ಸೆಂಟ್ರಲ್‌ ಜೈಲ್‌ನಲ್ಲಿ ಉನ್ನತೀಕರಣಗೊಳ್ಳದ ಮೊಬೈಲ್‌ ಜಾಮರ್‌; ಖೈದಿಗಳ ಸಂಪರ್ಕ ಅಬಾಧಿತ

ಬೆಂಗಳೂರು; ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಬಳ್ಳಾರಿ ಮತ್ತು ಕಲಬುರಗಿ ಕೇಂದ್ರ ಕಾರಾಗೃಹಗಳಲ್ಲಿನ ಮೊಬೈಲ್‌ ಜ್ಯಾಮರ್‌ಗಳನ್ನು ಈವರೆವಿಗೂ ಉನ್ನತೀಕರಿಸಿಲ್ಲ. 3 ಜಿ ತಂತ್ರಾಂಶ ಮೊಬೈಲ್‌ ಜ್ಯಾಮರ್‌ಗಳು ಇರುವ ಕಾರಣ ಸಿಗ್ನಲ್‌ಗಳನ್ನು ಈಗಲೂ ನಿಯಂತ್ರಿಸಲಾಗುತ್ತಿಲ್ಲ . ಅಲ್ಲದೆ ಜೈಲುಗಳಿಂದ ಪರಾರಿಯಾಗಿದ್ದ ಖೈದಿಗಳ ಪೈಕಿ 31 ಖೈದಿಗಳನ್ನು ಮರು ಬಂಧಿಸಿಲ್ಲ ಎಂಬ ಸಂಗತಿಯನ್ನು ಒಳಾಡಳಿತ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಲ್ಲಿಸಿರುವ ಅನುಸರಣಾ ವರದಿಯು ಹೊರಗೆಡವಿದೆ.

ಕಾರಾಗೃಹ ಇಲಾಖೆಯಲ್ಲಿನ ಆಂತರಿಕ ನಿಯಂತ್ರಣ ವ್ಯವಸ್ಥೆಯ ಕುರಿತಾದ ಅನುಪಾಲನಾ ಲೆಕ್ಕಪರಿಶೋಧನೆ ಕುರಿತು ಒಳಾಡಳಿತ ಇಲಾಖೆಯು ಸಲ್ಲಿಸಿರುವ ಅನುಸರಣಾ ವರದಿಯು ಜೈಲುಗಳಲ್ಲಿರುವ ಸುರಕ್ಷತೆ ಮತ್ತು ಭದ್ರತೆ ಹೇಗಿದೆ ಎಂಬುದನ್ನು ತೆರೆದಿಟ್ಟಿದೆ. ಒಳಾಡಳಿತ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಿ ರೂಪ ಮೌದ್ಗಿಲ್‌ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿರುವ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘4 ಜಿ ತಂತ್ರಾಂಶದ ಮೊಬೈಲ್‌ಗಳು ಬಳಕೆಯಲ್ಲಿರುವುದರಿಂದ ರಾಜ್ಯದ ಕಾರಾಗೃಹಗಳಲ್ಲಿ ಅಳವಡಿಸಲಾಗಿರುವ 3 ಜಿ ತಂತ್ರಾಂಶದ ಮೊಬೈಲ್‌ ಜ್ಯಾಮರ್‌ಗಳಿಂದ ಸಿಗ್ನಲ್‌ಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ,’ ಎಂಬುದು ವರದಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರು, ಮೈಸೂರು, ಬೆಳಗಾವಿ, ಧಾರವಾಡ, ಬಳ್ಳಾರಿ ಮತ್ತು ಕಲಬುರಗಿ ಕೇಂದ್ರ ಕಾರಾಗೃಹಗಳು ಮತ್ತು ಮಂಗಳೂರು ಜಿಲ್ಲಾ ಕಾರಾಗೃಹಗಳಲ್ಲಿ 3 ಜಿ ತಂತ್ರಾಂಶದ ದೊಟ್ಟು 66 ಮೊಬೈಲ್‌ ಜ್ಯಾಮರ್‌ಗಳನ್ನು 4 ಜಿ ತಂತ್ರಾಂಶಕ್ಕೆ ಮೇಲ್ದರ್ಜೆಗೇರಿಸಲು ಮತ್ತು 3 ವರ್ಷಗಳ ನಿರ್ವಹಣೆಗೆ ಪ್ರಸ್ತಾವನೆಗೆ ಕೇಂದ್ರ ಗೃಹ ಸಚಿವಾಲಯವು ಇನ್ನೂ ಅನುಮತಿ ನೀಡಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

‘ಕಾರಾಗೃಹಗಳಲ್ಲಿ ಮೊಬೈಲ್‌ ತರಂಗಗಳು ದೊರೆಯುತ್ತಿರುವ ಅಂಶವನ್ನು ಪರಿಶೀಲಿಸಿ, ಖಾಸಗಿ ಸಂಸ್ಥೆಗಳ ಸಂಪರ್ಕ ಸೇವೆಗಳಿಗೆ ಅಡಚಣೆಯಾಗದಂತೆ ಕಾರಾಗೃಹ ಪರಿಮಿತಿಯೊಳಗೆ ಮೊಬೈಲ್‌ ತರಂಗಾಂತರಗಳನ್ನು ನಿಯಂತ್ರಿಸಲು ಜ್ಯಾಮರ್‌ ಉಪಕರಣಗಳ ತರಂಗಾಂತರಗಳನ್ನು ಹೆಚ್ಚಿಸುವಂತೆ ಇಸಿಐಎಲ್‌ ಹಾಗೂ ಬಿಇಎಲ್‌ ಸಂಸ್ಥೆಗಳಿಗೆ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಕೋರಲಾಗಿದೆ,’ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಗಮನಕ್ಕೆ ತಂದಿರುವುದು ವರದಿಯಿಂದ ಗೊತ್ತಾಗಿದೆ.

ನಿಷೇಧಿತ ವಸ್ತು ತಡೆಗಟ್ಟುವಲ್ಲಿ ವಿಫಲ

ಕಾರಾಗೃಹಗಳಲ್ಲಿ ಗಾಂಜಾ, ಮೊಬೈಲ್‌ ಸೇರಿದಂತೆ ನಿಷೇಧಿತ ಇನ್ನಿತರೆ ವಸ್ತುಗಳು ಕೊಂಡೊಯ್ಯುವುದನ್ನು ತಡೆಗಟ್ಟುವಲ್ಲಿ ಕಳೆದ 8 ವರ್ಷಗಳಲ್ಲಿ ವಿಫಲರಾಗಿ ಕರ್ತವ್ಯ ಲೋಪವೆಸಗಿದ್ದ 38 ಅಧಿಕಾರಿಗಳ ಪೈಕಿ 33 ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಆದರೆ ಯಾವ ಹಂತದ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ವಿವರ ವರದಿಯಲ್ಲಿ ನಮೂದಿಸಿಲ್ಲವಲ್ಲದೆ ಏನು ಶಿಸ್ತು ಕ್ರಮ ಜರುಗಿಸಲಾಗಿದೆ ಎಂಬ ವಿವರಗಳೂ ವರದಿಯಲ್ಲಿ ಹೇಳಿಲ್ಲ.

ನಿಷೇಧಿತ ವಸ್ತುಗಳ ಪ್ರವೇಶಿಸಿರುವುದಕ್ಕೆ ಸಂಬಂಧಿಸಿದಂತೆ 2012ರಿಂದ 2020ರವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 21 ಅಧಿಕಾರಿ, ಸಿಬ್ಬಂದಿ ಕರ್ತವ್ಯಲೋಪ ಎಸಗಿದ್ದರು. 2019ರಲ್ಲಿ ಒಬ್ಬರು ಮತ್ತು 2020ರಲ್ಲಿ ಇಬ್ಬರು ಅಧಿಕಾರಿ/ಸಿಬ್ಬಂದಿ ಕರ್ತವ್ಯಲೋಪ ಎಸಗಿದ್ದರು ಎಂಬುದು ವರದಿಯಿಂದ ತಿಳಿದು ಬಂದಿದೆ.

ಪರಾರಿಯಾದ ಖೈದಿಗಳ ಮರು ಬಂಧನವಾಗಿಲ್ಲ

2012ರ ಜನವರಿ 1ರಿಂದ 2017ರ ಜುಲೈ 31ರವರೆಗೆ ಒಟ್ಟು 84 ಬಂಧಿಗಳು ಕಾರಾಗೃಹಗಳಿಂದ ಪರಾರಿಯಾಗಿದ್ದರು. ಈ ಪೈಕಿ 53 ಬಂಧಿಗಳನ್ನು ಮರು ಬಂಧಿಸಲಾಗಿದೆ. ಇನ್ನುಳಿದ 31 ಬಂಧಿಗಳನ್ನು ಮರು ಬಂಧಿಸಿಲ್ಲ ಎಂದು ಗೊತ್ತಾಗಿದೆ. ಪರಾರಿಯಾಗಿರುವ 31 ಬಂಧಿಗಳು ಮರುಬಂಧಿಸಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳ ಮೊರೆ ಹೋಗಿರುವುದು ವರದಿಯಿಂದ ಗೊತ್ತಾಗಿದೆ.

ಖೈದಿಗಳು ಪರಾರಿಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ 2012ರಿಂದ 2019ರವರೆಗೆ ಒಟ್ಟು 88 ಅಧಿಕಾರಿ/ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿದೆ. ಇವರ ವಿರುದ್ಧ ಕೆಸಿಎಸ್‌ಆರ್‌ ನಿಯಮಾವಳಿಗಳ ಪ್ರಕಾರ ಜಂಟಿ ಇಲಾಖೆ ವಿಚಾರಣೆ ನಡೆಸುತ್ತಿದೆ.

the fil favicon

SUPPORT THE FILE

Latest News

Related Posts