4(ಬಿ) ವಿನಾಯಿತಿ ದುರ್ಬಳಕೆ ; ತಲಸ್ಸೇಮಿಯಾ ರೋಗಿಗಳ ಔಷಧ ಖರೀದಿಯಲ್ಲೂ ಅಕ್ರಮ

ಬೆಂಗಳೂರು; ತಲಸ್ಸೇಮಿಯಾ ಸೇರಿದಂತೆ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೀಡುವ ಕಬ್ಬಿಣಾಂಶವನ್ನು ವಿಸರ್ಜಿಸುವ ಮಾತ್ರೆಗಳನ್ನು ಮಾರುಕಟ್ಟೆ ದರಕ್ಕಿಂತಲೂ ಮೂರು ಪಟ್ಟು ಹೆಚ್ಚಿನ ದರದಲ್ಲಿ ಖರೀದಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನವನ್ನು ಲೂಟಿಗೈದಿರುವ ಪ್ರಕರಣವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

ಔಷಧ ಖರೀದಿಗೆ ಟೆಂಡರ್‌ ಪ್ರಕ್ರಿಯೆ ನಡೆಸಬೇಕಿದ್ದ ಅಧಿಕಾರಿಗಳು, ಮಾರುಕಟ್ಟೆಯಲ್ಲಿ ಈ ಔಷಧಗಳು ಲಭ್ಯವಿಲ್ಲ ಎಂದು ಸರ್ಕಾರವನ್ನು ದಾರಿತಪ್ಪಿಸಿದ್ದಾರಲ್ಲದೆ ಕರ್ನಾಟಕ ಪಾರದರ್ಶಕ ಕಾಯ್ದೆ ಅಧಿನಿಯಮದ 4(ಬಿ) ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಟೆಂಡರ್‌ ಪ್ರಕ್ರಿಯೆ ನಡೆಸದೆಯೇ ನಿರ್ದಿಷ್ಟ ಏಜೆನ್ಸಿಗೆ 70 ಲಕ್ಷ ರು. ಮೊತ್ತದ ಖರೀದಿ ಆದೇಶವನ್ನೂ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಾ೯ಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ “ರಾಜ್ಯ ರಕ್ತ ಕೋಶದ ನೋಡಲ್ ಆಧಿಕಾರಿ”ಯಾಗಿದ್ದ ಡಾ. ಸ್ವತಂತ್ರಕುಮಾರ್ ಬಣಕಾರ್‌ ಅವರ ಅವಧಿಯಲ್ಲಿ ಈ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಕೆಟಿಪಿಪಿ ಕಾಯ್ದೆ 4 ಬಿ ವಿನಾಯಿತಿಯನ್ನು ದುರ್ಬಳಕೆ ಮಾಡಿಕೊಂಡು ಔಷಧಗಳ ಖರೀದಿಯಲ್ಲೇ ಅಂದಾಜು 30 ಕೋಟಿಗೂ ಹೆಚ್ಚು ಅಕ್ರಮ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ತಮಿಳುನಾಡು ಮೆಡಿಕಲ್‌ ಕಾರ್ಪೋರೇಷನ್‌, ಒಡಿಶಾ, ರಾಜಸ್ಥಾನ್‌ ಮೆಡಿಕಲ್‌ ಸಪ್ಲೈ ಕಾರ್ಪೋರೇಷನ್‌, ಗುಜರಾತ್‌ ಮೆಡಿಕಲ್‌ ಸಪ್ಲೈ ಕಾರ್ಪೋರೇಷನ್‌ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ಕಬ್ಬಿಣಾಂಶ ಮಾತ್ರೆಗಳನ್ನು ಟೆಂಡರ್‌ ಪ್ರಕ್ರಿಯೆ ಮೂಲಕವೇ ಖರೀದಿಸುತ್ತಿವೆ. ಆದರೆ ಡಾ ಸ್ವತಂತ್ರಕುಮಾರ್‌ ಬಣಕರ್‌ ಅವಧಿಯಲ್ಲಿ ಈ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದು ದಾರಿತಪ್ಪಿಸಲಾಗಿದೆಯಲ್ಲದೆ ಆಸ್ಚೋ ಏಜೆನ್ಸಿಯಿಂದ 3 ಪಟ್ಟು ಹೆಚ್ಚಿನ ದರದಲ್ಲಿ ಖರೀದಿಸಲಾಗಿದೆ ಎಂದು ಗೊತ್ತಾಗಿದೆ.

ಔಷಧಗಳ ಉತ್ಪಾದಕರಿಂದ ಖರೀದಿಸದೆಯೇ ಸರಬರಾಜುದಾರ ಏಜೆನ್ಸಿಯಾಗಿರುವ ಆಸ್ಕೋ ಏಜೆನ್ಸಿಯಿಂದ ಖರೀದಿಸಿರುವುದು ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಶೇಷವೆಂದರೆ 2019ರ ಫೆಬ್ರುವರಿಯಲ್ಲಿ ಕಬ್ಬಿಣಾಂಶ ಮಾತ್ರೆಗಳನ್ನು ಖರೀದಿಸಲು ಟೆಂಡರ್‌ ಕರೆಯಲಾಗಿತ್ತು. ಮುಂಬೈ ಗುರ್‌ಗಾಂವ್‌ನ ಸನ್‌ ಫಾರ್ಮಾ ಲ್ಯಾಬೋರೇಟರಿಯಿಂದ ಖರೀದಿಸಲಾಗಿತ್ತು. ಇದೇ ಔಷಧ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ ಎಂದು ಸರ್ಕಾರವನ್ನು ದಾರಿತಪ್ಪಿಸಿ ಆಸ್ಕೋ ಏಜೆನ್ಸಿಯೊಂದರಲ್ಲೇ ಈ ಔಷಧಗಳು ಲಭ್ಯವಿದೆ ಎಂದು 2019ರ ಮಾರ್ಚ್‌ 8ರಂದು 70.94 ಲಕ್ಷ ರು.ಗೆ ಖರೀದಿ ಆದೇಶ ನೀಡಿರುವುದು ತಿಳಿದು ಬಂದಿದೆ.

ದರದಲ್ಲೂ ವ್ಯತ್ಯಾಸ

ಡಾ ಬಣಕರ್‌ ಅವಧಿಯಲ್ಲಿ ಕಬ್ಬಿಣಾಂಶ ಮಾತ್ರೆ (100 ಎಂಜಿ)ಗೆ 21.09 ರು ಮತ್ತು ಡಿಫೆರ್‌ಕ್ಸೋಮೈನ್‌ ಇಂಜಕ್ಷನ್‌ಗೆ 155.40 ರು. ದರದಲ್ಲಿ ಆಸ್ಕೋ ಏಜೆನ್ಸಿಯಿಂದ ಖರೀದಿಸಲಾಗಿದೆ. ಆದರೆ ಇವೇ ಔಷಧಗಳಿಗೆ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ದೊರೆಯುತ್ತಿದ್ದವು. ಸೂರತ್‌ನ ಗ್ಲೋಬಲ್‌ ಫಾರ್ಮಾ ಪ್ರೈವೈಟ್‌ ಲಿಮಿಟೆಡ್‌ ಟ್ಯಾಬ್‌ ಡಿಫರೋಕ್ಸ್‌ (250 ಎಂಜಿ) 5.60 ರು., ನಿಗದಿಪಡಿಸಿತ್ತು. ಹಾಗೆಯೇ ರಾಜಸ್ಥಾನ ಮೆಡಿಕಲ್‌ ಕಾರ್ಪೋರೇಷನ್‌ ನ್ಯಾಟ್ಕೋ ಫಾರ್ಮಾ ಲಿಮಿಟೆಡ್‌ನಿಂದ 10.08 ರು. ದರದಲ್ಲಿ (500 ಎಂಜಿ) ಖರೀದಿಸಿದೆ. ಅದೇ ರೀತಿ ಗುಜರಾತ್‌ ಮೆಡಿಕಲ್‌ ಕಾರ್ಪೋರೇಷನ್‌ ಬಿಡಿಆರ್‌ ಫಾರ್ಮಾಸ್ಯುಟಿಕಲ್ಸ್‌ ಇಂಟರ್‌ನ್ಯಾಷನಲ್‌ ಪ್ರೈವೈಟ್‌ ಲಿಮಿಟೆಡ್‌, ಮೈಕ್ರಾನ್‌ ಫಾರ್ಮಾಸ್ಯುಟಿಕಲ್ಸ್‌,ನಿಂದ 10.08 ರು.ದರದಲ್ಲಿ (250 ಎಂಜಿ) ಖರೀದಿಸಿದ್ದರೆ ಸನ್‌ ಫಾರ್ಮಾ ಲ್ಯಾಬೋರೇಟರಿಸ್‌ನಿಂದ 12.54 ರು.ದರದಲ್ಲಿ ಖರೀದಿಸಿತ್ತು. ಹಾಗೆಯೆ ಒಡಿಶಾ ಮೆಡಿಕಲ್‌ ಕಾರ್ಪೋರೇಷನ್‌ ಮೈಕ್ರಾನ್‌ ಫಾರ್ಮಾಸ್ಯುಟಿಕಲ್ಸ್‌ನಿಂದ 17.14 ರು. , ನ್ಯಾಟ್ಕೋ ಫಾರ್ಮಾ ಲಿಮಿಟೆಡ್‌ನಿಂದ 8.96 ರು. ದರದಲ್ಲಿ, ತಮಿಳುನಾಡು ಮೆಡಿಕಲ್‌ ಕಾರ್ಪೋರೇಷನ್‌ ನೊವಾರ್ಟಿಸ್‌ ಹೆಲ್ತ್‌ ಕೇರ್‌ ಪ್ರೈವೈಟ್‌ ಲಿಮಿಟೆಡ್‌ನಿಂದ 12.00 ರು., ಮೈಕ್ರಾನ್‌ ಫಾರ್ಮಾಸ್ಯುಟಿಕಲ್ಸ್‌ನಿಂದ 16.91 ರು. ದರದಲ್ಲಿ ಖರೀದಿಸಿತ್ತು.

ಅಲ್ಲದೆ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್ಸ್‌ ವೇರ್‌ ಹೌಸಿಂಗ್‌ ಸೊಸೈಟಿಯು ಸಹ ಮುಂಬೈನ ಸನ್‌ ಫಾರ್ಮಾ ಲ್ಯಾಬೋರೇಟರಿ ಲಿಮಿಟೆಡ್‌ನಿಂದ ಇದೇ ಔಷಧವನ್ನು 11.20 ರು. ದರದಲ್ಲಿ ಖರೀದಿಸಿತ್ತು. ಆದರೆ ಕನಾ೯ಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ “ರಾಜ್ಯ ರಕ್ತ ಕೋಶದ ನೋಡಲ್ ಆಧಿಕಾರಿ”ಯಾಗಿದ್ದ ಡಾ. ಸ್ವತಂತ್ರಕುಮಾರ್ ಬಣಕಾರ್‌ ಅವರ ಅವಧಿಯಲ್ಲಿ ಇದೇ ಔಷಧವನ್ನು 21.09 ರು. ದರದಲ್ಲಿ ಖರೀದಿಸಲಾಗಿದೆ. ಇದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಏನಿದು ತಲಸ್ಸೇಮಿಯಾ ?

ಇದೊಂದು ಅನುವಂಶೀಯವಾಗಿ ಬರುವ ರಕ್ತ ಸಂಬಂಧಿ ಕಾಯಿಲೆ. ಈ ರೋಗವಿರುವ ಮನುಷ್ಯರಲ್ಲಿ ಕೆಂಪು ರಕ್ತ ಕಣಗಳ ಹಿಮೋಗ್ಲೋಬಿನ್‌ ವ್ಯತಿರಿಕ್ತವಾಗಿ ಉತ್ಪತ್ತಿಯಾಗುತ್ತವೆ. ಇದರಿಂದ ದೇಹದ ಕೆಂಪು ರಕ್ತ ಕಣಗಳು ಬಹು ಬೇಗ ನಾಶವಾಗಿ ರಕ್ತ ಹೀನತೆ (ಅನೀಮೀಯಾ) ಉಂಟಾಗುತ್ತದೆ. ಈ ರೋಗಿಗಳಿಗೆ ಪದೇ ಪದೇ ರಕ್ತ ನೀಡಬೇಕಾಗುತ್ತದೆ. ಇಲ್ಲವೇ ಬೋನ್‌ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ ಮಾಡಬೇಕಾಗುತ್ತದೆ. ಇದು ಅತ್ಯಂತ ದುಬಾರಿ. ಪದೇ ಪದೇ ರಕ್ತ ನೀಡಲ್ಪಡುವ ರೋಗಿಗಳ ದೇಹದಲ್ಲಿ ಹಿಮೋಗ್ಲೋಬಿನ್‌ ನಾಶವಾಗುವ ಪರಿಣಾಮವಾಗಿ ಕಾಲಕ್ರಮೇಣ ಅವರ ದೇಹದ ವಿವಿಧ ಅಂಗಾಂಗಗಳಲ್ಲಿ ಕಬ್ಬಿಣಾಂಶ ಶೇಖರಣೆಯಾಗುತ್ತದೆ. ಹೆಚ್ಚಿನ ಕಬ್ಬಿಣಾಂಶ ದೇಹದಿಂದ ವಿಸರ್ಜನೆಯಾಗದಿದ್ದಲ್ಲಿ ಅಂತಿಮವಾಗಿ ಬಹು ಅಂಗಾಂಗ ವೈಫಲ್ಯದಿಂದ ಸಾವು ಸಂಭವಿಸುತ್ತದೆ. ಇಂತಹ ರೋಗಿಗಳ ದೇಹದಿಂದ ಹೆಚ್ಚಿನ ಕಬ್ಬಿಣಾಂಶ ವಿಸರ್ಜನೆ ಮಾಡಿಸಲೆಂದು Iron Chelating Drugs ಬಳಸಲು ವೈದ್ಯರು ಸೂಚಿಸುತ್ತಾರೆ.

‘ಈ ಪ್ರಕರಣದಲ್ಲಿ ಕೆಟಿಪಿಪಿ ಕಾಯ್ದೆ 4(ಬಿ) ಉಲ್ಲಂಘಿಸಿ ಭ್ರಷ್ಟಾಚಾರ ಎಸಗಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನೀಡಿರುವ ಒಟ್ಟು ಅನುದಾನದಲ್ಲಿ ಇದೊಂದೇ ಪ್ರಕರಣದಲ್ಲಿ 50 ಲಕ್ಷಕ್ಕೂ ಹೆಚ್ಚು ಹಣವನ್ನು ಲಪಟಾಯಿಸಲಾಗಿದೆ. ಇವರ ವಿರುದ್ಧ ಭ್ರಷ್ಟಾಚಾರ ತಡೆ ಅಧಿನಿಯಮದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವುದು ಅಗತ್ಯವಾಗಿದೆ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

ಕನಾ೯ಟಕ ರಾಜ್ಯದಲ್ಲಿ, ಕೆ.ಟಿ.ಪಿ.ಪಿ ಅಧಿನಿಯಮ 1999 ಮತ್ತು ನಿಯಮಗಳು, 2000 ಅನುಷ್ಠಾನಗೊಂಡ ನಂತರ ಎಲ್ಲಾ ಸಾವ೯ಜನಿಕ ಸಂಗ್ರಹಣೆ ಅಧಿಕಾರಿಗಳು , ಸದರಿ ಅಧಿನಿಯಮ ಮತ್ತು ನಿಯಮಗಳು ಅನ್ವಯ ಇ-ಸಂಗ್ರಹಣಾ ವೇದಿಕೆಯಲ್ಲಿ ಟೆಂಡರ್ ಕರೆದು ಖರೀದಿ ಪ್ರಕ್ರಿಯೆಗಳನ್ನು ಪೂಣ೯ಗೊಳಿಸಬೇಕು. (ರೂ 1.00 ಲಕ್ಷಗಳ ಮೇಲ್ಪಟ್ಟ ಎಲ್ಲಾ ಸಂಗ್ರಹಣೆಗಳನ್ನು), ಆದರೆ ಈ ನಿಬಂಧನೆಯನ್ನು, ಕೆಲವೊಂದು ಪ್ರಸಂಗಗಳಲ್ಲಿ ಪಾಲಿಸಲು ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿಗಳನ್ನು ಕೆ.ಟಿ.ಪಿ.ಪಿ. ಅಧಿನಿಯಮ ಅಧ್ಯಾಯ II ಉಪಬಂಧುಗಳು 4 (ಬಿ) ಇಂದ 4 (h) ರಲ್ಲಿ ನೀಡಲಾಗಿದೆ.

ಕೆ.ಟಿ.ಪಿ.ಪಿ. ಅಧಿನಿಯಮ 4 (b) ವಿನಾಯಿತಿ ಏನು ಹೇಳುತ್ತದೆ?
ಸರಕುಗಳು ಅಥವಾ ಸೇವೆಗಳು ಏಕೈಕ ಮೂಲದಿಂದ ಲಭ್ಯವಾಗುತ್ತಿದ್ದಲ್ಲಿ ಅಥವಾ ಒಬ್ಬ ನಿದಿ೯ಷ್ಟ ಸರಬರಾಜುದಾರನು ಅಥವಾ ಕರಾರುದಾರನು, ಸರಕುಗಳ ಅಥವಾ ಸೇವೆಗಳ ಅಥವಾ ನಿಮಾ೯ಣ ಕಾಮಗಾರಿಗಳ ಸಂಬಂಧದಲ್ಲಿ ಸಂಪೂಣ೯ ಹಕ್ಕುಗಳನ್ನು ಹೊಂದಿದ್ದಲ್ಲಿ ಮತ್ತು ಸೂಕ್ತ ಪಯಾ೯ಯಗಳೂ ಅಥವಾ ಬದಲಿ ವ್ಯವಸ್ಥೆಗಳು ಇರದಿದ್ದಲ್ಲಿ: ಪರಂತು, ಈ ಖಂಡದ ಉದ್ದೇಶಕ್ಕಾಗಿ, ಸಂಗ್ರಹಣಾ ಸಂಸ್ಥೆಯ ಒಬ್ಬರು ತಾಂತ್ರಿಕ ಪ್ರತಿನಿಧಿ, ಅದೇ ಬಗೆಯ ಸಂಗ್ರಹಣಾ ಕಾಯ೯ವನ್ನು ನಡೆಸುತ್ತಿರುವ ಸಕಾ೯ರಿ ಸಂಸ್ಥೆಯ ಒಬ್ಬರು ತಾಂತ್ರಿಕ ಪ್ರತಿನಿಧಿ ಮತ್ತು ಸರಕುಗಳು ಅಥವಾ ಸೇವೆಗಳ ಏಕೈಕ ಮೂಲದಿಂದ ಲಭ್ಯವಾಗತ್ತವೆ ಎಂಬುದನ್ನು ಪರೀಕ್ಷಿಸುವುದಕ್ಕೆ ಮತ್ತು ಘೋಷಿಸುವುದಕ್ಕೆ ಸಂಬಂಧಿಸಿದಂತೆ ಅಂಥ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಒಂದು ಪ್ರಸಿದ್ಧವಾದ ಶೈಕ್ಷಣಿಕ ಅಥವಾ ಸಂಶೋಧನಾ ಸಂಸ್ಥೆ ಅಥವಾ ವಾಣಿಜ್ಯೇತರ ಸಂಸ್ಥೆಯ ಒಬ್ಗರು ಪ್ರತಿನಿಧಿ, ಇವರನ್ನೊಳಗೊಂಡ ಮೂವರು ತಜ್ಞರು ಇರುವ ಸಮಿತಿಯೊಂದು ಇರತಕ್ಕದ್ದು.

ಕಾಯ್ದೆಯ 4(ಬಿ) ವಿನಾಯಿತಿಯನ್ನು ಬಳಸಿಕೊಂಡಿರುವ ಅಧಿಕಾರಿಗಳು, ವಿನಾಯಿತಿ ನೀಡುವ ಮುನ್ನ ಪಾಲಿಸಬೇಕಾದ ಯಾವ ಮಾರ್ಗಸೂಚಿಗಳನ್ನೂ ಪಾಲಿಸಿಲ್ಲ ಎಂದು ಹೇಳಲಾಗಿದೆ. ಈ ಪ್ರಕರಣ ಸಚಿವ ಡಾ ಕೆ ಸುಧಾಕರ್‌ ಅವರ ಗಮನಕ್ಕೂ ಬಂದಿದ್ದರೂ ಡಾ ಸ್ವತಂತ್ರಕುಮಾರ್‌ ಬಣಕರ್‌ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

the fil favicon

SUPPORT THE FILE

Latest News

Related Posts