕೃಷಿ ಯಾಂತ್ರೀಕರಣ, ಕೃಷಿ ಪರಿಕರ, ಕೀಟನಾಶಕಗಳು, ಸ್ಪ್ರಿಂಕಲ್/ಡ್ರಿಪ್‌ಗಳ ಅನುದಾನ ನೀಡುವುದರಲ್ಲಿಯೂ ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.
‘ನಾವು ಕೆಳಮಟ್ಟದ ಇಲಾಖೆಯ ಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದು ನಮ್ಮ ಸಂಬಳದಲ್ಲಿ ನಮ್ಮ ಸಂಸಾರ ನಡೆಸುವುದೇ ಕಷ್ಟಕರವಾಗಿದೆ. ನಮಗೆ ಏನಾದರೂ ಮಾಡಿದರೆ ಹೇಗೆ ಎಂದು ಹಣ ಹೊಂದಿಸುತ್ತಿದ್ದೇವೆ. ಇದು ಹೀಗೆ ಮುಂದುವರೆದರೆ ರೈತರ ಆತ್ಮಹತ್ಯೆ ಬದಲು ರೈತ ಇಲಾಖೆ ಅಧಿಕಾರಿಗಳು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಸಮಯ ದೂರವಿಲ್ಲ. ಇದರಿಂದ ಮಾನಸಿಕ ಹಿಂಸೆ ಅನುಭವಿಸುವುದಕ್ಕಿಂತ ಅದೇ ಮೇಲು,’ ಎಂದು ಅಧಿಕಾರಿ, ನೌಕರರು ಅಳಲು ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.
‘ಅನುದಾನ ಯಾರಿಗೆ ಕೊಡಬೇಕು ಎಂದು ಏಜೆಂಟರುಗಳು ಮಂತ್ರಿಗಳ ಕಚೇರಿ, ವಸೂಲಿಗಾಗಿ ಪ್ರತ್ಯೇಕ ಕಚೇರಿ ತೆರೆದು ಯಾರು ಹೆಚ್ಚಿನ ಕಮಿಷನ್ ನೀಡುತ್ತಾರೋ ಉಪಕರಣಗಳು ಗುಣಮಟ್ಟದಿಂದ ಕೂಡಿಲ್ಲದಿದ್ದರೂ ಆಪ್ತ ಕಾರ್ಯದರ್ಶಿ, ಖಾಸಗಿ ಏಜೆಂಟರುಗಳು ಸೂಚಿಸುವ ವ್ಯಕ್ತಿಗಳಿಗೆ ಜಂಟಿ ನಿರ್ದೇಶಕರುಗಳು ಇಂಡೆಂಟ್‌ಗಳನ್ನು ನೀಡಬೇಕು. ಎಲ್ಲದಕ್ಕೂ ಮಂತ್ರಿಗಳ ಹೆಸರನ್ನು ಹೇಳಲಾಗುತ್ತಿದೆ,’ ಎಂದು ದೂರಿನಲ್ಲಿ ಆರೋಪಿಸಿದ್ದರು.
ಅಬಕಾರಿ ಸಚಿವರಾಗಿದ್ದ ಎಚ್ ನಾಗೇಶ್ ಅವರು ಪರಿಶಿಷ್ಟ ಜಾತಿಯವರಾಗಿದ್ದ ಕಾರಣಕ್ಕೆ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಆದರೆ ಲಿಂಗಾಯತ ಸಮುದಾಯಕ್ಕೆ ಸೇರಿರುವ ಬಿ ಸಿ ಪಾಟೀಲ್ ಅವರ ವಿರುದ್ಧವೂ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಗಳಿದ್ದರೂ ರಾಜೀನಾಮೆ ಪಡೆದಿಲ್ಲವೇಕೆ, ಅವರಿಂದ ರಾಜೀನಾಮೆ ಪಡೆಯಲು ಯಡಿಯೂರಪ್ಪ ಅವರಿಗೆ ಧೈರ್ಯವಿಲ್ಲವೇ ಎಂಬ ಪ್ರಶ್ನೆಗಳು ಕೃಷಿ ಇಲಾಖೆಯಲ್ಲಿ ಕೇಳಿ ಬಂದಿದ್ದವು.