ಬೆಂಗಳೂರು; ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು(ತೀವ್ರ ನಿಗಾ ಘಟಕ) ಘಟಕಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಅಲ್ಲದೆ ಖರೀದಿಸಲಾಗಿದ್ದ ವೈದ್ಯಕೀಯ ಸಲಕರಣೆಗಳೂ ಬಳಕೆಯಾಗಿರಲಿಲ್ಲ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 37.46 ಕೋಟಿ ವೆಚ್ಚದಲ್ಲಿ ಐಸಿಯು ಘಟಕಗಳನ್ನು ಸ್ಥಾಪಿಸಿದ್ದರೂ ಅದು ನಿಷ್ಫಲ ವೆಚ್ಚವಾಗಿತ್ತು ಎಂದು ಸಿ ಎ ಜಿ ವರದಿ ಪತ್ತೆ ಹಚ್ಚಿದೆ.
ಕೋವಿಡ್-19ರ ನಿರ್ವಹಣೆಗಾಗಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಸದ್ದು ಮಾಡುತ್ತಿರುವ ಬೆನ್ನಲ್ಲೇ ಯು ಟಿ ಖಾದರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾಗಿದ್ದ ಅವಧಿಯಲ್ಲಿ (2015-16) ಲಕ್ಷಾಂತರ ರು. ವೆಚ್ಚದಲ್ಲಿ ಖರೀದಿಸಿದ್ದ ವೈದ್ಯಕೀಯ ಸಲಕರಣೆಗಳು ಬಳಕೆ ಆಗಿರಲಿಲ್ಲ. ಹೀಗಾಗಿ ಜಿಲ್ಲಾ ಆಸ್ಪತ್ರೆಯೊಂದರಲ್ಲಿ 98.71 ಲಕ್ಷ ವೆಚ್ಚದಲ್ಲಿ ಐಸಿಯು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂಬುದು ಸಿಎಜಿ ಪರೀಕ್ಷಾ -ತನಿಖೆಯಿಂದ ತಿಳಿದು ಬಂದಿದೆ.
ಅದೇ ರೀತಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಹಾಸನ, ಕಲ್ಬುರ್ಗಿ, ಮೈಸೂರು, ತುಮಕೂರು, ಉಡುಪಿ, ರಾಮನಗರ, ಮತ್ತು ಯಾದಗಿರಿ ಜಿಲ್ಲೆಯ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಐಸಿಯು ಸ್ಥಾಪಿಸಲು ಸಿದ್ದರಾಮಯ್ಯ ಅವರು 2015ರಲ್ಲಿ ಆಯವ್ಯಯದಲ್ಲಿ ಘೋಷಿಸಿದ್ದರು. ಹಾಗೆಯೇ 19 ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯುಗಳನ್ನು ಬಲಪಡಿಸಲು ಅಗತ್ಯ ನಿರ್ಧರಣಾ ಸಮಿತಿಯು ಶಿಫಾರಸ್ಸು ಮಾಡಿತ್ತು. ಆದರೆ ಶಿಫಾರಸ್ಸಿನಂತೆ ಈ ಯಾವ ಐಸಿಯು ಘಟಕಗಳು ಬಲಗೊಂಡಿರಲಿಲ್ಲ ಎಂಬುದನ್ನು ಸಿಎಜಿ ವರದಿಯು ಹೊರಗೆಡವಿದೆ.
46 ಆಸ್ಪತ್ರೆಗಳಿಗೆ (21 ಜಿಲ್ಲಾ ಮತ್ತು 25 ತಾಲೂಕು) 20.08 ಕೋಟಿ ಅಂದಾಜು ವೆಚ್ಚದಲ್ಲಿ ಐಸಿಯು ಉಪಕರಣಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿತ್ತು. 2016ರ ಅಗಸ್ಟ್‌ನಲ್ಲಿ ಎಲ್ಲಾ ತಾಲೂಕು ಆಸ್ಪತ್ರೆಳಲ್ಲಿ ಐಸಿಯುಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿತ್ತು. ಹೀಗಾಗಿ 37.46 ಕೋಟಿ ಅಂದಾಜು ವೆಚ್ಚದಲ್ಲಿ 167 ಆಸ್ಪತ್ರೆಗಳಿಗೆ (21 ಜಿಲ್ಲಾ ಮತ್ತು 146 ತಾಲೂಕು ಆಸ್ಪತ್ರೆ)ಗಳಿಗೆ ಉಪಕರಣಗಳನ್ನು ಖರೀದಿಸಲು ಟೆಂಡರ್ ತಿದ್ದುಪಡಿ ಮಾಡಲಾಗಿತ್ತು.
ಆಸ್ಪತ್ರೆಗಳಿಗೆ ಸರಬರಾಜಾಗದ ಉಪಕರಣಗಳು
121 ತಾಲೂಕು ಆಸ್ಪತ್ರೆಗಳಿಗೆ 100 ಎಂ ಎ ಪೋರ್ಟಬಲ್ ಎಕ್ಸ್‌ರೇ ಮಷೀನ್, ಹೈ ಫ್ಲೋ ನಾಸಲ್ ಕ್ಯಾನುಲಾ ಥೆರಪಿ(ಸಿ-ಪಾಪ್) ಉಪಕರಣ, ಇನ್‌ಫ್ಯೂಷನ್ ಪಂಪ್ ಮತ್ತು ಎಮರ್ಜೆನ್ಸಿ ಟ್ರಾಲಿಗಳು ಸರಬರಾಜಾಗಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ. ಈ ಉಪಕರಣಗಳು ಐಸಿಯು ಘಟಕಗಳಲ್ಲಿ ಕಡ್ಡಾಯ ಎಂದು ಪರಿಗಣಿಸಲಾಗಿತ್ತಾದರೂ ಸರಬರಾಜಾಗಿರಲಿಲ್ಲ.
ಸ್ಥಾಪನೆ ಆಗದ ಐಸಿಯು ಘಟಕಗಳು
ಹಾಗೆಯೇ ಧಾರವಾಡ ಜಿಲ್ಲಾಸ್ಪತ್ರೆ ಸೇರಿದಂತೆ ಒಟ್ಟು 21 ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು 2 ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ಮಂಚ, ಮಲ್ಟಿಪ್ಯಾರಾ ಮಾನಿಟರ್, ವೆಂಟೆಲೇಟರ್, ಡಿಫಿಬ್ರಿಲೇಟರ್‌ಗಳು, ಇಸಿಜಿ ಯಂತ್ರ, ಸಕ್ಷನ್ ಆಪರೇಟಸ್ ಮತ್ತುಕ್ರಾಶ್ ಕಾರ್ಟ್ಸ್‌ಗಳನ್ನೂ ಸರಬರಾಜಾಗದ ಕಾರಣ ಐಸಿಯು ಘಟಕಗಳು ಈ ಆಸ್ಪತ್ರೆಗಳಲ್ಲಿ ಸ್ಥಾಪನೆ ಆಗಿರಲಿಲ್ಲ ಎಂಬುದನ್ನೂ ಸಿಎಜಿ ಪರೀಕ್ಷಾ ತನಿಖೆ ಹೊರಗೆಡವಿದೆ.
ಟೆಂಡರ್ ಅಡಿಯಲ್ಲಿ ಯಾವುದೇ ಆಸ್ಪತ್ರೆಗಳಿಗೂ ಏರ್ ಕಂಡೀಷನರ್‌ಗಳು ಮತ್ತು ಸಿರಿಂಜ್ ಪಂಪ್‌ಗಳನ್ನು ಒದಗಿಸಿರಲಿಲ್ಲ. ಅಲ್ಲದೆ ಈ ಎರಡೂ ಉಪಕರಣಗಳನ್ನು ಸರ್ಕಾರವು ನಿರ್ಧರಿಸಿದ್ದಕ್ಕಿಂತ ಅಧಿಕವಾಗಿ ಖರೀದಿಸಿತ್ತು. ಸಿರಿಂಜ್ ಪಂಪ್‌ಗಳನ್ನು 2017ರ ನವೆಂಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸರಬರಾಜು ಮಾಡಲಾಗಿತ್ತಾದರೂ ಇದುವರೆಗೂ ಏರ್‌ಕಂಡೀಷನ್‌ರ್‌ಗಳನ್ನು ಸರಬರಾಜು ಮಾಡಿಲ್ಲ ಎಂದು ಸಿಎಜಿ ವಿವರಿಸಿದೆ.
80.87 ಲಕ್ಷ ವೆಚ್ಚದಲ್ಲಿ ಒಟ್ಟು 5 ಆಸ್ಪತ್ರೆಗಳಲ್ಲಿ ಸ್ಥಾಪಿತವಾಗಿದ್ದ ಐಸಿಯುಗಳ ಪೈಕಿ ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸಿಯು ಕಾರ್ಯನಿರ್ವಹಿಸುತ್ತಿರಲಿಲ್ಲ. ಐಸಿಯುಗಳನ್ನು ಸಂಪೂರ್ಣವಾಗಿ ಕಾರ್ಯಾಚರಣೆಗೊಳಿಸದಿರುವುದು ಮತ್ತು ಇದಕ್ಕೆ ಪೂರಕವಾದ ವೈದ್ಯಕೀಯ ಸಲಕರಣೆಗಳು ಸರಬರಾಜಾಗದ ಕಾರಣ ಐಸಿಯುಗಳು ಕಾರ್ಯನಿರ್ವಹಿಸದಿರಲು ಕಾರಣವಾಗಿತ್ತು.
‘ಈ ಆಸ್ಪತ್ರೆಗಳು ಅಗತ್ಯವಿರುವ ರೋಗಿಗಳಿಗೆ ನಿರ್ಣಾಯಕ ಆರೈಕೆಯನ್ನುನೀಡಲು ಸಾಧ್ಯವಾಗಲಿಲ್ಲ. ಐಸಿಯು ಸ್ಥಾಪಿಸುವ ಉದ್ದೇಶವನ್ನೇ ವಿಫಲಗೊಳಿಸಿರುವುದು ಸ್ಪಷ್ಟವಾಗುತ್ತದೆ. ನಿರ್ಧಾರದ ಪ್ರಕಾರ ಎಲ್ಲಾ ಆಸ್ಪತ್ರೆಗಳಿಗೆ ಉಪಕರಣಗಳನ್ನು ಸರಬರಾಜು ಮಾಡದಿರುವುದು ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಐಸಿಯುಗಳನ್ನು ಸ್ಥಾಪಿಸುವ ಸರ್ಕಾರದ ಉದ್ದೇಶವನ್ನು ಸಾಧಿಸಲಾಗಲಿಲ್ಲ. ಅಲ್ಲದೆ ಭರಿಸಿದ ವೆಚ್ಚವನ್ನೂ ಕೂಡ ಹೆಚ್ಚಿನ ಮಟ್ಟಿಗೆ ನಿಷ್ಫಲವಾಗಿಸಿತು,’ ಎಂದು ಸಿಎಜಿ ಅಭಿಪ್ರಾಯಿಸಿದೆ.