ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶಕ್ಕೆ ತಿದ್ದುಪಡಿ; ಪ್ರಾಧಿಕಾರದ ಬದಲಿಗೆ ನಿಗಮ ಎಂದ ಸರ್ಕಾರ
ಬೆಂಗಳೂರು; ಚಳಿಗಾಲದ ಅಧಿವೇಶನ ಹತ್ತಿರವಾದಂತೆ ಮತ್ತು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಸಜ್ಜುಗೊಳ್ಳುತ್ತಿರುವ ಹೊತ್ತಿನಲ್ಲೇ ರಾಜ್ಯ ಬಿಜೆಪಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ನಿಗಮ ಎಂದು ಇದೀಗ ತಿದ್ದುಪಡಿ ಮಾಡಿದೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸರ್ಕಾರ 2020ರ ನವೆಂಬರ್ 27ರಂದು ಹೊರಡಿಸಿದ್ದ ಆದೇಶಕ್ಕೆ ಡಿಸೆಂಬರ್ 1ರಂದು ತಿದ್ದುಪಡಿ ಆದೇಶ ಹೊರಡಿಸಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಬೆಳಗಾವಿ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾಸಭೆ ಕ್ಷೇತ್ರ ಉಪ ಚುನಾವಣೆ ಹೊಸ್ತಿಲಲ್ಲಿರುವಾಗಲೇ ತರಾತುರಿಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದ ಬಿಜೆಪಿ ಸರ್ಕಾರ 50 ಕೋಟಿ ಘೋಷಣೆ ಮಾಡಿತ್ತು. ಇದು ಕನ್ನಡ ಸಂಘಟನೆಗಳನ್ನು ಕೆರಳಿಸಿತ್ತಲ್ಲದೆ ಲಿಂಗಾಯತ ಸಮುದಾಯದ ಆಕ್ರೋಶಕ್ಕೂ ಕಾರಣವಾಗಿತ್ತು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಸಮರ್ಥಿಸಿಕೊಂಡಿದ್ದ ಬಿಜೆಪಿ ಸರ್ಕಾರ, ಪ್ರತಿರೋಧ ಹೆಚ್ಚುತ್ತಿದ್ದಂತೆ ಪ್ರಾಧಿಕಾರದ ಬದಲಿಗೆ ನಿಗಮ ಎಂದು ಬದಲಾಯಿಸಿ ಆಕ್ರೋಶವನ್ನು ತಣ್ಣಗಾಗಿಸಲು ಯತ್ನಿಸಿದೆ. ಕರ್ನಾಟಕ ಆರ್ಯವೈಶ್ಯ, ಅಲೆಮಾರಿ/ಅರೆ ಅಲೆಮಾರಿ, ಉಪ್ಪಾರ, ನಿಜಶರಣರ ಅಂಬಿಗರ ಚೌಡಯ್ಯ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿಗೆ ನಿಗಮ ಸ್ಥಾಪಿಸಿರುವುದನ್ನು ಸ್ಮರಿಸಬಹುದು.
ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಲಾಗಾಯ್ತಿನಿಂದಲೂ ಸಂಘರ್ಷಗಳು ನಡೆಯುತ್ತಿವೆ. ಹೀಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸಲ್ಲದು ಎಂಬುದು ಕನ್ನಡ ಸಂಘಟನೆಗಳು ಮುಂದೊಡ್ಡಿದ್ದ ವಾದವನ್ನು ಆಲಿಸಿದ್ದ ಬಿಜೆಪಿ ಸರ್ಕಾರ, ಇದು ಮರಾಠ ಭಾಷೆಯ ಪ್ರಾಧಿಕಾರವಲ್ಲ, ಬದಲಿಗೆ ಕರ್ನಾಟಕದಲ್ಲಿ ಮರಾಠಿಗರು ಹಿಂದುಳಿದಿದ್ದಾರೆ. ಅವರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು. ಸರ್ಕಾರದ ಈ ಸಮರ್ಥನೆಯನ್ನು ಒಪ್ಪದ ಕನ್ನಡ ಪರ ಸಂಘಟನೆಗಳು ಇದೇ 5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.