ಪ.ಜಾತಿ, ಪ.ಪಂಗಡ ಉಪ ಯೋಜನೆ; 1,084 ಕೋಟಿ ಕಡಿತಗೊಳಿಸಿದ ಬಿಜೆಪಿ ಸರ್ಕಾರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಶೇ.24.1ರಷ್ಟು ಅನುದಾನ ನೀಡಬೇಕಿದ್ದ ರಾಜ್ಯ ಬಿಜೆಪಿ ಸರ್ಕಾರ, 2020-21ನೇ ಸಾಲಿನಲ್ಲಿ ಮೂಲ ಹಂಚಿಕೆಯಿಂದ ಒಂದು ಸಾವಿರ ಕೋಟಿಯನ್ನು ಕಡಿತಗೊಳಿಸಿದೆ. ಮೂಲ ಹಂಚಿಕೆಯಿಂದ ಕಡಿತಗೊಳಿಸಲು ಯಾವುದೇ ಕಾರಣಗಳನ್ನು ನೀಡಿಲ್ಲ.

ಪ.ಜಾತಿ ಮತ್ತು ಪ.ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಸಂಬಂಧ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರವೂ ಪ.ಜಾತಿ, ಪ.ಪಂಗಡ ಉಪ ಯೋಜನೆಗಳ ಮೂಲ ಹಂಚಿಕೆಯನ್ನು ಪರಿಷ್ಕತಗೊಳಿಸಿ ಸಾವಿರ ಕೋಟಿ ರು. ಕಡಿತಗೊಳಿಸಿರುವುದು ಮುನ್ನೆಲೆಗೆ ಬಂದಿದೆ.

2020-21ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಗೆ 19,432.22 ಕೋಟಿ ರು., ಪರಿಶಿಷ್ಟ ಪಂಗಡ ಉಪ ಯೋಜನೆಗೆ 8,267.30 ಕೋಟಿ ಸೇರಿ ಒಟ್ಟು 27,699.52 ಕೋಟಿ ರು.ಗಳನ್ನು ಮೊದಲು ಹಂಚಿಕೆ ಮಾಡಿತ್ತು. ಆದರೆ ಇದನ್ನು ಪರಿಷ್ಕೃತಗೊಳಿಸಿದ್ದ ಬಿಜೆಪಿ ಸರ್ಕಾರ ಮೂಲ ಹಂಚಿಕೆಯಿಂದ 1,084.83 ಕೋಟಿ ರು.ಗಳನ್ನು ಕಡಿತಗೊಳಿಸಿದೆ.

ಪ.ಜಾತಿ ಮತ್ತು ಪ.ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಆಯವ್ಯಯದಲ್ಲಿ ಒದಗಿಸುತ್ತಿರುವ ಅನುದಾನವನ್ನು ಕಡಿತಗೊಳಿಸುವುದು ಸರಿಯಲ್ಲ. ಇದು ಬಿಜೆಪಿ ಸರ್ಕಾರದ ಹೊಣೆಗೇಡಿತನ ಮತ್ತು ದಲಿತರ ಮೇಲಿನ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತದೆ. ಮೂಲ ಹಂಚಿಕೆಯಿಂದ ಕಡಿತಗೊಳಿಸಲು ಕಾರಣಗಳೇನು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. 1,084 ಕೋಟಿ ಕಡಿತಗೊಳಿಸಿರುವುದು ಅಕ್ಷ್ಯಮ್ಯವಲ್ಲದೇ ಮತ್ತೇನು?. ಸರ್ಕಾರ ಮಾಡಿರುವ ಈ ತಪ್ಪನ್ನು ಕೂಡಲೇ ಸರಿಪಡಿಸಿಕೊಂಡು ಮೂಲ ಹಂಚಿಕೆ ಪ್ರಕಾರವೇ ಅನುದಾನವನ್ನು ಯೋಜನೆಯ ಲೆಕ್ಕಶೀರ್ಷಿಕೆಗಳಿಗೆ ಮರಳಿಸಬೇಕು.

ಬಿ ಎನ್‌ ರಮೇಶ್‌, ಅಧ್ಯಕ್ಷರು, ಯುವಜನ ಜಾಗೃತಿ ವೇದಿಕೆ

2020ರ ನವೆಂಬರ್‌ 11ರಂದು ಸಮಾಜ ಕಲ್ಯಾಣ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ. ಸಭೆಯ ನಡವಳಿಗಳು ಮತ್ತು ಇಲಾಖಾವಾರು ಆಯವ್ಯಯದ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

18,450 ಕೋಟಿ ಉಳಿಕೆ

ಎಸ್‌ ಸಿ ಎಸ್‌ ಪಿ ಯೋಜನೆಗೆ ಮೂಲ ಹಂಚಿಕೆಯಲ್ಲಿ 19,432.22 ಕೋಟಿಯಲ್ಲಿ 772.57 ಕೋಟಿ ರು.ಗಳನ್ನು ಕಡಿತಗೊಳಿಸಿ 18,659.22 ಕೋಟಿಗೆ ಪರಿಷ್ಕೃತಗೊಳಿಸಲಾಗಿದೆ. ಅದೇ ರೀತಿ ಟಿ ಎಸ್‌ ಪಿ ಯೋಜನೆಯಲ್ಲಿ 8,267.30 ಕೋಟಿಯಲ್ಲಿ 312.26 ಕೋಟಿ ರು.ಕಡಿತಗೊಳಿಸಿ 7,955.04 ಕೋಟಿಗೆ ಪರಿಷ್ಕತಗೊಳಿಸಿರುವುದು ತಿಳಿದು ಬಂದಿದೆ. ಎಸ್‌ ಸಿ ಎಸ್‌ ಪಿ ಯೋಜನೆಗೆ ಹಂಚಿಕೆಯಾಗಿದ್ದ 18,659.22 ಕೋಟಿ ರು.ನಲ್ಲಿ 2020ರ ಅಕ್ಟೋಬರ್‌ ಅಂತ್ಯಕ್ಕೆ 5,856.84 (ಶೇ.31) ಕೋಟಿ ರು. ಖರ್ಚಾಗಿದ್ದರೆ ಟಿ ಎಸ್‌ ಪಿ ಯಲ್ಲಿ 7,955.04 ಕೋಟಿಯಲ್ಲಿ 2,307.25ಕೋಟಿ (ಶೇ.29) ರು. ಖರ್ಚು ಮಾಡಿರುವ ಇಲಾಖೆಗಳು 18,450 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿರುವುದು ದಾಖಲೆಯಿಂದ ಗೊತ್ತಾಗಿದೆ.

ಮೂಲ ಹಂಚಿಕೆಯಾಗಿದ್ದೆಷ್ಟು? (ಎಸ್‌ಸಿಸಿಪಿ-ಟಿಎಸ್‌ಪಿ)

ಕೃಷಿ ಇಲಾಖೆ; 977.25 ಕೋಟಿ
ತೋಟಗಾರಿಕೆ; 133.58 ಕೋಟಿ
ರೇಷ್ಮೆ; 23.13 ಕೋಟಿ
ಪಶು ಸಂಗೋಪನೆ; 204.24 ಕೋಟಿ
ಮೀನುಗಾರಿಕೆ; 7.36 ಕೋಟಿ
ಸಾರಿಗೆ; 249.21 ಕೋಟಿ
ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌; 2,350.55 ಕೋಟಿ
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ; 23.94 ಕೋಟಿ
ಸಹಕಾರ ; 202.59 ಕೋಟಿ
ಹಿಂದುಳಿದ ವರ್ಗಗಳ ಕಲ್ಯಾಣ; 144.67 ಕೋಟಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ; 871.13 ಕೋಟಿ
ವಾರ್ತಾ; 8.42 ಕೋಟಿ
ಪ್ರವಾಸೋದ್ಯಮ; 5.00 ಕೋಟಿ
ಯುವ ಸಬಲೀಕರಣ-ಕ್ರೀಡಾ; 22.33 ಕೋಟಿ
ಆಹಾರ, ನಾಗರಿಕ ಸರಬರಾಜು; 644.36 ಕೋಟಿ
ಕಂದಾಯ; 2,915.89 ಕೋಟಿ
ಐಟಿ; 2.85 ಕೋಟಿ
ವಸತಿ; 1,484.91 ಕೋಟಿ
ಉನ್ನತ ಶಿಕ್ಷಣ; 62.71 ಕೋಟಿ
ಪ್ರಾಥಮಿಕ, ಪ್ರೌಢ ಶಿಕ್ಷಣ; 1063.27 ಕೋಟಿ
ವಾಣಿಜ್ಯ, ಕೈಗಾರಿಕೆ (ಜವಳಿ); 66.17 ಕೋಟಿ
ಸಣ್ಣ ಪ್ರಮಾಣದ ಕೈಗಾರಿಕೆ; 108.20 ಕೋಟಿ
ನಗರಾಭಿವೃದ್ಧಿ; 1,402.47 ಕೋಟಿ
ಲೋಕೋಪಯೋಗಿ; 1,893.09 ಕೋಟಿ
ಭಾರೀ ನೀರಾವರಿ; 2,895.10 ಕೋಟಿ
ಸಣ್ಣ ನೀರಾವರಿ; 365.08 ಕೋಟಿ
ವೈದ್ಯಕೀಯ ಶಿಕ್ಷಣ; 62.65 ಕೋಟಿ
ಆರೋಗ್ಯ; 1,061.48 ಕೋಟಿ
ಕಾರ್ಮಿಕ; 1.69 ಕೋಟಿ
ಕೌಶಲ್ಯ ಅಭಿವೃದ್ಧಿ; 120.29 ಕೋಟಿ
ಇಂಧನ; 2,169.18 ಕೋಟಿ
ಕನ್ನಡ ಮತ್ತು ಸಂಸ್ಕೃತಿ; 21.48 ಕೋಟಿ
ಯೋಜನೆ, ಸಾಂಖ್ಯಿಕ, ವಿಜ್ಞಾನ, ತಂತ್ರಜ್ಞಾನ; 656.06 ಕೋಟಿ
ಕಾನೂನು; 0.33 ಕೋಟಿ
ಪರಿಶಿಷ್ಟ ಜಾತಿ ಕಲ್ಯಾಣ; 3,988.80 ಕೋಟಿ
ಪರಿಶಿಷ್ಟ ಪಂಗಡಗಳ ಕಲ್ಯಾಣ; 1,490.06 ಕೋಟಿ

1,084.83 ಕೋಟಿ ಕಡಿತಗೊಳಿಸಿರುವ ಪರಿಣಾಮ ಇಲಾಖೆಗಳಲ್ಲಿ ಜಾರಿಗೊಳಿಸಿರುವ ಕಾರ್ಯಕ್ರಮಗಳೂ ಕಡಿತಗೊಂಡಿವೆ. ಸಹಜವಾಗಿಯೇ ಫಲಾನುಭವಿಗಳ ಸಂಖ್ಯೆಯಲ್ಲಿಯೂ ಇಳಿಕೆ ಕಾಣಲಿದೆ.

2013-14ರಲ್ಲಿ ಈ ಉಪ ಯೋಜನೆಗೆ 8,616 ಕೋಟಿರು. ಹಂಚಿಕೆಯಾಗಿತ್ತು. ಅಧಿನಿಯಮ ಜಾರಿಗೊಂಡ ನಂತರ ಪ್ರತಿ ವರ್ಷ ಆಯವ್ಯಯದಲ್ಲಿ ಪ.ಜಾತಿ, ಪ.ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಶೇ.24.1ರಷ್ಟು ಅನುದಾನ ಒದಗಿಸಲಾಗಿತ್ತು. 2018-19ರಲ್ಲಿ 29,209 ಕೋಟಿ ರು.ಗೇರಿದ್ದರೆ 2019-20ರಲ್ಲಿ 30,444.99 ಕೋಟಿ ರು.ಗೇರಿದೆ.

ಪ.ಜಾತಿ ಮತ್ತು ಪ.ಪಂಗಡ ಉಪ ಯೋಜನೆಯಲ್ಲಿ ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣ, ಪಾಲಿ ಹೌಸ್‌ ನಿರ್ಮಾಣ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ, ಹಸು ಎಮ್ಮೆ ನೀಡುವುದು, ಮೀನುಗಾರಿಕೆ ಕಿಟ್‌, ಮೀನು ಮಾರಾಟ ಮಳಿಗೆ ಸ್ಥಾಪನೆಗೆ ನೆರವು, ಪ.ಜಾತಿ, ಪ.ಪಂಗಡ ಕುಟುಂಬಗಳಿಗೆ ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಾಣ, ನೀರು ಸರಬರಾಜು, ನೀರು ಶುದ್ಧೀಕರಣ ಘಟಕ, ಪ.ಜಾತಿ, ಪ.ಪಂಗಡ ನಿವಾಸಿಗಳ ಕಾಲೋನಿಗಳಿಗೆ ರಸ್ತೆ, ಸಂಪರ್ಕ ರಸ್ತೆ, ಚರಂಡಿ ನಿರ್ಮಾಣ, ಅರಣ್ಯದಂಚಿನ ಗ್ರಾಮಗಳಲ್ಲಿನ ಪ.ಜಾತಿ, ಪ.ಪಂಗಡ ನಿವಾಸಿಗಳಿಗೆ ಎಲ್‌ಪಿಜಿ ಸಂಪರ್ಕ ಸೌಲಭ್ಯ, ಸೋಲಾರ್‌ ಲ್ಯಾಂಪ್‌, ಸೋಲಾರ್‌ ಹೀಟರ್‌, ಬೆಳೆ ಸಹಾಯ ಧನ, ಬಡ್ಡಿ ಸಹಾಯ ಧನ, ಸಾಲದ ಬಡ್ಡಿ ಮನ್ನಾ ಸೇರಿದಂತೆ ಹಲವು ಕಾರ್ಯಕ್ರಮಗಳಿವೆ.

the fil favicon

SUPPORT THE FILE

Latest News

Related Posts