ಅಪೆಕ್ಸ್‌ ಬ್ಯಾಂಕ್‌ ಅಕ್ರಮ; ಸಿಬಿಐ ತನಿಖೆಯಿಂದ ತಪ್ಪಿಸಿದ್ದರೇ ಎಚ್‌ ಡಿ ಕುಮಾರಸ್ವಾಮಿ?

ಬೆಂಗಳೂರು; ಸಿಬಿಐ ತನಿಖೆಗೊಳಪಡಬೇಕಿದ್ದ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ನ ಸಿಬ್ಬಂದಿ ನೇಮಕಾತಿ ಅಕ್ರಮವನ್ನು ಮುಚ್ಚಿ ಹಾಕುವ ಹುನ್ನಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾಲುದಾರಿಕೆಯ ಮೈತ್ರಿ ಸರ್ಕಾರದಲ್ಲೇ ನಡೆದಿತ್ತು.

2012-13ನೇ ಸಾಲಿನಲ್ಲಿ ನಡೆದಿದ್ದ 102 ಸಿಬ್ಬಂದಿಗಳ ನೇರ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮಗಳನ್ನು ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದ ಆದೇಶಕ್ಕೆ ತದ್ವಿರುದ್ಧವಾಗಿ ನಿಲುವು ತಳೆದಿದ್ದ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಆರ್‌ ಎಂ ಮಂಜುನಾಥಗೌಡರ ರಕ್ಷಣೆಗೆ ನಿಂತಿದ್ದರು. ಈ ಸಂಬಂಧ ಮಹತ್ವದ ಟಿಪ್ಪಣಿ ಹಾಳೆಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಗುಮಾಸ್ತರು ಮತ್ತು ನಗದು ಗುಮಾಸ್ತರ ನೇಮಕ ಅವ್ಯವಹಾರದ ಬಗ್ಗೆ ತನಿಖೆಗೆ ನೇಮಕವಾಗಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ಅಪೆಕ್ಸ್‌ ಬ್ಯಾಂಕ್‌ ಆಡಳಿತ ಮಂಡಳಿ ಅಸಹಕಾರ ತೋರುತ್ತಿರುವ ಬೆನ್ನಲ್ಲೇ ಎಚ್‌ ಡಿ ಕುಮಾರಸ್ವಾಮಿ ಅವರು ಬರೆದಿದ್ದ ಟಿಪ್ಪಣಿ ಹಾಳೆಯು ಮಹತ್ವ ಪಡೆದುಕೊಂಡಿದೆ.

ಬ್ಯಾಂಕ್‌ನಲ್ಲಿ ಖಾಲಿ ಇದ್ದ ಒಂದೊಂದು ಹುದ್ದೆಯೂ ಲಕ್ಷಾಂತರ ರು.ಗಳಿಗೆ ಬಿಕರಿಯಾಗಿದ್ದವು ಎಂಬ ಆರೋಪಗಳು ಕೇಳಿ ಬಂದಿತ್ತು. ಇಂತಹ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸದೇ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಮೈತ್ರಿ ಸರ್ಕಾರ ಮುಂದಾಗಿತ್ತು. ಇದು ಹಲವು ಸಂಶಯಗಳಿಗೆ ಕಾರಣವಾಗಿತ್ತು. ಆರ್‌ ಎಂ ಮಂಜುನಾಥಗೌಡ ಅವರು ಜಾತ್ಯತೀತ ಜನತಾದಳದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ಅಧ್ಯಕ್ಷರಾದ ನಂತರ ಈ ಬೆಳವಣಿಗೆ ನಡೆದಿದ್ದು ಸಂಶಯಗಳನ್ನು ಬಲಪಡಿಸಿತ್ತು.

ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ನಲ್ಲಿ ಸಿಬ್ಬಂದಿ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಹಿಂದಿನ ಸರ್ಕಾರ ಮುಂದಾಗಿತ್ತು. ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಸಂಸ್ಥೆಗೆ ಸರ್ಕಾರವೇ ವಹಿಸಿತ್ತು. ಆದರೆ  ಲೋಕಾಯುಕ್ತ ಕಾಯ್ದೆ ಕಲಂ 8(1)(ಎ) ಹಾಗೂ ಸಹ ಕಲಂ ಶೆಡ್ಯೂಲ್‌ 2(ಡಿ) ಪ್ರಕಾರ ಈ ಪ್ರಕರಣವನ್ನು ತನಿಖೆ ನಡೆಸುವ ಅಧಿಕಾರ ತಮಗಿಲ್ಲ ಎಂದು 2013ರ ಅಕ್ಟೋಬರ್‌ 3ರಂದು ಸರ್ಕಾರಕ್ಕೆ ತಿಳಿಸಿತ್ತು.

ಆ ನಂತರ ಇದೇ ಪ್ರಕರಣವನ್ನು ಸಿಐಡಿಗೆ ವಹಿಸಬಹುದು ಎಂದು ಕಾನೂನು ಇಲಾಖೆಯೇ ಅಭಿಪ್ರಾಯ ನೀಡಿತ್ತು. ಆದರೆ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ್ದ ಹಿಂದಿನ ಮುಖ್ಯಮಂತ್ರಿ ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಆದೇಶಿಸಿದ್ದರು ಎಂದು ದಾಖಲೆಯಿಂದ ತಿಳಿದು ಬಂದಿದೆ.
ವಿಪರ್ಯಾಸವೆಂದರೆ ಪ್ರಕರಣ ನಡೆದು 7 ವರ್ಷಗಳಾದರೂ ಯಾವುದೇ ಸಂಸ್ಥೆ ಅಥವಾ ಅಧಿಕಾರಿಯಿಂದ ಪ್ರಾಥಮಿಕ ತನಿಖೆಯೂ ನಡೆದಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಪ್ರಕರಣವನ್ನು ಸಿಬಿಐನಿಂದ ತನಿಖೆಗೊಳಪಡಿಸದಿರಲು ನಿರ್ಧರಿಸಿದ್ದರು ಎಂಬುದು ಅವರ ಪತ್ರದಿಂದ ತಿಳಿದು ಬಂದಿದೆ.

“ಪ್ರಕರಣವನ್ನು ಸಿಬಿಐನಿಂದ ತನಿಖೆಗೆ ಒಳಪಡಿಸಲು ಮೇಲ್ನೋಟಕ್ಕೆ ಸಾಕಷ್ಟು ಕಾರಣಗಳಿವೆಯೇ ಎಂಬುದನ್ನು ಪರಿಶೀಲಿಸುವುದು ಸೂಕ್ತವಾಗಿದೆ.ಆದ್ದರಿಂದ ಉಲ್ಲೇಖಿತ ಭ್ರಷ್ಟಾಚಾರ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಮೊದಲ ಹಂತದಲ್ಲಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಥವಾ ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ಪ್ರಾಥಮಿಕ ತನಿಖೆ ನಡೆಸಿ, ಅವರು ನೀಡಬಹುದಾದ ವರದಿ ಆಧರಿಸಿ ಆ ನಂತರ ಅವಶ್ಯವೆನಿಸಿದಲ್ಲಿ ಸೂಕ್ತ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸುವುದು ಸೂಕ್ತ ,” ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರಿಂದ ನಡೆಸಿರುವ ಯಾವ ವಿಚಾರಣೆಗಳಲ್ಲಿಯೂ ಆರೋಪಿತರಿಗೆ ಶಿಕ್ಷೆ ವಿಧಿಸಿಲ್ಲ. ಬದಲಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ನೆಪವೊಡ್ಡಿ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತಿದೆಯಲ್ಲದೆ ಆರೋಪಿತರನ್ನು ದೋಷಮುಕ್ತಗೊಳಿಸಲಾಗುತ್ತಿದೆ.

ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಅಪೆಕ್ಸ್‌ ಬ್ಯಾಂಕ್‌ನಲ್ಲಿ ನಡೆದಿದ್ದ ನೇರ ನೇಮಕಾತಿ ಪ್ರಕರಣಗಳ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆಗೊಳಪಡಿಸಲು ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದರ ಹಿಂದೆ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಆರ್‌ ಎಂ ಮಂಜುನಾಥಗೌಡರ ರಕ್ಷಣೆ ಉದ್ದೇಶವೇ ಹೊರತು ಬೇರಿನ್ನೇನೂ ಅಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

the fil favicon

SUPPORT THE FILE

Latest News

Related Posts