ಶಾಮನೂರು ಕುಟುಂಬಕ್ಕೆ ಸ್ಥಳೀಯ ಸಂಸ್ಥೆ ಆಸ್ತಿಗಳನ್ನೂ ಬರೆದುಕೊಟ್ಟರೇ ಆಯುಕ್ತರು?

ಬೆಂಗಳೂರು; ರಸ್ತೆಗಳು ಅನುಪಯುಕ್ತವಾಗಿವೆ ಮತ್ತು ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ ಎಸ್‌ ಗಣೇಶ್‌ ಮಾಲೀಕತ್ವದ ಎಸ್‌ ಎಸ್‌ ಮಾಲ್‌ಗಾಗಿ ವಸತಿ ವಿನ್ಯಾಸದಲ್ಲಿನ ನಿವೇಶನಗಳನ್ನು ಒಂದುಗೂಡಿಸಲು ದಾವಣಗೆರೆ ಮಹಾನಗರಪಾಲಿಕೆಯ ಹಿಂದಿನ ಆಯಕ್ತರು ಕೈಗಾರಿಕೆ ಉಪಯೋಗಕ್ಕೆ ಪರಿವರ್ತಿಸಲು ಅನುಮತಿ ನೀಡಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

ರಸ್ತೆ ಕಬಳಿಕೆ ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್‌, ವರ್ಷದ ಹಿಂದೆ ನೀಡಿದ್ದ ಆದೇಶವನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಪಾಲಿಸಿಲ್ಲ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ಮಹಾನಗರಪಾಲಿಕೆಯ ಹಿಂದಿನ ಆಯುಕ್ತರು ಭೂಪರಿವರ್ತನೆಗೆ ಅನುಮತಿ ನೀಡಿದ್ದ ದಾಖಲೆಯೂ ಹೊರಬಿದ್ದಿದೆ.

ದಾವಣಗೆರೆ ತಾಲೂಕಿನ ಶಾಬನೂರು ಗ್ರಾಮದ ಸರ್ವೆ ನಂಬರ್‌ 76/1, 2 ರಲ್ಲಿ ನಿವೇಶನ ಸಂಖ್ಯೆ 01ರಿಂದ 4, ನಿವೇಶನ ಸಂಖ್ಯೆ 17ರಿಂದ 20, ನಿವೇಶನ ಸಂಖ್ಯೆ 21ರಿಂದ 25, ನಿವೇಶನ ಸಂಖ್ಯೆ 57ನ್ನು ಒಂದುಗೂಡಿಸಿ ಏಕ ನಿವೇಶನವನ್ನಾಗಿಸಲಾಗಿತ್ತು. ಅಲ್ಲದೆ ಏಕ ನಿವೇಶನ ವಿನ್ಯಾಸವನ್ನು ಅನುಮೋದಿಸುವ ಸಂಬಂಧ ಎಸ್‌ ಎಸ್‌ ಗಣೇಶ್‌ ಅವರು 2014ರ ಜೂನ್‌ 26ರಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕಾಂಪೌಂಡ್‌ನೊಳಗಿದ್ದವು ರಸ್ತೆಗಳು

ಅಲ್ಲದೆ ಒಂದುಗೂಡಿಸಿದ ನಿವೇಶನದ ಮುಂಭಾಗದಲ್ಲಿರುವ 9.14 ಮೀಟರ್‌ ಅಗಲದ ರಸ್ತೆಗಳು ನಿರ್ಮಿಸಿದ್ದ ಕಾಂಪೌಂಡ್‌ನ ಆವರಣದೊಳಗೆ ಇದ್ದವು ಎಂದು ಖುದ್ದು ಎಸ್‌ ಎಸ್‌ ಗಣೇಶ್‌ ಅವರೇ ಪತ್ರದಲ್ಲಿ ಬಹಿರಂಗಪಡಿಸಿದ್ದರು. ‘ ಒಂದುಗೂಡಿಸಿದ ನಿವೇಶನಗಳ ಮುಂಭಾಗದಲ್ಲಿರುವ 9.14 ಮೀಟರ್‌ ಅಗಲದ ರಸ್ತೆಗಳು ನಾವು ನಿರ್ಮಿಸಿರುವ ಕಾಂಪೌಂಡ್‌ನ ಆವರಣದೊಳಗೆ ಇದ್ದು, ಈ ರಸ್ತೆಯ ಜಾಗಗಳು ಅನುಪಯಕ್ತವಾಗಿರುತ್ತವೆ. ಆದ್ದರಿಂದ ಈ ಹಿಂದೆ ಒಂದುಗೂಡಿಸಿದ ನಿವೇಶನಗಳ ಜತೆಗೆ ಈ ರಸ್ತೆಗಳ ಜಾಗಗಳನ್ನು ಒಟ್ಟುಗೂಡಿದ ಏಕ ನಿವೇಶನ ಅನುಮೋದನೆ ನೀಡಬೇಕು,’ ಎಂದು ಗಣೇಶ್‌ ಅವರು ಆಯುಕ್ತರಿಗೆ ಕೋರಿಕೆ ಸಲ್ಲಿಸಿದ್ದ ವಿಚಾರ ಪತ್ರದಿಂದ ಗೊತ್ತಾಗಿದೆ.

ದಾವಣಗೆರೆ ನಗರಪಾಲಿಕೆಯು ಡೋರ್‌ ನಂಬರ್‌ಗಳನ್ನು ಹೊಂದಿರುವ ನಿವೇಶನಗಳನ್ನು ಒಂದುಗೂಡಿಸಿ ಅನುಮೋದನೆ ನೀಡಿತ್ತು. ಒಂದುಗೂಡಿಸಿ ಅನುಮೋದಿಸಿರುವ ನಿವೇಶನಗಳ ಮುಂಭಾಗದಲ್ಲಿನ ಉತ್ತರ ದಕ್ಷಿಣಾಭಿಮುಖವಾಗಿರುವ 9.14 ಮೀಟರ್‌ ಅಗಲದ 2ರಸ್ತೆಗಳನ್ನು ಸಹ ಸೇರಿಸಿ ಒಟ್ಟು ಪ್ರದೇಶಕ್ಕೆ ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡಲು ಅರ್ಜಿದಾರರಾಗಿದ್ದ ಎಸ್‌ ಎಸ್‌ ಗಣೇಶ್‌ ಅವರು ಕೋರಿದ್ದರು ಎಂಬುದು ಅವರ ಪತ್ರದಿಂದ ತಿಳಿದು ಬಂದಿದೆ.

ಈ ಸಂಬಂಧ ಪ್ರಾಧಿಕಾರದ ಆಯುಕ್ತರು, ಅಭಿಪ್ರಾಯಕ್ಕಾಗಿ ಗಣೇಶ್ ಅವರು ಪತ್ರ ಬರೆದ ಒಂದೇ ದಿನದ ಅಂತರದಲ್ಲಿ ಪ್ರಾಧಿಕಾರದ ಆಯುಕ್ತರು ದಾವಣಗೆರೆ ಮಹಾನಗರಪಾಲಿಕೆ ಆಯುಕ್ತರಿಗೆ ಪತ್ರ (27/06/2014) ಬರೆದಿದ್ದರು.

ಪತ್ರದಲ್ಲೇನಿತ್ತು?

‘ದಾವಣಗೆರೆ ತಾಲೂಕು ಶಾಬನೂರು ಗ್ರಾಮದ ಸರ್ವೆ ನಂಬರ್‌ 76/1, 2ರ ಒಟ್ಟು ಕ್ಷೇತ್ರ 4 ಎಕರೆ 36 ಗುಂಟೆ ಪ್ರದೇಶದ ವಿನ್ಯಾಸವು ಅನುಮೋದನೆಯಾಗಿದ್ದು, ಈ ವಿನ್ಯಾಸದಲ್ಲಿನ ರಸ್ತೆಗಳು ಸ್ಥಳೀಯ ಸಂಸ್ಥೆಯ ಆಸ್ತಿಯಾಗಿರುತ್ತದೆ. ಆದ್ದರಿಂದ ಈ ಕೋರಿಕೆ ಪತ್ರದಲ್ಲಿನ ಮನವಿಯನ್ನು ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯ ನೀಡಬೇಕು,’ ಎಂದು ಪ್ರಾಧಿಕಾರದ ಆಯುಕ್ತರು ಕೋರಿದ್ದರು.

ಅಭ್ಯಂತರವಿಲ್ಲವೆಂದ ಪಾಲಿಕೆ ಆಯುಕ್ತರು

ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಬರೆದಿದ್ದ ಪತ್ರವನ್ನು ಪರಿಶೀಲಿಸಿದ್ದ ಪಾಲಿಕೆಯ ಆಯುಕ್ತರು ಹಾಲಿ ಲೇಔಟ್‌ನ್ನು ರದ್ದುಪಡಿಸಿ ಕೈಗಾರಿಕೆ ಉಪಯೋಗಕ್ಕೆ ನಿಯಮಾನುಸಾರ ಪರಿವರ್ತಿಸಲು ಯಾವುದೇ ಆಭ್ಯಂತರವಿಲ್ಲ ಎಂದು ಅಭಿಪ್ರಾಯ ನೀಡಿದ್ದರು ಎಂಬುದು ಆಯುಕ್ತರು 2014ರ ಜುಲೈ 5ರಂದು ಬರೆದಿದ್ದ ಪತ್ರದಿಂದ ತಿಳಿದು ಬಂದಿದೆ.

ರಸ್ತೆ ಜಾಗೆ ನಿರುಪಯುಕ್ತವೆಂದಿದ್ದ ಆಯುಕ್ತರು

ಪ್ರಾಧಿಕಾರದ ಆಯುಕ್ತರು ಸಾರ್ವಜನಿಕ ರಸ್ತೆಗಳು ಸ್ಥಳೀಯ ಸಂಸ್ಥೆಯ ಆಸ್ತಿ ಎಂದು ಹೇಳಿದ್ದರೆ, ಪಾಲಿಕೆಯ ಆಯುಕ್ತರು ರಸ್ತೆಯ ಜಾಗಗಳು ನಿರುಪಯುಕ್ತವೆಂದು ಹೇಳಿದ್ದರು. ‘ಸದರಿ ವಿನ್ಯಾಸದಲ್ಲಿ 9.14 ಮೀಟರ್‌ ಅಗಲದ 2 ರಸ್ತೆಗಳು ಇದ್ದು, ರಸ್ತೆ ಜಾಗಗಳು ನಿರುಪಯುಕ್ತವಾಗಿರುತ್ತದೆ. ಸದರಿ ವಿನ್ಯಾಸದಲ್ಲಿ ಬರುವ ನಿವೇಶನಗಳನ್ನು ಇದುವರೆಗೂ ಯಾರಿಗೂ ಪರಭಾರೆ ಮಾಡಿರುವುದಿಲ್ಲ. ನಿವೇಶಗಳನ್ನು ಸ್ವಂತ ಉಪಯೋಗಕ್ಕೆ ಬಳಸುತ್ತಿರುತ್ತಾರೆ. ಈ ಸ್ಥಳದಲ್ಲಿ ಪಾಲಿಕೆ ಕಚೇರಿಯಿಂದ ಇದುವರೆಗೂ ಯಾವುದೇ ಕಾಮಗಾರಿಗಳನ್ನು ಕೂಡ ತೆಗೆದುಕೊಂಡಿರುವುದಿಲ್ಲ ಎಂದು ಅಭಿಪ್ರಾಯ ನೀಡಿದ್ದರು.

ಹಾಲಿ ಲೇಔಟ್‌ನಲ್ಲಿ ಈಗಾಗಲೇ ಯಾವುದೇ ರೀತಿಯ ಅಭಿವೃದ್ಧಿ ಆಗದೇ ಇರುವುದರಿಂದ ಹಾಗೂ ಸದರಿ ನಿವೇಶನದ ಸುತ್ತಲೂ ಕಾಂಪೌಂಡ್‌ ಗೋಡೆ ಇರುವುದರಿಂದ ಸಾರ್ವಜನಿಕರು ಕೂಡ ರಸ್ತೆಗಳನ್ನು ಉಪಯೋಗಿಸುತ್ತಿಲ್ಲ. ಅಲ್ಲದೆ ಈ ಪ್ರದೇಶವು ಮಾಸ್ಟರ್‌ ಪ್ಲಾನ್‌ನಲ್ಲಿ ಕೈಗಾರಿಕೆ ಪ್ರದೇಶ ಎಂದು ಇರುವುದರಿಂದ ಪಾಲಿಕೆಯ ಮಹಾಪೌರರ ಆದೇಶದಂತೆ ಹಾಲಿ ಲೇಔಟ್‌ನ್ನು ರದ್ದುಪಡಿಸಿ ಕೈಗಾರಿಕೆ ಉಪಯೋಗಕ್ಕೆ ನಿಯಮಾನುಸಾರ ಪರಿವರ್ತಿಸಲು ಈ ಕಚೇರಿಯಿಂದ ಯಾವುದೇ ಅಭ್ಯಂತರವಿಲ್ಲ,’ ಎಂದು ಆಯುಕ್ತರು ಅಭಿಪ್ರಾಯ ನೀಡಿದ್ದು ಪತ್ರದಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts