ರಸ್ತೆ ಕಬಳಿಕೆ; ಹೈಕೋರ್ಟ್‌ ಆದೇಶವಿದ್ದರೂ ತೆರವಾಗದ ಎಸ್‌ ಎಸ್‌ ಮಾಲ್‌

ಬೆಂಗಳೂರು; ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌ ಎಸ್‌ ಗಣೇಶ್‌ ಅವರು ಒತ್ತುವರಿ ಮಾಡಿರುವ ಸಾರ್ವಜನಿಕ ಆಸ್ತಿ ಮತ್ತು ರಸ್ತೆಗಳನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್‌ ವರ್ಷದ ಹಿಂದೆಯೇ ನೀಡಿರುವ ಆದೇಶವನ್ನು ದಾವಣಗೆರೆ ನಗರಪಾಲಿಕೆ ಮತ್ತು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಈವರೆವಿಗೂ ತೆರವುಗೊಳಿಸದಿರುವುದು ಇದೀಗ ಬಹಿರಂಗವಾಗಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ರಸ್ತೆಗಳನ್ನು ಒತ್ತುವರಿ ಮಾಡಿರುವ ಗಂಭೀರ ಆರೋಪಕ್ಕೆ ಗುರಿಯಾಗಿರುವ ಎಸ್‌ ಎಸ್‌ ಗಣೇಶ್‌ ಅವರ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಎಸ್‌ ಎಸ್‌ ಮಾಲ್‌ ನಿರ್ಮಾಣ ಸಂದರ್ಭದಲ್ಲಿ ಒತ್ತುವರಿ ಆಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಶಾಮನೂರು ರಸ್ತೆಯಲ್ಲಿ ಎಸ್‌ ಎಸ್‌ ಮಾಲ್‌ ನಿರ್ಮಾಣ ಸಂದರ್ಭದಲ್ಲಿ ರಸ್ತೆ ಒತ್ತುವರಿ ಆಗಿದೆ ಎಂಬ ದೂರುಗಳಿದ್ದರೂ ಕಟ್ಟಡ ವಿನ್ಯಾಸ ಮತ್ತು ನಕ್ಷೆಯನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಹಿಂದಿನ ಆಯುಕ್ತ ಆದಪ್ ಮತ್ತು ಮಹಾನಗರಪಾಲಿಕೆಯ ಹಿಂದಿನ ಆಯುಕ್ತರು ಅನುಮೋದಿಸಿದ್ದರು. ಆದರೆ ಅವರ ವಿರುದ್ಧವೂ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ಈವರೆವಿಗೂ ಯಾವುದೇ ಕ್ರಮ ವಹಿಸಿಲ್ಲ.

ಎಸ್‌ ಎಸ್‌ ಗಣೇಶ್ ಅವರು 9 ನಿವೇಶನಗಳನ್ನು ಖರೀದಿಸಿ ಅವುಗಳನ್ನು ಕಾನೂನು ಪ್ರಕಾರ ಏಕ ನಿವೇಶನ ಮಾಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರಾದರೂ ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಈ ಸಂಬಂಧ ಎಸ್‌ ಎಸ್‌ ಗಣೇಶ್‌ ಅವರೇ ಕಾಲಾವಕಾಶ ಕೇಳಿದ್ದರು. ಒತ್ತುವರಿ ಆಗಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಅಲ್ಲದೆ ಕಾಲಾವಕಾಶ ಪೂರ್ಣಗೊಂಡ ನಂತರ ಈವರೆವಿಗೂ ಒತ್ತುವರಿಯನ್ನು ತೆರವುಗೊಳಿಸಿಲ್ಲ ಎಂದು ತಿಳಿದು ಬಂದಿದೆ.

ದಾವಣಗೆರೆ ತಾಲೂಕಿನ ಶಾಬನೂರು ಗ್ರಾಮದ ಸರ್ವೆ ನಂಬರ್‌ 76/1, 2 ರ ಒಟ್ಟು 4 ಎಕರೆ 36 ಗುಂಟೆ ವಿಸ್ತೀರ್ಣದ ಪ್ರದೇಶದ ವಸತಿ ವಿನ್ಯಾಸಕ್ಕೆ 1975ರ ಫೆ.4ರಂದು ನಗರ ಯೋಜನಾ ಇಲಾಖೆಯ ನಿರ್ದೇಶಕರು ಅನುಮೋದಿಸಿದ್ದರು. ಹೀಗಾಗಿ ಮಾರ್ಪಡಿತ ವಸತಿ ವಿನ್ಯಾಸವನ್ನೂ ನಗರ ಯೋಜನಾ ಇಲಾಖೆಯ ನಿರ್ದೇಶಕರು ಅನುಮೋದಿಸಬೇಕಿತ್ತು. ಆದರೆ ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ಆದಪ್ಪ ಅವರು ತಮ್ಮ ಹಂತದಲ್ಲೇ ಅನುಮೋದಿಸಿ ಸಾರ್ವಜನಿಕ ಆಸ್ತಿ ಮತ್ತು ರಸ್ತೆ ಕಬಳಿಕೆಗೆ ದಾರಿಮಾಡಿಕೊಟ್ಟಿದ್ದರು ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಇದೇ ಸರ್ವೆ ನಂಬರ್‌ನಲ್ಲಿನ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣಕ್ಕೆ 2014ರ ಅಕ್ಟೋಬರ್‌ 31ರಂದು ದಾವಣಗೆರೆ ಮಹಾನಗರಪಾಲಿಕೆ ಪರವಾನಿಗೆ ನೀಡಿತ್ತಲ್ಲದೆ ವಸತಿ ವಿನ್ಯಾಸವನ್ನು ಪಡೆದಿತ್ತು. ಆದರೆ ಕಟ್ಟಡದ ಮಾಲೀಕರಾಗಿದ್ದ ಎಸ್‌ ಎಸ್‌ ಗಣೇಶ್‌ ಅವರು ನಗರಪಾಲಿಕೆಯಿಂದ ಪಡೆದಿದ್ದ ವಿನ್ಯಾಸಕ್ಕೆ ತಕ್ಕಂತೆ ಅವರಿಗೆ ಸೇರಿದ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡದೇ ಬಡಾವಣೆಯಲ್ಲಿ ಸುಮಾರು 40 ವರ್ಷದ ಹಿಂದೆಯೇ ನಿರ್ಮಿಸಿದ್ದ ಸಾರ್ವಜನಿಕ ರಸ್ತೆಗಳನ್ನು ಉದ್ಯಾನವನ್ನು ಕಬಳಿಸಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ದೂಡಾದ ಹಿಂದಿನ ಅಧ್ಯಕ್ಷ ಯಶವಂತರವ್‌ ಜಾಧವ್‌ ಸೇರಿದಂತೆ ನಾಲ್ವರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಇದ್ದ ಮೂರು ರಸ್ತೆಗಳ ಪೈಕಿ ಒಂದು ರಸ್ತೆಯನ್ನು ಬಹಳ ಹಿಂದೆಯೇ ಕಬಳಿಸಿದ್ದಾರೆ. ಬಾಕಿ ಉಳಿದ 2 ರಸ್ತೆಗಳನ್ನು ಕಬಳಿಸಿ ಸುತ್ತಲೂ ಕಾಂಪೌಂಡ್‌ ಕಟ್ಟಿರುವುದಾಗಿ ಎಸ್‌ ಎಸ್‌ ಗಣೇಶ್‌ ಅವರು ಲಿಖಿತವಾಗಿ ಒಪ್ಪಿಕೊಂಡಿದ್ದಾರೆ. ಆದರೂ ಸಹ ಕಾಂಪೌಂಡ್‌ ಗೋಡೆಯನ್ನು ತೆರವುಗೊಳಿಸಿ ಸಾರ್ವಜನಿಕ ರಸ್ತೆಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಬದಲು ಕಟ್ಟಡ ಮಾಲೀಕರಾದ ಎಸ್‌ ಎಸ್‌ ಗಣೇಶ್‌ ಅವರಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ಸಹಾಯ ಮಾಡಿದ್ದಾರೆ,’ ಎಂದು ಯಶವಂತರಾವ್‌ ಜಾಧವ್‌ ಅವರು ದೂರಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts