250 ಕೋಟಿ ಮೌಲ್ಯದ ಗೋಮಾಳ ಪರಭಾರೆ; ಪಂಚಾಯ್ತಿಯಲ್ಲಿ ಮೂಲ ದಾಖಲೆಗಳೇ ಇಲ್ಲ

ಬೆಂಗಳೂರು; ಬೆಂಗಳೂರು ಪೂರ್ವ ತಾಲೂಕು ಮುಳ್ಳೂರು ಗ್ರಾಮದ ಸರ್ವೆ ನಂಬರ್‌ 44, 45, 47, 48, 49, 49/6, 91ರಲ್ಲಿ ಅಂದಾಜು 1,250 ಕೋಟಿ ರು. ಮೌಲ್ಯದ ಸರ್ಕಾರಿ ಆಸ್ತಿ ಅಕ್ರಮವಾಗಿ ಪರಭಾರೆ ಆಗಿರುವ ಪ್ರಕರಣ ಇದೀಗ ಹೊರಬಿದ್ದಿದೆ.

ಈ ಪೈಕಿ ಸರ್ವೆ ನಂಬರ್‌ 44ರಲ್ಲಿ ಭೂ ಪರಿವರ್ತನೆಯಾಗದ ಮತ್ತು ಗ್ರಾಮ ಠಾಣೆ ವ್ಯಾಪ್ತಿಗೆ ಒಳಪಡದ ಜಾಗಕ್ಕೆ ನಮೂನೆ 9, 10 ಮತ್ತು 11ರ ದಾಖಲೆಗಳನ್ನು ನೀಡಿ ಅಂದಾಜು 250 ಕೋಟಿ ರು. ಮೌಲ್ಯದ ಸರ್ಕಾರಿ ಗೋಮಾಳ ಜಾಗವನ್ನು ಕಬಳಿಸಿರುವುದು ತನಿಖೆಯಿಂದ ದೃಢಪಟ್ಟಿದೆ. ಕೊಡತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೊಡತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಳ್ಳೂರು ಗ್ರಾಮದ ಸರ್ವೆ ನಂಬರ್‌ 44ರಲ್ಲಿ ಒಟ್ಟು 23.38 ಎಕರೆ ವಿಸ್ತೀರ್ಣದ ಸರ್ಕಾರಿ ಗೋಮಾಳವಿದೆ. ಇದರಲ್ಲಿ 2 ಎಕರೆ ವಿಸ್ತೀರ್ಣದ ಭೂಮಿಯನ್ನು ಜನತಾ ನಿವೇಶನ ನೀಡಲು ಹಲವು ವರ್ಷಗಳ ಹಿಂದೆಯೇ ಮಂಜೂರಾಗಿದೆ. ಉಳಿದಂತೆ 4 ಎಕರೆ ವಿಸ್ತೀರ್ಣದ ಜಾಗ ನಾಗಮಣಿ ಎಂಬುವರಿಗೆ ಮಂಜೂರಾಗಿದೆ ಎಂದು ಆರ್‌ಟಿಸಿಯಲ್ಲಿ ದಾಖಲಾಗಿದೆ. ಆದರೆ ಈ ಮಂಜೂರಾತಿ ಯಾವ ರೀತಿ ಆಗಿದೆ ಎಂಬ ವಿವರಗಳು ಗ್ರಾಮ ಪಂಚಾಯ್ತಿಯಲ್ಲೇ ಇಲ್ಲ ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.

ನಾಗಮಣಿ ಎಂಬುವರ ಹೆಸರಿಗೆ ಮಂಜೂರಾಗಿರುವ 4 ಎಕರೆ ಜಮೀನಿಗೆ ಸಂಬಂಧಿಸಿದಂತೆ ಮ್ಯುಟೇಷನ್‌ ದಾಖಲೆಗಳು ಮೇಲ್ನೋಟಕ್ಕೆ ಖೊಟ್ಟಿ ದಾಖಲೆಗಳು ಎಂದು ಕಂಡು ಬಂದಿದೆ. ಇದೇ ಜಾಗವನ್ನು ಮತ್ತೊಬ್ಬರಿಗೆ ಪರಭಾರೆ ಮಾಡಿದ್ದಾರೆ. ಅಲ್ಲದೆ ಈ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಆದರೂ ಈ ಪ್ರಕರಣದ ಬಗ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಸಚಿವ ಈಶ್ವರಪ್ಪ ಮತ್ತು ಕಂದಾಯ ಸಚಿವ ಆರ್‌ ಅಶೋಕ್‌ ಅವರು ಕಠಿಣ ಕ್ರಮ ಕೈಗೊಂಡಿಲ್ಲ.

ತನಿಖಾ ವರದಿಯಲ್ಲೇನಿದೆ?

ಕ್ರಮ ಸಂಖ್ಯೆ;01ರಲ್ಲಿನ 876/4ರ ಸ್ವತ್ತಿಗೆ ಸಂಬಂಧಿಸಿದಂತೆ ಸಂಖ್ಯೆ 12ರ ಮನೆ ಕಟ್ಟಡದ ಅನುಮತಿ ಪತ್ರದ ಪ್ರತಿಯು ಗ್ರಾಮ ಪಂಚಾಯ್ತಿಯ ಕಟ್ಟಡ ಲೈಸೆನ್ಸ್‌ಗೆ ಸಂಬಂಧಿಸಿದ ಮೂಲ ದಾಖಲೆಗಳಲ್ಲಿ ಕಂಡು ಬಂದಿಲ್ಲ.

ಕ್ರಮ ಸಂಖ್ಯೆ 02ರಲ್ಲಿನ 876/4 ರ ಸ್ವತ್ತಿಗೆರ ಸಂಬಂಧಿಸಿದಂತೆ ಆಕ್ಷೇಪಣೆ ರಹಿತ ಪತ್ರದ ಪ್ರತಿಯು ಗ್ರಾಮ ಪಂಚಾಯ್ತಿಯ ನಿರಾಕ್ಷೇಪಣಾ ಪತ್ರಕ್ಕೆ ಸಂಬಂಧಿಸಿದ ಮೂಲ ದಾಖಲೆಗಳಲ್ಲಿ ಕಂಡು ಬಂದಿಲ್ಲ.

ಕ್ರಮ ಸಂಖ್ಯೆ 03ರಲ್ಲಿನ ಸ್ವತ್ತಿಗೆ ಸಂಬಂಧಿಸಿದಂತೆ ನಮೂನೆ-9, ನಮೂನೆ-11ರ ದಾಖಲೆಯ ಪ್ರತಿಗಳು ಗ್ರಾಮ ಪಂಚಾಯ್ತಿಯ ಡಿಮ್ಯಾಂಡ್‌ ರಿಜಿಸ್ಟರ್‌ ವಹಿಯ ಮೂಲ ದಾಖಲೆಗಳಲ್ಲೂ ಕಂಡುಬಂದಿಲ್ಲ.

ಕ್ರಮ ಸಂಖ್ಯೆ 4ರಲ್ಲಿನ ನಿವೇಶನಕ್ಕೆ ಸಂಬಂಧಿಸಿದಂತೆ ಸಾಮಾನ್ಯ ರಸೀತಿಯ ಸಂಖ್ಯೆ;120110 ಮತ್ತು ಸಂಖ್ಯೆ ;120112 ದಾಖಲೆಯ ಪ್ರತಿಗಳು ಗ್ರಾಮ ಪಂಚಾಯ್ತಿಯ ರಸೀದಿ ಪುಸ್ತಕದ ಮೂಲ ದಾಖಲೆಗಳಲ್ಲಿ ಕಂಡು ಬಂದಿಲ್ಲ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.
ನಾಗವೇಣಿ ಎಂಬುವರಿಗೆ 4 ಎಕರೆ ಯಾವ ರೀತಿ ಮಂಜೂರಾಗಿದೆ ಎಂಬ ವಿವರಗಳು ಗ್ರಾಮ ಪಂಚಾಯ್ತಿಯಲ್ಲಿ ಯಾವುದೇ ಮೂಲ ದಾಖಲೆಗಳು ಇಲ್ಲದಿದ್ದರೂ ಸ್ಥಳೀಯ ನೋಂದಣಾಧಿಕಾರಿಗಳು ಕ್ರಯ ಪತ್ರವನ್ನು ನೋಂದಣಿ ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸರ್ಕಾರಿ ಗೋಮಾಳ, ಬಿ ಖರಾಬಿನಂತಹ ಜಾಗಗಳು ಕಬಳಿಕೆ ಆಗುತ್ತಿದ್ದರೂ ಗ್ರಾಮೀಣಾಭಿವೃದ್ಧಿ, ಕಂದಾಯ ಮತ್ತು ನೋಂದಣಿ ಮುದ್ರಾಂಕ ಇಲಾಖೆಗಳು ಆರೋಪಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಕಬಳಿಕೆ ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

the fil favicon

SUPPORT THE FILE

Latest News

Related Posts