ಬೆಂಗಳೂರು; ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿರುವ ಕೆ ಆರ್ ನಗರದ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಸಂಬಂಧ ಸರ್ಕಾರ ಕರೆದಿದ್ದ ಬಿಡ್‌ನಲ್ಲಿ ಸಿಂಗಲ್ ಬಿಡ್ಡರ್ ಆಗಿರುವ ಸಚಿವ ಮುರುಗೇಶ್ ನಿರಾಣಿ ಉದ್ಯಮದ ಸಮೂಹಕ್ಕೆ ಆರ್ಥಿಕ ಇಲಾಖೆ ಕೊಕ್ಕೆ ಹಾಕಿದೆ. ಸಿಂಗಲ್ ಬಿಡ್‌ನ್ನು ಅನುಮೋದಿಸಲು ನಿರಾಕರಿಸಿರುವ ಇಲಾಖೆ, ಮರು ಟೆಂಡರ್ ಏಕೆ ಕರೆಯಬಾರದು ಎಂದು ಪ್ರಶ್ನಿಸಿದೆ.
ಪಾಂಡವಪುರ ಸಕ್ಕರೆ ಕಾರ್ಖಾನೆಯ ನೋಂದಣಿ ಶುಲ್ಕ ಮನ್ನಾ ಸೇರಿದಂತೆ ಇನ್ನಿತರೆ ಹೊಸ ಷರತ್ತುಗಳನ್ನು ಒಪ್ಪದಿದ್ದ ಸರ್ಕಾರ, ಶ್ರೀರಾಮ ಸಕ್ಕರೆ ಕಾರ್ಖಾನೆ ಗುತ್ತಿಗೆ ಸಂಬಂಧ ಸಿಂಗಲ್ ಬಿಡ್‌ನ್ನೂ ಒಪ್ಪಿಕೊಳ್ಳದಿರುವುದು ಮುರುಗೇಶ್ ನಿರಾಣಿಗೆ ಮತ್ತೊಂದು ಹಿನ್ನಡೆಯಾದಂತಾಗಿದೆ.
ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ನೀಡಲು ಕರೆದಿದ್ದ ಟೆಂಡರ್‌ನಲ್ಲಿ 125 ಕೋಟಿಗೆ ಸಿಂಗಲ್ ಬಿಡ್ ಮಾಡಲಾಗಿತ್ತು. ಸಂಪುಟದ ಅನುಮತಿ ಸಿಕ್ಕರೆ ಆ ಕಾರ್ಖಾನೆಯನ್ನೂ ಗುತ್ತಿಗೆ ಪಡೆದು ಮುನ್ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದ ಶಾಸಕ ಮುರುಗೇಶ್ ಆರ್ ನಿರಾಣಿ ಅವರಿಗೀಗ ಆರ್ಥಿಕ ಇಲಾಖೆ ಎತ್ತಿರುವ ತಕರಾರು ತಲೆಬಿಸಿ ಮಾಡಿದೆ. ಈ ಸಂಬಂಧ ಆರ್ಥಿಕ ಇಲಾಖೆಯ ಉನ್ನತ ಮೂಲಗಳು ‘ದಿ ಫೈಲ್’ಗೆ ಖಚಿತಪಡಿಸಿವೆ.
ಸಿಂಗಲ್ ಬಿಡ್‌ನ್ನು ಒಪ್ಪಿಕೊಂಡಲ್ಲಿ ಕಾನೂನು ಮತ್ತು ಆರ್ಥಿಕ ಪರಿಣಾಮಗಳು ಎದುರಾಗಲಿವೆ ಎಂದು ಆರ್ಥಿಕ ಇಲಾಖೆ ಅಭಿಪ್ರಾಯ ನೀಡಿದೆ ಎಂದು ಗೊತ್ತಾಗಿದೆ. ಆರ್‌ಎಸ್‌ಎಸ್‌ಕೆ ಕಾರ್ಖಾನೆಯು ಗುತ್ತಿಗೆ ಮೊತ್ತ 480 ಕೋಟಿಗೆ ಬೇಡಿಕೆ ಇಟ್ಟಿತ್ತು. ಕಾರ್ಖಾನೆ ಈಗಾಗಲೇ ಹೊಂದಿರುವ ಹಣಕಾಸಿನ ಹೊಣೆಗಾರಿಕೆಗೂ (250 ಕೋಟಿ ಸಾಲ) ಮತ್ತು ಬಿಡ್‌ನಲ್ಲಿ ನಮೂದಿಸಿದ್ದ ಮೊತ್ತದ ಮಧ್ಯೆ ಅಜಗಜಾಂತರ ವ್ಯತ್ಯಾಸವಿತ್ತು. ಸಿಂಗಲ್ ಬಿಡ್‌ನ್ನು ಒಪ್ಪಿಕೊಂಡಿರುವ ಅಧಿಕಾರಿಗಳು ಇದಕ್ಕೆ ಸಮರ್ಥನೆಯನ್ನೂ ನೀಡಿರಲಿಲ್ಲ ಎಂದು ಗೊತ್ತಾಗಿದೆ.
ದಿವಂಗತ ಡಿ. ದೇವರಾಜು ಅರಸು ಸರಕಾರದಲ್ಲಿ ಶಾಸಕರಾಗಿದ್ದ ದಿ. ಎಚ್. ಬಿ. ಕೆಂಚೇಗೌಡ ಸಚಿವ ಸ್ಥಾನದ ಆಕಾಂಕ್ಷೆ ತೊರೆದು ಜಿಲ್ಲೆಯ ರೈತರ ಹಿತಕ್ಕಾಗಿ ಈ ಕಾರ್ಖಾನೆ ನಿರ್ಮಿಸಲು ಮುನ್ನುಡಿ ಬರೆದಿದ್ದರು. ಷೇರು ಹಣ ಸಂಗ್ರಹಿಸಲು ಜಿಲ್ಲೆಯ ಐದು ತಾಲೂಕಿನಾದ್ಯಂತ ಹಗಲಿರುಳು ಶ್ರಮಿಸಿ, ನೂರಾರು ಪ್ರಮುಖ ರೈತ ಮುಖಂಡರ ಸಹಕಾರದೊಂದಿಗೆ 1979ರಲ್ಲಿ ಈ ಕಾರ್ಖಾನೆ ಆರಂಭವಾಗಿತ್ತು. ಈ ಕಾರ್ಖಾನೆಗೀಗ 40 ವರ್ಷದ ಇತಿಹಾಸವಿದೆ. ಆದರೆ ಕಳೆದ 8 ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಕಾಲ ಗುತ್ತಿಗೆಗೆ ಪಡೆದ ನಂತರ ನಿರಾಣಿ ಒಡೆತನದ ಉದ್ಯಮ ಸಮೂಹ ವರಾತ ತೆಗೆದಿತ್ತು. ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಒಡೆತನಕ್ಕೆ ಸೇರಿರುವ ನಿರಾಣಿ ಉದ್ಯಮ ಸಮೂಹ ಮುಂದಿಟ್ಟಿದ್ದ ಹೊಸ ಬೇಡಿಕೆಯನ್ನು ತಿರಸ್ಕರಿಸಿತ್ತು.
ನಿರಾಣಿ ಉದ್ಯಮ ಸಮೂಹವು ಗುತ್ತಿಗೆ ಅವಧಿ ಪೂರ್ಣಗೊಂಡ ನಂತರವೂ ಕಂಪನಿಯಲ್ಲಿನ ಎಲ್ಲಾ ಬಗೆಯ ಯಂತ್ರೋಪಕರಣಗಳು ಸರ್ಕಾರದ ವಶಕ್ಕೆ ಬದಲಿಗೆ ಕಂಪನಿ ವಶಕ್ಕೆ ನೀಡಬೇಕು ಒತ್ತಡ ಹೇರಿತ್ತಲ್ಲದೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮನ್ನಾ ಮಾಡಬೇಕು ಎಂದು ಸರ್ಕಾರದ ಮೆಟ್ಟಿಲೇರಿತ್ತು. ಕರಾರು ಒಪ್ಪಂದಕ್ಕೆ ಸಹಿ ಮಾಡಿದ ನಂತರ ಕಂಪನಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದ ನಂತರ ನಿರಾಣಿ ಉದ್ಯಮ ಸಮೂಹ ತೆಗೆದಿದ್ದ ವರಾತಕ್ಕೆ ಸರ್ಕಾರ ಸೊಪ್ಪು ಹಾಕಿಲ್ಲ. ಬದಲಿಗೆ ನೋಂದಣಿ ಶುಲ್ಕವನ್ನು ಮನ್ನಾ ಮಾಡಬೇಕು ಎಂಬ ಮನವಿಯನ್ನೇ ತಿರಸ್ಕರಿಸಿತ್ತು.
‘ಬಾಗಲಕೋಟೆ ಮುಧೋಳದ ನಿರಾಣಿ ಶುಗರ್ಸ್ ಲಿಮಿಟೆಡ್‌ಗೆ 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಆದೇಶ ಹೊರಡಿಸಲಾಗಿದೆ. ಗುತ್ತಿಗೆ ಕರಾರಿನ ನೋಂದಣಿ ಸಂದರ್ಭದಲ್ಲಿ ವಿಧಿಸಲಾಗುವ ಮುದ್ರಾಂಕ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡುವಂತೆ ಕೋರಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ,’ಎಂದು ವಾಣಿಜ್ಯ ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಬ್ಬು ಅಭಿವೃದ್ಧಿ, ಸಕ್ಕರೆ ನಿರ್ದೇಶನಾಲಯದ ಆಯುಕ್ತರಿಗೆ 2020ರ ಅಕ್ಟೋಬರ್ 12ರಂದು ಪತ್ರ ಮುಖೇನ ತಿಳಿಸಿದ್ದನ್ನು ಸ್ಮರಿಸಬಹುದು.