ಗಣಿ ಜಿಲ್ಲೆಗಳ ಪುನಶ್ಚೇತನ; ಸಂಪುಟ ಉಪ ಸಮಿತಿಗೆ ಶ್ರೀರಾಮುಲು,ಸಿಂಗ್‌ ನೇಮಕಕ್ಕೆ ಆಕ್ಷೇಪ

ಬೆಂಗಳೂರು: ಕರ್ನಾಟಕ ಗಣಿ ಪ್ರಭಾವಿತ ಪರಿಸರ ಸಂರಕ್ಷಣಾ ನಿಗಮ( ಕೆಎಂಇಆರ್‌ಸಿ) ಮತ್ತು ಗಣಿಗಾರಿಕೆ ಪರಿಣಾಮ ವಲಯ (ಸಿಇಪಿಎಂಐಝಡ್) ಯೋಜನೆ ಬಗ್ಗೆ, ಸರ್ವೋಚ್ಛ ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನಾತ್ಮಕ ಕ್ರಮ ಜರುಗಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ನಿರ್ಣಯಗಳನ್ನು ಕೈಗೊಳ್ಳುವ ಸಂಬಂಧ ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಗೆ ಸಚಿವ ಶ್ರೀರಾಮುಲು ಮತ್ತು ಆನಂದ್‌ಸಿಂಗ್‌ ಅವರನ್ನು ನೇಮಿಸಿರುವುದಕ್ಕೆ ಸಮಾಜ ಪರಿವರ್ತನಾ ಸಮುದಾಯದ ಎಸ್‌ ಆರ್‌ ಹಿರೇಮಠ್‌ ತಕರಾರು ಎತ್ತಿದ್ದಾರೆ.

ಈ ಕುರಿತು ಬಳ್ಳಾರಿಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕಳಂಕಿತರಾಗಿರುವ ಸಚಿವ ಶ್ರಿರಾಮುಲು ಮತ್ತು ಆನಂದ್‌ಸಿಂಗ್‌ ಅವರನ್ನು ಸಂಪುಟ ಉಪ ಸಮಿತಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, 15,000 ಕೋಟಿಗೂ ಹೆಚ್ಚು ಹಣವಿರುವ ಈ ನಿಧಿಯನ್ನು ಗಣಿಬಾಧಿತ ಪ್ರದೇಶಗಳಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದ ಪ್ರಕಾರ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಹೀಗಾಗಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಮತ್ತು ವಿಕ್ರಮ್‌ಜಿತ್‌ ಸೇನ್‌ ಸಂಸ್ಥೆಗೆ ಮುಖ್ಯಸ್ಥರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಸುತ್ತಮುತ್ತಲಿನ ಪರಿಸರ ಮತ್ತು ಜನರ ಆರೋಗ್ಯದ ಮೇಲೆ ದೀರ್ಘ ಕಾಲೀನ ದುಷ್ಪರಿಣಾಮ ಬೀರಲು ಕಾರಣರಾಗಿದ್ದಾರೆ ಎಂಬ ಅರೋಪಕ್ಕೆ ಗುರಿಯಾಗಿರುವ ಸಚಿವ ಆನಂದ್‌ಸಿಂಗ್‌ ಮತ್ತು ಜನಾರ್ದನರೆಡ್ಡಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಚಿವ ಶ್ರೀರಾಮುಲು ಅವರನ್ನು ಗಣಿ ಪ್ರಭಾವಿತ ಪರಿಸರ ಸಂರಕ್ಷಣಾ ನಿಗಮದ ಕ್ರಿಯಾ ಯೋಜನೆ ಸಂಬಂಧ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಗೆ ನೇಮಿಸಲಾಗಿತ್ತು. ಈ ಕುರಿತು ‘ದಿ ಫೈಲ್‌’ 2020ರ ಡಿಸೆಂಬರ್‌ 5ರಂದು ವರದಿ ಪ್ರಕಟಿಸಿತ್ತು.

ಗಣಿಬಾಧಿತ ಜಿಲ್ಲೆಗಳ ಪುನಶ್ಚೇತನಕ್ಕೆ ಸಂಪುಟ ಉಪ ಸಮಿತಿ; ಶ್ರೀರಾಮುಲು, ಸಿಂಗ್‌ ನೇಮಕ ಸರಿಯೇ?

ಕರ್ನಾಟಕ ಗಣಿ ಪ್ರಭಾವಿತ ಪರಿಸರ ಸಂರಕ್ಷಣಾ ನಿಗಮ( ಕೆಎಂಇಆರ್‌ಸಿ) ಮತ್ತು ಗಣಿಗಾರಿಕೆ ಪರಿಣಾಮ ವಲಯ (ಸಿಇಪಿಎಂಐಝಡ್) ಯೋಜನೆ ಬಗ್ಗೆ, ಸರ್ವೋಚ್ಛ ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನಾತ್ಮಕ ಕ್ರಮ ಜರುಗಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ನಿರ್ಣಯಗಳನ್ನು ಕೈಗೊಳ್ಳುವ ಸಂಬಂಧ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.
ಸಂಪುಟ ಉಪ ಸಮಿತಿಗೆ ಶ್ರೀರಾಮುಲು ಮತ್ತು ಸಚಿವ ಆನಂದ್‌ಸಿಂಗ್‌ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ವಿವಾದಕ್ಕೆ ದಾರಿಮಾಡಿಕೊಡಲಿದೆ.

ಅಕ್ರಮ ಗಣಿಗಾರಿಕೆ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿರುವ ಆರೋಪಕ್ಕೆ ಸಚಿವ ಆನಂದ್‌ಸಿಂಗ್‌ ಅವರು ಗುರಿಯಾಗಿದ್ದಾರೆ. ಅಕ್ರಮ ಗಣಿಗಾರಿಕೆ ಮತ್ತು ಅಕ್ರಮವಾಗಿ ಅದಿರು ಸಾಗಾಣಿಕೆಯಂತಹ ಗಂಭೀರ ಆರೋಪಕ್ಕೆ ಜನಾರ್ದನ ರೆಡ್ಡಿಯೂ ಗುರಿಯಾಗಿದ್ದಾರೆ. ಇವರೊಂದಿಗೆ ಸಚಿವ ಶ್ರೀರಾಮುಲು ಅವರು ನಿಕಟವಾಗಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಇವರಿಬ್ಬರನ್ನು ಸಂಪುಟ ಉಪ ಸಮಿತಿಯಿಂದ ಹೊರಗಿಡಬಹುದಾಗಿತ್ತು ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು.

ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ಚೇತನ ಸೇರಿದಂತೆ ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು 2012ರಲ್ಲೇ ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಇದಕ್ಕಾಗಿ ವಿಶೇಷ ಕಾರ್ಯ ಯೋಜನೆಯನ್ನು ರೂಪಿಸಲಾಗಿತ್ತು. 2015ರಲ್ಲೇ ರಾಜ್ಯ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಸ್ಥಾಪನೆಯಾಗಿದ್ದರೂ ಪರಿಸರ ಪುನಶ್ಚೇತನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕೈಗೆತ್ತಿಕೊಂಡಿರಲಿಲ್ಲ.

ನಿಗಮದ ನಿಧಿಯಲ್ಲಿದೆ 10,000 ಕೋಟಿ

ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ಚೇತನಕ್ಕಾಗಿ ಕಂಪನಿಗಳೂ ತಮ್ಮ ವಹಿವಾಟಿನ ಶೇ.10ರಷ್ಟು ಹಣವನ್ನು ವಿಶಷ ಕಾರ್ಯ ನಿಧಿಗೆ ನೀಡಿದ್ವು. ಈ ನಿಧಿಯಲ್ಲಿ ಅಂದಾಜು 10,000 ಕೋಟಿಗೂ ಹೆಚ್ಚಿನ ಹಣವಿದೆ. ಆದರೆ ಈ ಹಣವೂ ಪರಿಣಾಮಕಾರಿಯಾಗಿ ನಿಗದಿತ ಉದ್ದೇಶಕ್ಕಾಗಿ ಖರ್ಚಾಗಿಲ್ಲ ಎಂಬ ಆರೋಪಗಳೂ ಇವೆ. ಅಲ್ಲದೆ ಗಣಿಗಾರಿಕೆ ಪರಿಣಾಮ ವಲಯ ಯೋಜನೆಯೂ ತಯಾರಾಗಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದೆ.

ಗಣಿ ಬಾಧಿತ ಜಿಲ್ಲೆಗಳಲ್ಲಿ ಪರಿಸರ ಹಾಗೂ ಗಣಿಗಾರಿಕೆಯಿಂದ ತೊಂದರೆಗೊಳಗಾದ ಪ್ರದೇಶದ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಅಧಿಕಾರಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಾಗಲೇ ಮಾಹಿತಿ ನೀಡಿದ್ದಾರೆ.

ಗಣಿಗಾರಿಕೆಯಿಂದ ತೊಂದರೆಗೊಳಗಾಗಿರುವ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಪರಿಸರ ಪುನಶ್ಚೇತನ ಹಾಗೂ ಸ್ಥಳೀಯವಾಗಿ ತೊಂದರೆ ಗೊಳಗಾಗಿರುವ ಪ್ರದೇಶಗಳಲ್ಲಿ ಕುಡಿಯುವ ನೀರು, ಗಣಿ ಕಾರ್ಮಿಕರ ಮಕ್ಕಳಿಗೆ ಶಾಲೆ, ರಸ್ತೆ ನಿರ್ಮಾಣ, ಕೌಶಲ್ಯ ತರಬೇತಿ ಸೇರಿದಂತೆ ಸರ್ಕಾರ ಕೈಗೆತ್ತಿಕೊಳ್ಳಲಿರುವ ಯೋಜನೆಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಮತ್ತು ಕರ್ನಾಟಕ ಗಣಿ ಮತ್ತು ಪರಿಸರ ಪುನಶ್ಚೇತನ ನಿಗಮದ ಅಧ್ಯಕ್ಷರಾಗಿರುವ ವಂದಿತಾ ಶರ್ಮಾ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್‌ ಸೇರಿ ನಿಗಮದ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಗಣಿ ಬಾಧಿತ ಜಿಲ್ಲೆಗಳಲ್ಲಿ ಪರಿಸರ ಪುನಶ್ಚೇತನಕ್ಕೆ ಮುಂದಿನ 10 ವರ್ಷಗಳಲ್ಲಿ ರಾಜ್ಯ ಸರ್ಕಾರ 24 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಕುರಿತು ಸುಪ್ರೀಂ ಕೋರ್ಟ್‌ಗೆ 2018 ರಲ್ಲಿಯೇ ವರದಿಯನ್ನೂ ಸಲ್ಲಿಸಿದೆ. ಆ ವರದಿಯನ್ನು ಸುಪ್ರೀಂ ಕೋರ್ಟ್‌ ಒಪ್ಪಿಕೊಂಡರೆ, ರಾಜ್ಯ ಸರ್ಕಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ.

the fil favicon

SUPPORT THE FILE

Latest News

Related Posts