ಬೆಂಗಳೂರು; ರಾಜ್ಯದಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದ ಸಂದರ್ಭದಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನೇ ಕೈಗೊಳ್ಳದ ಕಂದಾಯ ಸಚಿವ ಆರ್ ಅಶೋಕ್ ಸೇರಿದಂತೆ ಬಿಜೆಪಿ ಸರ್ಕಾರದ ಸಚಿವರ ಪಟ್ಟಿಯನ್ನು ‘ದಿ ಫೈಲ್’ ಬಹಿರಂಗೊಳಿಸಿದ 3 ತಿಂಗಳ ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ವಿಧಾನಸಭೆಯಲ್ಲಿ ಸಚಿವರನ್ನು ತರಾಟೆ ತೆಗೆದುಕೊಂಡರು.
ಉತ್ತರ ಕರ್ನಾಟಕದ 13 ಜಿಲ್ಲೆಗಳೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ತತ್ತರಿಸಿ ಹೋಗಿದ್ದರೂ ಕಂದಾಯ ಸಚಿವ ಆರ್ ಅಶೋಕ್ ಸೇರಿದಂತೆ ಬಿಜೆಪಿ ಸರ್ಕಾರದ ಹಲವು ಸಚಿವರು ಜಿಲ್ಲಾ ಪ್ರವಾಸವನ್ನೇ ಕೈಗೊಂಡಿರಲಿಲ್ಲ ಎಂಬ ಮಾಹಿತಿಯನ್ನು ‘ದಿ ಫೈಲ್’ 2020ರ ಸೆ.11ರಂದು ಹೊರಗೆಡವಿತ್ತು. 3 ತಿಂಗಳ ಹಿಂದೆಯೇ ಈ ಮಾಹಿತಿ ಬಹಿರಂಗವಾಗಿದ್ದರೂ ಆಗ ಮೌನ ವಹಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಇದೀಗ ಸದನದಲ್ಲಿ ಪ್ರಸ್ತಾಪಿಸಿದ್ದಾರೆ.
ಪ್ರವಾಹ; ಜಿಲ್ಲೆಗಳಲ್ಲಿ ಪ್ರವಾಸವನ್ನೇ ಕೈಗೊಳ್ಳದ ಸಚಿವರ ಪಟ್ಟಿ ಬಹಿರಂಗ
ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಮತ್ತು ವಸತಿ ಸಚಿವರು ಕೇವಲ ನೆಪ ಮಾತ್ರಕ್ಕಷ್ಟೇ ಪ್ರವಾಸ ಕೈಗೊಂಡಿದ್ದರು. ಉಳಿದವರು ಪ್ರವಾಸವನ್ನು ಕೈಗೊಂಡಿರುವ ಬಗ್ಗೆ ನಿದರ್ಶನವೇ ಇಲ್ಲ. ರಸ್ತೆ, ಸೇತುವೆ, ಸಾರ್ವಜನಿಕ ಕಟ್ಟಡಗಳಿಗೆ ಹಾನಿಯಾಗಿ 5,509 ಕೋಟಿ ರು ನಷ್ಟವಾಗಿದ್ದರೂ ಸಂಬಂಧಿಸಿದ ಸಚಿವರುಗಳು ಒಂದೋ ಎರಡೋ ಜಿಲ್ಲೆಗಳಿಗಷ್ಟೇ ಭೇಟಿ ನೀಡಿ ಕೈತೊಳೆದುಕೊಂಡಿದ್ದಾರೆ. ಈ ಕುರಿತು ಇಲಾಖೆಯ ಮುಖ್ಯಸ್ಥರುಗಳನ್ನು ಭೇಟಿ ಮಾಡಿದ್ದ ‘ದಿ ಫೈಲ್’ ಗೆ ದಾಖಲೆ ಸಮೇತ ಹೊರಗೆಡವಿತ್ತು.
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಬಗ್ಗೆ ದಿನಾಂಕಗಳ ಸಮೇತ ಕೇಳಿದ ಪ್ರಶ್ನೆಗಳಿಗೆ ಸಚಿವ ಪ್ರಭು ಚವ್ಹಾಣ್ ಸಮೇತ ಹಲವರ ತಡವರಿಸಿದರು. ಅಧಿಕಾರಿಗಳ ಬಳಿ ಕೇಳಿ ಹೇಳುತ್ತೇನೆ ಎಂದ ಪ್ರಭು ಚವ್ಹಾಣ್ ಮಾತಿಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಚವ್ಹಾಣ್ ಅವರು ಪ್ರವಾಸವನ್ನೇ ಮಾಡಿಲ್ಲ ಎಂದು ದಾಖಲೆ ಪ್ರದರ್ಶಿಸಿದರು. ಅದೇ ರೀತಿ ವಸತಿ ಸಚಿವ ಸೋಮಣ್ಣ, ಕಂದಾಯ ಸಚಿವ ಆರ್ ಅಶೋಕ್ ಅವರನ್ನೂ ಪ್ರಶ್ನಿಸಿದರು.
ಪ್ರವಾಹ ನಿರ್ವಹಣೆ, ಹಾನಿ ಪ್ರದೇಶಗಳಿಗೆ ಪರಿಹಾರ ಸೇರಿದಂತೆ ಇನ್ನಿತರೆ ಮಹತ್ತರ ಜವಾಬ್ದಾರಿ ಹೊತ್ತಿರುವ ಕಂದಾಯ ಇಲಾಖೆ ಸಚಿವ ಆರ್ ಆಶೋಕ್ ಅವರು 2019ರ ಆಗಸ್ಟ್ 29ರಂದು ಕೊಡಗಿಗೆ, 2019ರ ಆಗಸ್ಟ್ 31ರಂದು ಶಿವಮೊಗ್ಗಕ್ಕೆ , 2019ರ ಸೆಪ್ಟಂಬರ್ 19ರಂದು ಚಿಕ್ಕಮಗಳೂರಿಗೆ, 2019ರ ಅಕ್ಟೋಬರ್ 27ರಂದು ಬೆಳಗಾವಿಗೆ ಮಾತ್ರ ಭೇಟಿ ನೀಡಿದ್ದಾರೆ ಎಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರು 2019ರ ಆಗಸ್ಟ್ 21ರಂದು ಬಾಗಲಕೋಟೆ, 2019ರ ಸೆ.7 ಮತ್ತು 29ರಂದು ಬೆಳಗಾವಿಗೆ 2019ರ ಅಕ್ಟೋಬರ್ 25ರಂದು ಕೊಡಗಿಗೆ ಭೇಟಿ ನೀಡಿದ್ದರು.
ವಸತಿ ಸಚಿವ ವಿ ಸೋಮಣ್ಣ ಅವರು 2019ರ ನವೆಂಬರ್ 5 ಮತ್ತು 6ರಂದು ಬಾಗಲಕೋಟೆಗೆ, 2019ರ ನವೆಂಬರ್ 4 ಮತ್ತು 11ರಂದು ಬೆಳಗಾವಿಗೆ ಮಾತ್ರ ಭೇಟಿ ನೀಡಿದ್ದಾರೆ. ಉಳಿದ ಕಡೆ ಪ್ರವಾಸವನ್ನೇ ಕೈಗೊಂಡಿಲ್ಲ ಎಂದು ‘ದಿ ಫೈಲ್’ ವರದಿ ಮಾಡಿದ್ದನ್ನು ಸ್ಮರಿಸಬಹುದು.
ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಒಟ್ಟು 7,521 ಮನೆಗಳು ಪೂರ್ಣ ಹಾನಿಯಾಗಿದ್ದರೆ 22,689 ಮನೆಗಳು ಭಾಗಶಃ ಹಾನಿಯಾಗಿವೆ. ಬೆಳಗಾವಿಯಲ್ಲಿ 5,944 ಪೂರ್ಣ ಮನೆ ಹಾನಿ (80.12 ಕೋಟಿ ನಷ್ಟ), 11,777 ಭಾಗಶಃ ಮನೆ ಹಾನಿ, (145.67 ಕೋಟಿ ನಷ್ಟ), ಬಾಗಲಕೋಟೆಯಲ್ಲಿ 532 ಮನೆ ಹಾನಿ (8.55 ಕೋಟಿ ನಷ್ಟ), 2,428 ಭಾಗಶಃ ಹಾನಿ (36.39 ಕೋಟಿ ನಷ್ಟ)ಯಾಗಿತ್ತು. ಸಂಪೂರ್ಣ ಮನೆ ಕಳೆದುಕೊಂಡಿರುವರಿಗೆ ಒಟ್ಟು 102.27 ಕೋಟಿ ರು., ಭಾಗಶಃ ಮನೆ ಕಳೆದುಕೊಂಡಿರುವರಿಗೆ 290.88 ಕೋಟಿ ರು. ಪರಿಹಾರ ನೀಡಿದೆ.
ಪ್ರವಾಹದಿಂದ ಉಂಟಾದ ಭೂ ಕುಸಿತದಿಂದ 12,708 ಹೆಕ್ಟೇರ್ ಕೃಷಿ ಭೂಮಿ ನಾಶವಾಗಿತ್ತು. ಬೆಳಗಾವಿಯಲ್ಲಿ 4,721 ಹೆಕ್ಟೇರ್ (1770.38 ಲಕ್ಷ ರು.ಹಾನಿ) ಹಾವೇರಿ ಜಿಲ್ಲೆಯಲ್ಲಿ 7,914 ಹೆಕ್ಟೇರ್ (2967.75 ಲಕ್ಷ ಹಾನಿ) ಪ್ರದೇಶ ಭೂ ಕುಸಿತದಿಂದ ಹಾನಿಯಾಗಿತ್ತು. ಈ ಸಂಬಂಧ ಬದಲಿ ಕೃಷಿ ಭೂಮಿ ಗುರುತಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂದು ತಿಳಿದು ಬಂದಿದೆ.
4,416 ಕೋಟಿ ಮೊತ್ತದಲ್ಲಿ ರಸ್ತೆ (13,573 ಕಿ ಮೀ ) ಹಾನಿ, 1,642 ಸೇತುವೆ ಹಾನಿಯಿಂದ 6,55.45 ಕೋಟಿ, 6,137 ಸಾರ್ವಜನಿಕ ಕಟ್ಟಡಗಳಿಗೆ ಸಂಭವಿಸಿದ ಹಾನಿಯಿಂದ 437.68 ಕೋಟಿ ರು. ಸೇರಿದಂತೆ ಒಟ್ಟು 5,509 ಕೋಟಿ ರು. ನಷ್ಟವಾಗಿತ್ತು.
ರಾಜ್ಯದಲ್ಲಿ ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭಾರೀ ಮಳೆಯಿಂದಾಗಿ ಉತ್ತರ ಕರ್ನಾಟಕ ಜಿಲ್ಲೆಗಳು ಸೇರಿದಂತೆ ಒಟ್ಟು 13,663.51 ಹೆಕ್ಟೇರ್ ಪ್ರಮಾಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳಲ್ಲಿದ್ದ ಬೆಳೆಯು ಸಂಪೂರ್ಣ ನಾಶವಾಗಿತ್ತು. ಈ ಎರಡೂ ವಲಯಗಳಿಂದಲೇ 15,230 ಕೋಟಿ ರು.ನಷ್ಟ ಸಂಭವಿಸಿತ್ತು.
ಅಲ್ಲದೆ ರಸ್ತೆ, ಸೇತುವೆ, ಕಟ್ಟಡ, ಮನೆ ಹಾನಿಯೂ ಸೇರಿದಂತೆ ಒಟ್ಟು 35,160.81 ಕೋಟಿ ರು. ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ನೆರವು ಕೋರಿದ್ದ ಮೊತ್ತಕ್ಕೆ ಎದುರಾಗಿ ಕೇಂದ್ರ ಸರ್ಕಾರವು ಕೇವಲ 1,652 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಅಲ್ಲದೆ ಒಂದು ವರ್ಷದ ಸಂಭ್ರಮದಲ್ಲಿದ್ದ ಬಿಜೆಪಿ ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ ಕೆಂದ್ರ ಸರ್ಕಾರ 1,869 ಕೋಟಿ ನೆರವು ನೀಡಿದೆ ಎಂದು ತಪ್ಪಾಗಿ ಬಿಂಬಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಅದೇ ರೀತಿ 2019ರ ಆಗಸ್ಟ್‌ನಲ್ಲಿ ತೀವ್ರ ಮಳೆ ಮತ್ತು ಭೂ ಕುಸಿತದಿಂದಾಗಿ 17,981.00 ಹೆಕ್ಟೇರ್ ಕಾಫಿ ಬೆಳೆ ಹಾನಿಯಾಗಿತ್ತು. ಈ ಪೈಕಿ 12,895 ರೈತರಿಗೆ 40,78,00,000 ರು.ಇನ್‌ಪುಟ್ ಸಬ್ಸಿಡಿಯನ್ನು ಆಯಾ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿತ್ತು. ಕಾಫಿ ಸೇರಿದಂತೆ ಇತರೆ ಬೆಳೆಹಾನಿ ಸಂಬಂಧ ಒಟ್ಟು 26,934 ರೈತರಿಗೆ 61,70,46,405 ರು. ಪರಿಹಾರ ಮೊತ್ತ ನೀಡಿತ್ತು ಎಂದು ಗೊತ್ತಾಗಿದೆ.