ದರ್ಶನ್‌ ಮನೆ, ಎಸ್ಸೆಸ್‌ ಆಸ್ಪತ್ರೆ ಒತ್ತುವರಿ ಪ್ರಕರಣ; 4 ವರ್ಷವಾದರೂ ತೆರವಾಗದ ಕಟ್ಟಡ

ಬೆಂಗಳೂರು; ರಾಜರಾಜೇಶ್ವರಿ ನಗರದ ವಲಯದಲ್ಲಿ ನಟ ದರ್ಶನ್‌ ಮತ್ತು ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿದ್ದಾರೆ ಎನ್ನಲಾಗಿರುವ ಕಟ್ಟಡಗಳನ್ನು ಬಿಬಿಎಂಪಿ ಅಧಿಕಾರಿಗಳು 4 ವರ್ಷಗಳಾದರೂ ತೆರವುಗೊಳಿಸಿಲ್ಲ. ಎಸ್‌ ಎಸ್‌ ಆಸ್ಪತ್ರೆ, ನಟ ದರ್ಶನ್‌ ಮನೆ ಮತ್ತು ಇತರೆ ಕಟ್ಟಡಗಳನ್ನು ಸರ್ಕಾರದ ವಶಕ್ಕೆ ಪಡೆದು ಸಾರ್ವಜನಿಕ ಉಪಯೋಗಕ್ಕೆ ನೀಡುವ ನಿಟ್ಟಿನಲ್ಲೂ ಒಂದೇ ಒಂದು ಕ್ರಮವನ್ನೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಅಯುಕ್ತರು ಕೈಗೊಂಡಿಲ್ಲ.

ಕಟ್ಟಡಗಳನ್ನು ವಶಕ್ಕೆ ಪಡೆಯಬೇಕಿದ್ದ ಅಧಿಕಾರಿಗಳು ಸಕ್ರಮಗೊಳಿಸುವ ಯತ್ನ ಸದ್ದಿಲ್ಲದೇ ನಡೆಯುತ್ತಿದೆ. ಈ ಎರಡೂ ಕಟ್ಟಡಗಳನ್ನು ವಶಕ್ಕೆ ಪಡೆಯದಂತೆ ನಟ ದರ್ಶನ್‌ ಅವರ ಅಪ್ತ ಹಾಗೂ ಆರ್‌ ಆರ್‌ ನಗರದ ಶಾಸಕ ಮುನಿರತ್ನ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ಮಣಿದಿರುವ ಬಿಬಿಎಂಪಿ ಅಧಿಕಾರಿಗಳು ಈ ಕಟ್ಟಡಗಳು ಒತ್ತುವರಿ ಆಗಿಯೇ ಇಲ್ಲ ಎಂದು ಸಾಬೀತುಪಡಿಸಲು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡದ ವಿಚಾರವನ್ನು ಮುಂದಿಟ್ಟುಕೊಂಡು ಅಂಬಾನಿಯ 5 ಜಿ ಗಾಗಿ ಚಿತ್ರಮಂದಿರ ಬಂದ್‌ ಮಾಡಿರುವುದು ದೊಡ್ಡ ಹಗರಣ ಎಂದು ಫೇಸ್‌ ಬುಕ್‌ ಲೈವ್‌ನಲ್ಲಿ ದರ್ಶನ್‌ ಅವರು ಮಾತನಾಡಿದ ಬೆನ್ನಲ್ಲೇ, ರಾಜಕಾಲುವೆ ಒತ್ತುವರಿ ಪ್ರಕರಣವೂ ಮುನ್ನೆಲೆಗೆ ಬಂದಿದೆ.

ಸರ್ವೆ ನಂಬರ್‌ 53ರಲ್ಲಿ ನಿರ್ಮಾಣವಾಗಿರುವ ಐಡಿಯಲ್‌ ಹೋಮ್ಸ್‌ ಬಡಾವಣೆಯಲ್ಲಿ ನಟ ದರ್ಶನ್‌ ಮತ್ತು ಶಾಮನೂರು ಶಿವಶಂಕರಪ್ಪ ಆಸ್ಪತ್ರೆ (ಎಸ್‌ ಎಸ್‌ ಆಸ್ಪತ್ರೆ) ಕಟ್ಟಡ ಸೇರಿದಂತೆ ಒಟ್ಟು 7 ಎಕರೆ 31 ಗುಂಟೆ ವಿಸ್ತಿರ್ಣದ ಪ್ರದೇಶ ಹದ್ದಿಗೆ ಹಿಡಿದ ಹಳ್ಳವನ್ನು ಒತ್ತುವರಿ ಮಾಡಲಾಗಿದೆ ಎಂದು ಭೂ ದಾಖಲೆಗಳ ಅಂದಿನ ಜಂಟಿ ನಿರ್ದೇಶಕ ಜಯಪ್ರಕಾಶ್‌ ಅವರು 2016ರ ಸೆ. 8ರಂದು ವರದಿ ನೀಡಿದ್ದರು.

ವರದಿ ಸ್ವೀಕರಿಸಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಂದಿನ ಆಯುಕ್ತರು ಈ ಕುರಿತು ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ. ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು ಕೂಡ ಒತ್ತುವರಿ ತೆರವುಗೊಳಿಸುವ ಕುರಿತು ನಿರ್ಲಕ್ಷ್ಯ ವಹಿಸಿದ್ದಾರಲ್ಲದೆ ದರ್ಶನ್‌ ಮನೆ ಮತ್ತು ಎಸ್‌ ಎಸ್‌ ಅಸ್ಪತ್ರೆಯ ಕಟ್ಟಡ ಒತ್ತುವರಿ ಆಗಿಯೇ ಇಲ್ಲ ಎಂದು ಸಾಬೀತುಪಡಿಸಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಹಲಗೇವಡೇರಹಳ್ಳಿ ಗ್ರಾಮದ ಸರ್ವೆ ನಂಬರ್‌ 38,39,.40,41,43,44,45,46,47,51,52,53,54,55 ಮತ್ತು 56ರ ಸರ್ವೆ ನಂಬರ್‌ಗಳ ಮಧ್ಯೆ ಇರುವ ಹದ್ದಿಗಿಡಿದ ಹಳ್ಳವನ್ನು ಭೂ ಮಾಪಕರಿಂದ ಅಳತೆ ಮಾಡಿಸಲಾಗಿತ್ತು. ಅಲ್ಲದೆ ಒತ್ತುವರಿ ಮಾಡಿರುವ ಪ್ರದೇಶದ ವಿವರಗಳೊಂದಿಗೆ ವಿವರವಾದ ವರದಿಯನ್ನು ದೃಢೀಕರಿಸಿ ನಕ್ಷೆಯನ್ನೂ ಸಲ್ಲಿಸಲಾಗಿತ್ತು. ಭೂಮಾಪನ ದಾಖಲೆಗಳ ಆಧಾರದಲ್ಲಿ ಹದ್ದಿಗೆ ಹಿಡಿದ ಹಳ್ಳದ ಗಡಿ ಗುರುತಿಸುವಿಕೆಗೆ ಮಾತ್ರ ಸೀಮಿತವಾಗಿತ್ತು.

ಜಂಟಿ ನಿರ್ದೇಶಕರ ವರದಿಯಲ್ಲೇನಿದೆ?

‘ಭೂಮಾಪಕರು ಸರ್ವೆ ನಂಬರ್‌ 38,39,.40,41,43,44,45,46,47,51,52,53,54,55 ಮತ್ತು 56ರ ಜಂಟಿ ನಕ್ಷೆ ತಯಾರಿಸಿಕೊಂಡು ಮೂಲ ಸರ್ವೆ ದಾಖಲಾತಿಗಳ ಆಧಾರದ ಮೇಲೆ ಅಳತೆ ಕೆಲಸ ಪೂರೈಸಿದ್ದಾರೆ. ನಟ ದರ್ಶನ್‌ ಹಾಗೂ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ (ಎಸ್‌ ಎಸ್‌ ಆಸ್ಪತ್ರೆ) ಅವರಿಗೆ ಸೇರಿರುವ ಕಟ್ಟಡಗಳನ್ನು ಒಳಗೊಂಡಂತೆ 7 ಎಕರೆ 31 ಗುಂಟೆ ವಿಸ್ತೀರ್ಣದ ಹದ್ದಿಗೆ ಹಿಡಿದ ಹಳ್ಳದ ಒತ್ತುವರಿ ಆಗಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ವರದಿಯಿಂದ ತಿಳಿದು ಬಂದಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಇತರೆ ಶಾಖೆಗಳು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಇತಗರೆ ಯಾವುದೇ ಶಾಖೆ, ಇಲಾಖೆಗಳಿಂದ ನಡವಳಿಗಳಾಗಿದ್ದಲ್ಲಿ ಅವರಿಂದ ಹೆಚ್ಚುವರಿ ಮಾಹಿತಿಯನ್ನು ಪಡೆಯಬಹುದು,’ ಎಂದು ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್‌ ಅವರು ಬಿಬಿಎಂಪಿಯ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.

ನಟ ದರ್ಶನ್‌, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಒಡೆತನದ ಎಸ್‌.ಎಸ್‌.ಆಸ್ಪತ್ರೆ ಸೇರಿದಂತೆ ಇತರೆ ಕಟ್ಟಡಗಳು ಮತ್ತು ಖಾಲಿ ನಿವೇಶನಗಳನ್ನು 2016ರ ಅ.22ರೊಳಗೆ ವಶಕ್ಕೆ ಪಡೆಯಲು ಬೆಂಗಳೂರು ನಗರ ಜಿಲ್ಲಾಡಳಿತ ತೀರ್ಮಾನಿಸಿತ್ತು. ಆದರೆ ಈವರೆವಿಗೂ ಕಟ್ಟಡಗಳನ್ನು ವಶಕ್ಕೆ ಪಡೆಯದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹದ್ದಿಗಿಡದ ಹಳ್ಳದ ಒತ್ತುವರಿ ಜಾಗದಲ್ಲಿ 36 ಕಟ್ಟಡಗಳು ಮತ್ತು 33 ಖಾಲಿ ನಿವೇಶನಗಳಿವೆ. ಶ್ಯಾಮನೂರು ಶಿವಶಂಕರಪ್ಪ ಮಾಲೀಕತ್ವದ ಎಸ್‌.ಎಸ್‌.ಆಸ್ಪತ್ರೆಯ ಮಧ್ಯ ಭಾಗದಲ್ಲಿಯೇ ಹದ್ದಿಗಿಡದ ಹಳ್ಳ ಹಾದು ಹೋಗಿದೆ. ಆಸ್ಪತ್ರೆ 22 ಗುಂಟೆ, ನಟ ದರ್ಶನ್‌ ಅವರ ತೂಗುದೀಪ ನಿಲಯವು 2 ಗುಂಟೆಯಷ್ಟು ಜಾಗವನ್ನು ಒತ್ತುವರಿ ಮಾಡಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಹದ್ದಿಗಿಡದ ಹಳ್ಳವನ್ನು (ಬಿ ಖರಾಬು) ಒತ್ತುವರಿ ಮಾಡಿದ್ದ 69 ಮಂದಿಗೆ 2016ರ ಸೆ. 28ರಂದು ನೋಟಿಸ್‌ ಜಾರಿ ಮಾಡಿತ್ತಲ್ಲದೆ ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಏಳು ದಿನ ಕಾಲಾವಕಾಶ ನೀಡಲಾಗಿತ್ತು. ಅದರಂತೆ ನಟ ದರ್ಶನ್‌ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ, ಎಸ್‌.ಎಸ್‌.ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಇತರೆ 67 ಮಂದಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ತಹಶೀಲ್ದಾರ್‌ಗೆ ದಾಖಲೆಗಳನ್ನು ಸಲ್ಲಿಸಿದ್ದರು.

ಬಿಡಿಎಯಿಂದ ಗುತ್ತಿಗೆ ಆಧಾರದ ಮೇಲೆ ಜಾಗ ಪಡೆದು ಆಸ್ಪತ್ರೆ ನಿರ್ಮಿಸಿದ್ದೇವೆ ಎಂದು ಎಸ್‌.ಎಸ್‌.ಆಸ್ಪತ್ರೆಯು ಸ್ಪಷ್ಟೀಕರಣ ನೀಡಿತ್ತು. ಹಾಗೆಯೇ ಇತರರು ಸಹ ಬಿಡಿಎ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಖರೀದಿಸಿ ಮನೆಗಳನ್ನು ಕಟ್ಟಿದ್ದೇವೆ. ಬಿ ಖರಾಬು ಜಾಗವನ್ನು ಒತ್ತುವರಿ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದನ್ನು ಸ್ಮರಿಸಬಹುದು.

ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದ ಅಂದಿನ ತಹಶೀಲ್ದಾರ್‌ ಶಿವಕುಮಾರ್‌ ಅವರು, ”ಐಡಿಯಲ್‌ ಹೋಮ್ಸ್‌ ಬಡಾವಣೆಯಲ್ಲಿ 7.31 ಎಕರೆ ಹದ್ದಿಗಿಡದ ಹಳ್ಳ ಒತ್ತುವರಿಯಾಗಿರುವುದು ದೃಢಪಟ್ಟಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿ ಖರಾಬು ಜಾಗದಲ್ಲಿ ಬಡಾವಣೆ ನಿರ್ಮಾಣಕ್ಕೆ ಅನುಮೋದನೆ ನೀಡಿ ತಪ್ಪೆಸಗಿದೆ. ಇದನ್ನು ತಿಳಿಯದ ಹಲವು ನಿವೇಶನ ಖರೀದಿಸಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ, ಸಂಬಂಧಪಟ್ಟ ಬಿಡಿಎ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಒತ್ತುವರಿಯಾಗಿರುವ ಬಿ ಖರಾಬು ಜಾಗವನ್ನು ವಶಕ್ಕೆ ಪಡೆಯುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು 2016ರ ಅ. 13ರಂದು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗೆ ವರದಿ ಸಲ್ಲಿಸಿದ್ದರು.

”ಕೆಎಲ್‌ಆರ್‌ ಕಾಯಿದೆ ಸೆಕ್ಷನ್‌ 37ರಡಿ ವಿಶೇಷ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಐಡಿಯಲ್‌ ಹೋಮ್ಸ್‌ ಬಡಾವಣೆಯಲ್ಲಿನ ಹದ್ದಿಗಿಡದ ಹಳ್ಳದ ಒತ್ತುವರಿ ತೆರವಿಗೆ ಆದೇಶ ಹೊರಡಿಸಲಿದ್ದಾರೆ. ಆನಂತರ ಎಸ್‌.ಎಸ್‌.ಆಸ್ಪತ್ರೆ, ನಟ ದರ್ಶನ್‌ ಮನೆ ಸೇರಿದಂತೆ ಇತರೆ ಕಟ್ಟಡಗಳು ಮತ್ತು ಖಾಲಿ ನಿವೇಶನಗಳನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲಾಗುವುದು,” ಎಂದು ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ವಿ.ಶಂಕರ್‌ ಹೇಳಿಕೆ ನೀಡಿದ್ದರು.

ಹಲಗೇವಡೇರಹಳ್ಳಿ ಗ್ರಾಮದ ಸರ್ವೆ ನಂ. 38, 39, 40, 41, 43, 44, 45, 46, 47, 51, 52, 53, 54, 55 ಮತ್ತು 56ರಲ್ಲಿ ಹದ್ದಿಗಿಡದ ಹಳ್ಳ ಹಾದು ಹೋಗಿದೆ. ಈ ಸರ್ವೇ ನಂಬರ್‌ಗಳಲ್ಲಿದ್ದ 3.20 ಎಕರೆ ವಿಸ್ತೀರ್ಣದ ಹದ್ದಿಗಿಡದ ಹಳ್ಳವನ್ನು ಐಡಿಯಲ್‌ ಹೋಮ್ಸ್‌ ಗೃಹ ನಿರ್ಮಾಣ ಸಹಕಾರ ಸಂಘವು ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿತ್ತು. 1969ರಲ್ಲಿಯೇ ಹಳ್ಳದ ಜಾಗವೂ ಸೇರಿದಂತೆ ಒಟ್ಟು 53 ಎಕರೆಯಲ್ಲಿ ಬಡಾವಣೆ ನಿರ್ಮಿಸಿ, ಪ್ರತಿಷ್ಠಿತರಿಗೆ ಮಾರಾಟ ಮಾಡಿತ್ತು. ಉಳಿದ 4.11 ಎಕರೆಯನ್ನು ಖಾಸಗಿ ಬಡಾವಣೆಗಳು ಕಬಳಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

the fil favicon

SUPPORT THE FILE

Latest News

Related Posts