Bank Information

PARADARSHAK MEDIA FOUNDATION, Account Number: 40107584055, SBI,Mahalalakshmipuram branch IFSC Code : SBIN0017347 Bengaluru

ಲೋಕಾಯುಕ್ತಕ್ಕೆ ಪೊಲೀಸ್‌ ಅಧಿಕಾರ; ವರ್ಷ ಕಳೆದರೂ ಸಭೆ ನಡೆಸದ ಬಿಜೆಪಿ ಸರ್ಕಾರ

ಬೆಂಗಳೂರು; ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಮತ್ತೆ ಅಧಿಕಾರ ನೀಡುವ ಸಂಬಂಧ ಮೊದಲ ಸಚಿವ ಸಂಪುಟ ಸಭೆಯಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಹೆಸರಿನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಬಿಜೆಪಿಯು ಅಧಿಕಾರ ಹಿಡಿದು ಒಂದು ವರ್ಷ ಕಳೆದರೂ ಈ ಬಗ್ಗೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ.

ರಾಜಕೀಯ ಪ್ರೇರಿತ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಲೋಕಾಯುಕ್ತವನ್ನು ನಿಜವಾದ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯನ್ನಾಗಿ ಮಾಡಲಾಗುವುದು. ಇದಕ್ಕೆ ಕಾಯ್ದೆ ತಿದ್ದುಪಡಿಯ ಅಗತ್ಯವೇನೂ ಇಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಸಿಬಿ ರಚಿಸಲು ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿ, ಲೋಕಾಯುಕ್ತ ಪೊಲೀಸರಿಗೆ ಅಧಿಕಾರ ನೀಡಿದರೆ ಸಾಕು ಎಂದು ಹೇಳಿಕೆ ನೀಡಿದ್ದ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಸ್‌ ಸುರೇಶ್‌ಕುಮಾರ್‌ ಅವರು ಸಹ ಈ ವಿಚಾರವನ್ನು ಮರೆತಿದ್ದಾರೆ.

ಲೋಕಾಯುಕ್ತ ಸಂಸ್ಥೆಗೆ ಪೊಲೀಸ್‌ ಅಧಿಕಾರವನ್ನು ಮರು ಸ್ಥಾಪಿಸುವ ಸಂಬಂಧ ‘ದಿ ಫೈಲ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ 2020ರ ಡಿಸೆಂಬರ್‌ 24ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಜಾಗೃತ ವಿಭಾಗ)ಯು ಮಾಹಿತಿ ಒದಗಿಸಿದೆ. ‘ಲೋಕಾಯುಕ್ತ ಸಂಸ್ಥೆಗೆ ಪೊಲೀಸ್‌ ಅಧಿಕಾರವನ್ನು ಮರು ಸ್ಥಾಪಿಸುವ ಸಂಬಂಧ ಯಾವುದೇ ಸಭೆಗಳು ನಡೆದಿರುವುದಿಲ್ಲ,’ ಎಂದು ಹಿಂಬರಹ ನೀಡಿದೆ.

ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತವನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ದುರ್ಬಲಗೊಳಿಸಿ, ಎಸಿಬಿ ಎಂಬ ಹೊಸ ತನಿಖಾ ಸಂಸ್ಥೆಯನ್ನು ಸ್ಥಾಪಿಸಿತ್ತು. ಇದು ಸರ್ಕಾರದ ಕೈಗೊಂಬೆಯಂತಾಗಿದೆ. ಪಾರದರ್ಶಕತೆಗೆ ಹೆಸರಾಗಿದ್ದ ಲೋಕಾಯುಕ್ತವನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರ ನೀಡಲಾಗುವುದು ಎಂದು ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತಲ್ಲದೆ ಇದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಯಡಿಯೂರಪ್ಪ ಅವರು ಭರವಸೆ ನೀಡಿದ್ದರು.

1986ರಿಂದಲೂ ಕರ್ನಾಟಕ ಲೋಕಾಯುಕ್ತ ಒಂದು ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ ಹೇಗೆ ಇರಬೇಕು ಎಂಬುದಕ್ಕೆ ಮಾದರಿಯಾಗಿತ್ತು. ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲ ಮತ್ತು ಸಂತೋಷ್‌ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಆಳುವ ಸರ್ಕಾರ ಮತ್ತು ಭ್ರಷ್ಟ ಅಧಿಕಾರಿಗಳನ್ನು ಬೇಟೆಯಾಡಿದ್ದರು. ಅದರಲ್ಲೂ ತುಂಬಾ ಮುಖ್ಯವಾಗಿ ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಬಯಲಿಗೆಳೆದಿದ್ದರಲ್ಲದೆ ಯಡಿಯೂರಪ್ಪ ಅವರು ಜೈಲಿಗೆ ಹೋಗಲು ಲೋಕಾಯುಕ್ತ ವರದಿಯೂ ಕಾರಣವಾಗಿತ್ತು.

ವಿರೋಧ ಪಕ್ಷವಾಗಿದ್ದಾಗ ಕರ್ನಾಟಕದ ಮೂರೂ ಪ್ರಮುಖ ಭ್ರಷ್ಟ ಪಕ್ಷಗಳು ಲೋಕಾಯುಕ್ತವನ್ನು ಬಲಪಡಿಸುವ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತವೆ. ಆದರೆ ಅಧಿಕಾರಕ್ಕೆ ಬಂದ ತಕ್ಷಣ ಭ್ರಷ್ಟಾಚಾರ ಮಾಡುವ ಏಕೈಕ ದೃಷ್ಟಿಯಿಂದ ಲೋಕಾಯುಕ್ತವನ್ನು ಬಲಹೀನಗೊಳಿಸುತ್ತಲೇ ಹೋಗುತ್ತಾರೆ. ಇಂತಹ ನೀಚ ಕೃತ್ಯಗಳು ಜನರಿಗೆ ಗೊತ್ತಿಲ್ಲವೆಂದೇನಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬರಲು ಪಕ್ಷಾಂತರ ಮಾಡಿದ ಭ್ರಷ್ಟರಿಗೆಲ್ಲ ಕೊಟ್ಟ ವಾಗ್ದಾನವನ್ನು ಉಳಿಸಿಕೊಂಡ ಯಡಿಯೂರಪ್ಪ ತಾವು ರಾಜ್ಯದ ಜನರಿಗೆ ನೀಡಿದ್ದ ವಾಗ್ದಾನವನ್ನು ಇಲ್ಲಿಯತನಕ ಈಡೇರಿಸದೇ ಜನರು ತಮ್ಮ ಪಾಲಿಗೆ ಎಷ್ಟು ನಗಣ್ಯರು ಎಂಬುದನ್ನು ಸಾಬೀತುಮಾಡಿ ಜನರಿಗೆ ವಚನ ದ್ರೋಹ ಎಸಗಿದ್ದಾರೆ.

ರವಿಕೃಷ್ಣಾರೆಡ್ಡಿ. ರಾಜ್ಯಾಧ್ಯಕ್ಷರು, ಕರ್ನಾಟಕ ರಾಷ್ಟ್ರಸಮಿತಿ

ಭಾಸ್ಕರರಾವ್‌ ಅವರು ಲೋಕಾಯುಕ್ತರಾದ ಬಳಿಕ ಲೋಕಾಯುಕ್ತ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದ ಕೆಲವರು ಭ್ರಷ್ಟ ಅಧಿಕಾರಿಗಳಿಂದ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಹಲವು ಪ್ರಕರಣಗಳನ್ನು ಹಿಂದಿನ ಎಸ್ಪಿ ಸೋನಿಯಾ ನಾರಂಗ್‌ ಅವರು ಹೊರಗೆಡವಿದ್ದರು. ಅಲ್ಲದೆ ಲೋಕಾಯುಕ್ತರಾಗಿದ್ದ ಭಾಸ್ಕರರಾವ್‌ ಅವರ ಪುತ್ರ ಅಶ್ವಿನ್‌ರಾವ್‌ ಅವರನ್ನು ಜೈಲಿಗೆ ಅಟ್ಟಿದ್ದನ್ನು ಸ್ಮರಿಸಬಹುದು.

ಈ ಪ್ರಕರಣದಲ್ಲಿ ಹಲವು ಚುನಾಯಿತ ಪ್ರತಿನಿಧಿಗಳು ಮತ್ತು ಆಯಕಟ್ಟಿನ ಹಿರಿಯ ಅಧಿಕಾರಿಗಳ ಹೆಸರು ಕೇಳಿ ಬಂದಿತ್ತು. ಇದನ್ನೇ ನೆಪವಾಗಿರಿಸಿದ್ದ ಹಿಂದಿನ ಕಾಂಗ್ರೆಸ್‌ ಸರ್ಕಾರವು ಪೊಲೀಸ್‌ ಅಧಿಕಾರವನ್ನು ಕಸಿದುಕೊಂಡು ಲೋಕಾಯುಕ್ತ ಸಂಸ್ಥೆಯನ್ನು ಬಲಹೀನಗೊಳಿಸಿತ್ತು. ಇದಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಿತ್ತು.

ಭ್ರಷ್ಟಾಚಾರ ಪ್ರಕರಣಗಳ ಪರಿಣಾಮಕಾರಿ ತನಿಖೆಗಾಗಿ ಲೋಕಾಯುಕ್ತ ಪೊಲೀಸ್‌ ಘಟಕಕ್ಕೆ ಎಫ್‌ಐಆರ್‌ ಮತ್ತು ತನಿಖೆಯ ಅಧಿಕಾರ ಮರಳಿಸಬೇಕು. ಇದರ ಮೇಲ್ವಿಚಾರಣೆ ಅಧಿಕಾರ ಲೋಕಾಯುಕ್ತರಿಗೆ ಇರಬೇಕು ಎಂದು ಹಲವು ಸಂಘಟನೆಗಳು ಬೀದಿಗಿಳಿದಿದ್ದರೂ ಹಾಲಿ ಬಿಜೆಪಿ ಸರ್ಕಾರವೂ ಸೇರಿದಂತೆ ಹಿಂದಿನ ಸರ್ಕಾರವು ಪೊಲೀಸ್‌ ಅಧಿಕಾರವನ್ನು ಮರಳಿ ನೀಡಿರಲಿಲ್ಲ.

ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಈಗಲೂ ದೂರು ದಾಖಲಿಸಿಕೊಳ್ಳುವ ಅಧಿಕಾರ ಇದೆ. ದಾಖಲಾದ ದೂರುಗಳ ತನಿಖೆಗೆ ಲೋಕಾಯುಕ್ತರು ಎಸಿಬಿ, ಸಿಐಡಿ ಅಥವಾ ಯಾವುದೇ ಸಂಸ್ಥೆಯ ಪೊಲೀಸರ ನೆರವು ಪಡೆಯಬಹುದು. ಯಾರಿಗೆ ಬೇಕಾದರೂ ತನಿಖೆ ನಡೆಸುವಂತೆ ಸೂಚಿಸಬಹುದು. ಆದರೆ ಭ್ರಷ್ಟಾಚಾರ ತಡೆ ಅಧಿನಿಯಮದಂತೆ ಮಾತ್ರ ಎಸಿಬಿ ದೂರು ದಾಖಲಿಸಿಕೊಳ್ಳುತ್ತದೆ ಮತ್ತು ತನಿಖೆ ನಡೆಸುತ್ತದೆ.

ಕರ್ನಾಟಕ ಪೊಲೀಸ್‌ ಕಾಯಿದೆ, ಭ್ರಷ್ಟಾಚಾರ ತಡೆ ಅಧಿನಿಯಮ, ಕರ್ನಾಟಕ ಲೋಕಾಯುಕ್ತ ಕಾಯಿದೆಗಳೆಲ್ಲವೂ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ. ಕರ್ನಾಟಕ ಪೊಲೀಸ್‌ ಕಾಯಿದೆ ಪ್ರಕಾರ ಆಡಳಿತಾತ್ಮಕವಾಗಿ ರಾಜ್ಯದಲ್ಲಿ ಒಂದೇ ಪೊಲೀಸ್‌ ಇರಬೇಕು. ಆದರೆ, ಲೋಕಾಯುಕ್ತ ಪೊಲೀಸರು ಆಡಳಿತಾತ್ಮಕವಾಗಿ ಪೊಲೀಸ್‌ ಕಾಯಿದೆಗೆ ಒಳಪಡದೆ, ಲೋಕಾಯುಕ್ತ ಕಾಯಿದೆ ವ್ಯಾಪ್ತಿಗೆ ಒಳಪಡುತ್ತಿದ್ದರು.

‘ರಾಜ್ಯ ಸರ್ಕಾರದ ಆಡಳಿತದಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಸಕ್ರಮ ಮತ್ತು ಸಾಂಸ್ಥೀಕರಣ ಮಾಡಿದ ಅತಿ ದುಷ್ಟ ತೀರ್ಮಾನ ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನು ನಾಶ ಮಾಡಿದ್ದಿದ್ದು. ಲೋಕಾಯುಕ್ತವನ್ನು ಬಲಹೀನ ಮಾಡಿ ಎಸಿಬಿ ರಚನೆ ಮಾಡಿದಾಗ ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪನವರು ಧರಣಿ ಮತ್ತು ಪ್ರತಿಭಟನೆಯನ್ನು ಮಾಡಿದ್ದರು. ಹಾಗೆಯೇ 2018ರ ಚುನಾವಣೆಯಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎಸಿಬಿ ರದ್ದುಗೊಳಿಸಿ ಪವರ್‌ಫುಲ್‌ ಲೋಕಾಯುಕ್ತವನ್ನು ಪುನರ್‌ ಸ್ಥಾಪಿಸುತ್ತೇವೆ ಎಂಬ ವಚನವನ್ನು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೊದಲ ಅಂಶವನ್ನಾಗಿ ಸೇರಿಸಿದ್ದರು. ಇಲ್ಲಿಯವರೆಗೆ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ತಮ್ಮ ವಚನವನ್ನು ನೆರವೇರಿಸಿಲ್ಲ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

Share:

Leave a Reply

Your email address will not be published.