ಅಕ್ಷಯಪಾತ್ರಾ ಅವ್ಯವಹಾರ; ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಲೆಹರ್‌ಸಿಂಗ್‌ ಪತ್ರ

ಬೆಂಗಳೂರು; ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಾರಿ ಏಜೆನ್ಸಿಯಾಗಿ ಅವಕಾಶ ಗಿಟ್ಟಿಸಿಕೊಂಡಿರುವ ಅಕ್ಷಯ ಪಾತ್ರಾ ಫೌಂಡೇ‍ಷನ್‌ನ ಆಡಳಿತಾತ್ಮಕ ಲೋಪ, ಲೆಕ್ಕಪತ್ರಗಳಲ್ಲಿನ ವ್ಯತ್ಯಾಸ, ನಿಯಮಬಾಹಿರ ಚಟುವಟಿಕೆಗಳೂ ಸೇರಿದಂತೆ ಕಂಡು ಬಂದಿರುವ ಇನ್ನಿತರೆ ಗಂಭೀರ ಲೋಪಗಳ ಕುರಿತು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಅವರು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ.

ಅಕ್ಷಯ ಪಾತ್ರಾ ಫೌಂಡೇಷನ್‌ನ ಸ್ವತಂತ್ರ ಟ್ರಸ್ಟಿಗಳಾದ ಟಿ ವಿ ಮೋಹನ್ ದಾಸ್ ಪೈ, ರಾಜ್ ಪಿ ಕೊಂಡೂರ್, ವಿ ಬಾಲಕೃಷ್ಣನ್ ಮತ್ತು ಅಭಯ್ ಜೈನ್ ಅವರು ಬಯಲು ಮಾಡಿದ್ದ ಸಂಸ್ಥೆಯ ಲೋಪಗಳು ಮತ್ತು ಈ ಕುರಿತು ‘ದಿ ಫೈಲ್‌’ ಸೇರಿದಂತೆ ಸ್ವತಂತ್ರ ಮಾಧ್ಯಮಗಳು ಮತ್ತು ಮುಖ್ಯವಾಹಿನಿಯಲ್ಲಿರುವ ಆಂಗ್ಲ ದೈನಿಕಗಳು ಪ್ರಕಟಿಸಿದ್ದ ವರದಿಗಳನ್ನೂ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದಿರುವುದು ಗೊತ್ತಾಗಿದೆ. ಮುಖ್ಯ ನ್ಯಾಯಾಧೀಶರಿಗೆ 2020ರ ಡಿಸೆಂಬರ್‌ 7ರಂದು ಬರೆದಿರುವ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಫೌಂಡೇಷನ್‌ನ ಆಡಳಿತಾತ್ಮಕ ಲೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸುವ ಸಂಬಂಧ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ಸಿರೋಯಾ ಅವರು ಮತ್ತು ಅಕ್ಷಯಪಾತ್ರಾ ಫೌಂಡೇಷನ್‌ನ ಅಧ್ಯಕ್ಷರಿಗೂ ಪತ್ರ ಬರೆದಿದ್ದರು.

ಫೌಂಡೇಷನ್‌ನ ಚಟುವಟಿಕೆಗಳ ಬಗ್ಗೆ ಫೌಂಡೇಷನ್‌ ಟ್ರಸ್ಟಿಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರವನ್ನು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಕಳೆದ ಅಕ್ಟೋಬರ್‌ 17ರಂದೇ ಬಯಲುಗೊಳಿಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿದ್ದ ಸುಗತ ಅವರು, ಫೌಂಡೇಷನ್‌ನ ಒಳಗುಟ್ಟುಗಳನ್ನು ಸಾರ್ವಜನಿಕ ವಲಯದಲ್ಲಿ ಮುನ್ನೆಲೆಗೆ ತಂದಿದ್ದನ್ನು ಸ್ಮರಿಸಬಹುದು.

ಅಕ್ಷಯಪಾತ್ರಾ ಫೌಂಡೇಷನ್‌ನಲ್ಲಿ ಆಡಳಿತಾತ್ಮಕ ಲೋಪಗಳು, ತಾಳೆಯಾಗದ ಲೆಕ್ಕಪತ್ರಗಳು ಮತ್ತು ಆಡಳಿತ ಮಂಡಳಿಯ ಟ್ರಸ್ಟಿಗಳಿಗೆ ಮತ್ತು ಲೆಕ್ಕಪರಿಶೋಧನಾ ಸಮಿತಿಗೆ ಉತ್ತರದಾಯಿಯಲ್ಲದ ಮತ್ತು ಕೇವಲ ಧಾರ್ಮಿಕ ಮುಖ್ಯಸ್ಥರಿಗೆ ಮಾತ್ರ ಸಂಪೂರ್ಣ ಅಧಿಕಾರ ನೀಡುವ ವ್ಯವಸ್ಥೆ ಎಂಬ ಸಂಗತಿ ಕುರಿತು ನಡೆದಿದ್ದ ಪರಿಶೋಧನೆ ಕುರಿತು ಸುಗತ ಅವರು ಲಭ್ಯವಿದ್ದ ಮಾಹಿತಿ ಮತ್ತು ಪತ್ರಗಳ ಆಧಾರವನ್ನಿಟ್ಟುಕೊಂಡು ಹೊರಗೆಡವಿದ್ದರು.

ನಿರ್ದಿಷ್ಟ ಘಟಕಗಳ ನಿರ್ವಹಣೆ, ದೇಣಿಗೆ ಸಂಗ್ರಹ, ವಾಹನ ವೆಚ್ಚ, ಅನುದಾನ ಸಂಗ್ರಹದ ಖರ್ಚು ವೆಚ್ಚ, ಬಾಡಿಗೆ ಹಂಚಿಕೆ, ಅನುದಾನ ಸಂಗ್ರಹ ಸೇರಿದಂತೆ ಹಲವು ವಿಷಯದಲ್ಲಿ ಫೌಂಡೇಷನ್ ಮತ್ತು ದೇವಾಲಯ ಟ್ರಸ್ಟುಗಳ ನಡುವೆ ಸ್ಪಷ್ಟತೆ ಇಲ್ಲದ ವ್ಯವಹಾರಗಳು, ಯಾವುದೇ ಲಿಖಿತ ಒಪ್ಪಂದ ಪತ್ರಗಳಾಗಲೀ, ಸ್ಪಷ್ಟತೆಯೇ ಇರಲಿಲ್ಲ ಎಂಬುದನ್ನು ಟ್ರಸ್ಟಿಗಳ ನಡುವೆ ನಡೆದ ಪತ್ರವ್ಯವಹಾರಗಳ ಕುರಿತು ದಿ ವೈರ್‌ ಜಾಲತಾಣದಲ್ಲಿ ವಿಸ್ತೃತವಾಗಿ ಬರೆದಿದ್ದ ಲೇಖನವನ್ನು ಸ್ಮರಿಸಬಹುದು.

ಲೆಹರ್‌ಸಿಂಗ್‌ ಅವರು ತನಿಖೆಗೆ ಒತ್ತಾಯಿಸಿ ಪತ್ರ ಬರೆದ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ವಕ್ತಾರ ಹಾಗೂ ವಿಧಾನಪರಿಷತ್‌ನ ಮಾಜಿ ಸದಸ್ಯ ಗಣೇಶ್‌ ಕಾರ್ಣಿಕ್‌ ಅವರು ದನಿ ಎತ್ತಿದ್ದರು.
ಅದೇ ರೀತಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ವಸಂತಪುರದಲ್ಲಿ ಇಂಡಿಯನ್‌ ಹೆರಿಟೇಜ್‌ ಫೌಂಡೇಷನ್‌ ನಿರ್ಮಿಸಿರುವ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಅಕ್ಷಯಪಾತ್ರಾ ಫೌಂಡೇಷನ್‌ನ ಟ್ರಸ್ಟಿಗಳಲ್ಲೊಬ್ಬರಾದ ಅಭಯಕುಮಾರ್‌ ಜೈನ್‌ ಅವರು ಫ್ಲಾಟ್‌ಗಳನ್ನು ಖರೀದಿಸಿದ್ದನ್ನು ‘ದಿ ಫೈಲ್‌’ 2020ರ ನವೆಂಬರ್‌ 28ರಂದು ಹೊರಗೆಡವಿತ್ತು.

ಅಕ್ಷಯಪಾತ್ರಾ ಟ್ರಸ್ಟಿಗೆ ಗೋಕುಲಂ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌; ಹಿತಾಸಕ್ತಿ ಸಂಘರ್ಷ?

ಶಾಲಾಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಅಕ್ಷಯಪಾತ್ರಾ ಫೌಂಡೇಷನ್‌ ಅನುಷ್ಠಾನಗೊಳಿಸುತ್ತಿದೆ. ಇಸ್ಕಾನ್‌ ಮತ್ತು ಇಂಡಿಯನ್‌ ಹೆರಿಟೇಜ್‌ ಫೌಂಡೇಷನ್‌ ಧಾರ್ಮಿಕ ಚಟುವಟಿಕೆ, ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಧಾರ್ಮಿಕ ಚಟುವಟಿಕೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ರಿಯಲ್‌ ಎಸ್ಟೇಟ್‌ ಈ ಮೂರು ವ್ಯವಹಾರಗಳನ್ನು ಒಟ್ಟೊಟ್ಟಿಗೆ ನಡೆಸುತ್ತಿರುವುದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.

ಫೌಂಡೇಷನ್‌ನ ಸ್ವತಂತ್ರ ಟ್ರಸ್ಟಿಗಳ ರಾಜೀನಾಮೆ ವಿಷಯ, ಫೌಂಡೇಷನ್‌ನಲ್ಲಿ ನಡೆದಿದೆ ಎನ್ನಲಾಗಿರುವ ಆಡಳಿತದಲ್ಲಿ ಲೋಪಗಳು ಮತ್ತು ಅವ್ಯವಹಾರಗಳು, ಟ್ರಸ್ಟಿ ಅಭಯ್‌ಕುಮಾರ್‌ ಜೈನ್‌ ಅವರು ಫ್ಲಾಟ್‌ಗಳನ್ನು ಖರೀದಿಸಿರುವ ವಿಚಾರ, ಅಕ್ಷಯಪಾತ್ರಾ ಫೌಂಡೇಷನ್‌, ಇಸ್ಕಾನ್‌ ಮತ್ತು ಇಂಡಿಯನ್‌ ಹೆರಿಟೇಜ್‌ ಫೌಂಡೇಷನ್‌ನ ಕುರಿತಾದ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಫೌಂಡೇಷನ್‌ನ ಆಡಳಿತಾತ್ಮಕ ಲೋಪಗಳು ಹೈಕೋರ್ಟ್‌ ಮೆಟ್ಟಿಲೇರಿರುವುದು ಕುತೂಹಲ ಮೂಡಿಸಿದಂತಾಗಿದೆ.

the fil favicon

SUPPORT THE FILE

Latest News

Related Posts