ಕೋವಿಡ್ ಭ್ರಷ್ಟಾಚಾರ; ಮಧ್ಯಂತರ ವರದಿ ಮಂಡಿಸಲು ಲೆಕ್ಕಪತ್ರ ಸಮಿತಿಗೆ ಸಿಗದ ಅನುಮತಿ?

ಬೆಂಗಳೂರು; ಕೋವಿಡ್‌-19ರ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ವಿಶೇಷ ಲೆಕ್ಕಪರಿಶೋಧನೆ ನಡೆಸುವ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಿದ್ಧಪಡಿಸಿದ್ದ ಮಧ್ಯಂತರ ವರದಿಯನ್ನು ಸದನಕ್ಕೆ ಮಂಡಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಇದೇ ಡಿಸೆಂಬರ್‌ 7ರಿಂದ ಅಧಿವೇಶನ ಆರಂಭವಾಗಿರುವ ಹೊತ್ತಿನಲ್ಲೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮಧ್ಯಂತರ ವರದಿ ಮಂಡಿಸಲು ಅನುಮತಿ ನೀಡದಿರುವುದು ಮುನ್ನೆಲೆಗೆ ಬಂದಿದೆ.
ಕಳೆದ ಸೆಪ್ಟಂಬರ್‌ನಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಎಚ್‌ ಕೆ ಪಾಟೀಲ್‌ ಅಧ್ಯಕ್ಷತೆಯಲ್ಲಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಮಧ್ಯಂತರ ವರದಿಯನ್ನು ಸದನಕ್ಕೆ ಮಂಡಿಸುವ ಇರಾದೆ ಹೊಂದಿತ್ತು. ವರದಿಯ ಕರಡು ಪ್ರತಿಯನ್ನೂ ಸಭಾಧ್ಯಕ್ಷ ಕಾಗೇರಿ ಅವರಿಗೆ ತಲುಪಿಸಲಾಗಿತ್ತು. ವರದಿ ಮಂಡಿಸುವ ಸಂಬಂಧ ಕಾಗೇರಿ ಅವರು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಳೆದ 2 ತಿಂಗಳಿನಿಂದಲೂ ಅವರ ಕಚೇರಿಯಲ್ಲೇ ಧೂಳು ಹಿಡಿದಿದೆ ಎಂದು ಹಿಂದಿನ ಸಮಿತಿಯಲ್ಲಿದ್ದ ಸದಸ್ಯ ಶಾಸಕರೊಬ್ಬರು ‘ದಿ ಫೈಲ್‌’ಗೆ ತಿಳಿಸಿದರು.

ರಾಮಲಿಂಗಾರೆಡ್ಡಿ ಅವರು ಅಧ್ಯಕ್ಷರಾದ ನಂತರ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು 2 ಸಭೆಗಳನ್ನು ನಡೆಸಿದೆ. ಆದರೆ ಹಿಂದಿನ ಸಮಿತಿ ಸಿದ್ಧಪಡಿಸಿದ್ದ ಮಧ್ಯಂತರ ವರದಿ ಕುರಿತು ಚರ್ಚಿಸಿಲ್ಲ ಎಂದು ಗೊತ್ತಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಿಎಜಿ ನೀಡಿರುವ ವರದಿಯಲ್ಲಿನ ಕಂಡಿಕೆಗಳನ್ನಷ್ಟೇ ಚರ್ಚಿಸಿದೆ ಎಂದು ತಿಳಿದು ಬಂದಿದೆ.

ಕೋವಿಡ್‌-19 ಭ್ರಷ್ಟಾಚಾರ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು ಸಲ್ಲಿಸಿದ್ದ ದೂರನ್ನು ಸಮಿತಿಯ ಹಿಂದಿನ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಕೈಗೆತ್ತಿಕೊಂಡಿದ್ದರು. ಈ ಸಂಬಂಧ ನಡೆದ ಸಭೆಗಳಿಗೆ ಹಾಜರಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಮುಖ್ಯಸ್ಥರು ಸಮಿತಿಗೆ ಸರಿಯಾದ ದಾಖಲೆಗಳನ್ನು ಒದಗಿಸಿರಲಿಲ್ಲ. ಅವ್ಯವಹಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ವಿಶೇಷ ಲೆಕ್ಕಪರಿಶೋಧನೆ ನಡೆಸಲು ತೀರ್ಮಾನ ಕೈಗೊಂಡಿತ್ತು.

ಆದರೆ ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಹಕರಿಸಿರಲಿಲ್ಲ. ಸಮಿತಿ ಜತೆ ಸಂಘರ್ಷಕ್ಕಿಳಿದಿತ್ತು. ಕೋವಿಡ್‌-19ರ ನಿರ್ವಹಣೆಗಾಗಿ ವಿವಿಧ ಸಂಸ್ಥೆಗಳ ಮೂಲಕ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಯು ಪಾರದರ್ಶಕವಾಗಿದೆ. ಹೀಗಾಗಿ ವಿಶೇಷ ಲೆಕ್ಕಪರಿಶೋಧನೆ ನಡೆಸಲು ಇಲಾಖೆ ಬಳಿ ಯಾವ ಸಮರ್ಥನೆಗಳೂ ಇಲ್ಲ ಮತ್ತು ಅದರ ಅಗತ್ಯವೂ ಇಲ್ಲ. ಇಲಾಖೆ ನೇರವಾಗಿ ಪ್ರಧಾನ ಮಹಾಲೇಖಪಾಲರಿಗೆ ದಾಖಲಾತಿ ಮತ್ತು ಮಾಹಿತಿಗಳನ್ನು ಒದಗಿಸಲಾಗುವುದು. ಹೀಗಾಗಿ ವಿಶೇಷ ಲೆಕ್ಕ ಪರಿಶೋಧನೆ ನಡೆಸಲು ಯಾವ ಸಮರ್ಥನೆ ಮತ್ತು ಕಾರಣಗಳೂ ಇಲ್ಲ,’ ಎಂದು ಜಾವೇದ್‌ ಅಖ್ತರ್‌ ಅವರು ನೇರವಾಗಿ ಸಿಎಜಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

ಅಲ್ಲದೆ ವೈದ್ಯಕೀಯ ಪರಿಕರಗಳ ಖರೀದಿ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಒಟ್ಟು 30 ಪ್ರಶ್ನಾವಳಿಗಳನ್ನು ನೀಡಿತ್ತು. ಆದರೆ ಈ ಪ್ರಶ್ನಾವಳಿಗಳಿಗೂ ಇಲಾಖೆ ಯಾವುದೇ ಉತ್ತರವನ್ನು ಒದಗಿಸಿರಲಿಲ್ಲ.

ಪಿಪಿಇ ಕಿಟ್‌, ಸ್ಯಾನಿಟೈಸರ್‌, ವೆಂಟಿಲೇಟರ್‌, ಮಾಸ್ಕ್‌, ಆರ್‌ಟಿಪಿಸಿಆರ್‌ ಉಪಕರಣ ಸೇರಿದಂತೆ ಇನ್ನಿತರೆ ವೈದ್ಯಕೀಯ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರ ನೀಡಿ ಖರೀದಿಸಿತ್ತು ಎಂಬ ಬಲವಾದ ಆರೋಪಗಳು ಕೇಳಿಬಂದಿದ್ದವು. ಸಮಿತಿಯ ಸದಸ್ಯ ಶಾಸಕರಾಗಿದ್ದ ಮುರುಗೇಶ್‌ ನಿರಾಣಿ ಅವರು ಸಹ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಪೆನ್‌ಡ್ರೈವ್‌ನಲ್ಲಿ ಕೆಲ ದಾಖಲೆಗಳಿವೆ ಎಂದು ಸಮಿತಿ ಮುಂದೆ ಪ್ರಸ್ತಾಪಿಸಿದ್ದರು. ಆನಂತರ ನಿರಾಣಿ ಅವರು ಅದಕ್ಕೆ ಬದ್ಧರಾಗಿರಲಿಲ್ಲ.

ವೈದ್ಯಕೀಯ ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ‘ದಿ ಫೈಲ್‌’ ದಾಖಲೆ ಸಮೇತ ಹಲವು ಪ್ರಕರಣಗಳನ್ನು ಹೊರಗೆಡವಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts